Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ವಸ್ತುಪ್ರದರ್ಶನ; ಪರಿಕಲ್ಪನೆ ವಿಭಿನ್ನ

ಮರದ ಅರಮನೆಯೊಳಗೆ ಹಲವು ಪಾರಂಪರಿಕೆ ಉತ್ಪನ್ನಗಳ ಪ್ರದರ್ಶನ

ಮೈಸೂರು: ಇದೇ ಮೊದಲ ಬಾರಿಗೆ ಮೈಸೂರಿನ ಗತ ವೈಭವವನ್ನು ಸಾರುವ ಮರದ ಅರಮನೆ. . . ಬಾಯಲ್ಲಿ ನೀರೂರಿಸುವ ತಿಂಡಿ, ತಿನಿಸುಗಳ ಮೇಳ. . . ಹೀಗೆ ಈ ಬಾರಿಯ ವಸ್ತು ಪ್ರದರ್ಶನ ವಿಭಿನ್ನ ವಿಶೇಷತೆಗಳ ಮೂಲಕ ಜನರನ್ನು ಆಕರ್ಷಿಸಲಿದೆ.

ದಸರಾ ವಸ್ತು ಪ್ರದರ್ಶನದಲ್ಲಿ ಸಾರ್ವಜನಿಕರನ್ನು ಸೆಳೆಯಲು ದೊಡ್ಡಕೆರೆ ಮೈದಾನದಲ್ಲಿರುವ ದಸರಾ ವಸ್ತು ಪ್ರದರ್ಶನದಲ್ಲಿ ವಿಭಿನ್ನ ಹಾಗೂ ವಿಶೇಷವಾದ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ.

ಯುವ ಸಂಭ್ರಮ, ಯುವ ದಸರಾ, ಆಹಾರ ಮೇಳ ಮುಂತಾದ ಕಾರ್ಯಕ್ರಮಗಳ ಜೊತೆಗೆ ದಸರಾ ವಸ್ತು ಪ್ರದರ್ಶನ ಕೂಡ ಜನಾಕರ್ಷಕವಾಗಿರುತ್ತದೆ. ಏಕೆಂದರೆ ಈ ಎಲ್ಲದರಲ್ಲಿ ಸಿಗುವ ಸಂಭ್ರಮ ಸಡಗರವೆಲ್ಲ ವಸ್ತು ಪ್ರದರ್ಶನದಲ್ಲಿ ಒಂದೆಡೆಯೇ ಸಿಗುತ್ತವೆ. ಆಟ, ಊಟ, ಶಾಪಿಂಗ್, ಕಲೆ, ಸಂಸ್ಕ ತಿ ಎಲ್ಲವೂ ಸಿಗಲಿವೆ. ಇಷ್ಟು ಜನ ಪ್ರಿಯತೆ ಹೊಂದಿರುವ ವಸ್ತು ಪ್ರದರ್ಶನ ಈ ಬಾರಿ ಹೊಸ ಮೆರುಗು ನೀಡಲಿದೆ.

೧೫೫ ಮಳಿಗೆಗಳು ನಿರ್ಮಾಣ: ವಸ್ತು ಪ್ರದರ್ಶ ನದಲ್ಲಿ ೧೫೫ ಖಾಸಗಿ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ೪೫ ಆಹಾರ ಮಳಿಗೆಗಳು ಇರಲಿವೆ. ಈ ವರ್ಷ ರಾಜ್ಯದ ಜಿಪಂ, ಸರ್ಕಾರಿ ಇಲಾಖೆಗಳ ೩೩ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ.

ಮರದ ಅರಮನೆ: ಮೈಸೂರು ಮಹಾ ರಾಜರು ನಿರ್ಮಿಸಿದ್ದ ಮರದ ಅರಮನೆ ಆಕಸ್ಮಿಕ ಬೆಂಕಿ ಅವಘಡದಿಂದ ಭಸ್ಮವಾಯಿತು. ಅಂದು ಇದ್ದಂತಹ ಮರದ ಅರಮನೆಯನ್ನು ಜನರಿಗೆ ತೋರಿಸುವ ಉದ್ದೇಶದಿಂದ ಸುಮಾರು ೬೦ ಲಕ್ಷ ರೂ. ವೆಚ್ಚದಲ್ಲಿ ಮರದ ಅರಮನೆ ಮಾದರಿಯನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ ಬ್ರಾಂಡ್ ಮೈಸೂರು ಹೆಸರಿನಲ್ಲಿ ಮೈಸೂರಿನ ಪಾರಂಪರಿಕ ಉತ್ಪನ್ನಗಳಾದ ಮೈಸೂರು ರೇಷ್ಮೆ, ಮೈಸೂರು ಪಾಕ್, ವಿಳ್ಯ ದೆಲೆ, ರಸಬಾಳೆ ಹೀಗೆ ಹಲವು ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಸ್ಥಳದಲ್ಲಿ ಸೀರೆ ನೇಯ್ಗೆಯೂ ಇರುವುದು ವಿಶೇಷ. ಇದಕ್ಕಾಗಿ ೪೦ ಲಕ್ಷ ರೂ. ವೆಚ್ಚ ಮಾಡಲಾಗುತ್ತದೆ.

ವಿಶಿಷ್ಟ ದೀಪಾಲಂಕಾರ: ಇದೇ ಮೊದಲಬಾರಿಗೆ ವಸ್ತುಪ್ರದರ್ಶನ ಆವರಣದಲ್ಲಿ ವಿವಿಧ ಮಾದರಿಯಲ್ಲಿ ಲೈಟಿಂಗ್ಸ್ ಅಳವಡಿಸಲಾಗುತ್ತಿದೆ. ಇದು ಸಾರ್ವಜನಿಕ ರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ. ಇದರ ಜೊತೆಗೆ ಪಾರಂಪರಿಕ ಬ್ಯಾಟರಿ ವಾಹನದ ಮೂಲಕ ಹಿರಿಯರನ್ನು ಕರೆದೊಯ್ಯುವ ವ್ಯವಸ್ಥೆ ಮಾಡಲಾಗುತ್ತಿದೆ.

ಮಕ್ಕಳಿಗಾಗಿ ಕಿನ್ನರ ದಸರಾ: ದಸರಾ ವಸ್ತು ಪ್ರದರ್ಶನದಲ್ಲಿ ಈ ಬಾರಿ ಮಕ್ಕಳಿಗಾಗಿ ವಿಶೇಷವಾಗಿ ಕಿನ್ನರ ದಸರಾ ಆಯೋಜಿಸಲಾಗುತ್ತಿದ್ದು, ಎಲೆಕ್ಟ್ರಾನಿಕ್ ಸಂಬಂಧಿಸಿದ ಪ್ರದರ್ಶನವನ್ನು ಆಯೋಜನೆ ಮಾಡಲಾಗುತ್ತಿದೆ. ಇದು ಮಕ್ಕಳನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ.

ಅ. ೩ಕ್ಕೆ ಮಳಿಗೆಗಳ ಉದ್ಘಾಟನೆ: ದೀಪಾಲಂಕಾರದ ನಡುವೆ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಉದ್ಘಾಟನೆ ದಿನದಂದೇ ಎಲ್ಲ ಮಳಿಗೆಗಳೂ ಪೂರ್ಣವಾಗಿ, ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರುತ್ತವೆ ಎಂದು ವಸ್ತು ಪ್ರದರ್ಶನ ಪ್ರಾಽಕಾರದ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದ್ದಾರೆ.

ಬಟ್ಟೆ ಬ್ಯಾಗ್ ವಿತರಣೆ: ವಸ್ತು ಪ್ರದರ್ಶನ ಆವರಣ ಪ್ಲಾಸ್ಟಿಕ್ ಮುಕ್ತವಾಗಿರುವುದರಿಂದ ಬಟ್ಟೆ ಬ್ಯಾಗ್ ವಿತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ೧ ಲಕ್ಷ ಹಾಗೂ ಲಯನ್ಸ್ ಸಂಸ್ಥೆಯವರು ೫೦ ಸಾವಿರ ಬಟ್ಟೆ ಬ್ಯಾಗ್ ಗಳನ್ನು ಉಚಿತವಾಗಿ ನಿಡುತ್ತಿದ್ದಾರೆ

ಅಂದಾಜು ೨೦೦ ಮಳಿಗೆಗಳು
ಮಕ್ಕಳಿಗಾಗಿ ಕಿನ್ನರ ಲೋಕ ಮಾದರಿ ನಿರ್ಮಾಣ
ವಿಭಿನ್ನವಾದ ಲೈಟಿಂಗ್ಸ್
ಉತ್ತಮ ಗುಣಮಟ್ಟದ ಕುಡಿಯುವ ನೀರು
ಪ್ಲಾಸ್ಟಿಕ್ ಮುಕ್ತ, ಗಾಜಿನ ಬಾಟಲು ವಿತರಣೆ
ವಾರಕ್ಕೆ ಒಂದು ದಿನ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನ, ಸಲಹೆ, ಸೂಚನೆ ಮೇರೆಗೆ ಈ ಬಾರಿ ವಿಶಿಷ್ಟ ರೀತಿಯಲ್ಲಿ ಅದ್ಧೂರಿಯಾಗಿ ವಸ್ತು ಪ್ರದರ್ಶನ ಆವರಣವನ್ನು ಸಿದ್ಧಗೊಳಿಸಲಾಗುತ್ತಿದೆ. ಈ ಬಾರಿ ದಸರಾದಲ್ಲಿ ಪ್ಲಾಸ್ಟಿಕ್ ಮುಕ್ತ ವಸ್ತುಪ್ರದರ್ಶನಕ್ಕೆ ಹಾಗೂ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೈಸೂರಿನ ಬ್ರಾಂಡ್‌ಗಳಾದ ಮೈಸೂರು ಪಾಕ್, ಮೈಸೂರು ಸಿಲ್ಕ್ ಸೀರೆಗಳು, ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆ, ಮೈಸೂರು ಶ್ರೀಗಂಧದ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕಾಗಿ ಮರದ ಅರಮನೆ ನಿರ್ಮಿಸಲಾಗುತ್ತಿದೆ. ಕುಡಿಯಲು ಏರ್ ಪೋರ್ಟ್ ಮಾದರಿಯಲ್ಲಿ ನೀರನ್ನು ಒದಗಿಸಲಾಗುತ್ತಿದೆ.

-ಅಯೂಬ್ ಖಾನ್, ಅಧ್ಯಕ್ಷರು, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರಿ, ವಸ್ತುಪ್ರದರ್ಶನ

 

Tags: