ಈರುಳ್ಳಿ ಪೇಸ್ಟ್: ಈರುಳ್ಳಿ ಮನುಷ್ಯನ ಆರೋಗ್ಯಕ್ಕೆ ಸಾಕಷ್ಟು ಉಪಯೋಗಗಳನ್ನು ನೀಡುತ್ತದೆ. ಅದರಲ್ಲಿಯೂ ಪ್ರಮುಖವಾಗಿ ಕೂದಲು ಉದುರುವಿಕೆ ತಡೆಗಟ್ಟಲು ಈರುಳ್ಳಿ ರಾಮಬಾಣ ಎಂದರೆ ತಪ್ಪಾಗಲಾರದು. ಇಂತಹ ಈರುಳಿಯನ್ನು ಪೇಸ್ಟ್ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ಈರುಳ್ಳಿಯನ್ನು ಸಿಪ್ಪೆ ತೆಗೆದು, ಅರ್ಧ ಲೋಟ ನೀರು ಹಾಕಿಕೊಂಡು ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಆ ಪೇಸ್ಟ್ ಅನ್ನು ಕೂದಲಿನ ಬುಡದವರೆಗೂ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು. ಅರ್ಧ ಗಂಟೆಯವರೆಗೆ ಒಣಗಲು ಬಿಟ್ಟು, ನೈಸರ್ಗಿಕ ಶಾಂಪೂ ಬಳಸಿ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
ನೆಲ್ಲಿಕಾಯಿ: ನೆಲ್ಲಿಕಾಯಿ ಕೂದಲು ರಕ್ಷಣೆಗೆ ಹೆಚ್ಚು ಪರಿಣಾಮ ಕಾರಿ ಎಂದರೆ ತಪ್ಪಲ್ಲ. ನೆಲ್ಲಿಕಾಯಿಯಲ್ಲಿ ಅಗಾಧ ಪ್ರಮಾಣದ ವಿಟಮಿನ್ ಸಿ ಇರುವುದರಿಂದ ಈ ಅಂಶವು ತಲೆಯ ನೆತ್ತಿಯ ಭಾಗದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡಿ, ತಲೆಕೂದಲಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರ ಮಾಡುತ್ತದೆ. ಮಾರುಕಟ್ಟೆ ಹಾಗೂ ಆಯುರ್ವೇದ ಅಂಗಡಿಗಳಲ್ಲಿ ನೆಲ್ಲಿಕಾಯಿ ಎಣ್ಣೆಯೂ ಲಭ್ಯವಿದೆ. ಹೀಗಾಗಿ ಸ್ನಾನ ಮಾಡುವ ಮುನ್ನ ನೆಲ್ಲಿಕಾಯಿ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡು ಮಸಾಜ್ ಮಾಡುವುದ ರಿಂದ ಕೂದಲು ಉದುರುವಿಕೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.
ತೆಂಗಿನ ಎಣ್ಣೆ: ಸ್ನಾನಕ್ಕೂ ಮುನ್ನ ತಲೆಗೆ ಶುದ್ಧ ತೆಂಗಿನ ಎಣ್ಣೆ ಹಚ್ಚಿಕೊಂಡು, ಕೂದಲಿನ ಬುಡದವರೆಗೆ ನಯವಾಗಿ ಮಸಾಜ್ ಮಾಡುವುದರಿಂದ ನೆತ್ತಿಭಾಗದಲ್ಲಿ ಹೆಚ್ಚಿನ ರಕ್ತ ಸಂಚಾರ ದೊರಕುತ್ತದೆ. ಇದರಿಂದ ಕೂದಲಿನ ಬುಡಕ್ಕೆ ಪೋಷಣೆ ಸಿಕ್ಕಿ ಕೂದಲು ಬೆಳವಣಿಗೆಗೆ ಸಹಕಾರಿಯಾಗಲಿದೆ. ಎಣ್ಣೆಯನ್ನು ಬಿಸಿ ಮಾಡಿ ಬಳಸುವುದು ಹೆಚ್ಚು ಪರಿಣಾಮಕಾರಿ. ಕೂದಲು ಬಲಗೊಂಡು ವೇಗವಾಗಿ ಬೆಳವಣಿಗೆ ಹೊಂದುತ್ತದೆ. ಎಣ್ಣೆಯನ್ನು ಬಿಸಿ ಮಾಡಿ ಕೂದಲಿಗೆ ಮಸಾಜ್ ಮಾಡುವುದರಿಂದ ತಲೆಹೊಟ್ಟು, ಕೂದಲು ಒಣಗುವಿಕೆಯನ್ನು ತಡೆಗಟ್ಟಬಹುದು. ಇದರಿಂದ ಕೂದಲಿಗೆ ಹೊಳಪು ಬರುತ್ತದೆ.
ಕರಿಬೇವಿನ ಸೊಪ್ಪು: ಈ ಸೊಪ್ಪಿನಲ್ಲಿ ಪ್ರೊಟೀನ್ ಅಂಶ ಮತ್ತು ಬೀಟಾ – ಕೆರೋಟಿನ್ ಅಂಶ ಉನ್ನತ ಮಟ್ಟದಲ್ಲಿ ಕಂಡು ಬರುವುದರಿಂದ, ಕೂದಲು ಉದುರುವಿಕೆ ಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೂರರಿಂದ ನಾಲ್ಕು ಚಮಚ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಬಳಿಕ ಆ ಎಣ್ಣೆಗೆ ಕರಿಬೇವಿನ ಸೊಪ್ಪನ್ನು ಹಾಕಿ, ಚೆನ್ನಾಗಿ ಬಿಸಿ ಮಾಡಿಕೊಳ್ಳಿ. ಹಾಗೆ ಎಣ್ಣೆಯಲ್ಲಿ ಬಿಸಿಯಾಗಲು ಬಿಡಿ. ಈ ಮಿಶ್ರಣ ತಣ್ಣಗಾದ ನಂತರ ಸೋಸಿಕೊಂಡು ಕೂದಲಿಗೆ ಹಚ್ಚಿ ಮಸಾಜ್ ಮಾಡಿ, ಸುಮಾರು ಒಂದು ಗಂಟೆಯ ಕಾಲ ಹಾಗೆ ಬಿಟ್ಟು ನಂತರ ಶಾಂಪೂವಿನಿಂದ ತಲೆ ತೊಳೆದು ಕೊಳ್ಳಿ. ಹೀಗೆ ಮಾಡುವುದರಿಂದ ತಲೆಕೂದಲು ಉದುರುವುದನ್ನು ತಡೆಗಟ್ಟಿ ನೀಳವಾಗಿ ಬೆಳೆಯಲು ಸಹಕಾರಿಯಾಗುತ್ತದೆ.





