ಭಣಗುಟ್ಟುತ್ತಿರುವ ಕೆರೆ-ಕಟ್ಟೆಗಳು; ಮಳೆಗಾಲದಲ್ಲೂ ಬತ್ತಿದ ಶಿಂಷಾ ಒಡಲು
ಎಸ್.ಉಮೇಶ್
ಹಲಗೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳು ತುಂಬಿದ್ದು ಕೆಆರ್‌ಎಸ್ ಅಣೆಕಟ್ಟೆಯಿಂದ 1.15 ಲಕ್ಷ ಕ್ಯೂಸೆಕ್ಸ್ ನೀರು ಹೊರಬಿಡುತ್ತಿದ್ದು, ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಆದರೆ ಹಲಗೂರು ಬಳಿಯ ಶಿಂಷಾ ನದಿ ಹೆಚ್ಚಿನ ನೀರಿಲ್ಲದೆ ಭಣಗುಟ್ಟುತ್ತಿದೆ. ಅಲ್ಲದೆ ಕೆರೆ-ಕಟ್ಟೆಗಳು ಕೂಡ ನೀರಿಲ್ಲದೆ ಬರಿದಾಗಿರುವುದು ವಿಚಿತ್ರವೇ ಸರಿ.
ಶಿಂಷಾ ಒಡಲು ಬತ್ತಿ ಹೋಗುತ್ತಿದ್ದು, ನೀರಿಲ್ಲದೆ ಕೆಸರು ರಾಡಿ ತುಂಬಿದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿದ್ದ ಶಿಂಷಾನದಿ ಇದೀಗ ಶಾಂತವಾಗಿರುವ ದೃಶ್ಯ ಜನತೆಯಲ್ಲಿ ಬೇಸರ ಮೂಡಿಸಿದೆ.
ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಹಲಗೂರು ಕೆರೆ ಭರ್ತಿಯಾಗಿತ್ತು. ಆದರೆ ಪ್ರಸ್ತಕ ಉತ್ತಮ ಮಳೆಯಾಗದಿರುವ ಕಾರಣ ಈ ಭಾಗದ ಕೆರೆಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ದುರದೃಷ್ಟವೆಂದರೆ ಈ ಹಲಗೂರು ದೊಡ್ಡ ಕೆರೆ ಬಹಳ ವರ್ಷಗಳಿಂದಲೂ ಅಭಿವೃದ್ಧಿ ಕಾಣದೆ ಕಸದ ತೊಟ್ಟಿಯಂತಾಗಿದೆ.
ಶಿಂಷಾ ನದಿಯ ಪಾತ್ರದಲ್ಲಿ ಹಲವು ಏತ ನೀರಾವರಿ ಯೋಜನೆಗಳು ರೂಪಿತಗೊಂಡವು. ಮಾರಗೌಡನಹಳ್ಳಿ ಏತ ನೀರಾವರಿ ಯೋಜನೆ, ಮಡಹಳ್ಳಿ ಏತ ನೀರಾವರಿ ಯೋಜನೆ, ತಾಳೆಹಳ್ಳ(ಕೊನ್ನಪುರ) ಏತ ನೀರಾವರಿ ಯೋಜನೆ, ಗಾಣಾಳು ಏತ ನೀರಾವರಿ ಯೋಜನೆಗಳು ಈ ಭಾಗದ ಅಂತರ್ಜಲ ಹೆಚ್ಚಿಸುವ, ಕೃಷಿ ಭೂಮಿಗಳಿಗೆ ನೀರುಣಿಸುವ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಾಗಿವೆ. ಆದರೆ ಈ ಭಾಗದಲ್ಲಿ ಉತ್ತಮ ಮಳೆಯಾಗದೆ ಶಿಂಷಾ ನದಿಯು ಬತ್ತಿ ಹೋಗಿದ್ದು, ಏತ ನೀರಾವರಿಗಳು ಪ್ರಸ್ತುತ ಕಾರ್ಯನಿರ್ವಹಿಸದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಲಗೂರು ಪಕ್ಕದಲ್ಲೇ ಕಾವೇರಿ ಭೋರ್ಗರೆದು ಹರಿಯುತ್ತಿದ್ದರೂ ಹಲಗೂರು ಕೆರೆಗೆ ನೀರಿಲ್ಲದೆ ಒಣಗುತ್ತಿದ್ದರೆ ತುಮಕೂರಿನ ದೇವರಾಯನದುರ್ಗ ಬೆಟ್ಟದಿಂದ ಇಳಿದು ಬರುವ ಶಿಂಷಾ ನದಿಯು ಮಳೆಯ ಅಭಾವದಿಂದ ಸೊರಗಿ ಹೋಗಿರುವುದು ಈ ಭಾಗದ ಅಂತರ್ಜಲ ಮರುಪೂರಣದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಶಿಂಷಾ ನದಿಯು ಸಂಪೂರ್ಣ ಬತ್ತಿ ಹೋಗಿದೆ. ನದಿಯ ವ್ಯಾಪ್ತಿಯಲ್ಲಿ ಬರುವಂತಹ ಏತ
ನೀರಾವರಿ ಯೋಜನೆಗಳ ನೀರಿನ ಕ್ಷಾಮದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ, ಕ್ರಮವಹಿಸಲಾಗುವುದು.
-ಲೋಕೇಶ್, ತಹಸಿಲ್ದಾರ್, ಮಳವಳ್ಳಿ
ಹಲಗೂರು ಬಳಿ ಭೋರ್ಗರೆಯುತ್ತಿರುವ ಕಾವೇರಿ ನದಿ ಹಲಗೂರು ಹೋಬಳಿಯ
ರೈತಾಪಿ ವರ್ಗ ಶಿಂಷಾ ನದಿಯ ನೀರು ಅವಲಂಬಿತವಾಗಿದ್ದು, ಶಿಂಷಾ ನದಿಯಿಂದ ನಂಜಾ ಪುರ, ಮಡಹಳ್ಳಿ, ಗಾಣಾಳು, ಮಾರಗೌಡನಹಳ್ಳಿ ಏತ ನೀರಾವರಿ ಯೋಜನೆಗಳಿಗೆ ಉಪಯುಕ್ತವಾಗಿದ್ದವು. ಸದ್ಯದ ಪರಿಸ್ಥಿಯಲ್ಲಿ ಈ ಭಾಗದಲ್ಲಿ ಉತ್ತಮ ಮಳೆ ಆಗದೆ ಶಿಂಷಾ ನದಿ ಸಂಪೂರ್ಣವಾಗಿ ಬತ್ತಿದೆ. ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕು ಹಾಗೂ ಹೋಬಳಿಯ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಮೂಲಕ ರೈತರ ಹಿತ ಕಾಪಾಡಬೇಕು.
ಎನ್.ಕೆ. ಕುಮಾರ್, ಕನ್ನಡ ಪರ ಹೋರಾಟಗಾರರು.