ಮೈಸೂರು: ರಾಜ್ಯದಾದ್ಯಂತ ಡೆಂಗ್ಯು ಅಬ್ಬರಿಸುತ್ತಿದ್ದರೆ ಇತ್ತ ಮೈಸೂರಿನಲ್ಲಿ ಚರಂಡಿಗಳಲ್ಲಿ ಕಸ ತುಂಬಿ ಕೊಳೆತು ನಾರುತ್ತಿದ್ದು, ಸೊಳ್ಳೆ, ನೊಣಗಳ ಹಾವಳಿ ಮಿತಿ ಮೀರಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯುಂಟಾಗಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವಿಲ್ಲ ಎನ್ನು ವಂತೆ ನಿಶ್ಚಿಂತೆಯಿಂದಿದ್ದಾರೆ. ದೂರು ನೀಡಲು ಬಂದವ ರಿಗೇ ಜೋರು: ನಗರದ ಹಳೆಯ ಆರ್‌ಎಂಸಿ ಹಿಂಭಾಗದ ಮೇದರ್ ಬ್ಲಾಕ್‌ನ ಸಮೀಪದಲ್ಲೇ ಇರುವ ದೊಡ್ಡ ಮೋರಿ ತುಂಬಿ ಕಳೆದ ೧೫ ದಿನಗಳಿಂದ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಚರಂಡಿ ಉದ್ದಕ್ಕೂ ಪೇಪರ್, ಪ್ಲಾಸ್ಟಿಕ್ ಕಸ ತುಂಬಿ ಕೊಂಡು ದುರ್ವಾಸನೆ ಬೀರುತ್ತಿದೆ.
ಇಡೀ ಚರಂಡಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಯಾಗುತ್ತಿದ್ದು, ಸುತ್ತಲಿನ ನಿವಾಸಿಗಳು ಡೆಂಗ್ಯು ಮೊದಲಾದ ರೋಗಗಳು ಹರಡಬಹುದೆಂಬ ಭಯದಲ್ಲಿದ್ದಾರೆ. ಜನರು ಗಾಬರಿಗೊಂಡು ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ಮಹಾನಗರ ಪಾಲಿಕೆ ವಲಯ ಕಚೇರಿ-೬ಕ್ಕೆ ದೂರು ನೀಡಲು ಹೋದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ದೂರು ಕೊಡಲು ಬಂದವರನ್ನು ಕಚೇರಿಯಿಂದ ಹೊರ ಹಾಕಿದ್ದಾರೆ. ರಸ್ತೆಗೂ ಹರಿದ ಕೊಳಚೆ ನೀರು: ದೊಡ್ಡ ಮೋರಿಯಲ್ಲಿ ಮುಂದೆ ಇರುವ ಸೇತುವೆಯ ಸಮೀಪ ಕೊಳಚೆ ನೀರು ಸರಿಯಾಗಿ ಹರಿಯದೇ ಕಟ್ಟಿಕೊಂಡಿದೆ. ಕೆಲವೊಮ್ಮೆ ಮೋರಿ ನೀರು ಕೋಡಿ ಬಿದ್ದಂತೆ ರಸ್ತೆಯ ಮೇಲೆ ಹರಿಯುತ್ತದೆ. ಮಳೆ ಬಂದರೆ ಈ ನೀರು ಮನೆಯೊಳಗೂ ನುಗ್ಗುತ್ತದೆ. ದುರ್ವಾಸನೆಯನ್ನು ಸಹಿಸಿಕೊಂಡೇ ಜನರು ಬದುಕಬೇಕಾಗಿದೆ. ನಗರ ಪಾಲಿಕೆ ಅಧಿಕಾರಿಗಳು ಮನೆ ಮನೆ ಕಸ ವಿಲೇವಾರಿ ಮಾಡಿದರೆ ಸ್ವಚ್ಛತೆ ಕೆಲಸ ಮುಗಿಯಿತು, ಮೈಸೂರು ಸ್ವಚ್ಛ ನಗರಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ನಗರದಲ್ಲಿ ಕೆಲವು ಮುಖ್ಯ ರಸ್ತೆಗಳನ್ನು ಹೊರತು ಪಡಿಸಿದರೆ ಬಡಾವಣೆಗಳಲ್ಲಿ ಸಂಗ್ರಹವಾಗುವ ಕಸವನ್ನು ಸ್ವಚ್ಛ ಮಾಡುವಲ್ಲಿ ಮಹಾನಗರ ಪಾಲಿಕೆ ವಿಫಲವಾಗಿದೆ. ನಗರ ಪಾಲಿಕೆ ಸದ್ಯರಾಗಿದ್ದವರ ಅಽಕಾರಾವಽ ಮುಗಿದಿದ್ದು, ಅಧಿಕಾರಿಗಳೇ ಉಸ್ತುವಾರಿಯಾಗಿದ್ದಾರೆ. ಜನರು ಅಽಕಾರಿಗಳಿಗೆ ದೂರು ನೀಡಿದರೂ ತಮಗೆ ಸಂಬಂಧವಿಲ್ಲ ಎನ್ನುವಂತೆ ಸಂಬಂಧಪಟ್ಟವರು ವರ್ತಿಸು ತ್ತಿರುವುದರಿಂದ ಜನರು ಆಕ್ರೋಶಗೊಂಡಿದ್ದಾರೆ.
ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ: ಡಾ. ವೆಂಕಟೇಶ್ ರಾಜ್ಯದಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮೈಸೂರು ನಗರದಲ್ಲೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ ಎಂದು ಮಹಾನಗರ ಪಾಲಿಕೆ ಆರೋಗ್ಯಾಽಕಾರಿ ಡಾ. ವೆಂಕಟೇಶ್ ಹೇಳಿದ್ದಾರೆ . ನೈಟ್ ರೌಂಡ್ಸ್ ಮಾಡಿ ಸಾರ್ವಜನಿಕರು ರಸ್ತೆಯಲ್ಲಿ ಕಸ ಬಿಸಾಡದಂತೆ ನಿಗಾ ವಹಿಸಿದ್ದೇವೆ. ಮನೆ ಮನೆ ಕಸ ಸಂಗ್ರಹಣೆ ಮಾಡುತ್ತಿದ್ದೇವೆ. ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ಮಾತನಾಡಿ ಯುಜಿಡಿಗಳಲ್ಲಿ ಕಸ ಸಂಗ್ರಹವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಪಾರ್ಕ್‌ಗಳಲ್ಲಿ ಫಾಗಿಂಗ್ ಮಾಡುತ್ತಿದ್ದೇವೆ. ಮನೆಯ ಸುತ್ತ ಮುತ್ತಲೂ ನೀರು ನಿಲ್ಲದ ಹಾಗೆ ಕ್ರಮ ಕೈಗೊಳ್ಳುವಂತೆ ಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ದೊಡ್ಡ ಮೋರಿ ಭರ್ತಿಯಾಗಿ ೧೫ ದಿನಗಳಾಗಿದೆ. ಇಲ್ಲಿಗೆ ಸಮೀಪದ ಹಣ್ಣಿನ ಮಾರುಕಟ್ಟೆಯಲ್ಲಿ ನಿತ್ಯ ಕಸವನ್ನು ಸಂಗ್ರಹಿಸಲಾಗುವುದಿಲ್ಲ. ಚರಂಡಿ ತುಂಬಿ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಮಳೆ ಹೆಚ್ಚಾದರೆ ಮನೆಗಳಿಗೂ ಚರಂಡಿ ನೀರು ನುಗ್ಗುತ್ತದೆ. ಪಾಲಿಕೆಗೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. – ಸುರೇಶ್, ಸ್ಥಳೀಯರು
ಕೂಡಲೇ ಸ್ವಚ್ಛ ಮಾಡಲು ಕ್ರಮ: ಸಿಂಧು
ಮೇದರ ಬ್ಲಾಕ್ ವಲಯ ಕಚೇರಿ -4 ಮತ್ತು 6ರ ನಡುವೆ ಬರುವ ಭಾಗವಾಗಿದ್ದು, ಯಾರ ನಿರ್ವಹಣೆಗೆ ಬರುತ್ತದೆ ಎಂಬುದನ್ನು ತಿಳಿದು ಚರಂಡಿಯನ್ನು ಕೂಡಲೇ ಸ್ವಚ್ಛಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ – ಸಿಂಧು, ಕಾರ್ಯಪಾಲಕ ಅಭಿಯಂತರರು, ಮಹಾನಗರ ಪಾಲಿಕೆ