Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಎವರೆಸ್ಟ್ ಏರಿದ ಮೈಸೂರಿನ ವೈದ್ಯೆ; ಪ್ರಪಂಚದ ಅತಿ ಎತ್ತರದ ಶಿಖರವೇರಿದ ಡಾ.ಉಷಾ ಹೆಗ್ಡೆ

ಮೈಸೂರು: ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ…. ಡಾ.ರಾಜ್‌ಕುಮಾರ್ ರವರ ಸಿನಿಮಾವೊಂದರ ಗೀತೆಯ ಈ ಸಾಲನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ವೈದ್ಯ ವೃತ್ತಿಯ ಜೊತೆ ಜೊತೆಗೆ ಸಾಧನೆಯ ಉತ್ತುಂಗದ ಗೌರಿಶಂಕರ ಶಿಖರ (ಮೌಂಟ್ ಎವರೆಸ್ಟ್ ) ಏರಿ ಸಾಧನೆ ಮೆರೆದಿದ್ದಾರೆ ನಗರದ ಹೆಸರಾಂತ ವೈದ್ಯ ಕುಟುಂಬದ ಈ ವೈದ್ಯೆ!

ಈ ಸಾಧನೆ ಮಾಡಿದವರು ಮೈಸೂರಿನ ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರಾಗಿರುವ ಡಾ.ಉಷಾ ಹೆಗ್ಡೆ ಅವರು. ಬೇಸ್ ಕ್ಯಾಂಪ್‌ನಲ್ಲಿ ಒಂದು ತಿಂಗಳ ಕಾಲ ತರಬೇತಿಯೊಂದಿಗೆ ಏ.4ರಂದು ಪರ್ವತಾರೋಹಣ ಆರಂಭಿಸಿ, ಅಂತಿಮವಾಗಿ ಮೇ 19ರಂದು ಮೌಂಟ್ ಎವರೆಸ್ಟ್‌ನ 29,031 ಅಡಿ ಎತ್ತರದ ತುತ್ತ ತುದಿಯನ್ನೇರಿ, ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಇದು ಸುಲಭದ ಹಾದಿಯಾಗಿರಲಿಲ್ಲ. ಮೊದಲಿಗೆ 17,598 ಅಡಿ ಎತ್ತರದಲ್ಲಿರುವ ಬೇಸ್ ಕ್ಯಾಂಪ್‌ನಲ್ಲಿ ತರಬೇತಿ ಪಡೆದು ತಮ್ಮ ಗುರಿ ಸಾಧನೆಗೆ ಸಜ್ಜಾದರು.

ಎರಡನೇ ಹಂತವಾಗಿ ಕ್ಯಾಂಪ್ 1ಕ್ಕೆ (19,685 ಅಡಿ) ತಲುಪಿ ಮುಂದಿನ ಹಂತಕ್ಕೆ ಸಜ್ಜಾಗಲು ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಬೇಕು. ನಂತರ ಆರಂಭವಾಗುವುದೇ ಕಠಿಣ ಹಾದಿ, ಅಲ್ಲಿಂದ ಹಂತ ಹಂತವಾಗಿ ಕ್ಯಾಂಪ್ 2 (21,000 ಅಡಿ) ಕ್ಯಾಂಪ್ 3 (23,625 ಅಡಿ), ಕ್ಯಾಂಪ್ 4 (26,085 ಅಡಿ) ರ ಅಪಾಯಕಾರಿ ಹಾದಿಗಳನ್ನು ಸಾಗಿ ಅಂತಿಮವಾಗಿ ಎವರೆಸ್ಟ್‌ನ ಸಮ್ಮಿಟ್ (29,029 ಅಡಿ) ಅನ್ನು ತಲುಪಿದ್ದಾರೆ.

ಮೈಸೂರಿನ ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರಾಗಿರುವ ಡಾ.ಉಷಾ ಹೆಗ್ಡೆ ಅವರು, ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಬೋಧನೆಯ ಜೊತೆ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಐರನ್ ಮ್ಯಾನ್ ಪ್ರಶಸ್ತಿಯನ್ನು ಪಡೆದ ಮೊದಲ ಮೈಸೂರು ಮಹಿಳೆ, ಬೆಂಗಳೂರು, ಮುಂಬೈ ಮ್ಯಾರಥಾನ್ ಗಳಲ್ಲಿ ಹಲವು ಬಾರಿ ಭಾಗವಹಿಸಿದ್ದಾರೆ. ಮುಂದೊಂದು ದಿನ ಪ್ರಪಂಚದ ಅತ್ಯಂತ ಎತ್ತರದ ಹಿಮಚ್ಛಾಧಿತ ಗಿರಿಶಿಖರ ಏರುವ ಕನಸಿನೊಂದಿಗೆ ಸಾಹಸಮಯ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕನಸು ನನಸಾಗಿಸಿಕೊಂಡರು.

ತಮ್ಮ ಸಾಹಸಮಯ ಕಾರ್ಯಕ್ಕೆ ದೇಶ-ವಿದೇಶಗಳಲ್ಲಿ ಸಾಧನೆ ಮೆರೆಯುತ್ತಾ, ಅಂತಿಮವಾಗಿ 2024ರ ಏಪ್ರಿಲ್ 3ರಂದು ಮೈಸೂರಿನಿಂದ ಹಿಮಾಲಯದತ್ತ ಹೊರಟವರು ನೇಪಾಳದ ಕಠ್ಮಂಡುವಿನಲ್ಲಿ ಪ್ರಾಥಮಿಕ ಸಿದ್ಧತೆಗಳನ್ನು ಮುಗಿಸಿ, ಬೇಸ್ ಕ್ಯಾಂಪ್‌ನಲ್ಲಿ ಒಂದು ತಿಂಗಳ ಕಾಲ ತರಬೇತಿಯೊಂದಿಗೆ ಪರ್ವತಾರೋಹಣ ಆರಂಭಿಸಿ, ಅಂತಿಮವಾಗಿ ಮೇ 19ರಂದು ಮೌಂಟ್ ಎವರೆಸ್ಟ್‌ನ 29000 ಅಡಿ ಎತ್ತರದ ತುತ್ತ ತುದಿಯನ್ನೇರಿ, ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅವರು ಮೌಂಟ್ ಎವರೆಸ್ಟ್‌ನಿಂದ ಕೆಳಗಿಳಿದ ಮೇಲಷ್ಟೇ ಪೂರ್ಣ ಮಾಹಿತಿ ಸಿಗಲು ಸಾಧ್ಯ ಎಂದು, ಗೌರಿಶಂಕರದ ತುತ್ತ ತುದಿಯನ್ನು ಏರಿದ್ದನ್ನು ಖಚಿತಪಡಿಸಿದ ಕುಟುಂಬದವರು ಆಂದೋಲನ ಪತ್ರಿಕೆಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

ಎಸ್.ಚಿಕ್ಕಪ್ಪ ಮತ್ತು ಗಿರಿಜಾ ದಂಪತಿಗೆ 1972ರ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅವರು ಬೆಂಗಳೂರಿನಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ ಬಳಿಕ ಮೈಸೂರಿನ ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಬಿಡಿಎಸ್ ಪದವಿ ನಂತರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌ನಲ್ಲಿ ಓರಲ್ ಪೆಥಾಲಜಿ ಮತ್ತು ಮೈಕ್ರೋಬಯಾಲಜಿಯಲ್ಲಿ ಎಂಡಿಎಸ್ ಪದವಿ ಪೂರೈಸಿದ್ದಾರೆ. 1998ರ ಜುಲೈ 1ರಂದು ಮೈಸೂರಿನ ಜೆಎಸ್ ಎಸ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನ ಆರಂಭಿಸಿ, ಹಂತ ಹಂತವಾಗಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸುತ್ತಾ 2016ರಿಂದ ಓರಲ್ ಪೆಥಾಲಜಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ನಾತಕೋತ್ತರ ಪದವಿ ಮುಗಿಸಿ ವೃತ್ತಿ ಜೀವನ ಆರಂಭಿಸಿದ ಮರು ವರ್ಷವೇ ನಗರದ ಹೆಸರಾಂತ ವೈದ್ಯರಾದ ಡಾ.ಜಿ.ಎಸ್.ಹೆಗ್ಡೆ ಅವರ ಪುತ್ರ ಡಾ. ಅಜಯ್ ಹೆಗ್ಡೆ ಅವರನ್ನು ವಿವಾಹವಾದರು. ಡಾ.ಉಷಾ ಹೆಗ್ಡೆ ಮತ್ತು ಡಾ.ಅಜಯ್ ಹೆಗ್ಡೆ ದಂಪತಿಗೆ ಆಕರ್ಶ್ ಮತ್ತು ಆರ್ಯವ್ ಎಂಬ ಪುತ್ರರಿದ್ದು ಇಬ್ಬರೂ ಎಂಬಿಬಿಎಸ್ ಮಾಡುತ್ತಿದ್ದಾರೆ.

ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ಉಷಾ ಹೆಗ್ಡೆ ಅವರಿಗೆ ಮೌಂಟ್ ಎವರೆಸ್ಟ್ ಏರುವುದು ಜೀವನದ ಗುರಿಯಾಗಿತ್ತು. ಅದು ಈಗ ಈಡೇರಿದೆ. ಹವಾಮಾನ ವೈಪರೀತ್ಯಗಳ ನಡುವೆಯೂ ಗುರಿ ಸಾಧಿಸಿದ್ದಾರೆ. ಅವರು ತೆರಳಿದ್ದು ಏಕಾಂಗಿಯಾಗಿ, ಯಾವುದೇ ತಂಡದಲ್ಲಿರಲಿಲ್ಲ. ಇದು ಅಪೂರ್ವ ಸಾಧನೆ. ಸ್ವಲ್ಪ ಕಣ್ಣಿಗೆ ತೊಂದರೆಯಾಗಿದ್ದು ಉಳಿದಂತೆ ಯಶಸ್ವಿಯಾಗಿ ಹಿಂತಿರುಗಿದ್ದಾರೆ.
ಈ ಡಾ.ಅಜಯ್ ಹೆಗ್ಡೆ, ಖ್ಯಾತ ವೈದ್ಯ

ಮೌಂಟ್ ಎವರೆಸ್ಟ್ ಏರಿದ ಮೈಸೂರಿನ ಎರಡನೇ ಮಹಿಳೆ ಡಾ.ಉಷಾ ಹೆಗ್ಡೆ. ಕನ್ನಡತಿ ಹಾಗೂ ಮೈಸೂರಿನವರೇ ಆದ ಸ್ಮಿತಾ ಲಕ್ಷ್ಮಣ್ ಮೊದಲ ಮಹಿಳೆಯಾದರೆ, ಉಷಾ ಹೆಗ್ಡೆ ಎರಡನೇಯವರು. ಆದರೆ ಸ್ಮಿತಾ ಲಕ್ಷ್ಮಣ್ ಸೇನಾ ಅಧಿಕಾರಿಯಾಗಿದ್ದರೆ, ಉಷಾ ಹೆಗ್ಡೆ ವೈದ್ಯೆ. ಈ ಇಬ್ಬರೂ ಮೈಸೂರಿನವರೇ ಎಂಬುದು ಸಂತಸದ ವಿಷಯ. ಎವರೆಸ್ಟ್ ಏರಲು ಕನಿಷ್ಠ 40-45 ದಿನ ಗಳು ಬೇಕಾಗುತ್ತದೆ. ಇದಕ್ಕಾಗಿ ಹಲವಾರು ಕಟ್ಟು ನಿಟ್ಟಿನ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಇದೆಲ್ಲವನ್ನೂ ಮೀರಿ ಈ ಸಾಧನೆ ಮಾಡಿರುವುದು ಸಂತಸದ ವಿಷಯ.
-ಸೋಲಂಕಿ, ಟೈಗರ್

Tags: