ಚಿರಂಜೀವಿ ಸಿ. ಹುಲ್ಲಹಳ್ಳಿ
ಮಂಡ್ಯ: ಕೃಷಿಯಲ್ಲಿ ಪ್ರಾಮುಖ್ಯತೆ ಪಡೆದಿರುವ ಮಂಡ್ಯ ಜಿಲ್ಲೆಯಲ್ಲಿ ಸಾಹಿತ್ಯಾಸಕ್ತರು ಮತ್ತು ಸಾಹಿತಿಗಳು ಕಡಿಮೆ ಏನಿಲ್ಲ ಎಂಬುದನ್ನು ೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದೃಢಪಡಿಸಿದೆ. ಸಮ್ಮೇಳನದ ಎರಡನೇ ದಿನ ಪುಸ್ತಕ ಮಳಿಗೆಗಳಲ್ಲಿ ಕಂಡುಬಂದ ಜನ ಜಂಗುಳಿಯೇ ಅದಕ್ಕೆ ಸಾಕ್ಷಿಯಾಯಿತು.
ಸಮ್ಮೇಳನದ ಗೋಷ್ಠಿಗಳು, ಕವಿಗೋಷ್ಠಿಗಳು ಇತ್ಯಾದಿ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸುವ ಮೂಲಕ ತಮ್ಮ ಸಾಹಿತ್ಯ ಪ್ರೇಮವನ್ನು ಮೆರೆದರು. ಅದನ್ನೂ ಮೀರಿ ಪುಸ್ತಕ ಮಳಿಗೆಗಳಿಗೆ ಜನರು ಮುಗಿಬಿದ್ದಿದ್ದರು. ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ಎಲ್ಲ ವರ್ಗದ ಜನರೂ ಪುಸ್ತಕ ಪ್ರದರ್ಶನ ವೀಕ್ಷಣೆ ಮತ್ತು ಖರೀದಿಯಲ್ಲಿ ತೊಡಗಿದ್ದರು.
ತಾವು ಆರಾಧಿಸುವ ಸಾಹಿತಿಗಳ ಇತ್ತೀಚಿನ ಪ್ರಕಟಣೆಗಳು ಅಥವಾ ಯಾವಾಗಲೋ ಬಿಡುಗಡೆಯಾಗಿ ತಮಗೆ ಸಿಕ್ಕದ ಪ್ರತಿಗಳಿಗಾಗಿ ಮಳಿಗೆಯಿಂದ ಮಳಿಗೆಗೆ ಅಲೆದಾಡುತ್ತಿದ್ದ ದೃಶ್ಯವೂ ಸಾಹಿತ್ಯಾಸ್ತಕರು ಕಡಿಮೆ ಆಗುತ್ತಿದ್ದಾರೆ ಎಂಬ ಆತಂಕವನ್ನು ದೂರಗೊಳಿಸಿದಂತಿತ್ತು.
ಕುವೆಂಪು, ಎಸ್. ಎಲ್. ಭೈರಪ್ಪ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ದೇವನೂರ ಮಹಾದೇವ ಮತ್ತಿತರ ಸಾಹಿತಿಗಳ ಕಾದಂಬರಿ, ಕಾವ್ಯ, ನಾಟಕ ಕೃತಿಗಳಿಗಾಗಿ ಪ್ರಕಾಶಕರಲ್ಲಿ ವಿಚಾರಿಸುತ್ತಿದ್ದರು. ತಾವು ಬಯಸಿದ ಪುಸ್ತಕ ಸಿಕ್ಕಿದರೆ ಖುಷಿಯಿಂದ ಖರೀದಿಸುತ್ತಿದ್ದರು. ಇಲ್ಲದಿದ್ದರೆ ನಿರಾಸೆಯಿಂದ, ಇನ್ನೆಲ್ಲಿ ಸಿಗುತ್ತದೆ ಎಂದು ಮಳಿಗೆದಾರರನ್ನೇ ಕೇಳಿ ಮಾಹಿತಿ ಪಡೆಯುತ್ತಿದ್ದರು.
ಮೈಸೂರಿನ ನವ ಕರ್ನಾಟಕ ಪುಸ್ತಕ ಪ್ರಕಾಶನದ ಮಳಿಗೆಯಲ್ಲಿ ಶೇ. ೫೦ರಿಂದ ೮೦ರಷ್ಟು ರಿಯಾಯಿತಿ ದರದಲ್ಲಿ ಹಳೆಯ ಪುಸ್ತಕಗಳನ್ನು ಮಾರಾಟ ಮಾಡಿದರು. ಮಕ್ಕಳ ಸಾಹಿತ್ಯದಿಂದ ಹಿಡಿದು ಗಂಭೀರ ಸಾಹಿತ್ಯದವರೆಗೆ ೧೦ ರೂ. ನಿಂದ ೨೦೦ ರೂ. ವರೆಗಿನ ಹಳೆಯ ಪುಸ್ತಕಗಳನ್ನು ಖರೀದಿಸಲು ಜನರು ಮುಗಿ ಬಿದ್ದಿದ್ದರು. ಮಿಂಚುಳ್ಳಿ ಪ್ರಕಾಶನ ಕೂಡ ೨೦೦ ರೂ. ಪುಸ್ತಕಗಳನ್ನು ಕೇವಲ ೩೦ ರೂ. ಗಳಿಗೆ ನೀಡುತ್ತಿದ್ದು, ಹೆಚ್ಚು ಜನರು ಮಳಿಗೆಯಲ್ಲಿ ಕಂಡು ಬಂದರು. ಪೂರ್ಣಚಂದ್ರ ತೇಜಸ್ವಿ, ಕುವೆಂಪು, ಎಸ್. ಎಲ್. ಭೈರಪ್ಪ, ದೇವನೂರ ಮಹಾದೇವ, ಸಿದ್ದಲಿಂಗಯ್ಯ ಅವರ ಪುಸ್ತಕಗಳು ಹೆಚ್ಚು ಮಾರಾಟ ಕಂಡರೆ, ಹೊಸ ತಲೆ ಮಾರಿನ ಲೇಖಕರ ಪುಸ್ತಕಗಳನ್ನೂ ಸಾಹಿತ್ಯಾಭಿ ಮಾನಿಗಳು ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು.