Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನಮ್ಮೂರಲ್ಲಿ ದಸರಾ ಎಂದರೆ ಮಾರಿ ಕುಣಿತ

ಅಜಯ್‌ ಕುಮಾರ್‌ ಎಂ ಗುಂಬಳ್ಳಿ

ನಾನು ಸಣ್ಣ ಹುಡುಗನಿದ್ದಾಗಿನಿಂದಲೂ ‘ದಸರಾ’ ಬರುತ್ತಿದೆ. ದಸರಾ ಬಗ್ಗೆ ಹೆಚ್ಚೇನು ಗೊತ್ತಿಲ್ಲ. ಅನೆಗಳು ಅಂಬಾರಿ ಹೊತ್ತು ಸಾಗುತ್ತವೆ ಎಂದಷ್ಟೆ ತಿಳಿದಿತ್ತು. ಆದರೆ ಆಯುಧ ಪೂಜೆ ದಿನ ಸಣ್ಣ ಹೈಕಳಿಗೆಲ್ಲ ಎಲ್ಲಿಲ್ಲದ ಸಡಗರ.

ಮನೆಯಲ್ಲಿನ ಆರೆಕೋಲು, ಗುದ್ದಲಿ, ಎಲೆಕೊಟ್ಟು, ಉಜ್ಜರಿ, ಕುಡುಗೋಲು, ಮಚ್ಚು ಇನ್ನಿತರ ಆಯುಧಗಳಿಗೆ ಪೂಜೆ ಮಾಡುವುದು ಒಂದುಕಡೆಯಾದರೆ ವಾಹನ ಗಳಿಗೆ ಬಾಳೆದಿಂಡು, ಕಬ್ಬಿನ ತೊಂಡೆ ಕಟ್ಟಿ, ಹೂ ಹಾರಗಳಿಂದ ಅಲಂಕರಿಸಿ ಪೂಜೆ ಮಾಡುವುದು ಅತಿ ಸಂತೋಷದ ಗಳಿಗೆಯಾಗಿರುತ್ತಿತ್ತು. ನಮ್ ಊರಿನ ಕೆರೆ, ಕಾಲುವೆಗಳಲ್ಲಿ ಅಂದು ಲಾರಿ, ಟ್ರಾಕ್ಟರ್, ಟೆಂಪೋ, ಆಟೋಗಳಿಂದ ತುಂಬಿರುತ್ತಿದ್ದವು. ಅಲ್ಲಲ್ಲಿ ಬೈಕ್, ಸೈಕಲ್ ಕೂಡ ಕಾಣಿಸುತ್ತಿದ್ದವು. ನಾನು ಮತ್ತು ಸ್ನೇಹಿತರೆಲ್ಲ ದೊಡ್ಡ ವಾಹನಗಳ ಮಾಲೀಕರು ಕರೆಯುವುದನ್ನೆ ಕಾಯುತ್ತಿದ್ದು, ಅವರು ಕರೆದಾಗ ಬೀಳುವುದನ್ನೂ ಲೆಕ್ಕಿಸದೆ ಓಡುತ್ತಿದ್ದೆವು. ಯಾಕೆಂದರೆ ಸಂಜೆಗೆ ಅವರು ತಮ್ಮ ತಮ್ಮ ವಾಹನಗಳಿಗೆ ಪೂಜೆ ಮಾಡಿದಾಗ ನಮಗೆ ಬೂಂದಿ ಇಲ್ಲವೇ ಬೇರೆ ಯಾವುದಾದರು ಸಿಹಿ ಸಿಗುತ್ತಿತ್ತು. ಆಗೆಲ್ಲ ನಮಗೆ ಸ್ವೀಟು ಸಿಕ್ಕರೆ ತುಂಬಾ ಖುಷಿಪಡುತ್ತಿದ್ದೆವು. ಮಾಮೂಲಿಯಾಗಿ ಎಲ್ಲರೂ ವಾಹನಗಳ ಪೂಜೆ ನಂತರ ಕಡಲೆಪುರಿಯನ್ನೆ ನೀಡುತ್ತಿದ್ದರಿಂದ ನಮಗೆ ಸಿಹಿ ಬೇಕಿತ್ತು.

ಅದಕ್ಕಾಗಿ ನಾನು ಮತ್ತು ಕೆಲವು ಸ್ನೇಹಿತರು ಬೆಳಿಗ್ಗೆ ಕೆರೆಯಲ್ಲಿ ವಾಹನಗಳನ್ನು ತೊಳೆಯುವುದರಿಂದ ಹಿಡಿದು ಸಂಜೆ ಪೂಜೆ ಆಗುವವರೆಗೂ ಅಲೆದಾಡುತ್ತಲೇ ಇರುತ್ತಿದ್ದೆವು. ಇನ್ನು ನಮ್ಮ ಊರಿನಲ್ಲಿ ಕರಿಕಲ್ಲು ಕ್ವಾರಿಯಲ್ಲಿ ಭಾರಿ ಗಾತ್ರದ ಹಿಟಾಚಿ, ಕಾಗ್ ವೀಲ್‌ಗಳಿದ್ದ ದೊಡ್ಡ ದೊಡ್ಡ ಲಾರಿಗಳು, ಕಲ್ಲು ಎತ್ತುವ ಕ್ರೇನುಗಳು, ಕಲ್ಲು ಕತ್ತರಿಸುವ ಮಿಷಿನ್ನು ಮತ್ತು ಇತರ ಸಾಮಾನುಗಳಿದ್ದರಿಂದ ಅಲ್ಲಿ ಪೂಜೆಯೂ ಜೋರು, ಎರಡು ಮೂರು ಬಗೆಯ ಸ್ವೀಟು ಸಿಕ್ಕುತ್ತದೆಂದು ತಿಳಿದು ಪ್ಲಾಸ್ಟಿಕ್ ಕವರ್ ಹಿಡಿದು ಅಲ್ಲಿಗೆ ದೌಡಾಯಿಸುತ್ತಿದ್ದೆವು. ಅಲ್ಲದೆ ಅವರು ಪೂಜೆ ಮಾಡುವಾಗ ಬೂದುಗುಂಬಳಕ್ಕೆ ಚಿಲ್ಲರೆ ಹಾಕಿ ಒಡೆಯುತ್ತಿದ್ದರು. ಹೈಕಳಾದ ನಾವು ಒಡೆದು ಚೂರಾದ ಬೂದುಗುಂಬಳದಲ್ಲಿ ಚಿಲ್ಲರೆ ಕಾಸಿಗಾಗಿ ಹುಡುಕಾಟ ನಡೆಸುತ್ತಿದ್ದೆವು.

ಸಿಕ್ಕರೆ ಖುಷಿ, ಇಲ್ಲವಾದರೆ ಸ್ವೀಟು ಸಿಕ್ಕೀತೆಂಬ ಆಸೆಯಲ್ಲಿ ನಮ್ಮ ಊರಿನ ಸುತ್ತಮುತ್ತ ಇದ್ದ ಕರಿಕಲ್ಲು ಕ್ವಾರಿಗೆ ತಪ್ಪದೇ ಓಡುತ್ತಿದ್ದೆವು. ಇನ್ನು ‘ದಸರಾ’ ದಿನ ಯಾವುದೆಂದು ನಮಗೆ ಗೊತ್ತೆ ಆಗುತ್ತಿರಲಿಲ್ಲ. ಯಾಕೆಂದರೆ ನಮ್ಮ ಊರಿನಲ್ಲಿ ಮಾರಮ್ಮನ ಮೆರವಣಿಗೆ ಅಂದೇ ನಡಯುತ್ತದೆ. ಮಾರಮ್ಮನ ಗುಡಿಗೆ ತರಹೇವಾರಿ ಹೂಗಳಿಂದ ಅಲಂಕಾರ ಮಾಡುತ್ತಿದ್ದರು. ಪಲ್ಲಕ್ಕಿಯಲ್ಲಿ ಸಿಂಗಾರಗೊಂಡ ದೇವಿ ಜೊತೆ ಸತ್ತಿಗೆ, ದಾಳಗಳ ಹಿಡಿದ ಪೂಜಾರಿಗಳ ಜೊತೆ ಮಂಗಳವಾದ್ಯ ತಾಳಮೇಳಗಳ ಸದ್ದಿಗೆ ಜನರ ಗುಂಪು ಮಾರಿಕುಣಿತ ಕುಣಿಯುತ್ತ ಬೀದಿ ಬೀದಿಗಳನ್ನು ಸುತ್ತುತ್ತಿದ್ದರೆ ಮೈರೋಮಾಂಚನವಾಗುತ್ತಿತ್ತು. ಹಾಗೆಯೇ ಸಿಂಗಾರ ಗೊಂಡು ಬಂದ ಹೆಂಗಸರು ಯೌವ್ವನಿಗರ ಕಣ್ ಸೆಳೆಯುತ್ತಿದ್ದರು.

 

Tags: