Mysore
19
overcast clouds
Light
Dark

ದಸರಾ ಆಹಾರ ಮೇಳ: ಹಳಬರಿಗೆ ಅವಕಾಶಕ್ಕೆ ಮನವಿ

ಮೈಸೂರು: ದಸರಾ ಆಹಾರ ಮೇಳದಲ್ಲಿ ಈ ಬಾರಿ ಲಾಟರಿ ಎತ್ತುವ ಮೂಲಕ ಮಳಿಗೆಗಳನ್ನು ಆಯ್ಕೆ ಮಾಡುವ ವಿಧಾನವನ್ನು ರದ್ದುಗೊಳಿಸಬೇಕು. ಹತ್ತಾರು ವರ್ಷಗಳಿಂದಲೂ ಮೇಳದಲ್ಲಿ ಭಾಗವಹಿಸುತ್ತಿರುವ ತಿಂಡಿ ತಿನಿಸುಗಳ ಮಾರಾಟಗಾರರ ಸಂಘದ ಸದಸ್ಯರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಸಂಘದ ಅಧ್ಯಕ್ಷ ಎಸ್. ನಾಗರಾಜು ಸಿದ್ದರಾಮನಹುಂಡಿ ಮನವಿ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಲಾಟರಿ ಪದ್ಧತಿಯನ್ನು ರದ್ದು ಮಾಡದಿದ್ದರೆ ನಮ್ಮ ಸಂಘದ ಸುಮಾರು ೭೦ ಜನ ಮಾರಾಟಗಾರರಿಗೆ ತೊಂದರೆ ಉಂಟಾಗುತ್ತದೆ. ಕಳೆದ ಬಾರಿ ದಸರಾ ಆಹಾರ ಮೇಳದಲ್ಲಿ ಆನ್‌ಲೈನ್ ಪದ್ಧತಿಯನ್ನು ಸರ್ಕಾರ ರದ್ದುಗೊಳಿಸಲಾಗಿತ್ತು. ೨೦೨೩-೨೪ನೇ ಸಾಲಿನಲ್ಲಿ ಪ್ರಾಯೋಜಕತ್ವ ಹಣವನ್ನು ಸ್ಟಾಲ್‌ಗಳಿಗೆ ಬಳಸಿರಲಿಲ್ಲ. ಆದ್ದರಿಂದ ಡಿಡಿ ಹಣವೂ ಹೆಚ್ಚಾಗಿತ್ತು.

ಈ ವರ್ಷದ ದಸರಾದಲ್ಲಿ ಡಿಡಿ ಹಣವನ್ನು ಕಡಿಮೆ ಮಾಡಲು ಪ್ರಾಯೋಜಕತ್ವ ಹಣವನ್ನು ಬಳಸಬೇಕು ಎಂದು ಅವರು ಒತ್ತಾಯಿಸಿದರು. ಈ ವರ್ಷದ ದಸರಾದಲ್ಲಿ ಆಹಾರ ಮೇಳವನ್ನು ೮ ದಿನಗಳವರೆಗೆ ಸೀಮಿತ ಗೊಳಿಸಿದ್ದಾರೆ. ೨೪ ದಿನಗಳ ವರೆಗೆ ದೀಪಾಲಂಕಾರ ಇರುವುದರಿಂದ ಕನಿಷ್ಠ ೧೫ ದಿನಗಳವರೆಗೆ ಆಹಾರ ಮೇಳವನ್ನು ಮುಂದುವರಿಸಬೇಕು. ಅಲ್ಲದೆ, ಆಹಾರ ಮೇಳಕ್ಕೆ ೧ ಕೋಟಿ ರೂ. ಅನುದಾನ ನೀಡಬೇಕು. ಮಾಂಸಾಹಾರ ವ್ಯಾಪಾರ ಮಳಿಗೆಗಳಿಗೆ ೩೦,೦೦೦ ರೂ. ಮತ್ತು ಸಸ್ಯಾಹಾರ ಸ್ಟಾಲ್‌ಗಳಿಗೆ ೨೫,೦೦೦ ರೂ. ಬಾಡಿಗೆ ನಿಗದಿಪಡಿಸಬೇಕು ಎಂದು ನಾಗರಾಜು ಆಗ್ರಹಿಸಿದರು. ಸಂಘದ ಉಪಾಧ್ಯಕ್ಷರಾದ ಶಾಂತಮ್ಮ, ಕಾರ್ಯದರ್ಶಿ ಕಂಸಾಳೆ ರವಿ, ಸಂಘದ ಸದಸ್ಯರಾದ ಬೀರೇಶ್, ಮನೋಜ್, ಶಿವಸಿದ್ದು, ಮಹೇಂದ್ರ, ರಮೇಶ್, ಚಂದ್ರು, ಹರೀಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು