Mysore
21
overcast clouds
Light
Dark

ಆನೆಗಳಿಗೆ ಸಂರಕ್ಷಿತಾರಣ್ಯ ಯೋಜನೆ ಚಿಂತನೆ

ನವೀನ್ ಡಿಸೋಜ

• ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಫರ್ ಜೋನ್‌ನಲ್ಲಿ ಜಾರಿ ಸಾಧ್ಯತೆ
• ಕಾಡಾನೆ – ಮಾನವ ಸಂಘರ್ಷ ತಡೆಯಲು ಹೊಸ ದಾರಿ
• ಎರಡು ಹೊಸ ಯೋಜನೆಗಳ ಬಗ್ಗೆ ಶಾಸಕ ಪೊನ್ನಣ್ಣ ಪ್ರಸ್ತಾಪ
• ಕಾಡಾನೆಗಳಗಾಗಿಯೇ ಅರಣ್ಯ ಮೀಸಲಿಡುವ ಆಲೋಚನೆ
• ಅಲ್ವಾ ಸೌಂಡ್ ತಂತ್ರಜ್ಞಾನದ ಮೂಲಕ ಕಾಡಾನೆಗಳನ್ನು ಕಾಡಿಗಟ್ಟುವುದು

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಡಾನೆ – ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದ್ದು, ಕಾಡಾನೆಗಳಿಗಾಗಿಯೇ ಅರಣ್ಯವೊಂದನ್ನು ಮೀಸಲಿಟ್ಟು ಕಾಡಾನೆಗಳನ್ನು ಸ್ಥಳಾಂತರಿಸುವ ಕುರಿತು ಚರ್ಚೆ ನಡೆಯುತ್ತಿದೆ.

ಜಿಲ್ಲೆಯ ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೊಸ ಯೋಜನೆ ಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಇತ್ತೀಚೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಎರಡು ಹೊಸ ಯೋಜನೆಗಳ ಬಗ್ಗೆ ಸಚಿವರ ಗಮನ ಸೆಳೆದಿದ್ದು, ಸಚಿವರೂ ಈ ನಿಟ್ಟಿನಲ್ಲಿ ಆಸಕ್ತಿ ತೋರಿದ್ದಾರೆ.

ಜಿಲ್ಲೆಯ ಕಾಫಿ ತೋಟಗಳಲ್ಲಿಯೇ ನೆಲೆಸಿ ರುವ ಕಾಡಾನೆಗಳಿಗಾಗಿ ಒಂದಷ್ಟು ಪ್ರದೇಶ ವನ್ನು ಗುರುತಿಸಿ ಅಲ್ಲಿ ಅವುಗಳಿಗೆ ಅನುಕೂಲ ಕರ ವಾತಾವರಣ ಸೃಷ್ಟಿಸಿ ಅಲ್ಲಿಗೆ ಆನೆಗಳನ್ನು ಸ್ಥಳಾಂತರಿಸುವುದು ಪ್ರಮುಖ ಯೋಜನೆಯಾಗಿದೆ. ಈ ಯೋಜನೆಗೆ ಸುಮಾರು ಮೂರು ಸಾವಿರ ಎಕರೆಯಷ್ಟು ಅರಣ್ಯದ ಅಗತ್ಯವಿದ್ದು, ಈಗಿರುವ ಅರಣ್ಯ ಭೂಮಿಯಲ್ಲಿಯೇ ಈ ಪ್ರದೇಶವನ್ನು ಗುರುತಿಸಬೇಕಾಗಿದೆ.

ಜಿಲ್ಲೆಯಲ್ಲಿರುವ ಕಾಡಾನೆಗಳನ್ನು ಹಂತ ಹಂತವಾಗಿ ಈ ಅರಣ್ಯಕ್ಕೆ ಸ್ಥಳಾಂತರಿಸಿ ಕಾಡಾನೆಗಳಿಗಾಗಿಯೇ ಆ ಪ್ರದೇಶವನ್ನು ಮೀಸಲಿಡುವುದು ಯೋಜನೆಯ ಉದ್ದೇಶವಾಗಿದೆ.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಮುಖ್ಯಸ್ಥ ಸಿ.ಜಿ.ಕುಶಾಲಪ್ಪ ಮತ್ತು ಹಿರಿಯ ತಜ್ಞರ ತಂಡ ಈ ಬಗ್ಗೆ ಪೊನ್ನಣ್ಣ ಅವರೊಂದಿಗೆ ಚರ್ಚಿಸಿದ್ದು, ಆನಂತರ ಅರಣ್ಯ ಸಚಿವರಲ್ಲಿ ಪ್ರಸ್ತಾಪಿಸಿದ್ದಾರೆ. ಕಾಡಾನೆಗಳನು ಒಂದೆಡೆ ಬಿಟ್ಟು ಸಂರಕ್ಷಿತ ಪ್ರದೇಶವನ್ನು ಸೃಷ್ಟಿಸುವುದಾದರೆ ಅದಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಫರ್ ಜೋನ್ ಉತ್ತಮ ಆಯ್ಕೆ ಎಂಬ ಸಲಹೆಯೂ ಬಂದಿದೆ. ನಾಗರಹೊಳೆ ಬಫರ್ ಜೋನ್‌ನಲ್ಲಿ ಕಾಡಾನೆಗಳಿಗೆ ನೀರಿಗಾಗಿ ಕೆರೆಗಳ ಅಭಿವೃದ್ಧಿ, ಆಹಾರ ಸಿಗುವಂತಾಗಲು ಬೇಕಾಗುವ ಮರಗಳನ್ನು ಬೆಳೆಸುವುದೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬಹುದು ಎಂದು ಸಲಹೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಚರ್ಚೆ ನಡೆಯಲಿದೆ.

ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಹೊಸ ಮಾದರಿಯಲ್ಲಿ ನಡೆಸುವುದು ಮತ್ತೊಂದು ಯೋಜನೆಯಾಗಿದೆ. ಅಂತಾರಾಷ್ಟ್ರೀಯ ಸಂಸ್ಥೆಯೊಂದರ ಸಿಎಸ್ ಆರ್ ಫಂಡ್‌ನಲ್ಲಿ ಈ ಯೋಜನೆ ರೂಪಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ.

ಅಲ್ಪಾಸೌಂಡ್‌ ತಂತ್ರಜ್ಞಾನದಮೂಲಕಕಾಡಾನೆಗಳನ್ನು ಕಾಡಿಗಟ್ಟುವುದು ಮತ್ತು ತೋಟಗಳತ್ತ ಬಾರದಂತೆ ತಡೆಯುವುದು ಈ ಯೋಜನೆಯ ಉದ್ದೇಶವಾಗಿದೆ.

ಈ ಎರಡೂ ಯೋಜನೆಗಳಿಗೆ ಸಂಬಂಧಿಸಿದಂತೆ ಚರ್ಚೆ ಇನ ಪ್ರಾಥಮಿಕ ಹಂತದಲ್ಲಿದ್ದು, ಸದ್ಯಕ್ಕೆ ಈ ಬಗ್ಗೆ ಪ್ರಸ್ತಾವನೆಯನ್ನಷ್ಟೇ ಸಲ್ಲಿಸಲಾಗಿದೆ.

ಈ ಬಗ್ಗೆ ಹಿರಿಯ ತಜ್ಞರು ಮತ್ತು ಇಲಾಖೆಯ ಅಕಾರಿಗಳ ಅಭಿಪ್ರಾಯ ಪಡೆಯಬೇಕಿದ್ದು, ಬಳಿಕವೇ ಸರ್ಕಾರ ಈ ಬಗ್ಗೆ ಚಿಂತಿಸಲಿದೆ. ಕಾಡಾನೆಗಳ ಸಂರಕ್ಷಿತ ಪ್ರದೇಶಕ್ಕೆ ಜಾಗ ಗುರುತಿಸುವುದು, ಪ್ರಾಯೋಗಿಕವಾಗಿ ಅರಣ್ಯವನ್ನು ಆನೆಗಳಿಗೆ ಹೊಂದುವಂತೆ ಅಭಿವೃದ್ಧಿಪಡಿಸುವ ಕಾರ್ಯಕ್ಕೂ ಆದ್ಯತೆ ನೀಡಬೇಕಿದೆ.

ಕೋಟ್ಸ್‌))

ಕಾಫಿ ತೋಟಗಳಲ್ಲಿರುವ ಆನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವ ನಿಟ್ಟಿನಲ್ಲಿಯೂ ಎರಡು ಯೋಜನೆಗಳ ಬಗ್ಗೆ ಸಚಿವರೊಂದಿಗೆ ಚರ್ಚಿಸಲಾಗಿದೆ. ಅದು ಇನ್ನೂ ಪ್ರಾಥಮಿಕ ಹಂತದಲ್ಲಿದೆ.
-ಎ.ಎಸ್. ಪೊನ್ನಣ್ಣ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ,

ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕರು ಚರ್ಚೆ ನಡೆಸಿರುವ ಸಂಬಂಧ ಅರಣ್ಯ ಸಚಿವರಿಂದ ಮಾಹಿತಿ ಬಂದಿದೆ. ಉದ್ದೇಶಿತ ಯೋಜನೆ ಸಂಬಂಧ ವರದಿ ಸಲ್ಲಿಸಲು ಸೂಚಿಸಲಾಗಿದೆ. ಕಾರ್ಯಯೋಜನೆ ರೂಪಿಸಿದ ಬಳಿಕ ಮಾಹಿತಿ ನೀಡಲಾಗುವುದು.
-ಭಾಸ್ಕರ್, ಡಿಎಫ್‌ಒ, ಮಡಿಕೇರಿ.

ತೋಟದಲ್ಲಿರುವ ಕಾಡಾನೆಗಳನ್ನು ನಿರ್ದಿಷ್ಟ ಪ್ರದೇಶಕ್ಕೆ ಸ್ಥಳಾಂತರಿಸಿ ಅಲ್ಲಿಂದ ಹೊರಬಾರದಂತೆ ತಡೆಯುವ ಯೋಜನೆ ಬಗ್ಗೆ ಶಾಸಕರ ಗಮನ ಸೆಳೆದಿದ್ದೆವು. ರೈಲ್ವೆ ಬೇಲಿ ಅಳವಡಿಕೆ ಹಾಗೂ ಅದನ್ನು ಸ್ಥಳೀಯರೇ ನಿರ್ವಹಿಸುವ ಸಮಿತಿಗಳ ರಚನೆ ಬಗ್ಗೆಯೂ ಸಲಹೆ ನೀಡಿದ್ದೇವೆ. ಕಾಡಾನೆಗಳ ಸ್ಥಳಾಂತರಕ್ಕೆ ಮೊದಲು ಕಾಡಿನಲ್ಲಿ ಅವುಗಳಿಗೆ ಜೀವಿಸಲು ಪೂರಕ ವಾತಾವರಣ ಸೃಷ್ಟಿಸಬೇಕು.
-ಸಿ.ಜಿ. ಕುಶಾಲಪ್ಪ, ನಿವೃತ್ತ ಮುಖ್ಯಸ್ಥರು, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ.