Mysore
28
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಹುಲಿಗಳ ಸಂರಕ್ಷಣೆಗೆ ಸಮುದಾಯದ ಸಹಕಾರ ಅಗತ್ಯ

• ರಮೇಶ್ ಪಿ.ರಂಗಸಮುದ್ರ

ವನ್ಯಜೀವಿ ಜಗತ್ತಿನ ವಿಶಿಷ್ಟ ಹಾಗೂ ವಿಸ್ಮಯ ವೆನಿಸಿರುವ ಪ್ರಾಣಿಗಳ ಪೈಕಿ ಹುಲಿ ಕೂಡ ಒಂದಾಗಿದೆ. ಒಂದು ಕಾಡಿ ನಲ್ಲಿ ಹುಲಿಗಳು ವಾಸ ಮಾಡು ತಿವೆ ಎಂದರೆ ಆ ಕಾಡಿನ ಪರಿಸರ ವ್ಯವಸ್ಥೆ ಆರೋಗ್ಯವಾಗಿಯೂ, ಸಮೃದ್ಧವಾಗಿಯೂ ಇದೆ ಎಂದರ್ಥ. 1972ರಲ್ಲಿ ಇಡೀ ದೇಶದಲ್ಲಿನ ಹುಲಿಗಳ ಸಂಖ್ಯೆ ಮೂರಂಕಿಗೆ ಕುಸಿದಿತ್ತು. ಆಗ ಹುಲಿಗಳ ಸಂರಕ್ಷಣೆ ಕುರಿತು ಆತಂಕ ಸೃಷ್ಟಿಯಾಯಿತು.

ಆಗಲೇ 1972ರಲ್ಲಿ ಭಾರತ ಸರ್ಕಾರ ‘ಕಾಡು ಪ್ರಾಣಿಗಳ ರಕ್ಷಣಾ ಕಾಯ್ದೆ’ ಯನ್ನು ಜಾರಿಗೆ ತಂದಿದ್ದು. ಅದರ ಅನ್ವಯ 1973ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ‘ಟೈಗರ್ ಪ್ರಾಜೆಕ್ಟ್ (ಹುಲಿ ಯೋಜನೆ) ಅನ್ನು ಅನುಷ್ಠಾನಕ್ಕೆ ತಂದರು.

ಅದರ ಅನ್ವಯ ದೇಶದಲ್ಲಿ ಹುಲಿಗಳಿರುವ 9 ಕಾಡುಗಳನ್ನು ಗುರುತಿಸಿ ಅವುಗಳನ್ನು ಹುಲಿ ಸಂರಕ್ಷಿತ ಪ್ರದೇಶಗಳನ್ನಾಗಿ ಮಾಡಿ ಅಲ್ಲಿ ಹುಲಿಗಳ ಸಂರಕ್ಷಣೆಗೆ ಮುಂದಾದರು. ಅಂದು ನಮ್ಮ ರಾಜ್ಯದ ಚಾಮರಾಜನಗರ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವೂ ಈ 9ರ ಪೈಕಿ ಒಂದಾಗಿತ್ತು. ಆ ಸಂದರ್ಭದಲ್ಲಿ ಬಂಡೀಪುರದಲ್ಲಿ ಆ ಕೇವಲ 12 ಹುಲಿಗಳಿದ್ದವು ಎನ್ನಲಾಗಿದೆ. ಈ ಐವತ್ತು ವರ್ಷಗಳಲ್ಲಿ ಅವುಗಳ ಸಂಖ್ಯೆ 150ನ್ನು ಮೀರಿರುವುದು ಮಹತ್ವದ ಸಾಧನೆಯೇ ಸರಿ.

ದೇಶದಲ್ಲಿಯೇ ಕರ್ನಾಟಕ ರಾಜ್ಯ ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಹುಲಿ ಸಂರಕ್ಷಣಾ ಕಾಯ್ದೆಯು ಕಡ್ಡಾಯವಾಗಿ ಹುಲಿಗಳ ಬೇಟೆಯಾಡುವುದನ್ನು ತಡೆಗಟ್ಟುವುದು, ವನ್ಯಜೀವಿಗಳುಹಾಗೂಹುಲಿಗಳಿಗೆ ಸಂಬಂಧಿಸಿದಂತಹ ಯಾವುದೇ ಉತ್ಪನ್ನ, ದೇಹದ ಭಾಗಗಳನ್ನು ಹೊಂದಿ ರುವುದು ಅಕ್ಷಮ್ಯ ಅಪರಾಧ, ಹುಲಿಗಳಿಗೆ ಬೇಕಾದ ಪೂರಕ ವಾತಾವರಣವನ್ನು ನಿರ್ಮಿಸುವುದು ಮತ್ತು ಹುಲಿ ಸಂರಕ್ಷಿತ ಪ್ರದೇಶದೊಳಗೆ ಅನಧಿಕೃತವಾಗಿ ಪ್ರವೇಶಿಸುವುದನ್ನು ತಪ್ಪಿಸಿ, ಹುಲಿಯೊಂದಿಗೆ ಎಲ್ಲ ಜೀವಿಗಳನ್ನೂ ಸಂರಕ್ಷಿಸುವ ಗುರಿಯನ್ನು ಹೊಂದಿದೆ. ಒಂದು ವಯಸ್ಕ ಹುಲಿ, ಸಾಮಾನ್ಯವಾಗಿ 15-20 ಚ.ಕಿ.ಮೀ. ವ್ಯಾಪ್ತಿಯಲ್ಲಿ ತನ್ನ ಆವಾಸ ಸ್ಥಾನವನ್ನು ಹೊಂದಿರುತ್ತದೆ. ಈ ವಿಸ್ತೀರ್ಣ ಕೆಲ ಹುಲಿಗಳ ಶಕ್ತಿಗನುಸಾರ ದೊಡ್ಡದು ಇರಬಹುದು. ಈ ಟೆರಿಟರಿಯಲ್ಲಿ ಹುಲಿ ಬದುಕಲು ಪೂರಕ ವಾತಾವರಣ ವಿರಬೇಕಾಗುತ್ತದೆ.

ಹುಲಿ ಆವಾಸ ಸ್ಥಾನದ ಪ್ರತಿ ಒಂದು ಚ.ಕಿ.ಮೀ. ವ್ಯಾಪ್ತಿಯಲ್ಲಿ 40 ರಿಂದ 50 ಜಿಂಕೆಗಳಿರಬೇಕು. 8-10 ಕಡವೆಗಳಿರಬೇಕು. 3-5 ಕಾಡೆಮ್ಮೆಗಳಿರಬೇಕು ಎಂದು ಅಂದಾಜಿಸಲಾಗಿದೆ. ಅಲ್ಲದೆ ಸಸ್ಯಾಹಾರಿಗಳಿಗೆ ಬೇಕಾದ ವಿಪುಲವಾದ ಹುಲ್ಲುಗಾವಲು ಇರಬೇಕು. ಮೊಲ, ಚಿರತೆ, ಕರಡಿ ಮೊದಲಾದ ಎಲ್ಲ ರೀತಿಯ ಜೀವ ವೈವಿಧ್ಯತೆ ಹುಲಿಯ ಆವಾಸ ಸ್ಥಾನದೊಳಗೆ ಇರಬೇಕು.

ಆವಾಸ ಸ್ಥಾನದೊಳಗೆ ಹುಲಿಗೆ ಬೇಕಾದಷ್ಟು ನೀರು ಸಿಗುವ ವ್ಯವಸ್ಥೆ ಇರಬೇಕು. ಆಗ ಹುಲಿ ತನ್ನ ಆವಾಸ ಸ್ಥಾನವನ್ನು ಬಿಟ್ಟು ಹೊರಗೆ ಬರುವುದಿಲ್ಲ. ಹುಲಿಗಳು ಎರಡು ವರ್ಷಗಳಿಗೊಮ್ಮೆ 3-4 ಮರಿಗಳಿಗೆ ಜನ್ಮ ನೀಡುತ್ತವೆ. 2006ರಲ್ಲಿ ಹುಲಿಗಣತಿಯನ್ನು ಆರಂಭಿಸಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿಯನ್ನು ಮಾಡಲಾಗುತ್ತಿದೆ.

ಹುಲಿಗಳ ಸಂರಕ್ಷಣೆಯಲ್ಲಿ ಇಲಾಖೆಯ ಜವಾಬ್ದಾರಿಯ ಜೊತೆಗೆ ಸಮುದಾಯದ ಹೊಣೆಗಾರಿಕೆಯೂ ಮುಖ್ಯವಾಗಿದೆ. ಆದ್ದರಿಂದ ಹುಲಿಗಳ ಆರೋಗ್ಯಕರ ಬೆಳವಣಿಗೆ ಹಾಗೂ ಅವುಗಳ ಸಂರಕ್ಷಣೆಗಾಗಿ ಸಾರ್ವಜನಿಕರೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ.

ಇಂದು ವಿಶ್ವ ಹುಲಿ ದಿನಾಚರಣೆ
• 1972ರಲ್ಲಿ ಕಾಡು ಪ್ರಾಣಿಗಳ ರಕ್ಷಣಾ ಕಾಯ್ದೆ ಜಾರಿ
• 1973ರಲ್ಲಿ ಹುಲಿ ಯೋಜನೆ ಅನುಷ್ಠಾನ
• ಟೈಗರ್ ಪ್ರಾಜೆಕ್ಟ್ ಅನ್ವಯ ದೇಶದಲ್ಲಿ ಹುಲಿಗಳಿರುವ 9 ಅರಣ್ಯಗಳ ಗುರುತು
• 2006ರಲ್ಲಿ ಹುಲಿ ಗಣತಿ ಆರಂಭ
• ನಾಲ್ಕು ವರ್ಷಗಳಿಗೊಮ್ಮೆ ಗಣತಿ

ಹುಲಿಗಳ ಗಣತಿ ಹೇಗೆ?: ಹಿಂದೆ ಹುಲಿಗಳ ಹೆಜ್ಜೆ ಗುರುತನ್ನು ಆಧರಿಸಿ ಗಣತಿ ಮಾಡಲಾಗುತ್ತಿತ್ತು. ಈಗ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗಣತಿ ಮಾಡಲಾಗುತ್ತದೆ. ಹುಲಿ ತಿರುಗಾಡುವ ಸ್ಥಳಗಳಲ್ಲಿ ಕ್ಯಾಮೆರಾ ಟ್ರಾಪ್‌ಗಳನ್ನು ಅಳವಡಿಸಿ, ಕಂಪ್ಯೂಟರ್ ವಿಶ್ಲೇಷಣೆಯ ಮೂಲಕ ವೈಜ್ಞಾನಿಕವಾಗಿ ಪ್ರತಿಯೊಂದು ಹುಲಿಯ ವಿಭಿನ್ನ ಪಟ್ಟಿಗಳನ್ನು ಆಧಾರವಾಗಿಟ್ಟುಕೊಂಡು ಹುಲಿಗಳನ್ನು ಗುರುತು ಮಾಡಲಾಗುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಹುಲಿಗಳ ಗಣತಿ ಮಾಡಲಾಗುತ್ತದೆ.

ಹೆಚ್ಚಾಗುತ್ತಿದೆ ಮಾನವ-ಹುಲಿ ಸಂಘರ್ಷ: ಇತ್ತೀಚಿನ ವರ್ಷಗಳಲ್ಲಿ ಹುಲಿ – ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಕಾಡಂಚಿನ ಭಾಗಗಳಲ್ಲಂತೂ ಆಗಿಂದಾಗ್ಗೆ ಹುಲಿ ಮಾನವ ಸಂಘರ್ಷದ ವರದಿಗಳಾಗುತ್ತಿವೆ. ಸಾಮಾನ್ಯವಾಗಿ ಹುಲಿಗಳಿಗೆ ಮನುಷ್ಯನನ್ನು ಕಂಡರೆ ಭಯವಿರುತ್ತದೆ. ಕಾಡಿನ ಅಂಚಿನಲ್ಲಿ ದನ, ಕುರಿ, ಎಮ್ಮೆಗಳನ್ನು ಮೇಯಿಸುವಾಗ ವಯಸ್ಸಾಗಿ ಕಾಡಂಚಿನಲ್ಲಿ ಸೇರಿರುವ ಹುಲಿಗಳು ಸಾಮಾನ್ಯವಾಗಿ ಅವುಗಳ ಮೇಲೆ ದಾಳಿಗೆ ಮುಂದಾಗುತ್ತವೆ, ಈ ವೇಳೆ ಹುಲಿಯ ದಾಳಿಯಿಂದ ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ದನಗಾಹಿಗಳು ಮುಂದಾದಾಗ ಹುಲಿ ಅನಿವಾರ್ಯವಾಗಿ ಮನುಷ್ಯರ ಮೇಲೆ ದಾಳಿ ಮಾಡುತ್ತದೆ. ಒಮ್ಮೆ ಮನುಷ್ಯರ ಮೇಲೆ ದಾಳಿ ಮಾಡಿದ ಹುಲಿಗಳು, ಮನುಷ್ಯರು ವಾಸಿಸುವ ನೆಲೆಗಳತ್ತ ಮುಖ ಮಾಡುತ್ತವೆ.

Tags: