Mysore
27
clear sky

Social Media

ಗುರುವಾರ, 22 ಜನವರಿ 2026
Light
Dark

ನಗರದ ಬಡಾವಣೆಗಳಲ್ಲಿ ಕುಸಿದ ಮ್ಯಾನ್‌ಹೋಲ್‌ಗಳು

road (2)

ವಾಹನ ಓಡಿಸಲು ಸವಾರರ ಪರದಾಟ; ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ

ಚಾಮರಾಜನಗರ: ನಗರದ ವಿವಿಧ ಬಡಾವಣೆಗಳ ಪ್ರಮುಖ ರಸ್ತೆಗಳಲ್ಲಿ ಮ್ಯಾನ್ ಹೋಲ್‌ಗಳು ಕುಸಿದಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಇದಲ್ಲದೆ ಮ್ಯಾನ್‌ಹೋಲ್‌ಗಳ ದುರ್ವಾಸನೆಯಿಂದ ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.

ನಗರದ ಬುದ್ಧನಗರದ ೨ನೇ ತಿರುವು, ಪಚ್ಚಪ್ಪ ಲೇಔಟ್‌ನ ಸಂತ ಜೋಸೆಫ್ ಆಸ್ಪತ್ರೆ ಹಿಂಭಾಗದ ರಸ್ತೆ, ನ್ಯಾಯಾಲಯದ ರಸ್ತೆಗಳಲ್ಲಿ ಮ್ಯಾನ್ ಹೋಲ್‌ಗಳು ಕುಸಿದಿವೆ. ಇದರಿಂದ ವಾಹನಗಳ ಸವಾರರು ಪರದಾಡುವಂತಾಗಿದೆ. ಕುಸಿದಿರುವ ಮ್ಯಾನ್‌ಹೋಲ್‌ಗಳನ್ನು ವಾಹನಗಳ ಸವಾರರು ಬೀಳದಿರಲಿ ಎಂದು ಸ್ಥಳೀಯರು ಕಲ್ಲುಗಳಿಂದ ಮುಚ್ಚಿದ್ದಾರೆ.

ಇದನ್ನು ಓದಿ:9 ತಿಂಗಳೂ ಕಳೆದರೂ ಅಭಿವೃದ್ಧಿ ಕಾಣದ ರಸ್ತೆ

ಬುದ್ಧ ನಗರದ ೨ನೇ ತಿರುವಿನಲ್ಲಿ ಒಂದು ಮ್ಯಾನ್ ಹೋಲ್ ಮುಚ್ಚಳ ಒಡೆದು ಚೂರಾಗಿದೆ. ಸ್ಥಳೀಯರು ಚಪ್ಪಡಿ ಕಲ್ಲು ಹಾಕಿ ಮುಚ್ಚಿದ್ದಾರೆ. ಸಂತ ಜೋಸೆಫ್ ಆಸ್ಪತ್ರೆ ಹಿಂಭಾಗದ ರಸ್ತೆಯಲ್ಲಿ ಮುಚ್ಚಳ ಸಂಪೂರ್ಣವಾಗಿ ಒಡೆದು ಕುಸಿದಿದ್ದು ಬಾಯಿ ತೆರೆದುಕೊಂಡಿದೆ. ನ್ಯಾಯಾಲಯ ರಸ್ತೆಯ ಎರಡೂ ಕಡೆ ಮ್ಯಾನ್‌ಹೋಲ್‌ಗಳು ಶಿಥಿಲಗೊಂಡಿದ್ದು ಇನ್ನೇನು ಕುಸಿದು ಬೀಳುವ ಹಂತದಲ್ಲಿವೆ.

ಮ್ಯಾನ್‌ಹೋಲ್‌ಗಳಿಂದ ದುರ್ವಾಸನೆಹೊರಬರುತ್ತಿದ್ದು ಅಕ್ಕಪಕ್ಕದ ಮನೆಯವರು ಮೂಗು ಮುಚ್ಚಿಕೊಂಡು ಓಡಾಡಬೇಕಿದೆ.ಗಾಳಿ ಜೋರಾಗಿ ಬೀಸಿದರೆ ವಾಸನೆ ಹರಡುತ್ತಿದೆ. ಇದರಿಂದ ಮಾನಸಿಕವಾಗಿ ಕಿರಿಕಿರಿಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಡಾವಣೆಗಳಲ್ಲಿ ಹೊಸ ಮನೆ ನಿರ್ಮಾಣ ಮಾಡುವಾಗ ಎಂ.ಸ್ಯಾಂಡ್, ಸಿಮೆಂಟ್ ಇಟ್ಟಿಗೆಗಳಂತಹ ಹೆಚ್ಚು ಭಾರವನ್ನು ಹೊತ್ತು ಲಾರಿ, ಟ್ರಾಕ್ಟರ್, ಟಿಪ್ಪರ್‌ಗಳು ಓಡಾಡುವುದರಿಂದ ಮ್ಯಾನ್‌ಹೋಲ್‌ಗಳು  ಕುಸಿಯುತ್ತಿವೆ.

ಬುದ್ಧನಗರ ೧೦ನೇ ವಾರ್ಡ್‌ಗೆ ಸೇರಿದ್ದು, ಈ ವಾರ್ಡ್ ಪ್ರತಿನಿಽಸುವ ನಗರಸಭೆ ಸದಸ್ಯರಾದ ಮನೋಜ್ ಪಟೇಲ್ ಹಾಗೂ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ದುರಸ್ತಿ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಮ್ಯಾನ್ ಹೋಲ್‌ಗಳು ಮತ್ತಷ್ಟು ಕುಸಿದು ಅಧ್ವಾನ ಆಗುವ ಮೊದಲು ದುರಸ್ತಿ ಮಾಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನು ಓದಿ :ಪ್ರತಿ ವರ್ಷ ರಸ್ತೆ ಅಪಘಾತಗಳಿಂದ 1 ಸಾವಿರಕ್ಕೂ ಅಧಿಕ ಮಂದಿ ಸಾವು: ಸಚಿವ ರಾಮಲಿಂಗಾರೆಡ್ಡಿ

ಬುದ್ಧನಗರ, ಪಚ್ಚಪ್ಪ ಲೇಔಟ್ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಮ್ಯಾನ್‌ಹೋಲ್ಗಳು ಕುಸಿದಿವೆ. ನಗರಸಭೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಬೇಗ ದುರಸ್ತಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

” ಮ್ಯಾನ್ ಹೋಲ್ ಕುಸಿದಿರುವ ಸ್ಥಳಗಳಿಗೆ ನಗರಸಭೆಯ ಸಿಬ್ಬಂದಿಯನ್ನು ಕೂಡಲೇ ಕಳುಹಿಸಿ ಪರಿಶೀಲಿಸಲಾಗುವುದು. ನಂತರ ದುರಸ್ತಿ ಮಾಡಿಸಲು ಕ್ರಮ ವಹಿಸಲಾಗುತ್ತದೆ.”

-ರೂಪ, ಪ್ರಭಾರ ಪೌರಾಯುಕ್ತರು, ನಗರಸಭೆ, ಚಾ.ನಗರ

” ಮ್ಯಾನ್‌ಹೋಲ್ ಕುಸಿದಿರುವ ಬಗ್ಗೆ ನಾನು ನಗರಸಭೆಯ ಸಹಾಯಕ ಇಂಜಿನಿಯರ್ ಗಮನಕ್ಕೆ ತಂದಿದ್ದೇನೆ. ಮ್ಯಾನ್‌ಹೋಲ್‌ಗಳ ಮುಚ್ಚಳ ನಮ್ಮ ಬಳಿ ದಾಸ್ತಾನಿಲ್ಲ. ಹೊಸದಾಗಿ ಖರೀದಿಸಿ ಹಾಕಬೇಕಿದೆ. ಇದಕ್ಕೆ ಒಂದು ವಾರ ಕಾಲಾವಕಾಶ ಬೇಕೆಂದು ತಿಳಿಸಿದ್ದಾರೆ. ಅಲ್ಲಿಯ ತನಕ ಮತ್ತಷ್ಟು ಕುಸಿಯಲಿವೆ. ಆದಷ್ಟು ಬೇಗ ದುರಸ್ತಿ ಮಾಡಿಸಬೇಕು.”

-ಭಾನುಪ್ರಕಾಶ್, ಸಾಮಾಜಿಕ ಹೋರಾಟಗಾರರು, ಬುದ್ಧನಗರ

Tags:
error: Content is protected !!