ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೈಸೂರಿನ ನಿವಾಸದಿಂದ ಕೂಗಳತೆ ದೂರದಲ್ಲಿರುವ ಜನತಾನಗರ ಹಾಗೂ ರಾಮಕೃಷ್ಣ ನಗರ ‘ಐ’ ಬ್ಲಾಕ್ ನಿವಾಸಿಗಳು ಆದ್ಯತಾ ಪಡಿತರ ಚೀಟಿ (ಬಿಪಿಎಲ್) ದೊರೆಯದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ. ಪಡಿತರ ಚೀಟಿ ಇಲ್ಲದ ಪರಿಣಾಮ ಈ ಬಡಾವಣೆಗಳ ನೂರಾರು ಕುಟುಂಬಗಳಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗಳ ‘ಭಾಗ್ಯ’ ದೊರೆತಿಲ್ಲ.
ಅದಕ್ಕಿಂತಲೂ ಪ್ರಮುಖವಾಗಿ ಆರೋಗ್ಯ ಸಮಸ್ಯೆ ಎದುರಾದರೆ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳಿಗೆ ಶುಲ್ಕರಿಯಾಯಿತಿ ಪಡೆಯಲು ಬಿಪಿಎಲ್ ಪಡಿತರ ಚೀಟಿ ಅತ್ಯಗತ್ಯ. ಆದರೆ, ಇಲ್ಲಿನ ನಿವಾಸಿಗಳಿಗೆ ಆ ಭಾಗ್ಯವೂ ಇಲ್ಲದಂತಾಗಿ ರೋಗ ರುಜಿನ ಬಂದರೆ ಆಸ್ಪತ್ರೆಗಳಿಗೆ ಶುಲ್ಕ ಪಾವತಿಸಲು ಹೆಣಗಾಡಬೇಕಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊಸ ಪಡಿತರ ಚೀಟಿಗಳಿಗಾಗಿ ಅರ್ಜಿ ಆಹ್ವಾನಿಸಿದ್ದಾಗ ಇಲ್ಲಿನ ಜನರು ಸೈಬರ್ ಕೇಂದ್ರಗಳ ಮುಂದೆ ದಿನವಿಡೀ ನಿಂತು, ಕೇಳಿದ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಿ ಬರೋಬ್ಬರಿ ಎರಡು ವರ್ಷಗಳೇ ಕಳೆದಿವೆ. ದರೆ, ರಾಜ್ಯ ಸರ್ಕಾರ ಹೊಸ ಬಿಪಿಎಲ್ ಪಡಿತರ ಚೀಟಿ ವಿತರಣೆಗೆ ಅನುಮೋದನೆ ನೀಡದಿರುವುದರಿಂದ ಅರ್ಜಿ ಹಾಕಿದವರು ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.
ಕಾಟಾಚಾರದ ಸರ್ವರ್!: ಕೇಂದ್ರ ಸರ್ಕಾರ ‘ಒಂದು ದೇಶ ಒಂದು ಪಡಿತರ ಚೀಟಿ’ ಯೋಜನೆ ಜಾರಿಗೆ ತಂದ ಮೇಲೆ ಈಗಾಗಲೇ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಯಜಮಾನಿಯಾಗಿ ಆ ಕುಟುಂಬದ ಮಹಿಳೆಯನ್ನು ತಂದು ಕೂರಿಸಲಾಗಿದೆ. ಈ ರೀತಿ ಸಹಜ ಪ್ರಕ್ರಿಯೆಯಲ್ಲಿ ಪಡಿತರ ಚೀಟಿ ಮಾರ್ಪಾಡಾದ ಕುಟುಂಬಗಳು ಸರ್ಕಾರಿ ಸೌಲಭ್ಯ ಪಡೆಯಲು ಯಾವುದೇ ಅಡ್ಡಿಯಿಲ್ಲ. ಆದರೆ, ಕುಟುಂಬದ ಮುಖ್ಯಸ್ಥ ತೀರಿಕೊಂಡಿದ್ದರೆ, ಹೊಸದಾಗಿ ಮದುವೆಯಾಗಿ ಆ ಕುಟುಂಬಕ್ಕೆ ಬಂದವರು, ಇತ್ತೀಚಿಗೆ ಜನಿಸಿದ ಮಕ್ಕಳನ್ನು ಪಡಿತರ ಚೀಟಿಗೆ ಸೇರ್ಪಡೆ ಮಾಡುವಲ್ಲಿ ಬಹುದೊಡ್ಡ ಸಮಸ್ಯೆ ಎದುರಾಗಿದೆ.
ಚುನಾವಣೆ ನೀತಿ ಸಂಹಿತೆ ನಡುವೆಯೂ ಆಗೊಮ್ಮೆ ಹೀಗೊಮ್ಮೆ ಆಹಾರ ಇಲಾಖೆ ಕೆಲವೇ ಗಂಟೆಗಳ ಕಾಲ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿತ್ತಾದರೂ ಸರ್ವರ್ ಸಮಸ್ಯೆಯಿಂದಾಗಿ ಕೆಲಸ-ಕಾರ್ಯ ಬಿಟ್ಟು ಜನರು ಸೈಬರ್ ಕೇಂದ್ರಗಳ ಮುಂದೆ ದಿನ ಕಳೆದಿದ್ದು ಬಿಟ್ಟರೆ ತಿದ್ದುಪಡಿ ಮಾಡಿಸಲು ಸಾಧ್ಯವಾಗಲೇ ಇಲ್ಲ.
ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಕೊಟ್ಟರೆ, ತಿದ್ದುಪಡಿಗೆ ಅವಕಾಶ ನೀಡಿದರೆ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಂಖ್ಯೆ ಹೆಚ್ಚಳವಾಗಲಿದೆ ಎಂಬ ಕಾರಣಕ್ಕೆ ಸರ್ಕಾರ ಈ ರೀತಿ ಕಾಟಾಚಾರಕ್ಕೆ ತಿದ್ದುಪಡಿಗೆ ಅವಕಾಶ ನೀಡಿದಂತೆ ಮಾಡಿ ಸರ್ವರ್ ಸಮಸ್ಯೆ ನೆಪದಲ್ಲಿ ಜನರನ್ನು ಸತಾಯಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.