ಮೈಸೂರು: ರಸ್ತೆಯ ಬದಿ ಎಲ್ಲೆಂದರಲ್ಲಿ ಸುರಿದಿರುವ ಕಸದ ರಾಶಿ, ಮುಂಜಾನೆ ಶಾಲೆಗೆ ಬರುವ ಮಕ್ಕಳು ದುರ್ನಾತದಿಂದ ಮೂಗು ಮುಚ್ಚಿಕೊಂಡೇ ಬರುವ ದುಸ್ಥಿತಿ. ಇದು ನಗರದ ಚಾಮರಾಜಪುರಂ ರೈಲು ನಿಲ್ದಾಣದ ಹಿಂಬದಿಯಲ್ಲಿರುವ ಕ್ಯಾಪಿಟಲ್ ಆಂಗ್ಲ ಮಾಧ್ಯಮ ಶಾಲೆಯ ಬಳಿ ಕಂಡು ಬರುವ ದೃಶ್ಯಗಳು. ರೈಲ್ವೆ ಹಳಿ ಬದಿ ಕಸ ವಿಲೇವಾರಿ ಹಸಿ ಕಸ-ಒಣ ಕಸ, ಪ್ಲಾಸ್ಟಿಕ್, ಇತರೆ ತ್ಯಾಜ್ಯಗಳು ಸೇರಿದಂತೆ ಎಲ್ಲ ಕಸಗಳು ಸಹಾ ರೈಲು ಹಳಿಯ ಬದಿಯಲ್ಲಿ ಹಾಕಲಾಗುತ್ತಿದೆ. ಇತ್ತ ಕಾಲೇಜು ಸಂಪರ್ಕಿಸುವ ಮುಖ್ಯ ರಸ್ತೆಯ ಸುತ್ತಮುತ್ತ ಕಸದ ರಾಶಿಯೇ ತುಂಬಿದ್ದು, ಸೊಳ್ಳೆ ನೊಣಗಳ ಹಾವಳಿ ಮಿತಿ ಮೀರಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ.
ಶಾಲೆ ಕಾಂಪೌಂಡ್ ಬಳಿ ಟ್ರಾನ್ಸ್-ರ್ಮರ್: ಶಾಲಾ ಕಾಂಪೌಂಡ್ ಬಳಿ ಬೃಹತ್ ಗಾತ್ರದ ಟ್ರಾನ್ಸ್‌ಫಾರ್ಮರ್ ಇದ್ದು, ವಿದ್ಯಾರ್ಥಿಗಳಿಗೆ ಜೀವ ಭಯ ಕಾಡುತ್ತಿದೆ. ಶಾಲಾ ಕಾಂಪೌಂಡ್ ಬಳಿಯೂ ಕಸದ ರಾಶಿಯೇ ಕಂಡು ಬಂದಿದ್ದು, ಈ ಬಗ್ಗೆ ನಗರ ಪಾಲಿಕೆ ಅಧಿಕಾರಿಗಳಿಗೆ ಹಲವಾರು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಗರ ಪಾಲಿಕೆ ಅಧಿಕಾರಿಗಳು ಇದು ರೈಲ್ವೆ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎನ್ನುತ್ತಾರೆ. ರೈಲ್ವೆ ಇಲಾಖೆ ಅದಿಕಾರಿಗಳ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಪಾಲಿಕೆ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಸದ ರಾಶಿ ತೆರವಾಗದೇ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಸಂಬಂಧಪಟ್ಟ ಸಚಿವರು ಈ ಬಗ್ಗೆ ಗಮನ ಹರಿಸಿ ಕಸ ತೆರವು ಮಾಡುವಂತೆ ಕ್ಯಾಪಿಟಲ್ ಶಾಲೆಯ ಮುಖ್ಯಸ್ಥರು ಮನವಿ ಮಾಡಿದ್ದಾರೆ.
ಸ್ವಚ್ಛತೆಗೆ ಮನವಿ ಮಾಡಿ ಸಾಕಾಗಿದೆ: ಮುಖ್ಯ ಶಿಕ್ಷಕರು ಶಾಲೆ ಆರಂಭವಾದ ದಿನದಿಂದಲೂ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರು ಸುರಿಯುತ್ತಿರಿರುವ ತ್ಯಾಜ್ಯ ಶಾಲೆಯ ಆವರಣಕ್ಕೆ ಗಾಳಿ ಬೀಸಿದಾಗೆಲ್ಲ ಹಾರಿಬರುತ್ತಿದೆ. ತ್ಯಾಜ್ಯ ನಿರ್ವಹಣೆ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದಾಗ ಈ ರಸ್ತೆ ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ, ಇದು ರೈಲ್ವೆ ಇಲಾಖೆಯ ಆಸ್ತಿಯಾಗಿರುತ್ತದೆ, ನಾವು ಇಲ್ಲಿ ಸ್ವಚ್ಛತೆ ಮಾಡುವುದಿಲ್ಲ ಎಂದಿದ್ದರು. ರೈಲ್ವೆ ಅವರಿಗೆ ತಿಳಿಸಿದಾಗ ನಾವು ಈ ಬಗ್ಗೆ ದೆಹಲಿಗೆ ಪತ್ರ ಬರೆದು ಕೇಳಬೇಕು ಎನ್ನುತ್ತಾರೆ. ಒಟ್ಟಾರೆ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಪೋಷಕರು ನಿತ್ಯ ಕೊಳಕು ರಸ್ತೆಯಲೇ ಓಡಾಡುವಂತಾಗಿದೆ. ರೈಲ್ವೆ ಇಲಾಖೆಯವರು ಈ ಬಗ್ಗೆ ಗಮನಿಸಿ ಸ್ವಚ್ಛತೆಗೆ ಕ್ರಮಕೈಗೊಂಡರೆ ಮಕ್ಕಳು ಹಾಗೂ ಶಿಕ್ಷಕರಿಗೆ ಒಳಿತಾಗುತ್ತದೆ.
– ಆನಿ ಜೋಸೆಫ್,ಮುಖ್ಯ ಶಿಕ್ಷಕರು, ಕ್ಯಾಪಿಟಲ್ ಶಾಲೆ.