‘ಕಂಗೆಟ್ಟ ಗ್ರಾಮಗಳಿಗೆ ಸದ್ಯದಲ್ಲೇ ರಸ್ತೆ, ವಿದ್ಯುತ್, ಮೂಲ ಸೌಕರ್ಯ’
ಮೈಸೂರು: ಹಸಿರು ಕಾನನದ ನಡುವೆ ಉಸಿರುಗಟ್ಟಿಸುವ ಕಷ್ಟಗಳ ನಡುವೆ ಜೀವನ ಸಾಗಿಸುತ್ತಿರುವ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು ಇಂಡಿಗನತ್ತ, ಮೆಂದಾರೆ, ತೋಕೆರೆ ಇತ್ಯಾದಿ ಗ್ರಾಮಗಳ ಜನರು, ಅಕ್ಷರದ ಕೊರತೆ, ಆಹಾರದ ಅಭಾವದಿಂದ ನರಳುತ್ತಿದ್ದರೂ ಹೊರಪ್ರಪಂಚದ ಗಮನ ಸೆಳೆದಿರಲಿಲ್ಲ. ಆದರೆ, ಏ.26ರಂದು ನಡೆದ ಲೋಕಸಭೆ ಚುನಾವಣೆಯ ಮತದಾನದ ವೇಳೆ ಇಂಡಿಗನತ್ತ ಗ್ರಾಮದಲ್ಲಿ ನಡೆದ ಮತಗಟ್ಟೆ ಧ್ವಂಸ ಹಾಗೂ ಮೆಂದಾರೆ ಪೋಡಿನ ನಿವಾಸಿಗಳ ಮೇಲಿನ ಹಲ್ಲೆಯಿಂದ ರಾತ್ರಿ ಬೆಳಕಾಗುವಷ್ಟರಲ್ಲಿ ಇಡೀ ದೇಶದ ಜನರು ತಿರುಗಿ ನೋಡುವಂತಾಯಿತು.
ನಾಗರಿಕತೆಯ ಒಂದಿಷ್ಟು ಸ್ಪರ್ಶ ಮಾತ್ರ ಇರುವ ಈ ಗ್ರಾಮಗಳ ಜನರಿಗೆ ಮೂಲ ಸೌಕರ್ಯಗಳನ್ನು ಹೇಗೆ ಪಡೆಯಬೇಕು? ಯಾರನ್ನು ಕೇಳಬೇಕು ಎಂಬುದರ ವಿಶೇಷ ಅರಿವೂ ಇದ್ದಂತಿಲ್ಲ. ಇವರ ನೋವುಗಳಿಗೆ ಸಾಧ್ಯವಾದಷ್ಟು ಪರಿಹಾರ ಹುಡುಕುವ ದೃಷ್ಟಿಯಿಂದ ‘ಆಂದೋಲನ’ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿರುವ ಚಾ.ನಗರ ಡಿಸಿ ಸಿ.ಟಿ.ಶಿಲ್ಪಾ ನಾಗ್ ಅವರು, ‘ಆಂದೋಲನ’ಕ್ಕೆ ನೀಡಿರುವ ಸಂದರ್ಶನದಲ್ಲಿ, ನೊಂದ ಜನರಿಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ.
ಆಂದೋಲನ: ಮಹದೇಶ್ವರ ಬೆಟ್ಟ ಅರಣ್ಯ ವಲಯದೊಳಗಿರುವ ಗ್ರಾಮದ ನಿವಾಸಿಗಳಿಗೆ ಸರ್ಕಾರದ ಸವಲತ್ತುಗಳು ತಲುಪುತ್ತವೆಯೇ?
ಶಿಲ್ಪಾ ನಾಗ್: ಖಂಡಿತ, ಅಲ್ಲಿನ ನಿವಾಸಿಗಳಿಗೆ ಪ್ರತಿ ತಿಂಗಳು ಪಡಿತರವನ್ನು ಆಯಾ ಗ್ರಾಮಗಳಿಗೆ ತೆರಳಿ ವಿತರಿಸಲಾಗುತ್ತಿದೆ. ಈ ಸಂಬಂಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ದೇಶಕರಿಗೆ ಈ ಹಿಂದೆಯೇ ಸೂಚನೆ ನೀಡಲಾಗಿದೆ. ಇದಲ್ಲದೆ ಹಾಡಿ-ಪೋಡುಗಳಲ್ಲಿ ಸೋಲಿಗರಿಗೆ ಪೌಷ್ಟಿಕ ಆಹಾರವನ್ನೂ ವಿತರಿಸಲಾಗುತ್ತಿದೆ. ಆರೋಗ್ಯ ಸಂಬಂಧ ಮೊಬೈಲ್ ಯೂನಿಟ್ ಸ್ಥಾಪಿಸಲಾಗಿದೆ. ಆರೋಗ್ಯ ಸಮಸ್ಯೆ ಉಂಟಾದರೆ ಮೊಬೈಲ್ ಯೂನಿಟ್ 30 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪುತ್ತದೆ. ಅಲ್ಲದೆ 24X7 ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
• ಆಂದೋಲನ: ಅಲ್ಲಿನ ಬಹುತೇಕ ಗ್ರಾಮಗಳಲ್ಲಿ ಕೆಲವರು ವ್ಯವಸಾಯ ನಂಬಿದ್ದರೆ, ಬಹುಪಾಲು ಜನರು ಕೂಲಿಯನ್ನೇ ನೆಚ್ಚಿಕೊಂಡಿದ್ದಾರೆ. ಅವರಿಗೆ ಸ್ಥಳೀಯವಾಗಿ ಆದಾಯಕ್ಕೆ ದಾರಿ ಇದೆಯೇ?
ಶಿಲ್ಪಾ ನಾಗ್: ಅಗತ್ಯ ಇರುವ ಎಲ್ಲರಿಗೂ ಜಾಬ್ ಕಾರ್ಡ್ ವಿತರಿಸಲು ಜಿಪಂ ಸಿಇಒಗಳಿಗೆ ಸೂಚನೆ ನೀಡಲಾಗಿದೆ. ನರೇಗಾ ಯೋಜನೆಯಡಿ ಕೆಲಸ ನೀಡಲು ತಿಳಿಸಲಾಗಿದೆ.
‘ಕಂಗೆಟ್ಟ ಗ್ರಾಮಗಳಿಗೆ ಸದ್ಯದಲ್ಲೇ ರಸ್ತೆ, ವಿದ್ಯುತ್’
ಮೈಸೂರು: ಏ.26ರಂದು ನಡೆದ ಲೋಕಸಭೆ ಚುನಾವಣೆಯ ಮತದಾನದ ವೇಳೆ ಇಂಡಿಗನತ್ತ ಗ್ರಾಮದಲ್ಲಿ ನಡೆದ ಮತಗಟ್ಟೆ ಧ್ವಂಸ ಹಾಗೂ ಮೆಂದಾರೆ ಪೋಡಿನ ನಿವಾಸಿಗಳ ಮೇಲಿನ ಹಲ್ಲೆ ಪ್ರಕರಣದ ಹಿನ್ನೆಲೆ-ಮುನ್ನೆಲೆ ಕುರಿತು ‘ಆಂದೋಲನ’ವು ಪ್ರಕಟಿಸಿದ ಮಾನವೀಯ ವರದಿ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್ ಅವರು ಜಿಲ್ಲಾಡಳಿತದ ತಂಡದೊಂದಿಗೆ ಎರಡೂ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಅಳಲನ್ನು ಆಲಿಸಿ ಆ ಗ್ರಾಮಗಳಿಗೆ ಮೂಲ ಸೌಲಭ್ಯ ನೀಡುವ ಭರವಸೆ ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿಗಳು ಮಲೆ ಮಹದೇಶ್ವರ ಬೆಟ್ಟದ ಕುಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಈ ಕುರಿತು ಆಂದೋಲನ ಸಂದರ್ಶನದಲ್ಲಿ ಕುಗ್ರಾಮಗಳಿಗೆ ಈಗಾಗಲೇ ನೀಡುತ್ತಿರುವ ಹಾಗೂ ನೀಡಲಿರುವ ಸವಲತ್ತುಗಳ ಬಗ್ಗೆ ಸಂಪೂರ್ಣ ಚಿತ್ರಣ ನೀಡಿದ್ದಾರೆ.
ಆಂದೋಲನ: ಇಂಡಿಗನತ್ತ ಗ್ರಾಮದಂತೆ ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿರುವ ಬಹುತೇಕ ಗ್ರಾಮಗಳ ಬೇಡಿಕೆ ವಿದ್ಯುತ್ ಸೌಲಭ್ಯ. ಈ ಸೌಲಭ್ಯ ನೀಡಲು ಇರುವ ತೊಡಕುಗಳೇನು? ಅದಕ್ಕಾಗಿ ನೀವು ಕೈಗೊಂಡಿರುವ ಕ್ರಮಗಳೇನು?
ಶಿಲ್ಪಾ ನಾಗ್: ಇಂಡಿಗನತ್ತ, ಮೆಂದಾರೆ ಸೇರಿದಂತೆ ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಇರುವ ಮೂಲಸೌಲಭ್ಯವಿಲ್ಲದ ಗ್ರಾಮಗಳು, ಹಾಡಿ-ಪೋಡುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 18 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ಧಗೊಳಿಸಲಾಗಿದೆ. ಈ ಸಂಬಂಧ ಈಗಾಗಲೇ ಬಹಳಷ್ಟು ಗ್ರಾಮಗಳಲ್ಲಿ ಸರ್ವೆ ಕಾರ್ಯ ನಡೆಸಲಾಗಿದೆ. ಹಾಗಾಗಿ ಕಾಮಗಾರಿ ಆರಂಭಿಸಲು ನಮ್ಮಲ್ಲಿ ಯಾವುದೇ ತೊಡಕಿಲ್ಲ. ಆದರೆ ಈ ಗ್ರಾಮಗಳು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವುದರಿಂದ ಅರಣ್ಯ ಇಲಾಖೆ ಅನುಮತಿ ಬೇಕಿದೆ. ಈ ಸಂಬಂಧ ಅನುಮತಿ ಪಡೆಯಲು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ ಗ್ರಾಮಗಳು ಅರಣ್ಯ ಪ್ರದೇಶದಲ್ಲಿ ಇರುವುದರಿಂದ ನಗರಪ್ರದೇಶದಲ್ಲಿ ಕೈಗೊಳ್ಳುವ ಕಾಮಗಾರಿ ವೆಚ್ಚಕ್ಕಿಂತ ಅರಣ್ಯ ಪ್ರದೇಶದಲ್ಲಿ ಕೈಗೊಳ್ಳುವ ಕಾಮಗಾರಿ ವೆಚ್ಚ 1:3 ಹೆಚ್ಚಾಗಲಿದೆ. ಏಕೆಂದರೆ ಅರಣ್ಯ ಪ್ರದೇಶದಲ್ಲಿ ವನ್ಯ ಪ್ರಾಣಿಗಳಿಗೆ ಅಪಾಯವಾಗದಂತೆ, ಅರಣ್ಯ ಪ್ರದೇಶದಲ್ಲಿ ವಿದ್ಯುತ್ ತಂತಿ-ಮರಗಳ ಘರ್ಷಣೆಯಿಂದ ಸಂಭವಿಸುವ ಅವಘಡ ತಪ್ಪಿಸಲು ಪ್ಲಾಸ್ಟಿಕ್ ಕವಚ ಹೊಂದಿರುವ ತಂತಿ ಮೂಲಕ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕಿದೆ. ಜೊತೆಗೆ ಈ ವಿಧಾನದ ವಿದ್ಯುತ್ ಸಂಪರ್ಕ ಯೋಜನೆ ರೂಪಿಸಿದರೆ ಅರಣ್ಯ ಇಲಾಖೆಯಿಂದಲೂ ಆಕ್ಷೇಪಣೆ ಇಲ್ಲದೆ ಅನುಮತಿ ಸಿಗಲಿದೆ ಎಂಬ ಭರವಸೆಯಿಂದ ಕ್ರಿಯಾ ಯೋಜನೆ ಸಿದ್ಧಗೊಳಿಸಿ ಅನುಮತಿಗಾಗಿ ಅರಣ್ಯ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಡಿಎಫ್‌ಒ ಹಂತದಲ್ಲಿ ಕ್ಲಿಯರೆನ್ಸ್ ಆಗಿದೆ. ಅವರು ನಮ್ಮ ವರದಿಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಸಲ್ಲಿಸಿದ್ದಾರೆ. ಅಲ್ಲಿ ಒಂದೆರಡು ಆಕ್ಷೇಪಣೆಗಳನ್ನು ಎತ್ತಿಹಿಡಿದು ತಡೆಹಿಡಿದ್ದಾರೆ. ಆಕ್ಷೇಪಣೆಗಳಿಗೆ ಸಕಾರಣ ನೀಡುತ್ತೇವೆ. ಆ ನಂತರ ಅವರು ವರದಿಯನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಕಳುಹಿಸಬೇಕು. ಅಲ್ಲಿ ಕಾಮಗಾರಿಗೆ ಯಾವುದೇ ಆಕ್ಷೇಪಣೆ ಇಲ್ಲದೆ ಗ್ರೀನ್ ಸಿಗ್ನಲ್ ಸಿಕ್ಕ ತಕ್ಷಣ ಕಾಮಗಾರಿ ಆರಂಭಿಸುತ್ತೇವೆ. ಒಂದು ತಿಂಗಳ ಗುರಿಯಲ್ಲಿ ಆ ಕಾರ್ಯ ನೆರವೇರುವ ಭರವಸೆ ಇದೆ. ಸದ್ಯ ಬಹಳಷ್ಟು ಗ್ರಾಮಗಳಿಗೆ ಸೋಲಾರ್ ದೀಪದ ವ್ಯವಸ್ಥೆ ಇದೆ.
ಆಂದೋಲನ: ಇಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆಯೇ?
ಶಿಲ್ಪಾ ನಾಗ್: ಹೌದು. ಈ ಸಂಬಂಧ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರೊಂದಿಗೆ ಮಾತನಾಡಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಎಚ್. ಸಿ.ಮಹದೇಪ್ಪ ಅವರು ನನ್ನೊಂದಿಗೆ ಚರ್ಚಿಸಿದ್ದು, ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ ಈ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.
ಆಂದೋಲನ: ಈ ಗ್ರಾಮಗಳ ಜನರು ಸರಿಯಾದ ಕಚ್ಛಾ ರಸ್ತೆಯೂ ಇಲ್ಲದೆ ಪರಿತಪಿಸುತ್ತಿದ್ದಾರೆ. ಈ ಊರುಗಳ ರಸ್ತೆಯಲ್ಲಿ ಸಣ್ಣ ಪುಟ್ಟ ವಾಹನಗಳಾದರೂ ಓಡಾಡುವಂತೆ ತಕ್ಕಮಟ್ಟಿಗಾದರೂ ಉತ್ತಮ ರಸ್ತೆ ನಿರ್ಮಿಸಿಕೊಡಲು ಸಾಧ್ಯವಿಲ್ಲವೆ?
ಶಿಲ್ಪಾ ನಾಗ್: ಹೌದು. ಈ ಗ್ರಾಮಗಳ ಜನರು ವಾಹನ ಓಡಾಡುವಂತೆ ರಸ್ತೆ ಮಾಡಿಕೊಡಿ ಎಂದು ಹಿಂದಿನಿಂದಲೂ ಮನವಿ ಮಾಡುತ್ತಿದ್ದಾರೆ. ಹಾಗಾಗಿ ಈ ಗ್ರಾಮಗಳಿಗೆ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಮಾಡಲು 4-5 ತಿಂಗಳುಗಳ ಹಿಂದೆಯೇ ಯೋಜನೆ ರೂಪಿಸಲಾಗಿದೆ. ಈ ಹಿಂದೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಈ ಸಂಬಂಧ ನಾನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೆ. ಅವರು ತಕ್ಷಣ ಪಿಡಬ್ಲ್ಯೂಡಿ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಈ ಯೋಜನೆ ಸಂಬಂಧ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಯೋಜನೆ ಕೈಗೆತ್ತಿಕೊಳ್ಳುವ ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ಆದರೆ ಈ ಕಾಮಗಾರಿ ಕೈಗೊಳ್ಳಲು ಕೂಡ ಫಾರೆಸ್ಟ್ ಕ್ಲಿಯರೆನ್ಸ್ ಆಗಬೇಕು. ಅರಣ್ಯ ಇಲಾಖೆ ಅನುಮತಿ ಪಡೆಯದೆ ಕಾಮಗಾರಿ ಕೈಗೊಳ್ಳುವಂತಿಲ್ಲ. ಈಗಿರುವ ಕಲ್ಲು-ಮಣ್ಣಿನಿಂದ ಕೂಡಿದ ರಸ್ತೆ ಕಿರಿದಾಗಿದೆ. ಮುಂದೆ ವಾಹನ ಸಂಚಾರಕ್ಕೆ ಅನುವು ಮಾಡಬೇಕೆಂದರೆ ಈಗಿರುವ 4 ಅಡಿ ರಸ್ತೆಯನ್ನು ವಿಸ್ತರಿಸಬೇಕು. ಈ ವಿಷಯದಲ್ಲೂ ಸಂರಕ್ಷಿತ ಅರಣ್ಯ ವ್ಯಾಪ್ತಿ, ಕಂದಾಯ ಭೂಮಿ ಎಂಬ ತಕರಾರು ಬರುತ್ತದೆ. ಹಾಗಾಗಿ ಈ ಕಾಮಗಾರಿ ಸಂಬಂಧವೂ ಕ್ರಿಯಾ ಯೋಜನೆ ರೂಪಿಸಿ ಅರಣ್ಯ ಇಲಾಖೆಗೆ ವರದಿ ಸಲ್ಲಿಸಿ ಅನುಮತಿಗಾಗಿ ಕಾಯುತ್ತಿದ್ದೇವೆ. ಒಮ್ಮೆ ಅಲ್ಲಿಂದ ನಿರಾಕ್ಷೇಪಣೆ ಪತ್ರ ಬಂದ ತಕ್ಷಣ ಕಾಮಗಾರಿ ಆರಂಭಿಸುತ್ತೇವೆ.
ಆಂದೋಲನ: ಇಲ್ಲಿನ ಬಹುತೇಕ ಗ್ರಾಮಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ಬಿಂದಿಗೆ ನೀರಿಗೂ ಮೈಲಿಗಟ್ಟಲೆ ಅಲೆಯುತ್ತಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಲ್ಲಿ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಒಂದು ನಲ್ಲಿಯಲ್ಲೂ ನೀರು ಬರುತ್ತಿಲ್ಲ ಎಂಬ ದೂರು ಇದೆ. ಈ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತೀರಿ?
ಶಿಲ್ಪಾ ನಾಗ್: ಸದ್ಯ ನೀರಿನ ಅಭಾವ ಇರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸೂಚಿಸಲಾಗಿದೆ. ಅದರಂತೆ ಟ್ಯಾಂಕರ್‌ಗಳ ಮೂಲಕ ಗ್ರಾಮಗಳಿಗೆ ನೀರು ಸರಬರಾಜಾಗುತ್ತಿದೆ. ರಸ್ತೆ ಸಮಸ್ಯೆಯಿಂದ
ದೊಡ್ಡ ಟ್ಯಾಂಕರ್‌ಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಹಾಗೂ ದುರ್ಗಮ ಮಾರ್ಗದಲ್ಲಿರುವ ಗ್ರಾಮಗಳನ್ನು ತಲುಪಲಾಗುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. ಬಹುತೇಕ ಗ್ರಾಮಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ನಲ್ಲಿ ಸಂಪರ್ಕ ಕಲ್ಪಿಸಲಾಗುತ್ತಿದೆ. ಈಗಾಗಲೇ ಪೈಪ್ ಲೈನ್ ಕಾಮಗಾರಿ ಮುಗಿದಿದೆ. ನೀರು ಸರಬರಾಜು ಕಾರ್ಯ ಬಾಕಿ ಇದೆ. ಇದಲ್ಲದೆ, ಸ್ಥಳೀಯವಾಗಿ ನೀರಿನ ಲಭ್ಯತೆ ಬಗ್ಗೆ ಗಮನ ಹರಿಸಲಾಗಿದೆ. ಸ್ಥಳೀಯವಾಗಿ ದೊರಕುವ ನೀರಿನ ಕ್ವಾಲಿಟಿ ಟೆಸ್ಟಿಂಗ್‌ಗೆ ಸೂಚನೆ ನೀಡಲಾಗಿದೆ. ಅತಿ ಶೀಘ್ರದಲ್ಲಿ ಈ ಗ್ರಾಮಗಳಲ್ಲಿ ನೀರಿನ ಸಮಸ್ಯೆ ನೀಗಲಿದೆ.
ಆಂದೋಲನ: ಈ ಗ್ರಾಮಗಳಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿದೆ? ಅದಕ್ಕಾಗಿ ಏನು ಕ್ರಮ ಕೈಗೊಂಡಿದ್ದೀರಿ?
ಶಿಲ್ಪಾ ನಾಗ್: ಬಹುತೇಕ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಅಂಗನವಾಡಿಗಳಲ್ಲಿ ಊಟದೊಂದಿಗೆ ವಿದ್ಯಾಭ್ಯಾಸ, ಶಾಲೆಗಳಲ್ಲಿಯೂ 6ನೇ ತರಗತಿಯವರೆಗೆ ಬಿಸಿಯೂಟದೊಂದಿಗೆ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ತದನಂತರ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಮಹದೇಶ್ವರ ಬೆಟ್ಟ ಮುಂತಾದೆಡೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲಾಗಿದೆ. ಇದಲ್ಲದೆ, ಮಕ್ಕಳನ್ನು ಅವರ ಗ್ರಾಮಗಳಿಂದ ಬೆಳಿಗ್ಗೆ ಶಾಲೆಗೆ ಕರೆತರಲು ಹಾಗೂ ಪಾಠ ಪ್ರವಚನ ಮುಗಿದ ನಂತರ ಸಂಜೆ ಸ್ವಗ್ರಾಮಕ್ಕೆ ಕರೆದುಕೊಂಡು ಹೋಗಲು ವಾಹನ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸರ್ಕಾರದಿಂದ ಕೊಡಮಾಡಿರುವ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನಿರ್ವಹಣೆಯಲ್ಲಿರುವ ಜನಮನ ವಾಹನ ಈ ಕೆಲಸ ಮಾಡುತ್ತದೆ. ಆದ್ದರಿಂದ ಮಕ್ಕಳು ಯಾವುದೇ ತೊಂದರೆ ಇಲ್ಲದೆ ಗುಣಮಟ್ಟದ ಶಿಕ್ಷಣ ಪಡೆಯಬಹುದಾಗಿದೆ.
ಆಂದೋಲನ: ಅಲ್ಲಿನ ನಿವಾಸಿಗಳಿಗೆ ಉತ್ತಮ ಜೀವನ ರೂಪಿಸಲು ಕ್ರಿಯಾಶೀಲ ಯೋಜನೆಗಳೇನಾದರೂ ಇವೆಯೆ?
ಶಿಲ್ಪಾನಾಗ್: ಅಲ್ಲಿನ ನಿವಾಸಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಚಿಂತಿಸಲಾಗಿದೆ. ಈ ಸಂಬಂಧ ಎರಡು ಮೂರು ಸಭೆಗಳು ನಡೆದಿವೆ. ಅಲ್ಲಿನ ಯುವಕರಿಗೆ ಟೂರಿಸ್ಟ್ ಆಕ್ಟ್ ಅಡಿ ವಾಹನಗಳನ್ನು ಓಡಿಸಲು ಅವಕಾಶ ಕಲ್ಪಿಸಿ ಆದಾಯಕ್ಕೆ ದಾರಿ ಮಾಡಿಕೊಡಲು ಚಿಂತನೆ ನಡೆಸಲಾಗಿದೆ.