ಮೈಸೂರು: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧ ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷ ಮುಂದುವರಿಯುವ ಲಕ್ಷಣ ಗೋಚರಿಸಿದೆ. ಚಾಮುಂಡಿಬೆಟ್ಟವನ್ನು ಸಮಗ್ರ ವಾಗಿ ಅಭಿವೃದ್ಧಿಪಡಿಸಲು ಪ್ರಾಧಿಕಾರ ರಚನೆ ಮಾಡುವುದಾಗಿ ೨೦೨೪- ೨೫ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು.
ಅದರಂತೆ, ಕಳೆದ ಮಾರ್ಚ್ ೭ರಂದು ಪ್ರಾಽಕಾರ ವಿಧೇಯಕಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ ನಂತರ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು. ಸರ್ಕಾರ ಆ. ೧೯ರಂದು ಪ್ರಾಽಕಾರದ ಸಭೆಯನ್ನು ನಡೆಸಲು ನಿರ್ಧರಿಸಿತ್ತು. ಆದರೆ, ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರು ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಪ್ರಾಧಿಕಾರದ ಸಭೆಗೆ ತಡೆಯಾಜ್ಞೆ ನೀಡಿತ್ತು. ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿ ಕೊಂಡು ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ದಾಖಲೆಗಳನ್ನು ಸಲ್ಲಿಸಿದ ಪರಿಣಾಮವಾಗಿ ನ್ಯಾಯಾಲಯವು ಸೆ. ೫ಕ್ಕೆ ವಿಚಾರಣೆಯನ್ನು ಮುಂದೂಡಿತ್ತು. ಇದರ ನಡುವೆ ಪ್ರಾಧಿಕಾರದ ಸಭೆ ನಡೆಸಲು ನ್ಯಾಯಾಲಯದಿಂದ ಯಾವುದೇ ಅಡ್ಡಿ ಇಲ್ಲ. ಪ್ರಾಧಿಕಾರ ಅಸ್ತಿತ್ವದಲ್ಲಿರುವುದರಿಂದ ಯಾವುದೇ ನಿಯಮ ಉಲ್ಲಂಘನೆಯ ಪ್ರಶ್ನೆ ಇಲ್ಲ ಎಂಬುದಾಗಿ ಅಡ್ವೊಕೇಟ್ ಜನರಲ್ ಅವರು ಸಲಹೆ ನೀಡಿದ ಕಾರಣ ಮಂಗಳವಾರ ಸಿಎಂ ಅಧ್ಯಕ್ಷತೆಯಲ್ಲಿ ಸುದೀರ್ಘವಾದ ಸಭೆ ನಡೆಸಿ ಹಲವಾರು ವಿಚಾರಗಳಿಗೆ ಒಪ್ಪಿಗೆ ನೀಡಲಾಯಿತು.
ಸಭೆ ಕಾನೂನು ಬಾಹಿರ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ಕಾನೂನು ಬಾಹಿರ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಮಂಗಳವಾರ ತಮ್ಮ ಕಚೇರಿಯಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಽಕಾರ ರಚನೆಗೆ ನಾವು ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದೇವೆ. ಇಂದು ನಡೆದಿರುವ ಪ್ರಾಧಿಕಾರದ ಸಭೆ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ ನಾನು ಸಭೆಯಲ್ಲಿ ಭಾಗವಹಿಸಲಿಲ್ಲ ಎಂದು ಹೇಳಿದರು. ಪ್ರಾಧಿಕಾರ ರಚನೆಯಿಂದ ನಮ್ಮ ಮೂಲ ಧಾರ್ಮಿಕ ನಂಬಿಕೆ, ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತದೆ. ಅದರ ಬಗ್ಗೆ ನಾವು ಹೋರಾಟ ಮಾಡುತ್ತೇವೆ. ಜನಪ್ರತಿನಿಽಯಾಗಿ ಮುಂದುವರಿಯುವ ಜೊತೆಗೆ ನಮ್ಮ ಧರ್ಮ ನಂಬಿಕೆ ಹಕ್ಕು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದರು. ದೇವಾಲಯ, ಮಸೀದಿ, ಚರ್ಚ್‌ಗಳಿಗೆ ಪ್ರಾಧಿಕಾರ ರಚಿಸುವುದು ಸೂಕ್ತ ಅಲ್ಲ. ಹುಂಡಿ ಹಣ ದೇವಾಲಯಗಳ ಅಭಿವೃದ್ಧಿಗೆ ಮಾತ್ರ ಬಳಕೆ ಆಗಬೇಕು ಎಂದು ಯದುವೀರ್ ಹೇಳಿದರು. ಪ್ರಾಧಿಕಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ಆದೇಶವನ್ನು ಸೆ. ೫ರವರೆಗೆ ನೀಡಿದೆ. ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಲು ನ್ಯಾಯಾಲಯ ಸೂಚಿಸಿದೆ. ಆದರೂ ಸಕರ ಸಭೆ ನಡೆಸುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.
ಪ್ರಮೋದಾದೇವಿ ಒಡೆಯರ್ ಬೇಸರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪ್ರಾಧಿಕಾರದ ಸಭೆ ನಡೆಸಿರುವುದಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಾಧಿಕಾರದ ಕಾರ್ಯದರ್ಶಿಯು ಇ-ಮೇಲ್ ಮೂಲಕ ರಾಜವಂಶಸ್ಥೆ ಪ್ರಮೋದಾದೇವಿ ಅವರಿಗೆ ಪತ್ರ ಬರೆದು ಸಭೆಗೆ ಹಾಜರಾಗುವಂತೆ ಮನವಿ ಮಾಡಿದ್ದರು. ಇ-ಮೇಲ್ ಮೂಲಕವೇ ಪ್ರಾಧಿಕಾರಕ್ಕೆ ಪ್ರತ್ಯುತ್ತರ ನೀಡಿರುವ ಪ್ರಮೋದಾದೇವಿ ಒಡೆಯರ್, ಸಭೆ ಕಾನೂನುಬಾಹಿರವಾಗಿ ನಡೆಯುತ್ತಿದೆ. ನ್ಯಾಯಾಲಯದ ಆದೇಶವನ್ನು ಉಲ್ಲಂಸಿ ಸಭೆ ನಡೆಸುತ್ತಿರುವುದು ಸರಿಯಲ್ಲ. ಕಾನೂನು ಉಲ್ಲಂಘನೆ ಆಗಲಿದೆ ಎಂದು ತಿಳಿಸಿದ್ದಾರೆ
ಕಾನೂನಾತ್ಮಕವಾಗಿಯೇ ಸಭೆ: ನಾನು ಕಾನೂನಾತ್ಮಕವಾಗಿ ಪ್ರಾಧಿಕಾರದ ಸಭೆ ಮಾಡುತ್ತಿದ್ದೇನೆ. ಯಾರದ್ದೋ ಹೇಳಿಕೆ ಆಧರಿಸಿ ಸಭೆ ನಡೆಸಲು ಆಗುವುದಿಲ್ಲ. ಯದುವೀರ್ ಹೇಳಿಕೆ ಮುಖ್ಯವೋ ಕಾನೂನು ಮುಖ್ಯವೋ? ಕೋರ್ಟ್‌ನಲ್ಲಿ ತಡೆಯಾಜ್ಞೆ ತೆರವುಗೊಳಿಸಲಾಗಿದೆ. ಹೀಗಾಗಿ ಇಂದು ಮೊದಲ ಸಭೆ ನಡೆಸಲಾಗಿದೆ. – ಸಿಎಂ ಸಿದ್ದರಾಮಯ್ಯ