Mysore
18
few clouds

Social Media

ಮಂಗಳವಾರ, 13 ಜನವರಿ 2026
Light
Dark

ಕಾವೇರಿ ನದಿ ಪ್ರವಾಹ: 6 ಗ್ರಾಮಗಳ ಜಲಾವೃತ

ಗ್ರಾಮಗಳ ಸಂಪರ್ಕ ರಸ್ತೆ, ಭತ್ತ, ಕಬ್ಬು ಫಸಲು ಮುಳುಗಡೆ: ಕಾಳಜಿ ಕೇಂದ್ರಕ್ಕೆ ಜನರ ಸ್ಥಳಾಂತರ

ಕೊಳ್ಳೇಗಾಲ: ವಯನಾಡು ಮತ್ತು ಕೊಡಗಿನ ಭಾಗ ಮಂಡಲದ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಆಗುತ್ತಿರುವು ದರಿಂದ ಕಾವೇರಿ ಮತ್ತು ಕಪಿಲ ನದಿಗಳು ಉಕ್ಕಿ ಹರಿದು ಪ್ರವಾಹ ಉಂಟಾಗಿದೆ. ಕಾವೇರಿ ನದಿ ದಂಡೆಯಲ್ಲಿರುವ ತಾಲ್ಲೂಕಿನ ೬ ಗ್ರಾಮಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ.

ಕಾವೇರಿ ನದಿಯಲ್ಲಿನ ಪ್ರವಾಹಕ್ಕೆ ದಾಸನಪುರ, ಹಳೇ ಅಣಗಳ್ಳಿ, ಹರಳೆ, ಮುಳ್ಳೂರು, ಯಡಕುರಿಯಾ, ಹಳೇ ಹಂಪಾಪುರ ಗ್ರಾಮಗಳು ಜಲಾವೃತಗೊಂಡಿವೆ. ದಾಸನ ಪುರ ಮತ್ತು ಹಳೇ ಹಂಪಾಪುರ ಸಂಪೂರ್ಣ ಜಲಾ ವೃತಗೊಂಡಿದ್ದು, ಈ ಎರಡೂ ಗ್ರಾಮಗಳ ಜನರೆಲ್ಲರನ್ನೂ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಗ್ರಾಮಗಳ ರಸ್ತೆ, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲವೂ ಕಡಿತಗೊಂಡಿವೆ.

ಇನ್ನು ಹರಳೆ, ಮುಳ್ಳೂರು, ಯಡಕುರಿಯಾ ಗ್ರಾಮಗಳು ಭಾಗಶಃ ಜಲಾವೃತಗೊಂಡಿವೆ. ಮುಳ್ಳೂರು ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾ ಲಯ ಹಾಗೂ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಹಳೇ ಹಂಪಾಪುರ ಗ್ರಾಮದ ಸಂಪರ್ಕ ರಸ್ತೆ ಹಾಗೂ ಅಕ್ಕಪಕ್ಕದ ಜಮೀನುಗಳು ಸಂಪೂರ್ಣ ಜಲಾವೃತ ಗೊಂಡಿದ್ದು ಗ್ರಾಮಕ್ಕೆ ತೆಪ್ಪದ ಮೂಲಕ ತೆರಳಬೇಕಿದೆ.

ಹರಳೆ, ಮುಳ್ಳೂರು, ಯಡಕುರಿಯಾ, ಹಳೇ ಹಂಪಾಪುರ ಗ್ರಾಮಗಳ ಜನರು ಅಗತ್ಯ ವಸ್ತುಗಳು ಹಾಗೂ ಜಾನುವಾರುಗಳೊಂದಿಗೆ ಎತ್ತರದ ಸ್ಥಳಗಳಿಗೆ ತೆರಳಿದ್ದಾರೆ.

ಭತ್ತ, ಕಬ್ಬಿನ ಗದ್ದೆಗಳು ಜಲಾವೃತ:
ಕಾವೇರಿ ನದಿಯ ಪ್ರವಾಹದಿಂದ ಹರಳೆ, ಮುಳ್ಳೂರು, ಯಡಕುರಿಯಾ, ಹಳೇ ಹಂಪಾಪುರ, ದಾಸನಪುರ, ಸತ್ತೇಗಾಲ, ಸರಗೂರು, ಧನಗೆರೆ ಗ್ರಾಮಗಳ ವ್ಯಾಪ್ತಿಯ ಸಾವಿರಾರು ಎಕರೆಯಲ್ಲಿ ಕೊಯ್ಲು ಹಂತಕ್ಕೆ ಬಂದಿದ್ದ ಭತ್ತ ಹಾಗೂ ಕಬ್ಬಿನ ಫಸಲು ಮುಳುಗಡೆಯಾಗಿವೆ.

ಒಡೆದ ವೆಸ್ಲಿ ಸೇತುವೆ:
ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸತ್ತೇಗಾಲ ಗ್ರಾಮದ ಬಳಿಯ ಈಶ್ವರ ದೇವಾಲಯ ಮುಳುಗಡೆಯಾಗಿದೆ. ಕೊಳ್ಳೇಗಾಲ-ಬೆಂಗಳೂರು ಮಾರ್ಗದಲ್ಲಿರುವ ವೆಸ್ಲಿ ಸೇತುವೆಯೂ ಮುಳುಗಿದ್ದು ಕೊನೆಯ ಭಾಗದಲ್ಲಿ ಒಡೆದು ಸೇತುವೆ ಮೇಲೆ ನೀರು ಹರಿಯುತ್ತಿದೆ.

ಕಾಳಜಿ ಕೇಂದ್ರಕ್ಕೆ ತೆರಳಲು ಮನವಿ:
ಜಲಾವೃತ ಗೊಂಡಿರುವ ಹಳೇ ಅಣಗಳ್ಳಿಯ ಕೆಲವು ಮನೆಗಳಲ್ಲಿ ವಯೋವೃದ್ಧರು ಉಳಿದುಕೊಂಡಿದ್ದರು. ಈ ವಿಷಯ ಅರಿತ ಜಿಲ್ಲಾಽಕಾರಿ ಅವರು ತೆಪ್ಪದ ಮೂಲಕ ಮನೆಗಳ ಬಳಿಗೆ ತೆರಳಿ ಕಾಳಜಿ ಕೇಂದ್ರಕ್ಕೆ ಆಶ್ರಯ ಪಡೆಯಲು ಒಪ್ಪಿಸಿ ಅವರೆಲ್ಲರನ್ನೂ ಸಾಗಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮಗಳತ್ತ ಅಧಿಕಾರಿಗಳು ದೌಡು:
ರಾತ್ರೋರಾತ್ರಿ ಕಾವೇರಿ ನದಿಯಲ್ಲಿ ಹೆಚ್ಚು ನೀರು ಹರಿದು ಬಂದು ಗ್ರಾಮಗಳು ಜಲಾವೃತಗೊಳ್ಳುತ್ತಿದ್ದಂತೆ ಜಿಲ್ಲಾಽಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಡಾ. ಬಿ. ಟಿ. ಕವಿತಾ, ಹೆಚ್ಚುವರಿ ಜಿಲ್ಲಾಽಕಾರಿ ಗೀತಾ ಹುಡೇದ, ತಹಸಿಲ್ದಾರ್ ಮಂಜುಳಾ, ಉಪ ವಿಭಾಗಾಽಕಾರಿ ಮಹೇಶ್ ಅವರು ಜಲಾವೃತ ಗ್ರಾಮಗಳಿಗೆ ತೆಪ್ಪಗಳ ಮೂಲಕ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರು. ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ಯೋಗ ಕ್ಷೇಮ ವಿಚಾರಿಸಿದರು.

ಶಾಸಕರ ಭೇಟಿ: ಜಲಾವೃತ ಗ್ರಾಮಗಳಿಗೆ ಶಾಸಕರಾದ ಎ. ಆರ್. ಕೃಷ್ಣಮೂರ್ತಿ ಅವರು ತೆಪ್ಪಗಳ ಭೇಟಿ ನೀಡಿ ಮುಳ್ಳೂರು ಮತ್ತು ಕೊಳ್ಳೇಗಾಲದ ಕಾಳಜಿ ಕೇಂದ್ರಗಳಲ್ಲಿನ ಸಂತ್ರಸ್ತರ ಪರಿಸ್ಥಿತಿಯನ್ನು ಅವಲೋಕಿಸಿದರು.

ಇಂದು ಶಾಲೆ, ಅಂಗನವಾಡಿಗಳಿಗೆ ರಜೆ ಚಾಮರಾಜನಗರ :
ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯಗಳಿಂದ ನದಿಗೆ ಅಽಕ ನೀರನ್ನು ಬಿಡಲಾಗಿ ರುವುದರಿಂದ ಕಾವೇರಿ ನದಿಯ ತಗ್ಗು ಪ್ರದೇಶಗಳ ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕೊಳ್ಳೇಗಾಲ ತಾಲ್ಲೂಕಿನ ದಾಸನಪುರ, ಹರಳೆ, ಅಗ್ರಹಾರ, ಹಳೇ ಹಂಪಾಪುರ, ಹಳೇ ಅಣಗಳ್ಳಿ, ಮುಳ್ಳೂರು, ಯಡಕುರಿಯಾ ಗ್ರಾಮಗಳ ವ್ಯಾಪ್ತಿಯ ಅಂಗನವಾಡಿ, ಸರ್ಕಾರಿ, ಅನುದಾನಿತ, ಅನುದಾನ ರಹಿತ ಎಲ್ಲ ಶಾಲೆಗಳಿಗೆ ಆಗಸ್ಟ್ ೨ರಂದು ಜಿಲ್ಲಾಽಕಾರಿಗಳ ಸೂಚನೆ ಮೇರೆಗೆ ರಜೆ ಘೋಷಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಜುಲೈ-ಆಗಸ್ಟ್ ತಿಂಗಳಲ್ಲಿ ವಿಪರೀತ ಮಳೆಯಾದರೆ ಕಾವೇರಿ ನದಿ ಪಾತ್ರದಲ್ಲಿರುವ ಕೊಳ್ಳೇಗಾಲ ತಾಲ್ಲೂಕಿನ ೭ ರಿಂದ ೮ ಗ್ರಾಮಗಳು ಜಲಾವೃತಗೊಳ್ಳಲಿವೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕಾಳಜಿ ಕೇಂದ್ರಗಳನ್ನು ತೆರೆದು ಜನರನ್ನು ಸ್ಥಳಾಂತರ ಮಾಡುತ್ತಿದ್ದೇವೆ. ಯಾವುದೇ ಸಮಸ್ಯೆಯಾಗಿಲ್ಲ, ಇನ್ನೆರಡು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ.
-ಸಿ. ಟಿ. ಶಿಲ್ಪಾ ನಾಗ್, ಜಿಲ್ಲಾಧಿಕಾರಿ

ಕಾವೇರಿ ನದಿ ಪ್ರವಾಹದಿಂದ ನಮ್ಮ ಹಳೇ ಅಣಗಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭತ್ತ, ಕಬ್ಬು, ಈರುಳ್ಳಿ, ಅರಿಶಿನ ಫಸಲು ಮುಳುಗಡೆಯಾಗಿದೆ. ಇದರಿಂದ ರೈತರಾದ ನಾವು ತುಂಬಾ ನಷ್ಟ ಅನುಭವಿಸಬೇಕಾಗಿದೆ. ಬರ ಪರಿಹಾರ ಸರಿಯಾಗಿ ಬರಲಿಲ್ಲ. ಈ ನೆರೆ ಪರಿಹಾರವಾದರೂ ನ್ಯಾಯಯುತವಾಗಿ ಬರಬೇಕು.
-ಅಣಗಳ್ಳಿ ಬಸವರಾಜು, ಹಳೇ ಅಣಗಳ್ಳಿ.

ಕಾವೇರಿ ನದಿ ಉಕ್ಕಿ ಹರಿದರೆ ನಮ್ಮ ಗ್ರಾಮಗಳು ಜಲಾವೃತಗೊಳ್ಳುತ್ತವೆ. ಇಲ್ಲದಿದ್ದರೆ ಪ್ರವಾಹ ಬಂದಾಗಲೆಲ್ಲ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಅಲ್ಲದೆ ಫಸಲು ನಷ್ಟ ಸಂಭವಿಸುತ್ತದೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಶಾಸಕರು, ಸಂಸದರು ಈ ಸಂಬಂಧ ಕ್ರಮ ವಹಿಸಬೇಕು.
– ರಂಗಸ್ವಾಮಿ, ಹಳೇ ಅಣಗಳ್ಳಿ

 

Tags:
error: Content is protected !!