Mysore
20
mist

Social Media

ಶನಿವಾರ, 27 ಡಿಸೆಂಬರ್ 2025
Light
Dark

‘ಕೈ’ಸರ್ಕಾರ ಅಲುಗಾಡಿಸಲು ಬಿಜೆಪಿ-ಜಾ.ದಳ ಯತ್ನ

ಆರ್.ಟಿ.ವಿಠಲಮೂರ್ತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಬಿಜೆಪಿ ವರಿಷ್ಠರು ಕಂಟಕರಾಗಲಿದ್ದಾರೆಯೇ? ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಇಂತಹದೊಂದು ಅನುಮಾನ ಮೂಡುವುದು ಅಸಹಜವೇನಲ್ಲ. ವಸ್ತುಸ್ಥಿತಿ ಎಂದರೆ ಈ ಬಾರಿ ವಿಧಾನಮಂಡಲ ಅಧಿವೇಶನ ಆರಂಭವಾಗುವ ಕಾಲಕ್ಕಾಗಲೇ ಇಂತಹ ಅನುಮಾನಕ್ಕೆ ಪೂರಕವಾದ ಹಲವು ಬೆಳವಣಿಗೆಗಳು ನಡೆದಿದ್ದವು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣ ಮತ್ತು ಮೈಸೂರಿನ ಮುಡಾ ಹಗರಣಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವ ಹುನ್ನಾರ ನಡೆದಿದೆ ಎಂಬ ಮಾತು ಬಹಿರಂಗ ವಾಗಿಯೇ ವ್ಯಕ್ತವಾಗಿತ್ತು. ಈ ಮಧ್ಯೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಸಿದ್ದರಾಮಯ್ಯ ಸರ್ಕಾರದ ಹಲವು ಸಚಿವರು ಬಹಿರಂಗವಾಗಿಯೇ ರಾಜ್ಯ ಸರ್ಕಾರವನ್ನು ಉರುಳಿಸಲು ಕೇಂದ್ರದ ಬಿಜೆಪಿ ಸರ್ಕಾರ ಹುನ್ನಾರ ನಡೆಸಿದೆ ಎಂದು ದೂರಿದ್ದರು.

ಅವರ ಇಂತಹ ದೂರಿಗೆ ಕಾರಣ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಜಾರಿ ನಿರ್ದೇಶನಾಲಯ ಎಂಟ್ರಿ ಆಗಿದ್ದು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ನೂರಾ ಎಂಬತ್ತೇಳು ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ವಿಶೇಷ ತನಿಖಾ ತಂಡ ಅದಾಗಲೇ ತನಿಖೆ ನಡೆಸುತ್ತಿರುವಾಗ ಜಾರಿ ನಿರ್ದೇಶನಾಲಯ ಏಕೆ ಎಂಟ್ರಿ ಆಯಿತು ಎಂಬುದು ಈ ಆರೋಪದ ಮೂಲ.

ಹೀಗೆ ಸಿದ್ದರಾಮಯ್ಯ ಸರ್ಕಾರದ ಪ್ರಮುಖ ಸಚಿವರೇ ಇಂತಹ ಆರೋಪ ಮಾಡಿದ ನಂತರ ರಾಜ್ಯ ಸರ್ಕಾರವನ್ನು ಉರುಳಿಸಲು ಕೇಂದ್ರದ ಬಿಜೆಪಿ ಸರ್ಕಾರ ಹುನ್ನಾರ ನಡೆಸಿದೆ ಎಂಬ ಮಾತು ಮತ್ತಷ್ಟು ಪ್ರಬಲವಾಗಿ ಕೇಳಿ ಬಂತು. ಈ ಮಧ್ಯೆ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಮತ್ತು ಜಾ.ದಳ ಸದಸ್ಯರ ವರ್ತನೆ ನೋಡಿದರೆ, ಈ ಎರಡೂ ವಿಷಯಗಳಲ್ಲಿ ಸರ್ಕಾರವನ್ನು ಪೇಚಿಗೆ ಸಿಲುಕಿಸಬೇಕು ಎಂಬ ಉದ್ದೇಶ ಢಾಳಾಗಿ ಕಾಣುತ್ತಿತ್ತು. ಆದರೆ ಬಿಜೆಪಿ-ಜಾ.ದಳ ಸದಸ್ಯರಲ್ಲಿ ಇಂತಹ ಉದ್ದೇಶ ಕಂಡರೂ, ಅದೇ ಬಿಜೆಪಿ ಮತ್ತು ಜಾ.ದಳ ಪಕ್ಷದವರ ಹಗರಣಗಳನ್ನು ಸಿದ್ದರಾಮಯ್ಯ ಕೈಗೆತ್ತಿಕೊಂಡರೆ ಆಟ ಬೇರೆಯಾಗುತ್ತದೆ ಮತ್ತು ಬಿಜೆಪಿ-ಜಾ.ದಳ ಸದಸ್ಯರು ಸುಮ್ಮನಾಗುತ್ತಾರೆ ಎಂಬ ನಿರೀಕ್ಷೆ ಇದ್ದುದೂ ಸುಳ್ಳಲ್ಲ.

ಕುತೂಹಲದ ಸಂಗತಿ ಎಂದರೆ ಸಿದ್ದರಾಮಯ್ಯ ಅವರ ಸರ್ಕಾರವೂ ಸುಮ್ಮನಿರಲಿಲ್ಲ. ಬದಲಿಗೆ ಬೋವಿ ಅಭಿವೃದ್ಧಿ ನಿಗಮದಲ್ಲಾದ ಹಗರಣ ಸೇರಿದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಇಪ್ಪತ್ತೊಂದು ಹಗರಣಗಳನ್ನು ಬಹಿರಂಗಪಡಿಸುವುದಾಗಿ ಘೋಷಿಸಿತು. ಯಾವಾಗ ಈ ಬೆಳವಣಿಗೆ ನಡೆಯಿತೋ ಇದಾದ ನಂತರ ಬಿಜೆಪಿ ಮತ್ತು ಜಾ.ದಳ ಸದಸ್ಯರು ಮೌನಕ್ಕೆ ಶರಣಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಸುಳ್ಳಾಯಿತಲ್ಲದೆ ಬಿಜೆಪಿ ಮತ್ತು ಜಾದಳ ಸದಸ್ಯರು ಇನ್ನಷ್ಟು ಬಹಿರಂಗವಾಗಿ ಸರ್ಕಾರದೊಂದಿಗೆ ಜಗ್ಗಾಟಕ್ಕಿಳಿದರು.

ಅಂದ ಹಾಗೆ ಮುಡಾ ಇರಲಿ, ಇನ್ನೊಂದು ಹಗರಣವಿರಲಿ, ಈಗ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಬಿಜೆಪಿ ಮತ್ತು ಜಾ.ದಳ ಸದಸ್ಯರೂ ತಮ್ಮ ಸರ್ಕಾರ ಇದ್ದ ಕಾಲದಲ್ಲಿ ಹಗರಣದ ಆರೋಪ ಹೊತ್ತುಕೊಂಡವರೇ. ಆದರೆ ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಸಚಿವ ಸಂಪುಟದ ಪ್ರಮುಖ ಸಚಿವರು ನೇರವಾಗಿ ಹೇಳಿದರೂ ಬಿಜೆಪಿ-ಜಾ.ದಳ ಸದಸ್ಯರು ನಿರೀಕ್ಷೆಯಂತೆ ಜಗ್ಗಲಿಲ್ಲ. ಕಾರಣ ಇವರು ಸುಮ್ಮನಿದ್ದರೂ ಬಿಜೆಪಿ ಮತ್ತು ಜಾ.ದಳ ಪಕ್ಷಗಳವರಿಷ್ಠರು ಸುಮ್ಮನಿರಲಿಲ್ಲ. ಬದಲಿಗೆ, ನಮ್ಮ ಕಾಲದ ಯಾವ ಹಗರಣಗಳು ನಡೆದರೂ ಅದನ್ನು ಬಹಿರಂಗಪಡಿಸಲಿ, ಅದೇ ಕಾಲಕ್ಕೆ ತಮ್ಮ ಸರ್ಕಾರದ ಹಗರಣಗಳಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಉತ್ತರ ಕೊಡಲಿ ಎಂಬಂತೆ
ಮಾತನಾಡಿದರು.

ಅವರ ಇಂತಹ ವರ್ತನೆಗೆ ಆಯಾ ಪಕ್ಷಗಳ ವರಿಷ್ಠರ ನಿಲುವೇ ಕಾರಣ. ಇವತ್ತು ಅವರಿಗೆ ತಮ್ಮ ಕಾಲದ ಹಗರಣಗಳ ಬಗ್ಗೆ ಯೋಚನೆಯಿಲ್ಲ. ಆದರೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣ ಮತ್ತು ಮುಡಾ ಹಗರಣಗಳ ಪ್ರವರಬೇಕು. ಮೂಲಗಳ ಪ್ರಕಾರ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಬಲೆಗೆ ಸಿಲುಕಿಸುವ ತಂತ್ರ ನಡೆದಿದೆ. ಕಾರಣ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಹಣ ವರ್ಗಾವಣೆಯಾಯಿತಲ್ಲ ಈ ಹಣ ಹಣಕಾಸು ಇಲಾಖೆಯ ಒಪ್ಪಿಗೆಯಿಲ್ಲದೆ ನಡೆಯಲು ಸಾಧ್ಯವಿಲ್ಲ. ಇವತ್ತು ಹಣಕಾಸು ಇಲಾಖೆಯನ್ನು ನೋಡಿಕೊಳ್ಳುವವರು ಯಾರು? ಮುಖ್ಯಮಂತ್ರಿ ಸಿದ್ದರಾಮಯ್ಯ ತಾನೇ?

ಅವರ ಒಪ್ಪಿಗೆಯಿಲ್ಲದೆ ಇಷ್ಟು ದೊಡ್ಡ ಪ್ರಮಾಣದ ಹಣ ಹೇಗೆ ವರ್ಗಾವಣೆಯಾಗಲು ಸಾಧ್ಯ? ಎಂಬುದು ಈ ಮೂಲಗಳ ಪ್ರಶ್ನೆ. ಇದೇ ರೀತಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಇತ್ತೀಚಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತೆಲಂಗಾಣಕ್ಕೆ ಹೋಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್. ಹೀಗಾಗಿ ತೆಲಂಗಾಣಕ್ಕೆ ಹಣ ಹೋಗಿರುವುದು ಸ್ಪಷ್ಟವಾದರೆ ಡಿಕೆಶಿ ವಿರುದ್ಧ ಜಾರಿ ನಿರ್ದೇಶನಾಲಯ ಮುಗಿಬೀಳುವುದು ನಿಶ್ಚಿತ.

ಹೀಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಸಿಲುಕಿಸಿದರೆ, ಮತ್ತದೇ ಕಾಲಕ್ಕೆ ಜಾರಿ ನಿರ್ದೇಶನಾಲಯ ನೋಟಿಸ್‌ ನೀಡಿದರೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಬುಡ ಅಲುಗಾಡಿತು ಎಂದೇ ಅರ್ಥ. ಹೀಗೆ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ನಡೆಯುತ್ತಿದ್ದಾಗ ಅದರ ವಿರುದ್ಧದ ಪ್ರತಿಪಕ್ಷಗಳ ವಿಧಾನಮಂಡಲದಲ್ಲಾಗಲಿ, ಬೀದಿಗಳಲ್ಲಾಗಲಿ ಕಡಿಮೆಯಾಗಬಾರದು ಎಂಬುದು ಬಿಜೆಪಿ ವರಿಷ್ಠರ ಯೋಚನೆ.

ಕುತೂಹಲದ ಸಂಗತಿ ಎಂದರೆ, ವಿಧಾನಮಂಡಲ ಅಧಿವೇಶನ ನಡೆಯುವ ಸಂದರ್ಭದಲ್ಲಿ ಬಿಜೆಪಿ ಮತ್ತು ಜಾ.ದಳ ಸದಸ್ಯರಿಗೆ ಹೊಸದಿಲ್ಲಿಯಿಂದ ಸೂಚನೆ ಬರುತ್ತಿತ್ತಷ್ಟೇ ಅಲ್ಲ, ಪ್ರತಿದಿನದ ಹೋರಾಟ ಹೇಗಿರಬೇಕು ಎಂಬ ಪಾಠವೂ ಆಗುತ್ತಿತ್ತು. ಅಲ್ಲಿಗೆ ಒಂದು ವಿಷಯ ಸ್ಪಷ್ಟ. ಸಿದ್ದರಾಮಯ್ಯ ಸರ್ಕಾರ ತಮ್ಮ ಅವಧಿಯ ಹಗರಣಗಳನ್ನು ಬಯಲು ಮಾಡಿದರೂ ಅದನ್ನು ಲೆಕ್ಕಿಸದೆ ಮುಂದುವರಿಯುವುದು ರಾಜ್ಯದ ಬಿಜೆಪಿ ಮತ್ತು ಜಾ.ದಳ ಸದಸ್ಯರ ತೀರ್ಮಾನ. ಗಮನಿಸಬೇಕಾದ ಸಂಗತಿ ಎಂದರೆ ತಮ್ಮ ಸರ್ಕಾರದ ವಿರುದ್ಧ ನಡೆಯಲಿರುವ ಮುನ್ಸೂಚನೆ ಪಡೆದ ಸಿದ್ದರಾಮಯ್ಯ ಕೂಡ ಮೈಸೂರಿನ ಮುಡಾ ಹಗರಣದಲ್ಲಿ ಬಿಜೆಪಿ ಮತ್ತು ಜಾ.ದಳ ಸದಸ್ಯರು ಹೇಗೆ ಪಾಲುದಾರರು
ಎಂಬುದನು ಬಹಿರಂಗಪಡಿಸಿದರು.

ಇಷ್ಟಾದರೂ ಬಿಜೆಪಿ-ಜಾ.ದಳ ನಾಯಕರ ಗುರಿ ಒಂದೇ. ಅದು ಹೇಗಾದರೂ ಮಾಡಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಬೇಕು ಎಂಬುದು. ಹೀಗೆ ಅಲುಗಾಡಿಸಲು ಹೊರಟಿರುವ ಅದು ಸಿದ್ದರಾಮಯ್ಯ ಅವರ ಸರ್ಕಾರದ ಪ್ರತಿದಾಳಿಯನ್ನು ಲೆಕ್ಕಿಸದೆ ಮುಂದುವರಿಯುತ್ತಿದೆ. ಮುಂದೇನಾಗುತ್ತದೋ ಕಾದು ನೋಡಬೇಕು.

Tags:
error: Content is protected !!