Mysore
20
overcast clouds
Light
Dark

ಸಿವೇಜ್ ಫಾರ್ಮ್‌ನಲ್ಲಿ ಬಯೋಮೈನಿಂಗ್‌ಗೆ ಸರ್ವೇ ಆರಂಭ

ಎರಡೂವರೆ ದಶಕಗಳ ಸಂಕಷ್ಟಕ್ಕೆ ಕೊನೆಗೂ ಮುಕ್ತಿ, ಬೆಟ್ಟದಷ್ಟಿರುವ ಕಸಕ್ಕೆ ಮುಕ್ತಿ ನೀಡಲು ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಶೀಘ್ರ ಪ್ರಾರಂಭ

ಮೈಸೂರು: ಸಾಂಸ್ಕೃತಿಕನಗರಿಯ ಅರ್ಧ ಭಾಗದಷ್ಟು ಜನರ ಆರೋಗ್ಯಕ್ಕೆ ಕಂಟಕಪ್ರಾಯವಾಗಿರುವ ಜತೆಗೆ ಕಳೆದ ಎರಡೂವರೆ ದಶಕಗಳಿಂದ ಸಿವೇಜ್ ಫಾರ್ಮ್ ನಲ್ಲಿ (ಘನತ್ಯಾಜ್ಯ ಘಟಕ) ಸಂಗ್ರಹವಾಗಿರುವ ತ್ಯಾಜ್ಯ ಬೆಟ್ಟದ ರೀತಿಯಲ್ಲಿ ಬೆಳೆದು ನಿಂತಿದ್ದು, ಈ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ವಿಲೇವಾರಿ ಮಾಡಲು ಜಾಗದ ಸರ್ವೇ ಕಾರ್ಯ ಪ್ರಾರಂಭಗೊಂಡಿದೆ. ಸದ್ಯದಲ್ಲಿಯೇ ಬೆಟ್ಟದಷ್ಟಿರುವ ಕಸಕ್ಕೆ ಮುಕ್ತಿ ನೀಡಲು ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ.

ಬಯೋಮೈನಿಂಗ್ ಮೂಲಕ ತ್ಯಾಜ್ಯ ವಿಲೇವಾರಿ ಮಾಡಲು ನಗರಪಾಲಿಕೆ ಮೂರು ವರ್ಷಗಳ ಹಿಂದೆಯೇ ತೀರ್ಮಾನಿಸಿತ್ತಾದರೂ ಬಯೋಮೈನಿಂಗ್‌ಗೆ ಪ್ರತ್ಯೇಕವಾಗಿ ಮೂರು ಟೆಂಡರ್‌ಗಳನ್ನು ಕರೆದ ಹಿನ್ನೆಲೆಯಲ್ಲಿ ಟೆಂಡರ್‌ನಲ್ಲಿ ಭಾಗವಹಿಸಲು ಯಾರೂ ಆಸಕ್ತಿ ತೋರಲಿಲ್ಲ. ಹೀಗಾಗಿ ಹಳೆಯ ತ್ಯಾಜ್ಯ ವಿಲೇವಾರಿ ಮಾಡುವ ಯೋಜನೆ ನನೆಗುದಿಗೆ ಬಿದ್ದಿತ್ತು. ಈ ಹಿಂದೆ ನಗರ ಪಾಲಿಕೆಯು ಹಳೆಯ ತ್ಯಾಜ್ಯವನ್ನು ವಿಲೇವಾರಿ ಮಾಡಲು ಬಯೋಮೈನಿಂಗ್, ತ್ಯಾಜ್ಯ ಸಂಸ್ಕರಣೆ ಮತ್ತು ಸಾಗಾಟ ಎಂದು ಕಾಮಗಾರಿಯನ್ನು ಮೂರು ಭಾಗಗಳಾಗಿ ವಿಂಗಡಣೆ ಮಾಡಿತ್ತು. ಈ ಮೂರೂ ಕಾಮಗಾರಿಗಳನ್ನು ಬೇರೆಬೇರೆಯವರಿಗೆ ಟೆಂಡ‌ರ್ ನೀಡಿದರೆ ಸಮನ್ವಯದ ಕೊರತೆಯಿಂದ ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಯಕ್ಕೆ ಹಿನ್ನಡೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಜತೆಗೆ ಟೆಂಡರ್ ನಲ್ಲಿ ಪಾಲ್ಗೊಳ್ಳಲು ಯಾರೂ ಆಸಕ್ತಿ ತೋರಲಿಲ್ಲ. ಹೀಗಾಗಿ ಸಿಂಗಲ್ ಟೆಂಡರ್‌ ಮೂಲಕಬಯೋಮೈನಿಂಗ್ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ನಗರ ಪಾಲಿಕೆಯು ಮಾಡಿಕೊಂಡ ಮನವಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿತು. ‌ನಂತರ ಪಾಲಿಕೆಯು ಸಿಂಗಲ್ ಟೆಂಡರ್ ಕರೆದು ಸಂಸ್ಥೆಯೊಂದಕ್ಕೆ ತ್ಯಾಜ್ಯ ವಿಲೇವಾರಿಯ ಜವಾಬ್ದಾರಿ ನೀಡಿದೆ.

3.08 ಲಕ್ಷ ಟನ್ ತ್ಯಾಜ್ಯ: ಸಿವೇಜ್‌ ಫಾರ್ಮ್‌ನಲ್ಲಿ ಒಟ್ಟು 3.08 ಲಕ್ಷ ಟನ್ ತ್ಯಾಜ್ಯ ಸಂಗ್ರಹವಾಗಿದ್ದು, ಇದನ್ನು ಬಯೋಮೈನಿಂಗ್ ಮೂಲಕ ವಿಲೇವಾರಿ ಮಾಡಲು 58 ಕೋಟಿ ರೂ. ಮೊತ್ತ ವಿನಿಯೋಗಿಸಲಾಗುತ್ತಿದೆ. ಮೈಸೂರಿನಂತೆ ಮಹಾರಾಷ್ಟ್ರದ ನಾಗಪುರದಲ್ಲೂ ಹಳೆಯ ತ್ಯಾಜ್ಯ ವಿಲೇವಾರಿ ದೊಡ್ಡ ತಲೆನೋವಾಗಿತ್ತು. ನಂತರ ನಾಗಪುರ ನಗರ ಸ್ಥಳೀಯ ಸಂಸ್ಥೆಯು ಹಳೆಯ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ತೆರವುಗೊಳಿಸುವ ತೀರ್ಮಾನ ಕೈಗೊಂಡಿತ್ತು. ಪಾಲಿಕೆಯ ತಂಡ ವರ್ಷದ ಹಿಂದೆ ನಾಗಪುರಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಬಯೋಮೈನಿಂಗ್ ಕುರಿತು ಮಾಹಿತಿ ಸಂಗ್ರಹಿಸಿತ್ತು. ಇದೀಗ ನಾಗಪುರದ ಮಾದರಿಯಲ್ಲಿ ನಗರದ ಸಿವೇಜ್ ಫಾರ್ಮ್‌ನಲ್ಲಿರುವ ಹಳೆಯ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ವಿಲೇವಾರಿ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ. ನಾಗಪುರದಲ್ಲಿ ಪ್ರತಿನಿತ್ಯ 800 ರಿಂದ 1,000 ಟನ್ ತ್ಯಾಜ್ಯ ವನ್ನು ಬಯೋ ಮೈನಿಂಗ್ ಮೂಲಕ ವಿಲೇವಾರಿ ಮಾಡಲಾಗಿದೆ. ತ್ಯಾಜ್ಯದಲ್ಲಿರುವ ಪ್ಲಾಸ್ಟಿಕ್, ಗಾಜು, ಕಬ್ಬಿಣ ಮುಂತಾದ ವಸ್ತುಗಳನ್ನು ಬೇರ್ಪಡಿಸಲಾಗುತ್ತದೆ. ಗಾಜು, ಕಬ್ಬಿಣ ಮುಂತಾದ ವಸ್ತುಗಳನ್ನು ಮರು ಬಳಕೆ ಮಾಡಲಾಗುತ್ತಿದ್ದು, ಪ್ಲಾಸ್ಟಿಕ್ ತ್ಯಾಜ್ಯವನ್ನು ಸಿಮೆಂಟ್ ಕಂಪೆನಿಗಳಲ್ಲಿ ಉರುವಲಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಣ್ಣನ್ನು ಲ್ಯಾಂಡ್‌ ಫಿಲ್ಲಿಂಗ್‌ಗೆ ಬಳಕೆ ಮಾಡಲಾಗುತ್ತಿದೆ. ಅದೇ ಮಾದರಿಯನ್ನು ಇಲ್ಲೂ ಕೂಡ ಅನುಸರಿಸಲಾಗುವುದು. ಬಯೋಮೈನಿಂಗ್ ಮೂಲಕ ತ್ಯಾಜ್ಯ ವಿಲೇವಾರಿ ಮಾಡಲು ಟೆಂಡರ್ ಪಡೆದಿರುವ ಸಂಸ್ಥೆಗೆ ಎರಡು ವರ್ಷಗಳ ಕಾಲಾವಕಾಶ ನೀಡಲಾಗಿದೆ.

ನಗರದಲ್ಲಿ ಪ್ರತಿನಿತ್ಯ 500 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದುವರೆಗೆ ಸಿವೇಜ್ ಫಾರ್ಮ್‌ನಲ್ಲಿ ಕೇವಲ 200 ಟನ್‌ನಷ್ಟು ಮಾತ್ರ ತ್ಯಾಜ್ಯ ಸಂಸ್ಕರಣೆಯಾಗುತಿತ್ತು. ಇದೀಗ ಕೆಸರೆಯಲ್ಲಿ 22 ಕೋಟಿ ರೂ. ವೆಚ್ಚದಲ್ಲಿ 200 ಟನ್ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ ಅಳವಡಿಸಲಾಗಿದೆ. ಅದೇ ರೀತಿ ರಾಯನಕೆರೆಯಲ್ಲಿ 9.2 ಕೋಟಿ ರೂ. ವೆಚ್ಚದಲ್ಲಿ 150 ಟನ್ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹೀಗಾಗಿ ಪ್ರಸ್ತುತ ಸಿವೇಜ್ ಫಾರ್ಮ್ ಮೇಲಿನ ಒತ್ತಡ ಕಡಿಮೆಯಾಗಿದ್ದು, ಹಳೆಯ ತ್ಯಾಜ್ಯ ವಿಲೇವಾರಿಯಾದರೆ ಸಿವೇಜ್ ಫಾರ್ಮ್ ಸುತ್ತಮುತ್ತಲಿನ ಜನರು ತ್ಯಾಜ್ಯದಿಂದ ಹೊರ ಹೊಮ್ಮುತ್ತಿರುವ ದುರ್ವಾಸನೆಯಿಂದ ಮುಕ್ತಿ ಹೊಂದಲಿದ್ದಾರೆ.

ಸಿವೇಜ್ ಫಾರ್ಮ್‌ನಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಬಯೋ ಮೈನಿಂಗ್ ಮೂಲಕ ವಿಲೇವಾರಿ ಮಾಡುವ ಕಾರ್ಯ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ. ಟೆಂಡರ್ ಪಡೆದಿರುವ ಸಂಸ್ಥೆಯು ಈಗಾಗಲೇ ಜಾಗದ ಸರ್ವೇ ಕಾರ್ಯ ಪ್ರಾರಂಭಿಸಿದೆ. ಸರ್ವೇ ಕಾರ್ಯ ಪೂರ್ಣಗೊಂಡ ಬಳಿಕ ತ್ಯಾಜ್ಯ ವಿಲೇವಾರಿ ಕಾರ್ಯ ಪ್ರಾರಂಭಗೊಳ್ಳಲಿದೆ. ಒಟ್ಟು ಎರಡು ವರ್ಷಗಳ ಅವಧಿಯೊಳಗೆ ಸಿವೇಜ್ ಫಾರ್ಮ್‌ನಲ್ಲಿರುವ ಎಲ್ಲಾ ಹಳೆಯ ತ್ಯಾಜ್ಯ ವಿಲೇವಾರಿಯಾಗಲಿದೆ. ಈ ಹಳೆಯ ತ್ಯಾಜ್ಯ ವಿಲೇವಾರಿಯಾದರೆ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಉತ್ತಮ ಅಂಕಗಳನ್ನು ಪಡೆಯಲು ಸಹಕಾರಿಯಾಗಲಿದೆ. -ಡಾ.ವೆಂಕಟೇಶ್, ನಗರಪಾಲಿಕೆ ಆರೋಗ್ಯಾಧಿಕಾರಿ

Tags: