Mysore
28
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಶಿಮ್ಲಾದ ಕಣಿವೆಗಳಲ್ಲಿ ಕೊಡಗಿನ ಬೈಕ್ ಹುಡುಗರು

• ಚಂದನ್ ನಂದರಬೆಟ್ಟು

ದೂರದ ಜಿಲ್ಲೆ, ರಾಜ್ಯ, ವಿದೇಶಗಳಿಂದ ಇಲ್ಲಿನ ಮನೋಹರ ದೃಶ್ಯಗಳನ್ನು ಕಣ್ಣುಂಬಿಕೊಳ್ಳಲು ಪ್ರವಾಸಿಗರು ಕೊಡಗಿಗೆ ಬರುತ್ತಾರೆ. ಕೊಡಗು ಜಿಲ್ಲೆಯೇ ಒಂದು ಸ್ವರ್ಗ ಇಲ್ಲಿನ ಮಂದಿ ಮತ್ತೆಲ್ಲಿಗೆ ಪ್ರವಾಸ ಹೋಗುತ್ತಾರೆ? ಎಂದುಕೊಳ್ಳುವುದು ಸಹಜ. ಹಾಗಂತ ಕೊಡಗಿನವರು ಪ್ರವಾಸ ಹೋಗುವುದಿಲ್ಲವಾ ಎಂದು ನೀವು ಕೇಳುವಂತಿಲ್ಲ. ಖಂಡಿತ ಅವರೂ ಹೋಗುತ್ತಾರೆ.

ಕೊಡಗಿನ ಒಂದಷ್ಟು ಯುವಕರ ತಂಡವೊಂದು ಊರೂರು ತಿರುಗುವ ಹವ್ಯಾಸವಿಟ್ಟುಕೊಂಡಿದ್ದಾರೆ. ಈ ತಂಡ ಬೈಕ್‌ಳಿಗೆ ಲಗೇಜೇರಿಸಿಕೊಂಡು ದೂರದ ದುರ್ಗಮ ಸ್ಥಳಗಳಿಗೆ ಪ್ರವಾಸ ತೆರಳುತ್ತಾರೆ. ಕೊಡಗಿನ ಹರ್ಷಕ್ ಹಬೀಬ್, ಅಕ್ಷಯ್ ರೈ ಅಭಿ ಶೆಟ್ಟಿ ಹಾಗೂ ಶಿವು ಮಡಪ್ಪಾಡಿ ಎಂಬವರ ತಂಡ. ಮಡಿಕೇರಿಯಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಿ ನಂತರ ದೆಹಲಿಯಿಂದ ಛಂಡೀಗಡದ ದುರ್ಗಮ ಸ್ಥಳಗಳಿಗೆ ಬೈಕ್ ರೈಡ್ ಮಾಡಿದ್ದಾರೆ. ಈ ಬೈಕ್ ರೈಡ್ ಕೇವಲ ಜಾಲಿ ರೈಡ್ ಅಲ್ಲ. ಅಲ್ಲಿನ ಹಳ್ಳಿಗಳ ಜನರ ಜೀವನವನ್ನು, ಆಚಾರ-ವಿಚಾರಗಳನ್ನು ಅರಿಯಲು, ಆಹಾರದ ರುಚಿ ಸವಿಯಲು ಈ ರೈಡ್ ಎನ್ನುತ್ತಾರೆ ಈ ತಂಡದ ಸದಸ್ಯರು.

ಹತ್ತು-ಹದಿನೈದು ದಿನಗಳ ಈ ಪ್ರಯಾಣದಲ್ಲಿ ಕಡಿಮೆ ಮೊತ್ತದ ಖರ್ಚಿನಲ್ಲಿ ಎಲ್ಲವನ್ನು ಸುತ್ತಬೇಕು ಎಂಬ ಹುಮ್ಮಸ್ಸು ಈ ತಂಡದ್ದು. ಹೀಗೆ ಈ ತಂಡ ಛಂಡೀಗಡದಿಂದ ಶಿಮ್ಲಾಗೆ ಪ್ರಯಾಣಿಸುವಾಗ ವರುಣನ ಆರ್ಭಟ ಅಧಿಕವೇ ಇತ್ತು. ಮಳೆಯ ರುದ್ರನರ್ತನಕ್ಕೆ ಆ ಪ್ರದೇಶ ಪ್ರಕೃತಿ ವಿಕೋಪಕ್ಕೆ ಗುರಿಯಾಗಿ ಬೆಟ್ಟ ಗುಡ್ಡಗಳು ಜರಿಯಲಾರಂಭಿಸಿದವು.

ಬೆಟ್ಟದ ಮೇಲಿಂದ ಹರಿದ ನೀರು ರಸ್ತೆಯನ್ನು ಮುಚ್ಚಿಬಿಟ್ಟಿದೆ. ಇತ್ತ ರಸ್ತೆ ಇಲ್ಲದೆ ಸಿಲುಕಿದ ಈ ಕೊಡಗಿನ ಯುವಕರ ಪಾಡು ಚಿಂತಾಜನಕವಾಗಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸಿ ಸ್ಥಳೀಯರ ನೆರವಿನಿಂದ ತಮ್ಮ ಗುರಿ ತಲುಪುವ ಉತ್ಸಾಹ ತೋರಿದ ಈ ಯುವಕರು ಕೊನೆಗೂ ಶಿಮ್ಲಾವನ್ನು ದಾಟಿ ಭಾರತದ ಕೊನೆಯ ಹಳ್ಳಿ ಹಾಗು ಟಿಬೆಟ್ ಬಾರ್ಡರಿನ ಚಿಟ್ಟುಲ್ ತಲುಪಿ ಬಂದದ್ದು ಒಂದು ರೋಚಕ ಪ್ರಯಾಣ. ಶಿಮ್ಲಾ ಹಾಗೂ ಚಿಟ್ಟುಲ್ ನಡುವಿನ ಅಂತರ ಕೇವಲ 24 ಕಿ.ಮೀಗಳಾದರೂ ಕಲ್ಲು, ಮಣ್ಣಿನ ಹಾದಿ ಸವೆಸಲು 3 ರಿಂದ ಮೂರುವರೆ ಗಂಟೆ ಸಮಯ ತೆಗೆದುಕೊಂಡರು. 4,500 ಮೀ. ಅಲ್ಟಿಟ್ಯೂಡ್ (ಇಂತಹ ಪ್ರದೇಶಗಳಲ್ಲಿ ರಸ್ತೆಯೇ ಇರುವುದಿಲ್ಲ ಜತೆಗೆ ಆಮ್ಲಜನಕದ ಪ್ರಮಾಣ ಬಹಳ ಕಡಿಮೆ)ಇರುವ ಸ್ಥಳದಲ್ಲಿ ಪ್ರಯಾಣಿಸಿ ತಾವು ಅಂದುಕೊಂಡಂತೆ ಗುರಿ ಮುಟ್ಟುತ್ತಾರೆ. ಅಲ್ಲಿಂದ ಭಾರತದ ಅತಿ ಎತ್ತರದ ಪೋಸ್ಟ್ ಆಫೀಸ್ ಹಿಕ್ಕಿಂನನ್ನೂ ತಲುಪಿ ಮುಂದೆ ಪ್ರಪಂಚದ ದೊಡ್ಡ ಸೇತುವೆಯಾದ ಚಿಂಚುಂ ಸೇತುವೆಯನ್ನು ಕ್ರಮಿಸಿ, ಪ್ರಪಂಚದ ಅತೀ ಎತ್ತರದಲ್ಲಿರುವ ಹಳ್ಳಿಯಾದ ಕಾಮಿಕ್‌ಗೆ ತಲುಪಿ ಈ ಪ್ರಯಾಣದಲ್ಲಿ ತಮ್ಮದೊಂದು ಸಾಹಸಮಯ ಹೆಜ್ಜೆ ಮೂಡಿಸಿದ್ದಾರೆ.

ಈ ಕಷ್ಟಕರ ದಾರಿಯ ಅನುಭವ ಹಂಚಿಕೊಂಡ ತಂಡ ಹೇಳಿದ ಒಂದೊಂದು ಸನ್ನಿವೇಶವೂ ರೋಮಾಂಚನವಾದದ್ದು. ಪ್ರಯಾಣದ ಮಧ್ಯೆ ನಾರ್ಕಂದ ಎನ್ನುವ ಸ್ಥಳದ ಹೋಂಸ್ಟೇನಲ್ಲಿ ಉಳಿದಿದ್ದ ಈ ತಂಡಕ್ಕೆ ಅಲ್ಲಿಂದ ಹೊರಟ ಮೇಲೆ ಮರುದಿನವೇ ಆ ಹೋಂ ಸ್ಟೇ ಭೂ ಕುಸಿತದಿಂದಾಗಿ ಮಣ್ಣಿನಡಿ ಸೇರಿ ಹೋಯಿತು ಎನ್ನುವಾಗ ಅವರ ಮುಖದಲ್ಲಿನ ಆತಂಕ ಹಾಗೆಯೇ ಇತ್ತು.

ಇನ್ನು ಮಳೆ ಹೆಚ್ಚಾಗಿದ್ದರಿಂದ ಹಾದಿಯುದ್ದಕ್ಕೂ ಮೇಲಿನಿಂದ ಕಲ್ಲು, ಮಣ್ಣು ಬೀಳುತ್ತಲೇ ಇತ್ತು. ಈ ವೇಳೆ ಹರ್ಷಕ್ ಎಂಬವರ ಕಾಲಿಗೂ ಕಲ್ಲೊಂದು ತಗುಲಿ ಗಾಯವಾಗಿತ್ತು. ಮೇಲಿಂದ ಯಾವಾಗ ಮಣ್ಣು ಜರುಗುವುದೋ, ಯಾವ ಬಂಡ ಬೀಳುವುದೋ ಎಂಬ ಆತಂಕದಲ್ಲಿಯೇ ಅಂದುಕೊಂಡ ಸ್ಥಳ ತಲುಪಿಬರಬೇಕು ಎಂದು ಈ ಬೈಕ್ ಸಾಹಸಿ ಯುವಕರು ಪ್ರಯಾಣ ಮುಂದುವರಿಸುತ್ತಲೇ ಇದ್ದರು.

ಅಡೆ ತಡೆ ದಾಟಿದ ಸಾಹಸಮಯ ಪ್ರಯಾಣವೊಂದು ನಮ್ಮ ಜೀವನದಲ್ಲಿ ಶಾಶ್ವತ ನೆನಪಾಗಿ ಉಳಿದಿದೆ ಎಂಬುದು ಈ ಬೈಕ್ ರೈಡರ್ ತಂಡದ ಮಾತು. ಪ್ರಪಂಚದ ಎತ್ತರದ ಪೋಸ್ಟ್ ಆಫೀಸ್ ತಲುಪಿದ ಈ ತಂಡ ಅಲ್ಲಿಂದಲೇ ಬಹಳಷ್ಟು ಸ್ನೇಹಿತರಿಗೆ ಪತ್ರ ಬರೆದಿದ್ದಾರೆ. ಅದೊಂದು ಸ್ಮರಣೀಯ ಕ್ಷಣ. ಈಗ ಮತ್ತೊಂದು ಸಾಹಸಮಯ ಪ್ರಯಾಣಕ್ಕೆ ತಂಡ ಸಿದ್ಧವಾಗುತ್ತಿದೆ.

ಕೋಟ್ಸ್‌))

ಕೊಡಗಿನಿಂದ ಬಹಳಷ್ಟು ಯುವಕರು ಬೈಕ್ ಮೂಲಕ ಶಿಮ್ಲಾ, ಲಡಾಕ್ ಮುಂತಾದ ಸ್ಥಳಗಳಿಗೆ ಪ್ರವಾಸ ಹೋಗುತ್ತಾರೆ. ಹೋಗುವವರು ಸರಿಯಾದ ಮಾರ್ಗದರ್ಶನದೊಡನೆ ಸಂಚರಿಸುವುದು ಸೂಕ್ತ. ಹೊಸ ಪ್ರದೇಶಗಳಿಗೆ ತೆರಳಿದಾಗ ಅಲ್ಲಿನ ಸಂಸ್ಕೃತಿ, ಪದ್ಧತಿಗಳಿಗೆ ಅನುಗುಣವಾಗಿ ನಾವು ಬದಲಾಗಬೇಕಾಗುತ್ತದೆ ಹಾಗೂ ಆ ಪ್ರದೇಶದ ನಿಯಮಗಳಿಗೆ ಗೌರವ ನೀಡಬೇಕಾಗುತ್ತದೆ.
-ಹರ್ಷಕ್ ಹಬೀಬ್, ಬೈಕ್ ರೈಡರ್.

Tags: