• ಬಲ್ಲೇನಹಳ್ಳಿ ಮಂಜುನಾಥ್, ಉಪನ್ಯಾಸಕರು ಮತ್ತು ಸಾಹಿತಿಗಳು
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕು ಹಲವು ಪುರಾತನ ದೇವಾಲಯ ಗಳಿಗೆ ಹೆಸರಾಗಿದೆ. ಇಲ್ಲಿ ಹೊಯ್ಸಳ ಅರಸರ ಕಾಲದ ದೇಗುಲಗಳು ಸಾಕಷ್ಟಿವೆ. ಇಂತಹ ದೇಗುಲಗಳಲ್ಲಿ ಹೇಮಾವತಿ ನದಿಯ ದಂಡೆ ಮತ್ತು ಕನ್ನಂಬಾಡಿ ಕಟ್ಟೆ ಹಿನ್ನೀರಿನ ದಡದಲ್ಲಿ ಇರುವ ಕಲ್ಲಹಳ್ಳಿಯ ಭೂವರಾಹನಾಥ ದೇಗುಲವೂ ಒಂದು.
ಮೇಲುಕೋಟೆಯ ನಂತರ ಜಿಲ್ಲೆಯಲ್ಲಿ ಅಪಾರ ಜನರನ್ನು ಆಕರ್ಷಿಸುವ ಪ್ರಾಚೀನ ವೈಷ್ಣವ ದೇವಾಲಯ ಇದಾಗಿದ್ದು, ಭೂ ವೈಕುಂಠ ಎಂದೇ ಹೆಸರಾಗಿದೆ. ಕೊಡಗಿನಿಂದ ಹರಿದು ಬರುವ ಕಾವೇರಿ, ಚಿಕ್ಕಮಗಳೂರಿನ ಬೆಟ್ಟದಿಂದ ಹರಿದು ಬರುವ ಹೇಮಾವತಿ ಹಾಗೂ ಹುಣಸೂರಿನ ಕಡೆಯಿಂದ ಬರುವ ಲಕ್ಷ್ಮಣತೀರ್ಥ ನದಿಗಳು ಸೇರುವ ತಾಣ ಇದಾಗಿದೆ.
ಕನ್ನಂಬಾಡಿ ಕಟ್ಟೆಯ ನಿರ್ಮಾಣದಿಂದ ಮುಳುಗಡೆಯಾದ ಕಲ್ಲಹಳ್ಳಿ ಗ್ರಾಮದ ಹಿನ್ನೀರಿನ ಅಂಚಿನಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ. ದಕ್ಷಿಣ ಭಾರತದಲ್ಲಿಯೇ ಅಪರೂಪವಾದ ಸುಮಾರು 8 ಅಡಿ ಎತ್ತರ ವಿರುವ ಏಕ ಕಪ್ಪುಶಿಲೆಯ ವರಾಹ ವಿಗ್ರಹ ಹಾಗೂ ಭೂದೇವಿ (ಲಕ್ಷ್ಮೀ) ವಿಗ್ರಹ ಗಮನ ಸೆಳೆಯುತ್ತವೆ.
ಶಾಸನದ ಸಾರಾಂಶ: ಈ ವಿಗ್ರಹದ ನಿರ್ಮಾತೃ ಯಾರೆಂಬುದು ತಿಳಿದಿಲ್ಲವಾದರೂ, ದೇಗುಲದ ಮುಂದಿರುವ ಶಾಸನವು ಕ್ರಿ.ಶ.1334ರಲ್ಲಿ ಹೊಯ್ಸಳ ಅರಸ ಮುಮ್ಮಡಿ ಬಲ್ಲಾಳನು ತನ್ನ ಮಡದಿ ದ್ಯಾಮಲಾದೇವಿಯ ಜ್ಞಾಪಕಾರ್ಥಕವಾಗಿ ಈ ಸ್ಥಳವನ್ನು ‘ದೇಮಲಾಪುರ’ ಎಂದು ಕರೆದು, ಅಗ್ರ ಹಾರ ಮಾಡಿದನೆಂದು, ಈ ಮೂರ್ತಿಯ ಪೂಜಾ ಕೈಂಕರ್ಯಗಳಿಗಾಗಿ 42 ಸಾವಿರ ಕೋಲು ಅಳತೆಯ ಬೆದ್ದಲು (ಹೊಲ) ನೀಡಿದನೆಂದು ತಿಳಿಸುವುದರಿಂದ ಹೊಯ್ಸಳ ಅರಸರ ಕಾಲದಲ್ಲಿ ಇದೊಂದು ಪ್ರಸಿದ್ಧ ವೈಷ್ಣವ ಕ್ಷೇತ್ರವಾಗಿತ್ತೆಂದು ತಿಳಿದು ಬರುತ್ತದೆ.
ಹಳೆಯ ದೇವಸ್ಥಾನವು ಚಿಕ್ಕದಾಗಿದ್ದರಿಂದ ಇದೇ ಜಾಗದಲ್ಲಿ ಹೊಯ್ಸಳ ವಾಸ್ತು ಶಿಲ್ಪದ ಮಾದರಿಯಲ್ಲಿ ಪುನರ್ ನಿರ್ಮಾಣ ಮಾಡಲಾಗುತ್ತಿದೆ. 108 ಕಾಲು ಮಂಟಪ-ಅಲ್ಲದೆ 178 ಅಡಿ ಎತ್ತರದ ರಾಜಗೋಪುರ ನಿರ್ಮಾಣ ಮಾಡಲಾಗುತ್ತಿದೆ. ದೇವಾಲಯದ ಅಭಿವೃದ್ಧಿ ಗಾಗಿ ಸುಮಾರು 50 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ದಾನಿಗಳ ಸಹಾಯದಿಂದ ಮೈಸೂರಿನ ಶ್ರೀ ಪರಕಾಲ ಮಠದ ಮಾರ್ಗದರ್ಶನದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಇದನ್ನು ಹೊಯ್ಸಳ ದೊರೆ ಮೂರನೇ ವೀರಬಲ್ಲಾಳನಿಗೆ ಅರ್ಪಿಸಲು ಮಠ ನಿರ್ಧರಿಸಿದೆ. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ 3 ಕೋಟಿ ರೂ. ಅನುದಾನ ನೀಡಿದ್ದಾರೆ. ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿಸುವುದು, ತ್ರಿವೇಣಿ ಸಂಗಮಕ್ಕೆ ಬೋಟಿಂಗ್ ವ್ಯವಸ್ಥೆ, ತೂಗು ಸೇತುವೆ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ನೀರಾವರಿ ಇಲಾಖೆಯು ಪ್ರವಾಸಿಗರ ಅನುಕೂಲಕ್ಕಾಗಿ ಹೇಮಾವತಿ ನದಿಯ ಹಿನ್ನೀರಿಗೆ ಸೋಪಾನಕಟ್ಟೆ ನಿರ್ಮಿಸಲು ಕಾಮಗಾರಿ ಕೈಗೊಂಡಿದೆ.
ಭೂವರಾಹನಾಥ ದೇವಾಲಯಕ್ಕೆ ಇರುವ ದೂರ:
• ಮಂಡ್ಯ ಜಿಲ್ಲಾ ಕೇಂದ್ರದಿಂದ 60 ಕಿ.ಮೀ.
• ಮೈಸೂರಿನಿಂದ 50 ಕಿ.ಮೀ.
• ಕೆ.ಆರ್.ಎಸ್‌ನಿಂದ 30 ಕಿ.ಮೀ.





