Mysore
28
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಭಾರೀ ಗಾಳಿ – ಮಳೆಗೆ ನೆಲ ಕಚ್ಚಿದ ಬಾಳೆ

ಮಂಜು ಕೋಟೆ

ಎಚ್. ಡಿ. ಕೋಟೆ: ಭಾನುವಾರ ರಾತ್ರಿ ಬೀಸಿದ ಗಾಳಿ ಮಳೆಗೆ ನೂರಾರು ಎಕರೆಯಲ್ಲಿ ಬೆಳೆದಿದ್ದ ಬಾಳೆ ಬೆಳೆ ಮತ್ತು ಮುಸುಕಿನ ಜೋಳದ ಬೆಳೆಗಳು ನೆಲಕಚ್ಚಿ, ೮ ಕೋಟಿ ರೂ. ಗೂ ಹೆಚ್ಚು ನಷ್ಟವಾಗಿ ರೈತ ಕುಟುಂಬಗಳು ಕಂಗಾಲಾಗಿವೆ.

ಪಟ್ಟಣದಿಂದ ೧೦ ಕಿ. ಮೀ. ದೂರದಲ್ಲಿರುವ ನಾಗನಹಳ್ಳಿ ಮತ್ತು ಹಿರೇಹಳ್ಳಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಹೆಗಡಾಪುರ, ನಾಗನಹಳ್ಳಿ, ಚಕ್ಕೋಡನಹಳ್ಳಿ, ಚಾಕಹಳ್ಳಿ, ಸೋನಳ್ಳಿ, ದಟ್ಟಳ್ಳ, ದಾಸನಪುರ, ಹಿರೇಹಳ್ಳಿ, ಕೊತ್ತನಹಳ್ಳಿ, ಅಂಕನಾಥಪುರ ಗ್ರಾಮಗಳ ವ್ಯಾಪ್ತಿಯಲ್ಲಿರುವ ೨೦೦ ಎಕರೆಗೂ ಹೆಚ್ಚು ಪ್ರದೇಶದಲ್ಲಿ ೧೩೦ ಮಂದಿ ರೈತರು ಬೆಳೆದಿದ್ದ ನೇಂದ್ರ ಮತ್ತು ಏಲಕ್ಕಿ ಬಾಳೆ ಬೆಳೆಗಳು ಭಾನುವಾರ ಸಂಜೆ ೭. ೩೦ರ ಸಮಯದಲ್ಲಿ ಸುರಿದ ಗಾಳಿ ಮಳೆಗೆ ಸಂಪೂರ್ಣವಾಗಿ ನೆಲಕಚ್ಚಿವೆ.

ಎಕರೆಗೆ ೪ ಲಕ್ಷ ರೂ. ಗಳೆಂದರೂ ೨೦೦ ಎಕರೆಯಲ್ಲಿ ಬೆಳೆದಿದ್ದ ೮ ಕೋಟಿ ರೂ. ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ರೈತರುಗಳಾದ ದೊರೆದಾಸ್, ಭಾಗ್ಯಮ್ಮ, ನಾಗನಹಳ್ಳಿ ಶಾಂತ, ಪ್ರದೀಪ , ಸೀತಮ್ಮ, ನಂಜಪ್ಪ, ಸುರೇಂದ್ರ ನಾಯಕ, ಬಸವ ಶೆಟ್ಟಿ, ಮುರುಗನ್, ಅಂತೋಣಿ, ರಾಜು, ರಾಜೇಂದ್ರ, ಪ್ರಸಾದು, ಕಾಂತರಾಜು, ಮಾರ್ಟಿನ್, ಜೋಶಪ್ಪ, ಸುಂದರ, ಶಿವರಾಜು, ಜೇಕಬ್, ರಾಯಪ್ಪ, ಚೌಕಪ್ಪ, ತಮ್ಮಯ್ಯ, ಕೆಂಡಗಣ್ಣ, ಮುತ್ತಣ್ಣ, ನಂಜಪ್ಪ, ಮಂಜು, ನಿಂಗೇಗೌಡ, ರಾಜಪ್ಪ, ದೊಡ್ಡಯ್ಯ, ಬಸವ ನಾಯಕ, ಚಂದ್ರು, ಸಂದೇಶ, ರಾಜೇಶ್, ಈರಯ್ಯ, ಸಣ್ಣ ತಾಯಮ್ಮ, ಕೆಂಚಯ್ಯ, ಮಾರಯ್ಯ, ಹನುಮಂತಯ್ಯ ಮುಂತಾದವರ ಜಮೀನುಗಳಲ್ಲಿ ಸಾಲ ಮಾಡಿ ಲಕ್ಷಾಂತರ ರೂ. ಖರ್ಚು ಮಾಡಿ ನೇಂದ್ರ ಮತ್ತು ಏಲಕ್ಕಿ ಬಾಳೆಯನ್ನು ಬೆಳೆಯಲಾಗಿತ್ತು. ಆದರೆ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬಾಳೆ ಗೊನೆ ಕೊಯ್ಲಿಗೆ ಬಂದಿದ್ದವು. ಅನೇಕ ರೈತರು ತಮ್ಮ ಜಮೀನಿಗೆ ಹೋಗಿ ಮುರಿದುಬಿದ್ದ ಬೆಳೆಗಳನ್ನು ನೋಡಿ ಗೋಳಾಡುತ್ತಿದ್ದುದು ಕಂಡುಬಂದಿತು. ಸರ್ಕಾರ, ಅಽಕಾರಿಗಳು, ಜನಪ್ರತಿನಿಽಗಳು ನೊಂದ ರೈತರಿಗೆ ಪರಿಹಾರ ನೀಡಬೇಕಿದೆ. ಆದರೆ, ಕಂದಾಯ ಇಲಾಖೆಯ ಆರ್‌ಐ ಮತ್ತು ವಿಎಗಳು ಜಮೀನುಗಳತ್ತ ಭೇಟಿ ನೀಡಿಲ್ಲ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಂದಾಯ ಇಲಾಖೆಯ ನೌಕರರು ಪ್ರತಿಭಟನೆ ನಡೆಸುತ್ತಿರುವುದರಿಂದ ರೈತರ ಗೋಳು ಕೇಳುವವರಿಲ್ಲದಂತಾಗಿದೆ. ತೋಟಗಾರಿಕೆ ಇಲಾಖೆ ಅಽಕಾರಿಯ ನೇತ್ರಾವತಿ ಮತ್ತು ಶಿವನಾಗ ಅವರು ಕೆಲವೊಂದು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಕಂದಾಯ ಅಧಿಕಾರಿಗಳನ್ನು ರೈತರ ಜಮೀನು ಗಳಿಗೆ ಕಳುಹಿಸಲಾಗಿದ್ದು ಸಮಗ್ರ ವರದಿಯನ್ನು ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಕಳಿಸಲಾಗುವುದು. -ಶ್ರೀನಿವಾಸ್, ತಹಸಿಲ್ದಾರ್

೨ ಎಕರೆ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದಿದ್ದೆ. ಗಾಳಿ-ಮಳೆಗೆ ಸಂಪೂರ್ಣ ನಾಶವಾಗಿ ೮ ಲಕ್ಷ ರೂ. ಗಳಿಗೂ ಹೆಚ್ಚು ನಷ್ಟವಾಗಿದೆ. ಸೂಕ್ತ ಪರಿಹಾರ ಸರ್ಕಾರ ನೀಡದಿದ್ದರೆ ಈ ಭಾಗದ ರೈತರ ಬದುಕು ಬೀದಿ ಪಾಲಾಗಲಿದೆ. -ದೊರೆದಾಸ್, ರೈತ, ದಾಸನಪುರ.

 

 

 

Tags:
error: Content is protected !!