Mysore
23
scattered clouds

Social Media

ಬುಧವಾರ, 15 ಜನವರಿ 2025
Light
Dark

ಡಾಲಿ ಚಿತ್ರ ಬದುಕಿನ ಲಾಲಿ ಹಾಡು

‘ಜಯನಗರ 4ನೇ ಬ್ಲಾಕ್’ ಕಿರುಚಿತ್ರದಿಂದ ನಟನೆ ಆರಂಭಿಸಿದ ಧನಂಜಯ, ಟಗರು ಚಿತ್ರ ಪ್ರತಿನಾಯಕ ಪಾತ್ರ ಡಾಲಿ ನಟನೆಯಿಂದ ಅಭಿಮಾನಿಗಳ ಮೆಚ್ಚುಗೆ ಪಡೆದವರು. ‘ಆಂದೋಲನ’ ದಿನಪತ್ರಿಕೆ ಹಿರಿಯ ವರದಿಗಾರ ಬಾ.ನಾ.ಸುಬ್ರಹ್ಮಣ್ಯ ಅವರು ನಡೆಸಿದ ಸಂದರ್ಶನ ದಲ್ಲಿ ಧನಂಜಯ ಚಿತ್ರರಂಗದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಇಂಜಿನಿಯರಿಂಗ್ ಪದವಿ ಪಡೆದ ನೀವು ರಂಗಭೂಮಿಯತ್ತ ಹೊರಳಲು ಪ್ರೇರಣೆ ಏನು?

ಧನಂಜಯ: ಚಿಕ್ಕಹುಡುಗನಾಗಿದ್ದಾಗಲೇ ಆಕ್ಸಿಂಗ್ ಮಾಡುತ್ತಿದ್ದೆ. ಶಾಲೆಯಲ್ಲಿ ಪ್ರತಿವರ್ಷ ನಡೆಯುವ ಸ್ಕೂಲ್ ಡೇ ಯಿಂದ ಹಿಡಿದು ಇತರ ಕಾರ್ಯಕ್ರಮಗಳಲ್ಲಿ, ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ. ಊರಲ್ಲಿ ನಮ್ಮಪ್ಪ ನಾಟಕಗಳನ್ನು ಮಾಡುತ್ತಿದ್ದರು, ನಮ್ಮ ಮಾವ ಹಾರೋನಿಯಂ ಮೇಷ್ಟ್ರು… ಹೀಗೆ ಚಿಕ್ಕಂದಿನಿಂದಲೇ ನಾನು ನಾಟಕಗಳನ್ನು ನೋಡುತ್ತಾ ಬೆಳೆದಿದ್ದು. ಸಾಕ್ಷರತಾ ಆಂದೋಲನ ಅಂತ ನಡೀತಾ ಇತ್ತು. ಆಗ ನಾನು ಐದನೇ ಕ್ಲಾಸು. ನಾವು ಊರೂರಿಗೆ ಹೋಗಿ ಯಾಕೆ ಅಕ್ಷರ ಕಲಿಯಬೇಕು ಅಂತ ತಿಳಿಹೇಳುವ ನಾಟಕ ಮಾಡುತ್ತಿದ್ದೆವು. ಹಾಗೆ ಚಿಕ್ಕವನಿದ್ದಾಗಿನಿಂದಲೇ ನಾಟಕಗಳನ್ನು ನೋಡಿ ರಂಗಭೂಮಿ ಸೆಳೆತ ಇತ್ತು.

ಮೈಸೂರಿಗೆ ಬಂದ ಮೇಲೆ, ರಂಗಾಯಣಕ್ಕೆ ಹೋಗಿ ನಾಟಕಗಳನ್ನು ನೋಡೋಕೆ ಶುರು ಮಾಡಿದೆ. ಅದಾದ ಮೇಲೆ ಮೈಮ್ ರಮೇಶ್ ಸಿಕ್ಕರು. ಅಲ್ಲಿಂದ ಪೂರ್ತಿಯಾಗಿ ರಂಗಭೂಮಿಯತ್ತ ಹೊರಳಿದೆ. ಅಲ್ಲೇ ಕ್ರಿಶ್ಚಿಯನ್ ಸ್ಟುಕ್ ಕೂಡ ಸಿಕ್ಕಿದ್ದರು. ಅಲ್ಲಿಂದ ಅವರು ಜರ್ಮನಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಒಂದು ತಿಂಗಳು ಇದ್ದಿದ್ದು, ಹೀಗೆ ರಂಗಭೂಮಿ ಅನುಭವ.
================

• ನಟನಾಗಿ ಆರಂಭದ ದಿನಗಳಿಂದ ಡಾಲಿಯಾಗುವವರೆಗಿನ ಅನುಭವ?

ಧನಂಜಯ: ಮೊದಲ ಸಿನಿಮಾ ಅನುಭವ ಬೇರೆ ತರಹ ಇತ್ತು. ರಂಗಭೂಮಿಯಿಂದ ಹೋಗಿದ್ದು ಒಂದು ರೀತಿಯಲ್ಲಿ ಸಹಾಯ ಆಯ್ತು ಕೂಡ. ಅದು ನಮಗೆ ಬೇರೆ ತರಹ ಕೆಲಸ ಹೇಳಿಕೊಟ್ಟಿತು. ಮೊದಲನೇ ಸಿನಿಮಾದಲ್ಲಿ ಒಳ್ಳೆಯ ಅಫ್ರಿಸಿಯೇಷನ್ ಕೂಡ ಸಿಕ್ತು.

ಅದರ ನಂತರ ಕೂಡ ನನಗೆ ಬೇರೆ ಆಯ್ಕೆಗಳಿರಲಿಲ್ಲ. ಬಂದಿರೋ ಒಳ್ಳೆಯ ನಿರ್ಮಾಣ ಸಂಸ್ಥೆಗಳು, ಒಳ್ಳೆ ನಿರ್ದೇಶಕರ ಜೊತೆ ಸಿನಿಮಾ ಮಾಡಬೇಕಿತ್ತು ಅಷ್ಟೇ. ಹಾಗಾಗಿ ನಿರ್ದೇಶಕರನ್ನು ನಂಬಿ ಎಲ್ಲ ಸಿನಿಮಾ ಮಾಡಿಕೊಂಡು ಬಂದೆ. ಆದರೆ ಎಲ್ಲೋ ಒಂದು ಕಡೆ, ಎಲ್ಲ ಸಿನಿಮಾಗಳೂ ಜನರನ್ನು ತಲುಪುವುದರಲ್ಲಿ, ಅವರ ಮನಸ್ಸಿಗೆ ತಟ್ಟುವುದರಲ್ಲಿ ಸೋಲುತ್ತಿದ್ದವು. ಕೊನೆಗೆ ‘ಜಯನಗರ 4ನೇ ಬ್ಲಾಕ್’ನಂತಹ ಕಿರುಚಿತ್ರ ಮೊದಲು ಮಾಡಿದ್ದೀವಲ್ಲ, ಅದೇ ತರಹ ಮತ್ತೇನಾದರೂ ಬರೆದು ನಾವೇ ಮಾಡಬೇಕು ಅನ್ನುವಂತಹ ಪರಿಸ್ಥಿತಿಯಲ್ಲಿದ್ದಾಗ, ಆಗ ‘ಟಗರು’ ಚಿತ್ರ ಬಂದಿದ್ದು, ಅದರಲ್ಲಿ ಡಾಲಿ ಪಾತ್ರದ ಮೂಲಕ ನಟನಾಗಿ ಪ್ರೇಕ್ಷಕರನ್ನು ತಲುಪಬೇಕು ಎಂಬ ನನ್ನ ಕನಸು ಈಡೇರಿತು.
================

• ಸಾಮಾನ್ಯವಾಗಿ ನಾಯಕ ಪಾತ್ರಗಳನ್ನು ಮಾಡಿದ ಮೇಲೆ ಪ್ರತಿನಾಯಕ ಪಾತ್ರಗಳನ್ನು ಒಪ್ಪಿಕೊಳ್ಳುವ ನಟರು ಕಡಿಮೆ. ಈ ಬಗ್ಗೆ ನಿಮ್ಮ ನಿಲುವೇನು?

ಧನಂಜಯ: ನಾಯಕ, ಪ್ರತಿನಾಯಕ ಅಂತ ಯೋಚನೆ ಮಾಡುವುದಕ್ಕಿಂತ, ಟಗರು ಒಪ್ಪಿಕೊಳ್ಳುವ ವೇಳೆ ನನಗೆ ಬೇರೆ ಆಪ್ಪನ್ನೇ ಇರಲಿಲ್ಲ. ನಾನು ನಟನಾಗಿ ಪ್ರೂವ್ ಮಾಡಬೇಕಾಗಿತ್ತು. ಹಾಗಾಗಿ ಸೂರಿಯವರು ಕೇಳಿದ ಕೂಡಲೇ ‘ಹೂಂ’ ಅಂದೆ; ಮಾಡ್ಡೆ. ಅದು ತುಂಬಾ ಒಳ್ಳೆಯ ರಿಸಲ್ಟ್ ಕೊಟ್ಟಿತು.

ನಾಯಕ, ಪ್ರತಿನಾಯಕ ಪಾತ್ರಗಳನ್ನು ಮಾಡಲು ನನಗೆ ಅಭ್ಯಂತರವಿಲ್ಲ. ಆದರೆ, ಪ್ರತಿನಾಯಕನ ಪಾತ್ರ ಮಾಡುವಾಗ ಅದಕ್ಕೆ ಅದರದ್ದೇ ಆದ ತೂಕ, ಸ್ಟೀನ್‌ಸೆನ್ಸ್ ಇದ್ದರೆ ಮಾಡಬಹುದು ಅಥವಾ ನಮ್ಮ ಪ್ರತಿಭೆಯನ್ನು ಚೆನ್ನಾಗಿ ಬಳಸಿಕೊಳ್ಳುವಂತಿದ್ದರೆ ಮಾಡಬಹುದು. ಈಗ ನಮಗೆ ಅಂತಾನೇ ಬರೆಯುವವರಿದ್ದಾರೆ. ನಮಗೆ ಅಂತಾನೆ ಕಥೆಗಳಾಗುತ್ತಿವೆ, ಆ ತರಹದ ಸಿನಿಮಾಗಳನ್ನಷ್ಟೇ ಮಾಡುತ್ತಿದ್ದೀನಿ.
================

• ‘ಬಡವ ರಾಸ್ಕಲ್ ನೊಂದಿಗೆ ನಿರ್ಮಾಪಕರೂ ಆದಿರಿ. ಈ ಸಾಹಸ ಹೇಗೆ? ‘ಬಡವರ ಮಕ್ಕಳು ಬೆಳೀಬೇಕಣ್ಣ’ ಅಂತಂದ ಮಾತು?

ಧನಂಜಯ: ನಿರ್ಮಾಪಕ ಆಗಬೇಕು ಅಂತ ನಾನು ಯಾವತ್ತೂ ಕನಸು ಕಂಡಿದ್ದೇ ಇಲ್ಲ. ಅದು ಅನಿವಾರ್ಯತೆ ಅಷ್ಟೇ. ಅಂದ್ರೆ ಟಗರು ಆದ ಮೇಲೆ ಡಾಲಿ ಮೂಲಕ ಜನ ತುಂಬಾ ಪ್ರೀತಿ ತೋರಿಸಿದರು. ಅದರ ನಂತರ ಮಾಡಿದ ಪೋಷಕ ಪಾತ್ರಗಳು ಎಲ್ಲೋ ಒಂದು ಕಡೆ ಸಂಪೂರ್ಣವಾಗಿ ನನಗೆ ಖುಷಿ ಕೊಡಲಿಲ್ಲ. ನಮಗೆ ಒಂದಷ್ಟು ಕನಸುಗಳಿರುತ್ತವಲ್ಲ, ನಾವು ಬಂದು
================

• ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುವ ಮಹತ್ವಾಕಾಂಕ್ಷೆ:

ಧನಂಜಯ: ಒಂದಷ್ಟು ಒಳ್ಳೆಯ ಪಾತ್ರಗಳನ್ನು ಮಾಡಬೇಕು. ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಅಂತ ಎಲ್ಲ. ಚೆನ್ನಾಗಿ ಆಗಬೇಕು ಅಂದ್ರೆ ಬಿಸಿನೆಸ್‌ನಲ್ಲಿ ಸಾಧಿಸಬೇಕು. ಹಾಗಾಗಿ ಬಡವ ರಾಸ್ಕಲ್ ನಿರ್ಮಾಣ ಮಾಡಿದೆ. ಬಡವರ ಮಕ್ಕಳು ಬೆಳೀಬೇಕು ಅನ್ನೋದು, ಇನ್ನೊಂದು ನಾಲ್ಕು ಜನಕ್ಕೆ ಇನ್ಸರ್ ಆಗ್ಲಿ ಅನ್ನೋ ಮಾತಷ್ಟೇ. ಅದು ಯಾವತ್ತೂ ನನಗೋಸ್ಕರ ಹೇಳಿಕೊಂಡದ್ದಲ್ಲ.
================

• ಕನ್ನಡ ಅಲ್ಲದೆ ಬೇರೆ ಭಾಷೆಗಳಲ್ಲೂ ನಟಿಸಿದ್ದೀರಿ. ಅಲ್ಲಿನ ಅನುಭವ, ಮುಂದಿನ ಯೋಜನೆಗಳ ಬಗ್ಗೆ ಹೇಳಿ.

ಧನಂಜಯ: ಬೇರೆ ಬೇರೆ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಅಂತ ನನಗೆ ಆಸೆ ಇತ್ತು. ಯಾವಾಗಲೂ ನನಗೆ ಕಲಿಕೆ ಬೇಕು. ಸುಕುಮಾರನ್ ರಂತಹ ನಿರ್ದೇಶಕರ ಜೊತೆ ಕೆಲಸ ಮಾಡುವುದೂ ಕಲಿಕೆ. ಅಷ್ಟು ವರ್ಷಗಳಿಂದ ಅವತ್ತಿನಿಂದ ಇವತ್ತಿನವರೆಗೂ, ಅವರ ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದೇವಲ್ಲ? ಅಥವಾ ರಾಮಗೋಪಾಲ್ ವರ್ಮ ಇರಲಿ, ಅದೊಂದು ಕಲಿಕೆ ಅಷ್ಟೇ. ಹಾಗಾಗಿ ಅಲ್ಲೂ ಹೋಗಿ ಕೆಲಸ ಮಾಡಿದ್ದೀನಿ, ತುಂಬಾ ಒಳ್ಳೆಯ ಪಾತ್ರಗಳು, ವಿಭಿನ್ನ ಪಾತ್ರಗಳು ಬಂದರೆ ಅಲ್ಲಿಯೂ ಮುಂದುವರಿಯುತ್ತೇನೆ.
================

• ಕನ್ನಡ ಚಿತ್ರರಂಗದ ಇಂದಿನ ಸ್ಥಿತಿಗತಿಯ ಕುರಿತಂತೆ ನಿಮ್ಮ ಅಭಿಪ್ರಾಯ?

ಧನಂಜಯ: ಕನ್ನಡ ಚಿತ್ರರಂಗ ಮಾತ್ರವಲ್ಲ, ಎಲ್ಲ ಚಿತ್ರರಂಗಗಳೂ ಸಂಕಷ್ಟದ ಸ್ಥಿತಿಯಲ್ಲಿವೆ. ಈ ಡಿಜಿಟಲ್ ರೈಟ್ಸ್, ಸ್ಯಾಟಲೈಟ್ ರೈಟ್ಸ್ – ಈ ನಾನ್ ಥಿಯೇಟ್ರಿಕಲ್ ರೈಟ್ಸ್ ಅಂತ ನಾವು ಏನು ಕರೆಯುತ್ತೇವೋ ಅದನ್ನು ಯಾರೂ ಸದ್ಯಕ್ಕೆ ತೆಗೆದುಕೊಳ್ಳುತ್ತಿಲ್ಲ. ನಾವು ಥಿಯೇಟರ್‌ಗಾಗಿ ಸಿನಿಮಾ ಮಾಡಿ, ಜನ ಅಲ್ಲಿ ಬಂದು ನೋಡಿ ಗೆದ್ದರೆ, ಉಳಿದ ಕಡೆ ಕೂಡ ಅದು ವ್ಯಾಪಾರ ಆಗುತ್ತದೆ.

ನನ್ನ ಪ್ರಕಾರ ಕನ್ನಡ ಚಿತ್ರರಂಗಕ್ಕೆ ಒಂದಷ್ಟು ಒಳ್ಳೆಯ ನಿರ್ಮಾಣ ಸಂಸ್ಥೆಗಳು ಬೇಕು. ವಿಷನ್ ಇರುವಂತಹ ನಿರ್ಮಾಪಕರು ಬೇಕು; ನಿರ್ದೇಶಕರು ಬೇಕು, ಬರಹಗಾರರು ಬೇಕು. ಆಗ ಇನ್ನೂ ಚೆನ್ನಾಗಿ ಆಗುತ್ತದೆ. ನಾವು ಆ ಪ್ರಾಸೆಸ್‌ನಲ್ಲಿದ್ದೇವೆ. ಖಂಡಿತವಾಗಿ ಈಗಿರುವ ಫೇಸ್ ದಾಟಿ, ಒಂದು ಒಳ್ಳೆಯ ಫೇಸ್‌ ಗೆ ಬರುತ್ತೇವೆ ಎನ್ನುವ ನಂಬಿಕೆ ನನಗಿದೆ.
================

• ‘ಅಲ್ಲಮ’ನಾದಿರಿ, ‘ಕೆಂಪೇಗೌಡ’ ಆಗುತ್ತಿದ್ದೀರಿ. ಈ ನಡುವೆ ‘ಜಯರಾಜ್ ಆದಿರಿ… ಈ ಬಗ್ಗೆ ಹೇಳಿ.

ಧನಂಜಯ: ಬಯೋಪಿಕ್‌ಗಳಲ್ಲಿ ನಟನೆ ತುಂಬಾ ದೊಡ್ಡ ಸವಾಲು. ಅದರಲ್ಲಿ ನನಗೆ ತುಂಬಾ ಖುಷಿ ಇದೆ. ಅಲ್ಲಮಪ್ರಭು, ಜಯರಾಜ್ ಬಯೋಪಿಕ್‌ ನಲ್ಲಿ ನಟಿಸಿದ್ದೇನೆ. ಈ ಕಡೆ ಈಗ ಕೆಂಪೇಗೌಡ ಬಯೋಪಿಕ್‌ ಗೆ ಕೆಲಸ ನಡೀತಾ ಇದೆ. ಒಬ್ಬ ನಟನಾಗಿ ಎಲ್ಲ ತರಹದ ಪಾತ್ರಗಳಲ್ಲೂ ಅನುಭವ ಪಡೆದುಕೊಳ್ಳುವುದಿದೆಯಲ್ಲ, ಅದು ನನಗೆ ವೈಯಕ್ತಿವಾಗಿ ತುಂಬಾ ಕಾಂಟ್ರಿಬ್ಯೂಟ್ ಮಾಡುತ್ತದೆ. ಎಲ್ಲ ಪಾತ್ರಗಳೂ ಕೊಡುವ ಅನುಭವ ತುಂಬಾ ದೊಡ್ಡದು. ಮುಂದೆ ಯಾವತ್ತೋ ಒಂದು ದಿನ ಈ ಜೀವನದಲ್ಲಿ ಒಬ್ಬ ಕಲಾವಿದ ಆಗಿ ತಿರುಗಿ ನೋಡಿದಾಗ, ಇಷ್ಟೊಂದು ಪಾತ್ರಗಳನ್ನು ನಾನು ಮಾಡಿದ್ದೀನಿ ಅಂತ ನೋಡುವ ಹೆಮ್ಮೆ ಅಥವಾ ತೃಪ್ತಿ ಇರಬೇಕು.

ಜನ ಏನನ್ನು ನಿರೀಕ್ಷಿಸುತ್ತಾರೋ ಅದನ್ನು ಮಾಡಿಕೊಂಡು ಹೋದಾಗ ಗ್ರಾಫ್ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಈ ರೀತಿ ಎಲ್ಲ ತರಹದ ಪಾತ್ರಗಳನ್ನು ಮಾಡಬೇಕು ಅಂತ ಹೊರಟಾಗ ಡಿಸ್ಟರ್ಬ್ ಆಗಬಹುದು. ಆದರೆ ಒಬ್ಬ ನಟನಾಗಿ ಆ ಒಂದು ವರ್ಸಟಾಲಿಟಿಯನ್ನು ತುಂಬಾ ಎಂಜಾಯ್ ಮಾಡುತ್ತೀನಿ.
================

• ‘ನಾಡಪ್ರಭು ಕೆಂಪೇಗೌಡ’ ಚಿತ್ರದ ನಿರ್ಮಾಣದಲ್ಲೂ ಕೈ ಜೋಡಿಸಿದ್ದೀರಿ. ತೆರೆಯ ಮೇಲೆ ಯಾವಾಗ ನಿಮ್ಮನ್ನು ಕೆಂಪೇಗೌಡರಾಗಿ ನೋಡಬಹುದು?

ಧನಂಜಯ: ಕೆಂಪೇಗೌಡ ಚಿತ್ರದ ಸಿದ್ಧತೆ ತುಂಬಾ ಆಗಬೇಕು. ಚಿತ್ರೀಕರಣದ ಪೂರ್ವ ಕೆಲಸಗಳು ತುಂಬಾ ಇವೆ. ಅವೆಲ್ಲ ಮುಗಿದು ಶೂಟಿಂಗ್‌ ಹೋಗುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ನಾನು ದೇಹವನ್ನು ಹುರಿಗೊಳಿಸಿಕೊಳ್ಳಬೇಕು. ಅದು ಐತಿಹಾಸಿಕ ಸಿನಿಮಾ ಆಗಿರುವುದರಿಂದ ಎಲ್ಲ ವಿಭಾಗಗಳ ಸಿದ್ಧತೆ ತುಂಬಾ ಆಗಬೇಕು. ಈಗ ಒಳ್ಳೆಯದೊಂದು ತಂಡ ಕಟ್ಟಿದ್ದೇವೆ. ಎಲ್ಲ ಕೆಲಸಗಳೂ ಮುಗಿದ ನಂತರ ಚಿತ್ರೀಕರಣಕ್ಕೆ ಹೊರಡುತ್ತೇವೆ.
================

• ‘ಜಯನಗರ ನಾಲ್ಕನೇ ಬ್ಲಾಕ್ ನಿಂದ ಹೊರಟು, ಕಳೆದ ಹನ್ನೊಂದು ವರ್ಷಗಳ ನಿಮ್ಮ ಯಾನದ ಒಂದು ಸಿಹಿ ಮತ್ತು ಕಹಿ ಘಟನೆ ಹೇಳಿ.

ಧನಂಜಯ: ಸಿಹಿ ಘಟನೆ, ಕಹಿ ಘಟನೆ ಅನ್ನುವುದಕ್ಕಿಂತ ಎಲ್ಲ ರೀತಿಯ ನೆನಪುಗಳಿವೆ. ಕೆಟ್ಟ ನೆನಪುಗಳನ್ನು ಬಿಟ್ಟು ಒಳ್ಳೆಯ ನೆನಪುಗಳನ್ನು ಇಟ್ಟು ಕೊಂಡು ಮುಂದಕ್ಕೆ ಹೋಗಲು ಇಷ್ಟಪಡುತ್ತೇನೆ. ಕಹಿ ಘಟನೆಗಳನ್ನು ಅನುಭವ ಅಂತ ಭಾವಿಸುತ್ತೇನೆ. ಕಹಿ ಘಟನೆಗಳ ಬಗ್ಗೆ ಮಾತಾಡೋದು ಬೇಡ. ಸಿಹಿ ಘಟನೆಗಳೊಂದಿಗೆ, ಒಳ್ಳೆಯ ನೆನಪುಗಳೊಂದಿಗೆ ಮುಂದೆ ಸಾಗೋಣ.

Tags: