Mysore
21
overcast clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಬಿ. ಆರ್. ಹಿಲ್ಸ್ : ದಾಸೋಹ ಭವನಕ್ಕೆ ಹೊಸ ರೂಪ

ಪ್ರಸ್ತಾವನೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚನೆ
ಪ್ರಸಾದ್ ಲಕ್ಕೂರು

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಹಾಗೂ ಪ್ರವಾಸಿ ತಾಣವಾದ ಬಿಳಿಗಿರಿರಂಗನ ಬೆಟ್ಟದಲ್ಲಿರುವ ದಾಸೋಹ ಭವನವನ್ನು ಹೊಸದಾಗಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವಂತೆ ಬೆಟ್ಟದ ಬಿಳಿಗಿರಿರಂಗನಾಥ ಸ್ವಾಮಿ ದೇವ ಸ್ಥಾನದ ಆಡಳಿತ ಮಂಡಳಿಯು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದೆ. ಈ ಮೂಲಕ ಹಳೆಯ ಕಾಲದ ಭವನಕ್ಕೆ ಹೊಸ ರೂಪ ನೀಡಲು ಮುಂದಾಗಿದೆ.

ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದೊಳಗೆ ಇರುವ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಹಾಗೂ ಸಂರಕ್ಷಿತ ಅರಣ್ಯದ ಸೊಬಗನ್ನು ಸವಿಯಲು ಪ್ರವಾಸಿಗರು ಹಾಗೂ ಭಕ್ತರಾಗಿಯೂ ಜನರು ಭೇಟಿ ನೀಡುತ್ತಾರೆ. ವೈಷ್ಣವ ಪಂಥಕ್ಕೆ ಸೇರಿದ ರಂಗನಾಥಸ್ವಾಮಿ ದೇವಾಲಯಕ್ಕೆ ದಾಸ ಪರಂಪರೆಯನ್ನು ಪ್ರತಿನಿಧಿಸುವ ದಾಸಯ್ಯಗಳು ಆಗಮಿಸಿ ಪೂಜೆ ಸಲ್ಲಿಸಿ ಹೋಗುತ್ತಾರೆ.

ಬಿಳಿಗಿರಿ ರಂಗನಾಥ ಸ್ವಾಮಿ ಭಕ್ತರು ಶುಕ್ರವಾರ ಮತ್ತು ಶನಿವಾರ ಬೆಟ್ಟಕ್ಕೆ ಹೆಚ್ಚಾಗಿ ಬರುತ್ತಾರೆ. ಇವರೆಲ್ಲ ಮಧ್ಯಾಹ್ನ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಿ ಹೋಗುವುದು ವಾಡಿಕೆ. ಆದರೆ, ಪ್ರಸ್ತುತ ಆಧುನಿಕ ಸಂದರ್ಭದಲ್ಲಿ ಭವನವನ್ನು ಹೊಸದಾಗಿ ನಿರ್ಮಿಸುವುದು ಸೂಕ್ತ. ಭಕ್ತರಿಗೆ ಇನ್ನಷ್ಟು ಶುಚಿಯಾಗಿ ಪ್ರಸಾದ ವಿತರಣೆ ಮಾಡಬೇಕೆಂಬ ಉದ್ದೇಶದಿಂದ ಭವನವನ್ನು ಹೊಸದಾಗಿ ನಿರ್ಮಿಸಲು ದೇವಾಲಯದ ಆಡಳಿತ ಮಂಡಳಿ ಮುಂದಾಗಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಽಕಾರಿ ಮೋಹನ್ ತಿಳಿಸಿದ್ದಾರೆ.

ರಂಗನಾಥಸ್ವಾಮಿ ದೇವಾಲಯದ ಎಡಭಾಗದಲ್ಲಿರುವ ದಾಸೋಹ ಭವನದಲ್ಲಿ ಪ್ರಸ್ತುತ ನೆಲದ ಮೇಲೆ ಕುಳಿತು ಒಂದು ಬಾರಿಗೆ ೧೫೦ ಭಕ್ತರು ಮಾತ್ರ ಪ್ರಸಾದ ಸೇವಿಸ ಬಹುದು. ಮಧ್ಯಾಹ್ನ ೧೨. ೩೦ ರಿಂದ ೨ ಗಂಟೆ ತನಕ ಪ್ರತಿನಿತ್ಯ ೨-೩ ಬಾರಿ ಅನ್ನ ದಾಸೋಹ ನಡೆಯುತ್ತದೆ.

೨೦೦೨ರಲ್ಲಿ ಬೆಟ್ಟದ ಬದ್ರಿ ರಾಮ್ ಎಂಬವರು ಅನ್ನ ದಾಸೋಹ ಪ್ರಾರಂಭಿಸಿದ್ದರು. ಭಕ್ತರಿಂದ ದಾನದ ರೂಪದಲ್ಲಿ ನಗದು, ತರಕಾರಿ, ದಿನಸಿ ಪದಾರ್ಥಗಳನ್ನು ಪಡೆದು ನಡೆಸಿಕೊಂಡು ಹೋಗುತ್ತಿದ್ದರು. ಹರಕೆ ಹೊತ್ತವರು ಸಹ ಅನ್ನ ದಾಸೋಹ ನೆರವೇರಿಸುತ್ತಿದ್ದರು. ವರ್ಷಕ್ಕೆ ೨ ಬಾರಿ ನಡೆಯುವ ರಂಗನಾಥಸ್ವಾಮಿ ಜಾತ್ರೆ, ವಿಶೇಷ ಪೂಜೆಗಳ ವೇಳೆಯಲ್ಲಿ ದಾಸೋಹ ನಡೆಸುವುದು ಕಷ್ಟಕರವಾಗಿತ್ತು.

ಇದನ್ನು ಮನಗಂಡ ಅಂದಿನ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತ ಮಡಿವಾಳ್ ಅವರು ಖಾಸಗಿಯಾಗಿ ದಾಸೋಹ ನಡೆಸುವುದು ಬೇಡ. ದೇವಾಲಯದ ಆಡಳಿತ ಮಂಡಳಿಯೇ ನಡೆಸಬೇಕೆಂದು ೨೦೧೧ ರಲ್ಲಿ ಆದೇಶಿಸಿದ್ದರು. ಅಂದಿನಿಂದ ಇಲ್ಲಿಯ ತನಕ ದೇವಾಲಯದ ಆಡಳಿತ ಮಂಡಳಿಯೇ ದಾಸೋಹ ನಡೆಸಿಕೊಂಡು ಹೋಗುತ್ತಿದೆ.

ಪುಟ್ಟದಾದ ಭವನದಲ್ಲಿ ವಯಸ್ಸಾದವರು, ವಿಕಲ ಚೇತನರು, ಮಕ್ಕಳು ನೆಲದ ಮೇಲೆ ಕುಳಿತು ಪ್ರಸಾದ ಸೇವನೆ ಮಾಡುವುದು ಕಷ್ಟಕರವಾಗಿದೆ. ಭವನಕ್ಕೆ ಹೋಗಿ ಬರಲು ದಾರಿ ಅಚ್ಚಕಟ್ಟಾಗಿಲ್ಲ ಕಲ್ಲು. ಮಣ್ಣಿನ ನೆಲವಾಗಿದೆ. ಹೆಚ್ಚು ಭಕ್ತರು ಆಗಮಿಸಿದರೆ ಗಂಟೆಗಟ್ಟಲೆ ಕಾಯಬೇಕಿದೆ.

ಇದೆಲ್ಲವನ್ನೂ ಸೂಕ್ಷವಾಗಿ ಗಮನಿಸಿರುವ ಸ್ಥಳೀಯ ಶಾಸಕರಾದ ಎ. ಆರ್. ಕೃಷ್ಣಮೂರ್ತಿ ಅವರು, ಹಳೆಯ ಕಾಲದ ಶೀಟ್ ಚಾವಣಿಯ ಭವನಕ್ಕೆ ಹೊಸ ರೂಪ ನೀಡಲು ಉದ್ದೇಶಿಸಿದ್ದಾರೆ. ಅದಕ್ಕಾಗಿ ಹೊಸ ರೂಪದ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ದೇವಾಲಯದ ಆಡಳಿತ ಮಂಡಳಿ ಮೂಲಕ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಸಿದ್ದಾರೆ.

ಬೆಟ್ಟದಲ್ಲೊಂದು ಹೊಸ ದಾಸೋಹ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಗೆ ಇತ್ತೀಚೆಗೆ ಪತ್ರ ಬರೆಯಲಾಗಿದೆ. ಇಲಾಖೆ ಇಂಜಿನಿಯರ್‌ಗಳು ಸಿದ್ಧಪಡಿಸಿ ಇನ್ನು ಸಲ್ಲಿಸಿಲ್ಲ. ಪ್ರಸ್ತಾವನೆ ಸಲ್ಲಿಕೆಯಾದ ಬಳಿಕ ಸರ್ಕಾರದ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು. ಎ. ಆರ್. ಕೃಷ್ಣಮೂರ್ತಿ, ಶಾಸಕರು, ಕೊಳ್ಳೇಗಾಲ ಕ್ಷೇತ್ರ

ಬೆಟ್ಟದ ಆಡಳಿತ ಮಂಡಳಿಯು ಪ್ರಸ್ತಾವನೆ ಸಲ್ಲಿಸುವಂತೆ ಕೋರಿದೆ. ಸ್ಥಳ ಪರಿಶೀಲನೆ ನಡೆಸಿ ಯಾವ ಮಾದರಿಯಲ್ಲಿ ಇರಬೇಕೆಂದು ಅಂದಾಜಿಸಿ ಪ್ರಸ್ತಾವನೆ ಸಿದ್ಧಪಡಿಸಲಾಗುವುದು.  ಪುರುಷೋತ್ತಮ್, ಎಇಇ, ಲೋಕೋಪಯೋಗಿ ಇಲಾಖೆ, ಕೊಳ್ಳೇಗಾಲ

 

Tags:
error: Content is protected !!