Mysore
23
overcast clouds
Light
Dark

ದಸರಾ ಆನೆಗಳ ಮೇಲೆ ಆಂಧ್ರ ಅರಣ್ಯ ಇಲಾಖೆ ಕಣ್ಣು

ಪ್ರಶಾಂತ್ ಎಸ್.

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಸಾಕಾನೆ ಶಿಬಿರದ 8 ಆನೆಗಳನ್ನು ಕಾರ್ಯಾಚರಣೆಗಾಗಿ ನೀಡುವಂತೆ ಆಂಧ್ರಪ್ರದೇಶದ ಅರಣ್ಯ ಇಲಾಖೆಯು ರಾಜ್ಯದ ಅರಣ್ಯ ಇಲಾಖೆಗೆ ಈಗಾಗಲೇ ಬೇಡಿಕೆ ಇಟ್ಟಿದ್ದು, ಇದಕ್ಕೆ ವನ್ಯಜೀವಿ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶದಲ್ಲೇ ಅತಿ ಹೆಚ್ಚು ಆನೆಗಳಿರುವ ರಾಜ್ಯ ವೆಂದು ಹೆಸರುವಾಸಿಯಾಗಿರುವ ಕರ್ನಾಟಕದಲ್ಲಿ ಸುಮಾರು 6,300ಕ್ಕೂ ಹೆಚ್ಚು ಆನೆಗಳಿವೆ. 14 ಸಾಕಾನೆ ಶಿಬಿರಗಳಿವೆ. ಇಲ್ಲಿನ ಸಾಕಾನೆಗಳ ಮೇಲೆ ಹೊರ ರಾಜ್ಯದ ಅರಣ್ಯ ಇಲಾಖೆಗಳು ಕಣ್ಣಿಟ್ಟಿದ್ದು, ಆಂಧ್ರಪ್ರದೇಶದ ಅರಣ್ಯ ಇಲಾಖೆಯು ಕಾಡಾನೆ ಗಳ ಸೆರೆ ಕಾರ್ಯಾಚರಣೆಗಾಗಿ ಕರ್ನಾಟಕದ ಎಂಟು ಆನೆಗಳನ್ನು ತನಗೆ ನೀಡುವಂತೆ ಬೇಡಿಕೆ ಇಟ್ಟಿದೆ. ಅದೂ ಅಲ್ಲದೆ, ನಾಗರಹೊಳೆಯ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಮತ್ತಿಗೋಡು ಹಾಗೂ ಕೊಡಗಿನ ದುಬಾರೆ ಸಾಕಾನೆ ಶಿಬಿರಕ್ಕೆ ಆಂಧ್ರದ ಮೂವರು ಅರಣ್ಯಾಧಿಕಾರಿಗಳು ಇತ್ತೀಚೆಗಷ್ಟೇ ಭೇಟಿ ನೀಡಿ ತಮಗೆ ಬೇಕಾದ ಆನೆಗಳನ್ನು ಆಯ್ಕೆ ಮಾಡಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಈ ಬೆಳವಣಿಗೆಯಿಂದ ವನ್ಯ ಜೀವಿ ಪ್ರಿಯರು ಆತಂಕಗೊಂಡಿದ್ದಾರೆ.

ಆಂಧ್ರಪ್ರದೇಶದಲ್ಲಿ ಕಾಡಾನೆಗಳ ಹಾವಳಿ: ಕರ್ನಾಟಕದಲ್ಲಿರುವಂತೆ ಆಂಧ್ರಪ್ರದೇಶದಲ್ಲೂ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಅಲ್ಲಿನ ರೈತರ ಜಮೀನುಗಳಿಗೆ ನುಗ್ಗಿ ದಾಂದಲೆ ಮಾಡುತ್ತಿವೆ. ಅದನ್ನು ತಪ್ಪಿಸಲು ಕಾರ್ಯಾಚರಣೆಗೆ ಮುಂದಾಗಿ ರುವ ಅಲ್ಲಿನ ಅರಣ್ಯ ಇಲಾಖೆ ಆನೆ ಸೆರೆ ಕಾರ್ಯಾಚರಣೆಗೆ ಕರ್ನಾಟಕದ ಸಾಕಾನೆಗಳನ್ನು ಬಳಸಿಕೊಳ್ಳಲು ಸಜ್ಜಾಗಿದೆ.

ಆಂಧ್ರಪ್ರದೇಶದ ಅರಣ್ಯ ಇಲಾಖೆಯಿಂದ ಪತ್ರ: 202-23ನೇ ಸಾಲಿನ ಸೆಪ್ಟೆಂಬರ್-ಅಕ್ಟೋ ಬರ್ ತಿಂಗಳಿನಲ್ಲೇ 22 ಆನೆಗಳನ್ನು ರವಾನಿಸುವಂತೆ ಕರ್ನಾಟಕದ ಅರಣ್ಯ ಇಲಾಖೆಗೆ ಆಂಧ್ರಪ್ರದೇಶದ ಅರಣ್ಯ ಇಲಾಖೆ ಪತ್ರ ಬರೆದಿತ್ತು.

ಈ ಸಂಬಂಧ ರಾಜ್ಯ ಅರಣ್ಯ ಇಲಾಖೆ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ತಟಸ್ಥವಾಗಿತ್ತು. ಇಂತಹ ಸಂದರ್ಭದಲ್ಲಿಯೇ ಹಾಸನದಲ್ಲಿ ನಡೆದ ಆನೆ ಸೆರೆ ಕಾರ್ಯಾಚರಣೆ ವೇಳೆಯಲ್ಲಿ ಅರ್ಜುನ ಆನೆಯು ಮೃತಪಟ್ಟಿತು. ಕಾಡಾನೆಗಳ ಉಪಟಳದ ಬಗ್ಗೆ ಈ ಸಂದರ್ಭ ವನ್ನೇ ಅಸ್ತ್ರವಾಗಿ ಬಳಸಿಕೊಂಡ ಆಂಧ್ರಪ್ರದೇಶ ಅರಣ್ಯ ಇಲಾಖೆಯು 22 ಆನೆಗಳ ಬದಲಿಗೆ 8 ಆನೆಗಳನ್ನು ನೀಡುವಂತೆ ಮತ್ತೆ ಮನವಿ ಸಲ್ಲಿಸಿತು. ಇದೀಗ ರಾಜ್ಯ ಅರಣ್ಯ ಇಲಾಖೆ ಮತ್ತಿಗೋಡು ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಆನೆ ಕ್ಯಾಂಪ್‌ ಅಧಿಕಾರಿಗಳಿಗೆ ಪತ್ರ ಬರೆದು ವರದಿ ನೀಡುವಂತೆ ಸೂಚಿಸಿದೆ. ಈ ವರದಿ ಆಧಾರದ ಮೇಲೆ ಆನೆಗಳನ್ನು ನೀಡಬೇಕೋ, ಬೇಡವೋ ಎಂಬ ನಿರ್ಧಾರಕ್ಕೆ ಬರಲು ತೀರ್ಮಾನಿಸಲಿದೆ.

ನಾಗರಹೊಳೆ ಹುಲಿ ಸಂರಕಿತ ಪ್ರದೇಶ ವ್ಯಾಪ್ತಿಯ ಆನೆಗಳ ಸಂಖ್ಯೆ: ದುಬಾರೆ ಆನೆ ಶಿಬಿರದಲ್ಲಿ ಎರಡು ಹೆಣ್ಣಾನೆಗಳು ಸೇರಿದಂತೆ ಒಟ್ಟು 32 ಆನೆಗಳಿವೆ. ಮತ್ತಿಗೋಡು ಶಿಬಿರದಲ್ಲಿ 15 ಆನೆಗಳಿವೆ. ಸಾಕಷ್ಟು ಆನೆಗಳಿಗೆ ವಯಸ್ಸಾಗುತ್ತಿದೆ. ಸಾವಿನ ಪ್ರಮಾಣವೂ ಹೆಚ್ಚುತ್ತಿದೆ. ಜತೆಗೆ ರಾಜ್ಯದ ವಿವಿಧೆಡೆ ಕಾಡಾನೆಗಳ ದಾಂದಲೆ ಹೆಚ್ಚಿದೆ. ದಸರಾ ಮಹೋತ್ಸವಕ್ಕೆ ಭವಿಷ್ಯದ ಆನೆಗಳನ್ನು ತಯಾರು ಮಾಡಬೇಕಿದೆ. ಇದೆಲ್ಲದರ ನಡುವೆ ನಮ್ಮ ರಾಜ್ಯದಲ್ಲಿ ಪಳಗಿಸಿರುವ ಆನೆಗಳನ್ನು ನೆರೆ ರಾಜ್ಯಕ್ಕೆ ಕೊಡುವುದು ಎಷ್ಟು ಸರಿ ಎಂದು ವನ್ಯಜೀವಿ ಪ್ರಿಯರು ಪ್ರಶ್ನಿಸುತ್ತಾರೆ.

ಕೋಟ್ಸ್‌))

ಕಳೆದ 3 ವರ್ಷಗಳಲ್ಲಿ ನಮ್ಮಲ್ಲಿ ಪಳಗಿಸಿರುವ ಒಟ್ಟು 57 ಆನೆಗಳನ್ನು ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಿಗೆ ನೀಡಲಾಗಿದೆ. ಆಂಧ್ರಪ್ರದೇಶದಲ್ಲೇ ಸಾಕಷ್ಟು ಆನೆಗಳಿದ್ದು, ಅಧಿಕಾರಿಗಳು ಅವುಗಳನ್ನೇ ಪಳಗಿಸಬೇಕಿದೆ. ತಮಿಳುನಾಡು, ಕೇರಳ ರಾಜ್ಯದಿಂದ ಆನೆಗಳನ್ನು ಕೇಳುತ್ತಿಲ್ಲ. ನಮ್ಮಲ್ಲಿ ಪಳಗಿಸಿದ ಆನೆಗಳನ್ನು ನೆರೆಯ ರಾಜ್ಯಕ್ಕೆ ಕೊಡುವುದು ಎಷ್ಟು ಸರಿ.
-ಜೋಸೆಫ್ ಹೂವರ್‌, ಪರಿಸರವಾದಿ

ಅಹರ್ತೆಯುಳ್ಳ ಉತ್ತಮವಾದ ದಸರಾ ಆನೆಗಳನ್ನು ಆಂಧ್ರ ಪ್ರದೇಶಕ್ಕೆ ನೀಡಲು ಸಾಧ್ಯವಿಲ್ಲ. ಈಗಾಗಲೇ ಅವರು ಕೇಳಿರುವ ಆನೆಗಳನ್ನು ಕಾರ್ಯಾಚರಣೆಗೆ ಬಳಸಿದ್ದು ಜೊತೆಗೆ ಪ್ರಸ್ತುತ ಆನೆ ಸ್ಥಿತಿ ಗತಿ ಬಗ್ಗೆ ಮೇಲಧಿಕಾರಿ ಗಮನಕ್ಕೆ ತರುತ್ತೇನೆ. ಆಂಧ್ರಪ್ರದೇಶಕ್ಕೆ ಆನೆಗಳನ್ನು ನೀಡುವ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ.
-ಹರ್ಷಕುಮಾರ್ ಚಿಕ್ಕನರಗುಂದ, ಡಿಸಿಎಫ್, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ