Mysore
20
broken clouds

Social Media

ಬುಧವಾರ, 13 ನವೆಂಬರ್ 2024
Light
Dark

ನಿರ್ವಹಣೆ ಇಲ್ಲದ ಶೌಚಾಲಯ; ಇಲ್ಲಿ ಬಯಲೇ ಮೂತ್ರಾಲಯ

ವಾಣಿವಿಲಾಸ ಮಾರುಕಟ್ಟೆ ಒಳಗಿನ ಶೌಚಾಲಯದ ದುಸ್ಥಿತಿ; ಬಹುತೇಕ ಶೌಚಾಲಯಗಳಲ್ಲೂ ಇದೇ ಸ್ಥಿತಿ
ಹೆಚ್. ಎಸ್. ದಿನೇಶ್ ಕುಮಾರ್

ಮೈಸೂರು: ದೇಶದ ಸ್ವಚ್ಛನಗರಿ ಎಂಬ ಕೀರ್ತಿಗೆ ಪಾತ್ರವಾಗಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿಗೂ ಬಯಲು ಮೂತ್ರ ವಿಸರ್ಜನೆ ತಪ್ಪಿಲ್ಲ. ಇದರಿಂದ ಸಾರ್ವಜನಿಕರಿಗೆ ಮುಜುಗರ ತಪ್ಪಿದ್ದಲ್ಲ.

ಬಯಲು ಮಲ-ಮೂತ್ರ ವಿಸರ್ಜನೆ ತಪ್ಪಿಸಿ, ನಗರದ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ನಗರದ ವಿವಿಧೆಡೆ ಸಾರ್ವ ಜನಿಕರ ಉಪಯೋಗಕ್ಕಾಗಿ ನಗರಪಾಲಿಕೆ ವತಿಯಿಂದ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆಯಾದರೂ ಸಮರ್ಪಕ ನಿರ್ವಹಣೆ ಕೊರತೆ ಯಿಂದಾಗಿ ಅವು ನಿರುಪಯುಕ್ತ ವಾಗಿವೆ. ಇದರಿಂದಾಗಿ ಸಾರ್ವ ಜನಿಕರು ಶೌಚಾಲಯಗಳ ಮುಂಭಾಗದ ಬಯಲಿನಲ್ಲಿಯೇ ಮೂತ್ರ ವಿಸರ್ಜನೆ ಮಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿರಿಯ ನಾಗರಿಕರು, ಮಧುಮೇಹಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳ ಅಗತ್ಯ ಹೆಚ್ಚಿದೆ. ಇದನ್ನು ಮನ ಗಂಡ ಪಾಲಿಕೆಯು ನಗರದ ಮಾರುಕಟ್ಟೆ, ಉದ್ಯಾನ ಮುಂತಾದ ಸಾರ್ವ ಜನಿಕ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿದೆ. ಇವುಗಳಲ್ಲಿ ಕೆಲ ಶೌಚಾಲಯಗಳ ನಿರ್ವಹಣೆಯನ್ನು ಟೆಂಡರ್ ಮೂಲಕ ಖಾಸಗಿಯವರಿಗೆ ವಹಿಸಲಾಗಿದೆ. ಉಳಿದವು ಗಳನ್ನು ಪಾಲಿಕೆ ನಿರ್ವಹಣೆ ಮಾಡುತ್ತಿದೆ. ಆದರೆ, ವಾಸ್ತವವೇ ಬೇರೆ.

ಇದಕ್ಕೆ ತಾಜಾ ಉದಾಹರಣೆ ನಗರದ ವಾಣಿವಿಲಾಸ ಮಾರುಕಟ್ಟೆ. ಇಲ್ಲಿ ಕೆಲ ವರ್ಷಗಳ ಹಿಂದೆ ಸಾರ್ವಜನಿಕರ ಉಪಯೋಗಕ್ಕಾಗಿ ‘ಹಣ ಕೊಟ್ಟು ಉಪಯೋಗಿಸು’ ಆಧಾರದ ಮೇಲೆ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆ.

ಆರಂಭದ ಕೆಲ ತಿಂಗಳು ಗುತ್ತಿಗೆದಾರರ ಕಡೆಯವರು ಅದನ್ನು ನಿರ್ವಹಣೆ ಮಾಡಿದ್ದಾರೆ. ನಂತರ ನಷ್ಟ ಉಂಟಾಯಿತು ಎಂದು ನಿರ್ವಹಣೆಯನ್ನು ಕೈಬಿಡ ಲಾಗಿದೆ. ಬಳಿಕ ಜನರು ಬೇಕಾಬಿಟ್ಟಿ ಉಪಯೋಗಿಸಿದ ಕಾರಣ ಶೌಚಾಲಯ ಹಾಳಾಗಿದೆ.

ದುರ್ವಾಸನೆ ಬೀರುತ್ತಿದ್ದ ಕಾರಣ ಇದೀಗ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ಆದರೆ, ಮಾರುಕಟ್ಟೆಗೆ ಬರುವ ಜನರು ಮಾತ್ರ ಶೌಚಾಲಯದ ಹೊರಭಾಗದಲ್ಲಿಯೇ ಮೂತ್ರ ವಿಸರ್ಜನೆ ಮಾಡಿ ಶೌಚಾಲಯದ ಆವರಣವನ್ನು ಹಾಳುಗೆಡವಿದ್ದಾರೆ. ಈ ಸಂಬಂಧ ವ್ಯಾಪಾರಸ್ಥರು ನಗರಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ನಗರದ ಅಪೋಲೋ ಆಸ್ಪತ್ರೆ ಎದುರಿನ ಶೌಚಾಲಯದ ಸ್ಥಿತಿಯನ್ನು ಹೇಳುವಂತೆಯೇ ಇಲ್ಲ.

ಅಲ್ಲಿನ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಈ ದುರ್ನಾತ ತಾಳಲಾರದೆ ಸಾರ್ವಜನಿಕರು ಆ ರಸ್ತೆಯಲ್ಲಿ ಓಡಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಇನ್ನು ವಿವೇಕಾನಂದನಗರ ಉದ್ಯಾನವನ, ಕೃಷ್ಣಮೂರ್ತಿಪುರಂ ಸೇರಿದಂತೆ ನಗರದ ವಿವಿಧ ಉದ್ಯಾನಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣ ಮಾಡಲಾಗಿರುವ ಶೌಚಾಲಯಗಳ ಸ್ಥಿತಿಯೂ ಹೀಗೆಯೇ ಇದೆ. ಈಗಲಾದರೂ ನಗರಪಾಲಿಕೆ ಅಽಕಾರಿಗಳು ಎಚ್ಚೆತ್ತುಕೊಂಡು ಆಗಿರುವ ತಪ್ಪನ್ನು ಸರಿಪಡಿಸಬೇಕಿದೆ.

ಶೌಚಾಲಯಗಳ ಅಸಮರ್ಪಕ ನಿರ್ವಹಣೆ ಬಗ್ಗೆ ನನಗೂ ಮಾಹಿತಿ ಬಂದಿದೆ. ಅಶುಚಿತ್ವದಿಂದ ಕೂಡಿರುವ ಶೌಚಾಲಯಗಳ ಸ್ವಚ್ಛತೆಗೆ ಮೊದಲು ಗಮನಹರಿಸಲಾಗುವುದು. ನಂತರ ಅವುಗಳನ್ನು ದುರಸ್ತಿಗೊಳಿಸಿ ನಿರ್ವಹಣೆಗೆ ಸಿಬ್ಬಂದಿ ನೇಮಕ ಅಥವಾ ಗುತ್ತಿಗೆಗೆ ನೀಡಲು ತೀರ್ಮಾನಿಸಲಾಗುವುದು.
ಅಶಾದ್ ಉರ್ ರೆಹಮಾನ್ ಷರೀಫ್, ಆಯುಕ್ತರು, ನಗರಪಾಲಿಕೆ

ನಗರಪಾಲಿಕೆ ವತಿಯಿಂದ ಶೌಚಾಲಯಗಳನ್ನು ನಿರ್ಮಾಣ ಮಾಡುವುದು ಸ್ವಾಗತಾರ್ಹ. ಆದರೆ, ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನೂ ಅವರೇ ಹೊರಬೇಕು. ಇಲ್ಲವಾದಲ್ಲಿ ಅವು ಹಾಳಾಗುತ್ತವೆ. ಇದರಿಂದ ತೆರಿಗೆ ಹಣ ವ್ಯರ್ಥ ಎಂಬುದಕ್ಕೆ ಅಪೋಲೋ ಆಸ್ಪತ್ರೆ ಬಳಿ ಇರುವ ಶೌಚಾಲಯವೇ ಸಾಕ್ಷಿಯಾಗಿದೆ.
ರಾಘವೇಂದ್ರ, ಜಯನಗರ ನಿವಾಸಿ

ಇತೀಚೆಗೆ ಅನೇಕ ಉದ್ಯಾನಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ವಾಯುವಿಹಾರಿಗಳಿಗೆ ಇದರಿಂದ ಅನುಕೂಲವಾಗುತ್ತದೆ. ಆದರೆ, ಸೂಕ್ತ ನಿರ್ವಹಣೆ ಇಲ್ಲದ ಕಾರಣ ಅವು ಹಾಳಾಗಿವೆ. ಕೆಲವೆಡೆ ಬೀಗ ಜಡಿಯಲಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಅವುಗಳ ಸದ್ಬಳಕೆ ಆಗದಿದ್ದಲ್ಲಿ ಪ್ರಯೋಜನವೇನು?

ಬಾಲಕೃಷ್ಣ, ದೇವರಾಜ ಮೊಹಲ್ಲಾ ನಿವಾಸಿ

 

Tags: