Mysore
20
overcast clouds
Light
Dark

ಅಮೆರಿಕನ್ನಡತಿ ತರುಣಿಯ ಮೈಸೂರು ಪ್ರೀತಿ

• ಕೀರ್ತಿ ಬೈಂದೂರು

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಹನ್ನೆರಡನೆಯ ತರಗತಿ ಮುಗಿಸಿದ ಸೃಷ್ಟಿ ಬಾಟ್ಲಿ ಗ್ರಾಜ್ಯುಯೇಷನ್‌ ದಿನದ ಸಂಭ್ರಮವನ್ನು ಸವಿದು, ಮೈಸೂರಿಗೆ ಬಂದಿದ್ದಳು. ಪ್ರತೀ ವರ್ಷಕ್ಕೊಮ್ಮೆ ತನ್ನೂರನ್ನು ನೋಡಲು ಸೃಷ್ಟಿ ಬರುತ್ತಾಳೆ. ಪುಟ್ಟ ಮಗುವಾಗಿದ್ದಾಗ ಸೃಷ್ಟಿಯ ಕಾಲು ಸಂಗೀತಕ್ಕೆ ಸ್ಪಂದಿಸಿ, ಹೆಜ್ಜೆ ಇಡುತ್ತಿತ್ತು. ತಂದೆ ತಾಯಿ ಇಬ್ಬರೂ ಇದನ್ನು ಗಮನಿಸಿ, ಭರತನಾಟ್ಯ ಕಲಿಸೋಣವೆಂದು ತೀರ್ಮಾನಿಸಿದ್ದೇನೋ ಹೌದು. ಅಪ್ಪಟ ದಕ್ಷಿಣ ಭಾರತ ಶೈಲಿಯ ಭರತನಾಟ್ಯವನ್ನು ಮಗಳಿಗೆ ಕಲಿಸಬೇಕೆಂಬ ಹಂಬಲದಲ್ಲಿದ್ದವರಿಗೆ ಮೈಸೂರು ಮೂಲದ ಶ್ರೀಮತಿ ಚಂದನಾ ಹರಿ ಚರಣ್‌ ಅವರೇ ಗುರುವಾಗಿ ಸಿಕ್ಕರು. ಸೃಷ್ಟಿಯೇ ಇವರ ಮೊದಲ ವಿದ್ಯಾರ್ಥಿನಿ. ಆರನೇ ವಯಸ್ಸಿನಲ್ಲಿ ಭರತನಾಟ್ಯ ತರಗತಿ ಸೇರಿದ ಸೃಷ್ಟಿ ಹನ್ನೆರೆಡು ವರ್ಷಗಳವರೆಗೆ ನಿರಂತರ ಅಭ್ಯಾಸ ಮಾಡಿ, ಈ ಜೂನ್‌ನಲ್ಲಿ ರಂಗಪ್ರವೇಶ ಮಾಡಿದಳು. ಶಾಸ್ತ್ರೀಯ ಶೈಲಿಯ ಇವಳ ನೃತ್ಯ ಪ್ರಸ್ತುತಿಯನ್ನು ಅನೇಕರು ಮೆಚ್ಚಿ, ಪ್ರಶಂಸಿಸಿದ್ದಾರೆ.

ಮಗಳಿಗೆ ನ್ಯೂರೋ ಸೈನ್ಸ್ ಮತ್ತು ಜೀವಶಾಸ್ತ್ರ ವಿಷಯದ ಅಧ್ಯಯನಕ್ಕೆ ತನ್ನನ್ನು ತೊಡಗಿಸಿಕೊಳ್ಳಬೇಕೆಂದು ಕನಸು ಕಟ್ಟುತ್ತಿರುವ ಸೃಷ್ಟಿ, ಕಲೆಯ ಒಡನಾಟವನ್ನು ಮಾತ್ರ ಬಾಲ್ಯದಿಂದಲೂ ಹೊಂದಿದ್ದಳು. ಏಳನೇ ತರಗತಿಯಲ್ಲಿರುವಾಗ ಶಾಲೆಯಲ್ಲಿ ನಾಟಕವನ್ನೊಮ್ಮೆ ನೋಡಿದ್ದಳು. ಅದು ಈಕೆಯನ್ನು ಎಷ್ಟು ಆವರಿಸಿತೆಂದರೆ ನಾಟಕ ಮಾಡುವುದಷ್ಟೇ ಅಲ್ಲ, ಚಿತ್ರಕಥೆ, ಸಂಭಾಷಣೆ ಬರೆಯುವ ಮಟ್ಟಿಗೆ ಪ್ರಭಾವಿಸಿತು. ಅಮೆರಿಕಾದಲ್ಲಿ ಸೃಷ್ಟಿ ಓದುತ್ತಿರುವ ಶಾಲೆಯಲ್ಲಿ ಆಸಕ್ತಿ ಇರುವವರೆಲ್ಲ ನಾಟಕ ಮಾಡಬಹುದು. ವರ್ಷಕ್ಕೆ ಪ್ರದರ್ಶನಗೊಳ್ಳುವ ಎರಡು ನಾಟಕಗಳಲ್ಲಿ ಗೀತ ನಾಟಕ ಮಾತ್ರ ಇದ್ದೇ ಇರುತ್ತದೆ.

ನಾನಲ್ಲದ ಇನ್ನೊಂದು ಪಾತ್ರವಾಗಿ ರಂಗವೇರುವ ಪ್ರತೀಕ್ಷಣವೂ ಸೃಷ್ಟಿಗೆ ಹೊಸದೆನಿಸುತ್ತದೆ. ಭರತನಾಟ್ಯ, ರಂಗಭೂಮಿ ಎಂದರೆ ತನಗೆ ಖುಷಿ ಎನ್ನುತ್ತಾ, ತನ್ನ ಮುಖ್ಯ ವಿಷಯದ ಜೊತೆಗೆ ನಾಟಕವನ್ನೂ ಅಭ್ಯಾಸ ಮಾಡುತ್ತೇನೆಂದು ಹೇಳುವಾಗ ಅಚ್ಚ ಹಸುರಿನ ಈ ಸೃಷ್ಟಿ ತನ್ನ ಹೂ ನಗುವನ್ನು ಬೀರುತ್ತಲಿತ್ತು. ಅಮೆರಿಕಾದಲ್ಲಿ ಇವಳ ದಿನಚರಿ ಹೇಗಿರುತ್ತದೆಂದು ಕುತೂಹಲಕ್ಕೆ ಕೇಳಿದೆ. ಬೆಳಿಗ್ಗೆ ಎಂಟು ಗಂಟೆಗೆ ಶಾಲೆಗೆ ಹೋದರೆ, ಮೂರು ಗಂಟೆಗೆ ಪಾಠ ಮುಗಿಯುತ್ತದೆ. ನಾಟಕ ನಿರ್ಮಾಣ ಕೆಲಸಗಳೇನಾದರೂ ಇದ್ದರೆ, ಮುಗಿಯುವಾಗ ಸಂಜೆ ಏಳರ ಹೊತ್ತಾದರೂ ಆದೀತು. ಭರತನಾಟ್ಯ ರಂಗಪ್ರವೇಶದ ಸಮಯದಲ್ಲಿ ಮಾತ್ರ ರಂಗಭೂಮಿಗೆ ತುಸು ವಿರಾಮ ನೀಡಿ, ಮಧ್ಯಾಹ್ನ ಮೂರು ಗಂಟೆಯಿಂದ ರಾತ್ರಿ ಹತ್ತರವರೆಗೂ ಅಭ್ಯಾಸ ನಡೆಸಿದ್ದಾಳೆ. ಇದೆಲ್ಲದರ ನಡುವೆ ‘ಹೋಮ್ ವರ್ಕ್ ಮಾಡಿಕೊಳ್ಳುತ್ತೀಯಾ ಎಂದು ಸಹಜವಾಗೇ ಕೇಳಿದೆ. ತರಗತಿಯಲ್ಲಿ ತಿಂಡಿ, ಊಟಕ್ಕೆಂದು ಬಿಡುವಿದ್ದಾಗೆಲ್ಲ ಹೋಮ್ ವರ್ಕ್ ಬರೆದಿಡುತ್ತೇನೆ. ಆಗದಿದ್ದಾಗ ಬೆಳಿಗ್ಗೆ ಬೇಗನೆ ಎದ್ದು ಬರೆದ ಘಟನೆಗಳೂ ಇವೆಯೆಂದು ತನ್ನ ಫಜೀತಿಯನ್ನು ನಗುತ್ತಲೇ ಹೇಳುತ್ತಾಳೆ.

ಮಾತಿನ ಮಧ್ಯೆ ಸೃಷ್ಟಿ ಶಿಕ್ಷಣ ವ್ಯವಸ್ಥೆಯಲ್ಲಿರುವ ಅಚ್ಚರಿಯ ಸಂಗತಿಯೊಂದನ್ನು ಹಂಚಿಕೊಂಡಳು. ಹನ್ನೆರಡನೇ ತರಗತಿ ಮುಗಿದ ಮೇಲೆ ಅಲ್ಲಿನ ವಿದ್ಯಾರ್ಥಿಗಳು ಮೂವತ್ತೊ ನಲವತ್ತೋ ಪ್ರಬಂಧಗಳನ್ನು ಬರೆದು, ಕನಿಷ್ಠ ಹದಿನೈದು ಕಾಲೇಜುಗಳಿಗೆ ನೀಡಬೇಕು. ಕೆಲವು ಕಾಲೇಜು ಎರಡು ಪ್ರಬಂಧ ಸಾಕೆಂದರೆ ಇನ್ನೂ ಕೆಲವು ಕಾಲೇಜುಗಳಿಗೆ ಹತ್ತು ಹನ್ನೆರಡು ಪ್ರಬಂಧಗಳನ್ನು ಸಲ್ಲಿಸಬೇಕಾಗಿರುತ್ತದೆ. ನಿಮ್ಮ ಬಗ್ಗೆ ಹೇಳಿ, ನೀವು ಈ ಕಾಲೇಜನ್ನು ಆಯ್ಕೆ ಮಾಡಿಕೊಂಡ ಕಾರಣಗಳು ಸೇರಿದಂತೆ ಆಯಾ ಕಾಲೇಜು ನೀಡುವ ವಿಷಯದ ಮೇಲೆ ನಿರ್ದಿಷ್ಟ ಪದಮಿತಿಯಲ್ಲಿ ಪ್ರಬಂಧ ಬರೆದಿರಬೇಕು.

ಅಮೆರಿಕಾದಲ್ಲಿ ಹೆಚ್ಚಿನ ಅಂಕ ಪಡೆದ ಕಾರಣಕ್ಕೆ ಇಷ್ಟಪಟ್ಟ ಕಾಲೇಜಲ್ಲಿ ಪ್ರವೇಶಾತಿ ಸಿಗುವುದಿಲ್ಲ. ಪಠ್ಯೇತರ ವಿಷಯಗಳಲ್ಲೂ ಉತ್ತಮ ಫಲಿತಾಂಶ ಹೊಂದಿದ್ದು, ಸಲ್ಲಿಸಿದ ಪ್ರಬಂಧ ತೃಪ್ತಿಕರವಾಗಿದ್ದರಷ್ಟೇ ಆ ವಿದ್ಯಾರ್ಥಿಯನ್ನು ಕಾಲೇಜಿಗೆ ದಾಖಲು ಮಾಡಿಕೊಳ್ಳುತ್ತದೆ. ಅಂಕವೂ ಅಗತ್ಯ. ಆದರೆ, ಅದೇ ಪ್ರಧಾನ ಅಲ್ಲವೆಂದು ಹೇಳುವಾಗ ನಮ್ಮ ಶಿಕ್ಷಣ ವ್ಯವಸ್ಥೆ ಕಣ್ಣಮುಂದೆ ಸುಳಿದಾಡಿತು!

ಈಕೆ ಇರುವ ಜಾಗದಲ್ಲಿ ಅನೇಕ ಕನ್ನಡ ಕುಟುಂಬಗಳಿವೆ. ಅಲ್ಲಿನ ಎಲ್ಲಾ ಹಬ್ಬ, ಆಚರಣೆಗಳಿಗೂ ಜೊತೆಯಾಗುತ್ತಾರೆ. ಅಲ್ಲಿಯೆ ʼಕನ್ನಡ ಕಲಿʼ ತರಗತಿಗಳಿಗೆ ಪ್ರತೀ ಶನಿವಾರವೂ ತಪ್ಪದೇ ಹೋಗಿ, ಕನ್ನಡದ ನಂಟು ಬಿಡದಂತೆ ಕಾಪಿಡುತ್ತಿದ್ದಾಳೆ. ತಾಯಿ ದೀಪಾ ಅವರೂ ಕೂಡಾ ಈ ತರಗತಿಯ ಅಧ್ಯಾಪಕರಲ್ಲೊಬ್ಬರು. ಸೃಷ್ಟಿ ಈಗ ಅದೇ ತರಗತಿಯ ಮೂಲಕ ತನ್ನ ಕಿರಿಯರಿಗೆ ಕನ್ನಡವನ್ನು ಕಲಿಸುತ್ತಿದ್ದಾಳೆ.

ಮೈಸೂರಿನ ಪರಿಸರವೇ ಸೃಷ್ಟಿಗೆ ಬಹಳ ಇಷ್ಟ ಸೊಪ್ಪು, ತರಕಾರಿ ತರುವುದಕ್ಕೆಂದು ಮನೆಯವ ರೊಂದಿಗೆ ಹೋಗುವುದು, ಅಕ್ಕಪಕ್ಕದವರೊಂದಿಗೆ ಮಾತಾಡುವುದು, ವಿಶೇಷ ದಿನಗಳಿಗೆ ಜೊತೆಯಾಗುವುದು ಹೀಗೆ ಜನರೊಂದಿಗೆ ಬೆರೆತು, ಬಾಂಧವ್ಯ ಬೆಳೆಸಿಕೊಳ್ಳುವುದು ಮೈಸೂರಿನಲ್ಲಿ ಮಾತ್ರ ಸಾಧ್ಯ ಎನ್ನುವಲ್ಲಿ ತನ್ನೂರ ಪ್ರೀತಿಯನ್ನು ಕಾಣಿಸುತ್ತಾಳೆ.
keerthisba2018@gmail.com