Mysore
21
mist

Social Media

ಬುಧವಾರ, 14 ಜನವರಿ 2026
Light
Dark

ಮಾರಣಾಂತಿಕ ಕಾಯಿಲೆಯ ಮಹಿಳೆಗೂ ಸಾಲದ ಶೂಲ

 

  • ಪತಿ ಕಳೆದುಕೊಂಡು, ಮಕ್ಕಳಿಂದಲೂ ದೂರವಾಗಿರುವ ಏಕಾಂಗಿ ಮಹಿಳೆ ದೇವಮ್ಮ
  • ಜೀವನ ನಿರ್ವಹಣೆಗಾಗಿ ಇದ್ದ ಅಂಗಡಿಯನ್ನೂ ಮುಚ್ಚಿ ಅತಂತ್ರ ಸ್ಥಿತಿ 
  • ವೃದ್ಧಾಪ್ಯ ವೇತನವೂ ಸಾಲದ ಪಾಲು ? ಸಾಲದ ಭಯದಿಂದ ಊರು ತೊರೆದಿದ್ದ ಮಹಿಳೆ

ಪ್ರಸಾದ್ ಲಕ್ಕೂರು

ಚಾಮರಾಜನಗರ: ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿರುವ ಏಕಾಂಗಿ ಮಹಿಳೆ, ಪಡೆದ ೧ ಲಕ್ಷ ರೂ. ಸಾಲದಲ್ಲಿ ೪೦ ಸಾವಿರ ವಾಪಸ್ ಮಾಡಿದ್ದಾರೆ! ಸಾಲ ವಸೂಲಿಗಾರರು ಅವರ ಕಾಯಿಲೆಯನ್ನೂ ಲೆಕ್ಕಿಸದೆ ಮರುಪಾವತಿಸುವಂತೆ ಪೀಡಿಸುತ್ತಿದ್ದಾರೆ. ಇದು ನಗರದ ರಾಮಸಮುದ್ರ ಬಡಾವಣೆಯ ದೇವಮ್ಮ ಅವರ ಕರುಣಾಜನಕ ಕಥೆ.

ದೇವಮ್ಮ ಅವರ ಪತಿ ರಂಗಶೆಟ್ಟಿ ೩ ತಿಂಗಳ ಹಿಂದೆಯಷ್ಟೆ ನಿಧನರಾಗಿದ್ದಾರೆ. ಇವರು ಮಕ್ಕಳಿಂದಲೂ ದೂರವಿದ್ದು, ಏಕಾಂಗಿ ಜೀವನ ನಡೆಸುತ್ತಿ ದ್ದರೂ ಸಾಲದ ಬಾಧೆಯಿಂದ ನರ ಳುತ್ತಿದ್ದಾರೆ. ಕಳೆದ ೫ ವರ್ಷಗಳಿಂದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಒಬ್ಬ ಮಗ ಅನಾರೋಗ್ಯಕ್ಕೆ ಈಡಾಗಿದ್ದಾರೆ. ಮತ್ತೊಬ್ಬ ಮಗ, ತಮ್ಮ ಸಂಸಾರ ಸಾಕಿಕೊಂಡು ಹೋಗುತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿದ್ದು ಅವರವರ ಕುಟುಂಬದೊಡನೆ ಇದ್ದಾರೆ. ಹಾಗಾಗಿ ದೇವಮ್ಮ ಏಕಾಂಗಿಯಾಗಿದ್ದಾರೆ.

ದೇವಮ್ಮ ಸಣ ಚಿಲ್ಲರೆ ಅಂಗಡಿ ನಡೆಸಿಕೊಂಡು ಜೀವನ ನಡೆಸುತ್ತಿದ್ದರು. ೧೨ ವರ್ಷಗಳ ಹಿಂದೆ ಹಣ ಕಾಸು ಸಂಸ್ಥೆಯೊಂದರಿಂದ ೧ ಲಕ್ಷ ರೂ. ಸಾಲ ಪಡೆದಿ ದ್ದರು. ೪೦ ಸಾವಿರ ರೂ. ಗಳನ್ನು ಕಂತಿನ ರೂಪದಲ್ಲಿ ಮರುಪಾವತಿಸಿದ್ದಾರೆ. ಈಗ ೭೨ ಸಾವಿರ ರೂ. ಪಾವತಿಸ ಬೇಕು ಎಂದು ಹಣಕಾಸು ಸಿಬ್ಬಂದಿ ಹೇಳುತ್ತಿದ್ದಾರೆ ಎಂಬುದಾಗಿ ದೇವಮ್ಮ ಅಲವತ್ತುಕೊಳ್ಳುತ್ತಾರೆ.

ನಾನು ಕಾಯಿಲೆ ಪೀಡಿತಳಾಗಿದ್ದು, ಏಕಾಂಗಿ ಮಹಿಳೆ ಯಾಗಿದ್ದೇನೆ. ಹೇಗೆ ಸಾಲ ತೀರಿಸುವುದು? ಇನ್ನೆರಡು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿದ್ದೇನೆ. ಪತಿ, ಮಕ್ಕಳು ನನ್ನ ಜೊತೆಯಿಲ್ಲ. ಅನಾರೋಗ್ಯದಿಂದ ಯಾವುದೇ ಸಂಪಾದನೆ ಮಾಡುವುದಕ್ಕೂ ಆಗುತ್ತಿಲ್ಲ. ಆದರೂ ಫೈನಾನ್ಸ್ ಸಿಬ್ಬಂದಿ ಸಾಲದ ಕಂತು ಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಪತ್ರಿಕೆಯ ಎದುರು ನೋವನ್ನು ಬಿಚ್ಚಿಟ್ಟರು.

ನನ್ನ ಪತಿ ರಂಗಶೆಟ್ಟಿ ನಿಧನರಾದ ಬಳಿಕ ಮೈಸೂರಿ ನಲ್ಲಿರುವ ನನ್ನ ಮಗಳ ಮನೆಯನ್ನು ಸೇರಿಕೊಂಡಿದ್ದೆ. ಕೆಲ ದಿನಗಳ ನಂತರ ಮತ್ತೆ ರಾಮಸಮುದ್ರ ಬಡಾವಣೆ ಯಲ್ಲಿರುವ ನನ್ನ ಮನೆಗೆ ವಾಪಸ್ ಬಂದಾಗ ಸಾಲ ತೀರಿಸುವಂತೆ ಸಂಸ್ಥೆಗಳ ಸಿಬ್ಬಂದಿ ನನ್ನ ಬೆನ್ನು ಬಿದ್ದಿದ್ದಾರೆ ಎಂದು ಅವರು ಕಣ್ಣೀರಿಟ್ಟರು.

ನನ್ನ ಪತಿ ಹೇರ್‌ಕಟಿಂಗ್ ಸೆಲೂನ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಾನು ಅಂಗಡಿ ನಡೆಸುತ್ತಿದ್ದೆ. ಆಗ ಹೇಗಾದರೂ ಹಣ ಹೊಂದಿಸಿ ಸಾಲದ ಕಂತುಗಳನ್ನು ಪಾವತಿಸುತ್ತಿದ್ದೆ. ಈಗಂತೂ ನನಗೆ ಬರುವ ವೃದ್ಧಾಪ್ಯ ವೇತನವೂ ಸಾಲದ ಪಾಲಾಗುತ್ತಿದೆ. ಅಂಗಡಿ ವ್ಯವಹಾರವನ್ನು ನಡೆಸಲಾಗದೆ ಬಾಗಿಲು ಮುಚ್ಚಿದ್ದೇನೆ. ಸಾಲ ಮರು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಗದ್ಗದಿತರಾದರು.

ನಾನು ಕಾಯಿಲೆ ಬಿದ್ದಿದ್ದೇನೆ. ಯಾವುದೇ ಮೂಲ ದಿಂದಲೂ ವರಮಾನ ಬರುತ್ತಿಲ್ಲ. ಸಾಲ ಮರುಪಾವತಿ ಸಾಧ್ಯವಿಲ್ಲ ಎಂದು ಹಣಕಾಸು ಸಂಸ್ಥೆಗಳ ಸಿಬ್ಬಂದಿ ಗಮನಕ್ಕೆ ತಂದು ಗೋಗರೆದರೂ, ‘ನಮಗೆ ಆ ಕಾರಣಗಳು ಬೇಕಿಲ್ಲ. ಸಾಲ ಮರು ಪಾವತಿಸಿ’ ಎಂದು ಪೀಡಿಸುತ್ತಾರೆ. ಕೆಲವೊಮ್ಮೆ ನಿಂದಿಸಿಯೂ ಇದ್ದಾರೆ ಎಂದು ದೇವಮ್ಮ ಫೈನಾನ್ಸ್ ಸಂಸ್ಥೆಗಳ ಕರಾಳತೆಯ ವಿರುದ್ಧ ಅಸಹನೆಯಿಂದ ನುಡಿದರು.

 

‘ಪುನಃ ಅಂಗಡಿ ತೆರೆಯಲು ದೇವಮ್ಮಗೆ ಸಹಾಯ
ನಮ್ಮ ನೀತಿ ತಂಡ ಖಾಸಗಿ ಕಿರು ಹಣಕಾಸು ಸಂಸ್ಥೆಗಳ ಕಿರುಕುಳದ ವಿರುದ್ದ ಹೋರಾಟ ನಡೆಸುತ್ತಿದೆ. ದೇವಮ್ಮ ಮೈಸೂರಿನಲ್ಲಿ ಮಗಳ ಮನೆಯಲ್ಲಿದ್ದಾಗ ಅವರು ಸಾಲದ ಸುಳಿಗೆ ಸಿಲುಕಿರುವುದು ಗೊತ್ತಾಯಿತು. ಅವರ ಕಡೆಯಿಂದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಕೊಡಿಸಿದ್ದೇವೆ. ಮುಚ್ಚಿರುವ ಅಂಗಡಿ ಪ್ರಾರಂಭಿಸಲು ಸಂಸ್ಥೆಯ ಮೂಲಕ ನೆರವು ನೀಡಲಾಗುವುದು. – ಟಿ. ಜಯಂತ್, ಅಧ್ಯಕ್ಷ, ನೀತಿ ತಂಡ, ಮಂಗಳೂರು.

ಡಿಸಿ, ಎಸ್‌ಪಿಗೆ ಮನವಿ
ನಾನು ಪಡೆದಿರುವ ಸಾಲ, ಹಣಕಾಸು ಸಂಸ್ಥೆಗಳ ಕಿರುಕುಳ ಮತ್ತು ನನ್ನ ಇಂದಿನ ದುಸ್ಥಿತಿ ಬಗ್ಗೆ ಜಿಲ್ಲಾಧಿಕಾರಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಿ ದ್ದೇನೆ. ಹೇಗಾದರೂ ಮಾಡಿ ಸಾಲ ತೀರಿಸಿಕೊಡಿ. ನನ್ನಿಂದ ಸಾಧ್ಯವಿಲ್ಲ ಎಂದು ವಿನಂತಿ ಮಾಡಿದ್ದೇನೆ.
-ದೇವಮ್ಮ, ರಾಮಸಮುದ್ರ ಬಡಾವಣೆ.

ಸಾಲ ವಸೂಲಿ ನಿಯಮ ಸರಿ ಇಲ್ಲ

ಕಿರು ಹಣಕಾಸು ಸಂಸ್ಥೆಗಳು ಸಾಲ ವಾಪಸ್ ಪಡೆಯಲು ಮಾನಸಿಕ ಕಿರುಕುಳ ನೀಡುವುದು ಸರಿಯಲ್ಲ. ಕಾಲವಕಾಶ ನೀಡಬೇಕು. ಗುಂಪಿನ ಒಬ್ಬರು ಸಾಲ ಮರು ಪಾವತಿ ಮಾಡದಿದ್ದರೆ ಉಳಿದವರೆಲ್ಲರೂ ಸೇರಿ ಪಾವತಿಸಬೇಕೆಂಬ ನಿಯಮ ಸಮಂಜಸವಲ್ಲ. ಸಾಲ ಪಡೆದವರಿಂದ ಮಾತ್ರ ವಸೂಲಿಗೆ ಮುಂದಾಗಬೇಕು. – ಅರ್ಜುನ್, ರಾಮಸಮುದ್ರ ಬಡಾವಣೆ.

Tags:
error: Content is protected !!