ಎ.ಆರ್.ಗಿರಿಧರ
ಸಾಂಸ್ಕೃತಿಕನಗರಿ ಮೈಸೂರು ನಾಡಿನ ಪ್ರಸಿದ್ಧ ಪ್ರವಾಸಿ ತಾಣ. ಪ್ರತಿನಿತ್ಯ ಸಾವಿರಾರು ಜನ ಪ್ರವಾಸಿಗರು ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯ, ಶ್ರೀರಂಗ ಪಟ್ಟಣ, ಕೆಆರ್‌ಎಸ್ ಮೊದಲಾದ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಹೀಗೆ ಆಗಮಿಸುವ ಪ್ರವಾಸಿಗಳಿಗೆ ಊಟ, ಉಪಾಹಾರದ ಆತಿಥ್ಯ ನೀಡುವ ಸಾಹಿತ್ಯ ಚರ್ಚೆ ವೇದಿಕೆ, ವಿದ್ಯಾರ್ಥಿಗಳಿಗೆ ವಾರಾನದ ಹೋಟೆಲ್‌ಗಳು ಮೈಸೂರಿನ ಹಲವು ಹೋಟೆಲ್‌ಗಳಿಗೆ ಅದರದ್ದೇ ಆದ ಇತಿಹಾಸವಿದೆ.
ಮೈಸೂರಿನ ಮೊದಲ ಹೋಟೆಲ್ ಎಂಬ ಪ್ರಖ್ಯಾತಿಯ ಹೋಟೆಲ್ ದಾಸ ಪ್ರಕಾಶ್, ಇಂದ್ರ ಭವನದಿಂದ ಹಿಡಿದು ಇಂದಿನ ಮೈಲಾರಿ, ಸಿದ್ದಾರ್ಥ, ಗ್ರೀನ್ ಹೆರಿಟೇಜ್ ಮೊದಲಾದವು ರುಚಿ, ಸ್ವಚ್ಛತೆ, ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿವೆ.
ಮೈಸೂರು ಅಂದ್ರೆ ದಾಸಪ್ರಕಾಶ್: ಮೈಸೂರಿನಲ್ಲಿ ಪ್ರಥಮವಾಗಿ ಆರಂಭವಾಗಿದ್ದು ಹೋಟೆಲ್ ದಾಸಪ್ರಕಾಶ್. ಇಲ್ಲಿ ಪ್ರವಾಸಿಗರಿಗೆ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಮೈಸೂರು ದಸರಾ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಪ್ರವಾಸಿಗರ ಆಯ್ಕೆಯ ಹೋಟೆಲ್ಗಳ ಪಟ್ಟಿಯಲ್ಲಿ ದಾಸಪ್ರಕಾಶ್ ಗೆ ಮೊದಲ ಸ್ಥಾನ ಇರುತ್ತಿತ್ತು. ಇಲ್ಲಿ ಸಿಗುತ್ತಿದ್ದ ಘಮಘಮಿಸುವ ಮಸಾಲೆದೋಸೆ, ರುಚಿಯಾದ ಕಾಯಿ ಚಟ್ಟಿ ಹಾಗೂ ಈರುಳ್ಳಿ ಆಲೂಗಡ್ಡೆ ಪಲ್ಯ ಪ್ರವಾಸಿಗರು ಹಾಗೂ ಸ್ಥಳೀಯ ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಆ ಹೋಟೆಲ್‌ನ ತಿಂಡಿ, ಊಟ, ಕಾಫಿಯ ಸವಿರುಚಿಯನ್ನು ಅನೇಕ ಹಿರಿಯ ನಾಗರಿಕರು ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ.
70 ವರ್ಷಗಳ ಕಾಲ ಸೇವೆ ಒದಗಿಸಿದ ದಾಸ್ ಪ್ರಕಾಶ್: ಉಡುಪಿ ಮೂಲದ ಕೆ.ಸೀತಾರಾಮರಾವ್ ಅವರು ಮೈಸೂರಿನ ಪ್ರಭಾ ಥಿಯೇಟರ್ ಬಳಿ ಆರಂಭಿಸಿದ್ದ ಹೋಟೆಲ್ ದಾಸ್ ಪ್ರಕಾಶ್, ಪಾರ್ಕಿಂಗ್, ಲಾಡ್ಡಿಂಗ್ ಎಲ್ಲದಕ್ಕೂ ಪ್ರಖ್ಯಾತವಾಗಿತ್ತು. ಸುಮಾರು 70 ವರ್ಷಗಳ ಕಾಲ ನಡೆದ ಈ ಹೋಟೆಲ್, ಕೆಲ ವರ್ಷಗಳ ಹಿಂದೆ ಮುಚ್ಚಿಹೋಯಿತು. ದಾಸ್ ಪ್ರಕಾಶ್ ಹೋಟೆಲ್ ಮಾಲೀಕರ ಮನೆತನದವರು ಮೈಸೂರಿನ ಯಾದವಗಿರಿಯಲ್ಲಿ ಆಕಾಶವಾಣಿ ರಸ್ತೆಯಲ್ಲಿ ಹೋಟೆಲ್ ಪ್ಯಾರಡೈಸ್ ನಡೆಸುತ್ತಿದ್ದಾರೆ.
ಸಾಹಿತಿಗಳ ಚರ್ಚಾ ತಾಣವಾಗಿದ್ದ ಮಾಡರ್ನ್ ಕಾಫಿ ಹೌಸ್: 1950ರ ದಶಕದಲ್ಲಿ ದಾಸಪ್ರಕಾಶ್ ಹೋಟೆಲ್ ಆವರಣದಲ್ಲಿದ್ದ ಮಾಡರ್ನ್ ಕಾಫಿ ಹೌಸ್ ನವ್ಯ ಸಾಹಿತ್ಯದ ಚರ್ಚಾ ಕೇಂದ್ರವಾಗಿ ರೂಪುಗೊಂಡಿತ್ತು. ಗೋಪಾಲಕೃಷ್ಣ ಅಡಿಗ, ಯು.ಆರ್. ಅನಂತಮೂರ್ತಿ, ಎಚ್.ಎಂ.ಚೆನ್ನಯ್ಯ, ಕಥೆಗಾರ ಸದಾಶಿವ ಮುಂತಾದವರು ಈ ಹೋಟೆಲ್‌ನಲ್ಲೇ ಸಾಹಿತ್ಯಕ್ಕೆ ಸಂಬಂಧಿಸಿದ ಚರ್ಚೆ ನಡೆಸುತ್ತಿದ್ದರು. ಸಾಹಿತಿಗಳಾದ ಬಿ.ಸಿ.ರಾಮಚಂದ್ರ ಶರ್ಮ, ಖ್ಯಾತ ಸರೋದ್ ಕಲಾವಿದ ಪಂ.ರಾಜೀವ್ ತಾರಾನಾಥ್ ಮತ್ತಿತರರು ಸೇರುತ್ತಿದ್ದುದು ಇದೇ ಕಾಫಿ ಹೌಸ್ ನಲ್ಲಿ ಎಂಬುದು ಗಮನಾರ್ಹ ಸಂಗತಿ.
ಇಂದ್ರ ಭವನ್: ಮೂಲತಃ ಅಗರವಾಲ್ ಸಮುದಾಯಕ್ಕೆ ಸೇರಿದ ಬದರಿ ಪ್ರಸಾದ್ ಅವರು ಪ್ರಾರಂಭಿಸಿದ ಇಂದ್ರ ಭವನ್ ಕೆಫೆ, ಇಡ್ಲಿ-ವಡೆ ಸಾಂಬಾರ್, ಹಲ್ವಾ ಮೊದಲಾದ ತಿನಿಸುಗಳಿಗೆ ಪ್ರಖ್ಯಾತವಾಗಿತ್ತು. ಬದರಿ ಪ್ರಸಾದ್ ಅವರು ದೇಶ ಪ್ರೇಮಿಯಾಗಿದ್ದು, ಸ್ವಾತಂತ್ರ್ಯ ಹೋರಾಟಗಾರರಿಗೆ ಹೊಟ್ಟೆ ತುಂಬಾ ಊಟ, ತಿಂಡಿ ನೀಡುತ್ತಿದ್ದರು.
ಜನಮಾನಸದಲ್ಲಿ ನೆಲೆಯಾಗಿರುವ ಇನ್ನಷ್ಟು ಹೋಟೆಲ್‌ಗಳು: ಮೈಸೂರಿನ ಗಾಂಧಿ ಸ್ಟೇರ್‌ನಲ್ಲಿದ್ದ ಮಧುನಿವಾಸ್ ಇಂದ್ರ ಭವನ್ ಹೋಟೆಲ್‌ನಲ್ಲಿ ಕಾಫಿ ತಿಂಡಿ ಬಹಳ ರುಚಿಯಾಗಿರುತ್ತಿತ್ತು. ಅಗ್ರಹಾರದ ರಾಜು ಹೋಟೆಲ್, ಪ್ರಸಾದ್ ಲಂಚ್ ಹೋಂ ಸೆಟ್ ದೋಸೆ ಬಾಯಲ್ಲಿ ನೀರೂರಿಸುತ್ತಿತ್ತು. ಪ್ರಭುದೇವ ಲಂಚ್ ಹೋಂ ಪ್ರಸಿದ್ಧಿಯಾಗಿತ್ತು. ಗುರು ಲಂಚ್ ಹೋಂನ ಗುರುಮಲ್ಲಪ್ಪನವರು ಉದಾರವಾದ ಮನುಷ್ಯ, ಊಟ ಮಾಡಿದವರು ದುಡ್ಡು ಕೊಡದಿದ್ದರೂ ಒಂದಿಷ್ಟು ಬೈದು ಕಳುಹಿಸುತ್ತಿದ್ದರು. ಅಲ್ಲಿ ಮಾಡುತ್ತಿದ್ದ ಬೇಳೆ ಸಾರು ಸ್ವಾದಿಷ್ಟವಾಗಿರುತ್ತಿತ್ತು ಎಂಬುದನ್ನು ಈಗಲೂ ಕೆಲವರು ನೆನಪಿಸಿಕೊಳ್ಳುತ್ತಾರೆ. ಕೆ.ಆರ್.ಪೊಲೀಸ್ ಠಾಣೆ ಎದುರಿನ ನಾರಾಯಣ ಹೋಟೆಲ್, ಮರಿಮಲ್ಲಪ್ಪ ಕಾಲೇಜು ಬಳಿ ಇದ್ದ ಅಯ್ಯರ್ ಮೆಸ್, ಬಲ್ಲಾಳ್ ಸರ್ಕಲ್ ನಲ್ಲಿ ಬಲ್ಲಾಳ್ ಹೋಟೆಲ್ ಇವು ಮುಚ್ಚಿ ಹೋಗಿವೆ. ಆದರೆ, ಆ ಹೋಟೆಲ್‌ಗಳಲ್ಲಿ ಊಟ -ತಿಂಡಿಯನ್ನು ಸವಿದ ಹಲವಾರು ಮಂದಿ ಈಗಲೂ ನೆನಪಿಸಿಕೊಳ್ಳುತ್ತಾರೆ.
ವಾರಾನ್ನದ ಹೋಟೆಲ್‌ಗಳು!: ಮೈಸೂರಿನ ಇಂದ್ರಭವನ, ರಾಘವೇಂದ್ರ ಭವನ ಮೊದಲಾದ ಹೋಟೆಲ್‌ಗಳು ಬಡ ವಿದ್ಯಾರ್ಥಿಗಳಿಗೆ ವಾರಾನ್ನ ಹಾಕಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗಿದ್ದವು. ಉದಾರ ಮನಸ್ಸಿನ ಹೋಟೆಲ್ ಮಾಲೀಕರು ಅಂದಿನ ದಿನಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೊಟ್ಟೆ ತುಂಬಾ ಊಟ ಹಾಕಿ ಅವರ ವಿದ್ಯಾಭ್ಯಾಸಕ್ಕೆ ಸಹಕರಿಸುತ್ತಿದ್ದರು.
ಮಾಂಸಾಹಾರಿ ಹೋಟೆಲ್ಗಳೂ ಪ್ರಖ್ಯಾತಿ… ಮೈಸೂರೆಂದರೆ ಬರೀ ಸಸ್ಯಾಹಾರಿಗಳಿಗಷ್ಟೇ ಅಲ್ಲ, ಮಾಂಸಾಹಾರಿಗಳಿಗೂ ಇಲ್ಲಿ ಬಗೆಬಗೆಯ ಖಾದ್ಯಗಳನ್ನು ಮಾಡಿ ಉಣ ಬಡಿಸಲಾಗುತ್ತಿದೆ. ಸಾಂಪ್ರದಾಯಿಕ ಶೈಲಿಯಲ್ಲಿ ಕಟ್ಟಿಗೆ ಒಲೆಯಲ್ಲೇ ಮಾಂಸಾಹಾರಿ ಅಡುಗೆ ಮಾಡುವ ಹನುಮಂತು ಹೋಟೆಲ್ ಪ್ರಖ್ಯಾತವಾಗಿದೆ. ಇದಕ್ಕಾಗಿಯೇ ಹಲವಾರು ಚಿತ್ರನಟರು ಬೆಂಗಳೂರಿನಿಂದ ಇಲ್ಲಿಗೆ ಬರುತ್ತಿದ್ದರು ಎಂಬುದು ಗಮನಾರ್ಹವಾದ ಸಂಗತಿ. ಕೇರಳಾಪುರ ಮಿಲಿಟರಿ ಹೋಟೆಲ್, ಮರಿಯಪ್ಪ ಮೆಸ್, ಲಕ್ಷ್ಮಣ್ ಮೆಸ್… ಹೀಗೆ ಹೋಟೆಲ್‌ಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಕೋಟ್ಸ್))
ಮಾಡರ್ನ್ ಕೆಫೆ ಸಾಹಿತಿಗಳ ಚರ್ಚೆಯ ತಾಣವಾಗಿತ್ತು. ಗೋಪಾಲಕೃಷ್ಣ ಅಡಿಗರು, ಯು.ಆರ್. ಅನಂತ ಮೂರ್ತಿ ಮೊದಲಾದ ಸಾಹಿತಿಗಳು ಇದೇ ಹೋಟೆಲ್‌ನಲ್ಲಿ ಸಾಹಿತ್ಯಕ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದುದು ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ.
-ಎ.ಅ.ರಾ.ಮಿತ್ರ, ಸಾಹಿತಿ,
ಹಿಂದಿನ ಕಾಲದಲ್ಲಿ ಹೋಟೆಲ್ ಉದ್ಯಮದಲ್ಲಿ ಲಾಭಕ್ಕಿಂತ ಸೇವೆಯೇ ಮುಖ್ಯವಾಗಿತ್ತು. ಕಾಲ ಕಳೆದಂತೆ ಸೇವಾ ಕ್ಷೇತ್ರವಾಗಿದ್ದ ಹೋಟೆಲ್ ಉದ್ಯಮ ವಾಣಿಜ್ಯ ಕ್ಷೇತ್ರವಾಗಿ ಬದಲಾಗಿದೆ. ಹೋಟೆಲ್ ಸ್ವಲ್ಪ ಪ್ರಖ್ಯಾತಿಯಾದರೆ ಸಾಕು ಊಟ, ತಿಂಡಿ ದರವನ್ನು ಹೆಚ್ಚಿಸಿ ಲಾಭ ಗಳಿಕೆಗೆ ಯತ್ನಿಸುತ್ತಾರೆ.
-ಪ್ರೊ.ಎಂ.ಕೃಷ್ಣಗೌಡ, ಸಾಹಿತಿ
2014ರಲ್ಲಿ ಇಂದ್ರಭವನ್ ಹೋಟೆಲ್ ಮುಚ್ಚಲಾಗಿದೆ. ಇರ್ವಿನ್ ರಸ್ತೆ ಹಾಗೂ ಸ್ಟಾರ್ಟ್ ಬಜಾರ್‌ನಲ್ಲಿ ಮಿಠಾಯಿ ಇಂದ್ರಭವನ್ ನಡೆಸಲಾಗುತ್ತಿದೆ.
– ಅರ್ಜುನ್ ಮಾಲೀಕರು, ಮಿಠಾಯಿ ಇಂದ್ರಭವನ್
2014ರಲ್ಲಿ ನವೀಕರಣಕ್ಕಾಗಿ ಪ್ರಭಾ ಟಾಕೀಸ್ ಬಳಿ ಇದ್ದ ಹೋಟೆಲ್ ದಾಸಪ್ರಕಾಶ್ ಅನ್ನು ಮುಚ್ಚಲಾಗಿತ್ತು. ನಂತರ ಕೊರೊನಾ ಹಿನ್ನೆಲೆಯಲ್ಲಿ ಪುನಾರಂಭಿಸಲಾಗಿಲ್ಲ. ಯಾದವಗಿರಿಯಲ್ಲಿ ಹೋಟೆಲ್ ಪ್ಯಾರಡೈಸ್ ನಡೆ ಸಲಾಗುತ್ತಿದೆ.
– ವಿಕ್ರಂ ದಾಸ್, ಮಾಲೀಕರು. ಹೋಟೆಲ್ ಪ್ಯಾರಡೈಸ್