Mysore
24
haze

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ನಗರಸಭೆಯ ಅಧಿಕಾರಕ್ಕಾಗಿ ಆಟ-ಮೇಲಾಟ

 

ನಂಜನಗೂಡು: ಇಲ್ಲಿನ ನಗರಸಭೆ ಅಧ್ಯಕ್ಷ ಸ್ಥಾನ ಎಸ್‌ಸಿಗೆ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಗೊಳಿಸಿದ್ದು, ಸೆ.3ರಂದು ನಡೆಯಲಿರುವ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಬಿಜೆಪಿ, ಕಾಂಗ್ರೆಸ್ ಮತ್ತು ಜಾ.ದಳ ನಡುವೆ ಆಟ-ಮೇಲಾಟ ಆರಂಭವಾಗಿದೆ.

31 ಸದಸ್ಯರ ಬಲಹೊಂದಿರುವ ಈ ನಗರಸಭೆಯಲ್ಲಿ ಬಿಜೆಪಿ ಅತೀ ಹೆಚ್ಚು ಅಂದರೆ 15 ಸದಸ್ಯರ ಬಲ ಹೊಂದಿದ್ದು ಅಧಿಕಾರಕ್ಕೆ ಇಬ್ಬರು ಸದಸ್ಯರ ಬಲದ ಕೊರತೆ ಎದುರಿಸುತ್ತಿದೆ.

ಕಾಂಗ್ರೆಸ್ 10 ಸದಸ್ಯರ ಬಲ ಹೊಂದಿದ್ದು, ಶಾಸಕ,

ಸಂಸದರೂ ಸೇರಿದಂತೆ ಅದರ ಬಲ 12ಕ್ಕೇರಿದ್ದರೂ ಅಧಿಕಾರ ಹಿಡಿಯಲು ಇನ್ನೂ 5 ಸದಸ್ಯರ ಕೊರತೆ ಇದೆ. ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸದಸ್ಯ ದೇವ ಅವರನ್ನು ಕುಳ್ಳಿರಿಸಲು ಮುಂದಾಗಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಮೈತ್ರಿ ಪಕ್ಷ, ಮೂವರು ಸದಸ್ಯ ಬಲ ಹೊಂದಿರುವ ಜಾ.ದಳದ ರೆಹನಾ ಬಾನು ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ.

ಈ ಮಧ್ಯೆ ಮೂವರು ಪಕ್ಷೇತರರನ್ನು ತನ್ನ ಕಡೆಗೆ ಸೆಳೆದುಕೊಂಡಿರುವ ಕಾಂಗ್ರೆಸ್ ಅಧಿಕಾರದ ಗದ್ದಿಗೆಗಾಗಿ ಲಾಬಿ ನಡೆಸಿದ್ದು, ಬಿಜೆಪಿಯ ಮೂವರು ಸದಸ್ಯರು ಆ ಪಕ್ಷದ ಸಭೆಗೆ ಹಾಜರಾಗದೇ ಇರುವುದು ಕಾಂಗ್ರೆಸ್‌ನ ಅಧಿಕಾರದ ಆಸೆಗೆ ಆಸರೆಯಾದಂತಾಗಿದೆ. ಬಿಜೆಪಿ ಪಕ್ಷದಿಂದ ಗೆದ್ದು ಚುನಾವಣೆಯ ಹೊಸ್ತಿಲಲ್ಲಿ ಸಭೆಗೆ ಬಾರದ ಸದಸ್ಯರುಗಳ ಮನೆ ಬಾಗಿಲಿಗೆ ವಿಪ್ ಅಂಟಿಸುವ ಸಿದ್ಧತೆಯೊಂದಿಗೆ ಬಿಜೆಪಿ ಅವರುಗಳಿಗೆ ಎಚ್ಚರಿಕೆ ನೀಡಲು ಮುಂದಾಗಿದ್ದು ಕುತೂಹಲ ಮೂಡಿಸಿದೆ. ಅಲ್ಲದೆ, ಜಾ.ದಳದ ಮೂವರು ಸದಸ್ಯರಿಗೆ ವಿಪ್ ಜಾರಿ ಮಾಡಲು ಸಿದ್ಧತೆ ನಡೆಸಿದೆ.

ಕಾಂಗ್ರೆಸ್ ಕೂಡ ಅಧ್ಯಕ್ಷ ಸ್ಥಾನಕ್ಕೆ ಶ್ರೀಕಂಠ ಅವರನ್ನು ಹೆಸರಿಸಿ ತನ್ನ ಎಲ್ಲ 12 ಸದಸ್ಯರಿಗೂ ವಿಪ್ ನೀಡಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಯಾರನ್ನೂ ಈವಗೂ ಹೆಸರಿಸದೇ ಕೊನೆ ಗಳಿಗೆಯ ಬೆಳವಣಿಗೆಯನ್ನಾಧರಿಸಿ ಸ್ಥಳೀಯವಾಗಿ ವಿಶ್ವಾಸದಿಂದಿರುವ ಜಾ.ದಳದ ಪಾಲಿಗೆ ಧಾರೆ ಎರೆದರೂ ಆಶ್ಚರ್ಯವಿಲ್ಲ ಎನ್ನಲಾಗಿದೆ.

ವಿಪ್ ಜಾರಿಯ ಗೊಂದಲ: ಬಿಜೆಪಿಯು ಜಾ.ದಳ ಸದಸ್ಯರಿಗೂ ವಿಪ್ ನೀಡಿದ್ದು ಗೊಂದಲಕ್ಕೆ ಕಾರಣ ವಾಗಿದ್ದು, ಕಾನೂನಿನ ಜಿಜ್ಞಾಸೆಗೆ ಕಾರಣವಾಗಿದೆ. ಒಂದು ಪಕ್ಷವಿಪ್ ನೀಡುವಾಗ ತನ್ನ ಅಧಿಕೃತ ಗುರುತಿನ ಸದಸ್ಯರಿಗೆ ಮಾತ್ರ ನೀಡಬಹುದು. ಮೈತ್ರಿಯಾಗಿದ್ದರೂ ಬೇರೆ ಚಿಹ್ನೆಯಡಿ ಗೆದ್ದವರಿಗೆ ನೀಡಿದ ವಿಪ್‌ಗೆ ಮಾನ್ಯತೆಯಿಲ್ಲ ಎಂಬುದು ಅನೇಕ ಚುನಾವಣೆಗಳ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ನಿವೃತ್ತ ತಹಸಿಲ್ದಾರರ ಅಭಿಪ್ರಾಯವಾಗಿದೆ. ಹೀಗಾಗಿ ಇಲ್ಲಿ ಬಿಜೆಪಿ ನೀಡಿದ 18 ಸದಸ್ಯರ ವಿಪ್ ಗೊಂದಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಪಕ್ಷ ನಗರಸಭೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಶ್ರೀಕಂಠ ಅವರನ್ನು ಘೋಷಿ ಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಕೊನೇ ಗಳಿಗೆಯಲ್ಲಿ ರಾಜಕೀಯ ಬೆಳವಣಿಗೆಗಳನ್ನಾ ಧರಿಸಿ ಅಭ್ಯರ್ಥಿಯನ್ನು ಹೆಸರಿಸಲಾಗುವುದು. -ದರ್ಶನ್ ಧ್ರುವನಾರಾಯಣ, ಶಾಸಕ

ಮೈತ್ರಿ ಪಕ್ಷದ ಪರವಾಗಿ ಅಧಿಕೃತ ಅಭ್ಯರ್ಥಿಗೆ ಕಡ್ಡಾಯವಾಗಿ ಮತ ನೀಡಲೇಬೇಕು ಎಂದು ಎರಡೂ ಪಕ್ಷಗಳೂ ಸೇರಿ ವಿಪ್ ಜಾರಿ ಮಾಡಿದ್ದು, ಈಗಾಗಲೇ ಸೂಚಿಸಿದ ಅಭ್ಯರ್ಥಿ ಗಳು ಅಂತಿಮ ಹಂತದಲ್ಲಿ ಬದಲಾದರೂ ಆ ಅಭ್ಯರ್ಥಿಗಳಿಗೇ ಮತ ನೀಡಬೇಕೆಂದು ತಿಳಿಸಲಾಗಿದೆ. ಸಭೆಗೆ ಹಾಜರಾಗದ ಮೂವರ ಮನೆ ಬಾಗಿಲಿಗೆ ವಿಪ್ ಜಾರಿ ಮಾಡಲಾಗಿದೆ. -ಬಿ.ಹರ್ಷವರ್ಧನ್, ಮಾಜಿ ಶಾಸಕ

Tags:
error: Content is protected !!