82 ಅಡಿಗಳಿಗೆ ಕುಸಿತಗೊಂಡಿದ್ದ ಜಲಾಶಯದ ನೀರಿನ ಮಟ್ಟ ಮತ್ತೆ ಗರಿಷ್ಟ ಮಟ್ಟಕ್ಕೆ
ಮಂಜು ಕೋಟೆ
ಎಚ್.ಡಿ.ಕೋಟೆ: ತಾಲ್ಲೂಕು ಮತ್ತು ಕೇರಳದ ವಯನಾಡು ಪ್ರದೇಶದಲ್ಲಿ ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಲವು ದಶಕಗಳ ನಂತರ ಕಬಿನಿ ಜಲಾಶಯ ಮತ್ತೆ ಭರ್ತಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕರಾದ ಅನಿಲ್ ಚಿಕ್ಕಮಾದು ನೇತೃತ್ವದಲ್ಲಿ ಎರಡು ತಿಂಗಳ ಹಿಂದೆ ಭರ್ತಿಯಾಗಿದ್ದ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗಿತ್ತು. ಅಂದಿನಿಂದ ಕಳೆದ ಒಂದು ವಾರದವರೆಗೆ ರೈತರ ಜಮೀನುಗಳಿಗೆ ಎಡ ಮತ್ತು ಬಲದಂಡೆ ನಾಲೆಗಳ ಮೂಲಕ 1,600 ಕ್ಯೂಸೆಕ್ಸ್ ನೀರನ್ನು ಹಾಗೂ ಬೆಂಗಳೂರು ಮೈಸೂರು ಇನ್ನಿತರ ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ 500 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗಿತ್ತು. ಹೀಗಾಗಿ ಜಲಾಶಯದ ನೀರಿನ ಮಟ್ಟ 82 ಅಡಿಗಳಿಗೆ ಕುಸಿತಗೊಂಡಿತ್ತು.
ಒಂದು ವಾರದಿಂದ ಜಲಾಶಯದ ಹಿನ್ನೀರಿನ ಪ್ರದೇಶ ಮತ್ತು ವಯನಾಡು ಪ್ರದೇಶದಲ್ಲಿ ಉತ್ತಮ ವಾಗಿ ಹಿಂಗಾರು ಮಳೆ ಆಗುತ್ತಿರುವು ದರಿಂದ ಮೂರೂವರೆ ಸಾವಿರ ಕ್ಯೂಸೆಕ್ಸ್ ಒಳಹರಿವು ಹರಿದುಬರುತ್ತಿದ್ದು, ಕಬಿನಿ ಜಲಾಶಯ ಮತ್ತೆ ತನ್ನ 84 ಅಡಿಗಳ ಗರಿಷ್ಟ ಮಟ್ಟಕ್ಕೆ ತಲುಪಿದೆ.
ಮುಂಗಾರು ಮತ್ತು ಹಿಂಗಾರು ಉತ್ತಮವಾಗಿ ಆಗಿರುವ ಹಿನ್ನೆಲೆಯಲ್ಲಿ ಈ ಬಾರಿ ಜಲಾಶಯದಲ್ಲಿ ನೀರಿನ ಪ್ರಮಾಣ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುವ ಸನ್ನಿವೇಶ ಗಳಿಲ್ಲವಾಗಿದೆ. ಹೀಗಾಗಿ ಹಿನ್ನೀರಿನಲ್ಲಿರುವ ನಾಗರಹೊಳೆ ಮತ್ತು ಬಂಡೀಪುರದ ವ್ಯಾಪ್ತಿಯ ಅರಣ್ಯ ಪ್ರದೇಶದ ವನ್ಯಜೀವಿಗಳಿಗೆ ನೀರಿನ ಸಮಸ್ಯೆ ಮಳೆ ಎದುರಾಗದಂತಾಗಿದೆ.
ಹಿಂಗಾರು ಮಳೆ ಮತ್ತಷ್ಟು ಹೆಚ್ಚಾದರೆ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವುದರಿಂದ ಜಲಾಶಯದ ಪ್ರಮುಖ ನಾಲ್ಕು ಗೇಟುಗಳನ್ನು ಮತ್ತೊಮ್ಮೆ ತೆಗೆದು ಒಳಹರಿವಿನ ಪ್ರಮಾಣದಷ್ಟು ನೀರನ್ನು ಹೊರ ಬಿಡುವ ಸಾಧ್ಯತೆ ಇದೆ.
ಜಲಾಶಯ ವ್ಯಾಪ್ತಿಯಲ್ಲಿ ಉತ್ತಮವಾಗಿ ಹಿಂಗಾರು ಮಳೆ ಆಗಿರುವುದರಿಂದ ಕಬಿನಿ ಜಲಾಶಯ ಮತ್ತೆ ಗರಿಷ್ಟ ಮಟ್ಟ ತಲುಪಿದೆ. ಜಲಾಶಯದಿಂದ ಹೊರಬಿಡಲಾಗಿದ್ದ ನೀರು ಮತ್ತೊಮ್ಮೆ ಸಂಗ್ರಹವಾಗಿರುವುದರಿಂದ ಮುಂದಿನ
ಬೇಸಿಗೆಯಲ್ಲಿ ರೈತರ ಜಮೀನುಗಳಿಗೆ ಮತ್ತು ಕುಡಿಯುವ ನೀರಿಗೆ ಸಮಸ್ಯೆಗಳು ಎದುರಾಗುವುದಿಲ್ಲ ಎಂಬ ಭರವಸೆ ಮೂಡಿದೆ.
-ಚಂದ್ರಶೇಖರ್, ಇಇ, ಕಬಿನಿ ಜಲಾಶಯ