ನಿರ್ಮಲ ಕೋಟಿ
ಅದು ೧೯೭೭ನೇ ಇಸವಿ. ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ ಮುಕ್ತಾಯವಾಗಿತ್ತು. ೧೯೭೫ರ ಜೂನ್ ೨೫ರಂದು ದೇಶಾದ್ಯಂತ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ೨ ವರ್ಷಗಳ ನಂತರ ೧೯೭೭, ಮಾರ್ಚ್ ೨೧ರಂದು ಹಿಂಪಡೆಯಲಾಗಿತ್ತು. ಇದಾದ ೪೦ ದಿನಗಳ ನಂತರ ಮೇ ೧ ರಂದು ನನ್ನ ಹಾಗೂ ಕೋಟಿಯವರ ಮದುವೆಯಾಯಿತು. ಅಲ್ಲಿಯವರೆಗೆ ಪತ್ರಿಕೋದ್ಯಮದ ಬಗ್ಗೆಯಾಗಲಿ, ಪ್ರಗತಿಪರ ವಿಚಾರಗಳ ಬಗ್ಗೆಯಾಗಲಿ ಹೆಚ್ಚಿನ ತಿಳಿವಳಿಕೆ ನನಗಿಲ್ಲದಿದ್ದರೂ ಅಂದಿನಿಂದ ಕೋಟಿಯವರಂತೆಯೇ ‘ಆಂದೋಲನ’ ಪತ್ರಿಕೆ ನನ್ನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿತು.
ಕೋಟಿಯವರು ಆ ಕಾಲದ ಮಹಾನ್ ನಾಯಕ ಜಯಪ್ರಕಾಶ್ ನಾರಾಯಣರಿಂದ ಪ್ರೇರಿತರಾಗಿ ಪತ್ರಿಕೆಯನ್ನು ಆರಂಭಿಸಿದ್ದರು. ಸರ್ಕಾರದ ದಬ್ಬಾಳಿಕೆ ಎದುರಿಸಬೇಕಾಗಿ ಬಂದಿದ್ದ ಹಾಗೂ ತುರ್ತು ಪರಿಸ್ಥಿತಿಯ ವಿರುದ್ಧ ಬರೆಯುತ್ತಿದ್ದ ಸರ್ಕಾರಿ ಸ್ನೇಹಿಯಲ್ಲದ ಪತ್ರಿಕೆಗಳಲ್ಲಿ ‘ಆಂದೋಲನ’ವೂ ಒಂದಾಗಿತ್ತು. ಕೋಟಿ ಅವರು ಆ ಸಂದರ್ಭದಲ್ಲಿ ಭೂಗತವಾಗುವ ಮೂಲಕ ತಮ್ಮ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸಿದ್ದನ್ನು ಮದುವೆಯ ನಂತರ ನನ್ನ ಬಳಿ ಹಂಚಿಕೊಂಡಿದ್ದರು.
ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸುವ, ನ್ಯಾಯ ಹಾಗೂ ಸತ್ಯಕ್ಕಾಗಿ ಹೋರಾಡುವ ಧೈರ್ಯ, ಸ್ವಾಭಿಮಾನ, ಕೆಚ್ಚೆದೆಯ ವಿಚಾರಗಳು ಕೋಟಿ ಅವರ ಗುಣಗಳಾಗಿದ್ದವು. ಅವರ ತಲೆ ತುಂಬಾ ಚಿಂತನೆ, ಆದರೆ ಜೇಬು ಮಾತ್ರ ಖಾಲಿ. ಅವರ ಚಟುವಟಿಕೆಗಳಿಗೆ, ಪತ್ರಿಕೆಯ ಪ್ರಕಟಣೆಗೆ ಅವರ ವಿಚಾರವಾದಿ ಸ್ನೇಹಿತರ ಸಹಕಾರ, ಆರ್ಥಿಕ ಬೆಂಬಲದ ಜೊತೆಗೆ ಆಗ ಜಾವಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸಂಬಳವೇ ಜೀವಸೆಲೆಯಾಗಿತ್ತು. ನಮ್ಮ ಮದುವೆಯಾದಾಗ ದೇಶದಲ್ಲೆಲ್ಲಾ ತುರ್ತು ಪರಿಸ್ಥಿತಿ ಕೊನೆಗೊಂಡಿದ್ದರೂ ಅದರ ಕಾವು ಮಾತ್ರ ಇನ್ನೂ ಇಳಿದಿರಲಿಲ್ಲ .
ಅಂದಿನ ದಿನಗಳಲ್ಲಿ ನಾನು ಅವರನ್ನು ಮನೆಯಲ್ಲಿ ನೋಡುತ್ತಿದ್ದುದು ತೀರಾ ಕಡಿಮೆ. ಕೆಲವೊಮ್ಮೆ ಪೊಲೀಸ್ ಸಿಬ್ಬಂದಿ ಮನೆಗೆ ಬಂದು, “ಕೋಟಿ ಎಲ್ಲಿದ್ದಾನೆ?” ಎಂದು ಕೇಳುತ್ತಿದ್ದರು. ಕೆಲವೊಮ್ಮೆ ಅವರ ಸ್ನೇಹಿತರೂ ಅವರನ್ನು ಹುಡುಕಿಕೊಂಡು ಬರುತ್ತಿದ್ದುದುಂಟು. ಆದರೆ ನನಗೆ ಅವರು ಎಲ್ಲಿ ಇದ್ದಾರೆ ಎಂಬುದು ಗೊತ್ತಿರುತ್ತಿರಲಿಲ್ಲ. ಹೀಗೆ ಅನೇಕ ದಿನಗಳು ಅವರು ಕಣ್ಮರೆಯಾಗಿರುತ್ತಿದ್ದರು. ಮತ್ತೆ ಅವರು ಕಾಣಿಸಿಕೊಂಡಾಗ, ಎಲ್ಲವೂ ಸಾಮಾನ್ಯವಾಗಿದೆ ಎಂಬಂತೆ ನಗುಮುಖದಿಂದ ನಡೆದುಕೊಳ್ಳುತ್ತಿದ್ದರು. ನಮ್ಮ ಆರ್ಥಿಕ ಸ್ಥಿತಿಯೇನೂ ಚೆನ್ನಾಗಿರಲಿಲ್ಲ. ಅಂದಿನ ದಿನಗಳಲ್ಲಿ ’ಆಂದೋಲನ’ ವಾರಪತ್ರಿಕೆಯಾಗಿತ್ತು. ಹೆಚ್ಚಿನ ಸಿಬ್ಬಂದಿ ಇಲ್ಲದಿದ್ದರೂ, ಹಣಕಾಸಿನ ಸಮಸ್ಯೆಗಳ ನಡುವೆಯೂ, ಪತ್ರಿಕೆಗಳ ಮೇಲೆ ಸರ್ಕಾರದ ಕೆಂಗಣ್ಣಿನ ನಡುವೆಯೂ ಅವರು ಪತ್ರಿಕೆಯನ್ನು ಪ್ರಕಟಿಸುವ ಅವರ ಧೈರ್ಯ, ಉತ್ಸಾಹ ಎಂದೂ ಕುಗ್ಗಲಿಲ್ಲ. ಆ ದಿನಗಳಲ್ಲಿ ಪತ್ರಿಕೆ ಮಾತ್ರವಲ್ಲ, ನಮ್ಮ ಬದುಕು ಕೂಡ ಒಂದು ಹೋರಾಟವಾಗಿತ್ತು. ಆದರೆ ಆ ಹೋರಾಟವೇ ನಮ್ಮ ಬದುಕನ್ನು ಅರ್ಥಪೂರ್ಣ ಮಾಡಿತು.
ಸರಸ್ವತಿಪುರಂ ಮೊದಲನೇ ಮುಖ್ಯ ರಸ್ತೆಯಲ್ಲಿದ್ದ ಒಂದು ಸಣ್ಣ ಗ್ಯಾರೇಜು ‘ಆಂದೋಲನ’ ಪತ್ರಿಕಾ ಕಚೇರಿ ಮಾತ್ರ ಆಗಿರಲಿಲ್ಲ, ಅದು ಎಲ್ಲಾ ಪ್ರಗತಿಪರ ಚಿಂತಕರ ಚಾವಡಿಯಾಗಿತ್ತು. ಲೋಹಿಯಾವಾದಿಗಳು, ಮಾರ್ಕ್ಸ್‌ವಾದಿಗಳು, ಡಿ. ಎಸ್.ಎಸ್. ಕಾರ್ಯಕರ್ತರು, ರೈತ ಸಂಘದ ಕಾರ್ಯಕರ್ತರು ಎಲ್ಲರೂ ಸೇರುತ್ತಿದ್ದ ಜಾಗ ಅದಾಗಿತ್ತು. ಆ ದಿನಗಳಲ್ಲಿ ಒಂದು ಪುಟ್ಟ ರೇಡಿಯೋ ಇತ್ತು. ಅದನ್ನು ಸುತ್ತುವರಿದು ಎಲ್ಲರೂ ಆಕಾಶವಾಣಿಯಲ್ಲಿ ಹೊಸದಿಲ್ಲಿಯ ಸುದ್ದಿಯನ್ನು ಕೇಳುತ್ತಿದ್ದುದು. ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿಗಳು, ಅದನ್ನು ಕೇಳಿದ ನಂತರ ನಡೆಯುತ್ತಿದ್ದ ಚರ್ಚೆಗಳು ನನ್ನ ಕಿವಿಯ ಮೇಲೂ ಬೀಳುತ್ತಿದ್ದವು. ನಾನು ಬಯಸದೆಯೂ ಆ ಚರ್ಚೆಗಳ ಭಾಗವಾಗಿಬಿಡುತ್ತಿದ್ದೆ.
ತುರ್ತು ಪರಿಸ್ಥಿತಿಯನ್ನು ಹೇರಿದ್ದ ಸಂದರ್ಭದಲ್ಲೇ ೧೯೭೭ರ ಮಾರ್ಚ್‌ನಲ್ಲಿ ಹಠಾತ್ತಾಗಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸೋತು ದಿಲ್ಲಿಯಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು. ಆ ಚುನಾವಣೆಯಲ್ಲಿ ರಾಯಬರೇಲಿಯಿಂದ ಸ್ಪರ್ಧೀಸಿ ಇಂದಿರಾ ಗಾಂಧಿ ಸೋತಿದ್ದರು. ಅಲ್ಲಿಯವರೆಗೂ ದೇಶದ ಚುಕ್ಕಾಣಿ ಹಿಡಿದು, ಪ್ರಧಾನ ಮಂತ್ರಿಯ ಸ್ಥಾನ ಅಲಂಕರಿಸಿದ್ದ ಇಂದಿರಾ ಗಾಂಧಿಯ ಸೋಲನ್ನು ಕುರಿತು ಅನೇಕ ಚರ್ಚೆ, ವಿಶ್ಲೇಷಣೆ, ಗೇಲಿಯ ಮಾತುಗಳು ಪ್ರತಿದಿನ ಸೇರುತ್ತಿದ್ದ ಸ್ನೇಹಿತರ ಚರ್ಚೆಯ ವಿಷಯವಾಗಿದ್ದಿತು. ಚುನಾವಣೆ ಸೋತ ನಂತರ ಇಂದಿರಾ ಗಾಂಧಿ ದಿಲ್ಲಿಯಲ್ಲಿ ತಿಂಗಳಿಗೆ ಸುಮಾರು ಸಾವಿರ ರೂಪಾಯಿಗಳ ಬಾಡಿಗೆಯ ಒಂದು ಪುಟ್ಟ ಬಂಗಲೆಯಲ್ಲಿ ಅಜ್ಞಾತವಾಗಿ ವಾಸಿಸುತ್ತಿದ್ದು, ಸ್ವಲ್ಪ ಕಾಲದ ಹಿಂದೆಯಷ್ಟೇ ಭಾರತದ ಪ್ರಧಾನ ಮಂತ್ರಿಯಾಗಿದ್ದರು ಎಂಬುದನ್ನು ಮರೆತೇ ಹೋಗುವಂತೆ ಅವರು ಸಾರ್ವಜನಿಕರ ದೃಷ್ಟಿಯಿಂದ ದೂರ ಉಳಿದಿರುವುದನ್ನು, “ಆಗ್ರಾಕ್ಕೆ ಜನ ತಾಜ್‌ಮಹಲ್ ನೋಡಲು ಬರುತ್ತಾರೆ, ದಿಲ್ಲಿಗೆ ಕುತುಬ್ ಮಿನಾರ್ ನೋಡಲು ಹೋಗುತ್ತಾರೆ. ದಿಲ್ಲಿಯಲ್ಲಿ ಹತ್ತರ ನಡುವೆ ಹನ್ನೊಂದನೇ ಸ್ಮಾರಕ ಸಿದ್ಧವಾಗುತ್ತಿದೆ” ಎಂದು ಅಪಹಾಸ್ಯ ಮಾಡುತ್ತಿದ್ದುದುಂಟು.
ಇದರ ಮಧ್ಯೆ ಇಂದಿರಾ ಗಾಂಧಿಯವರನ್ನು ಸಕ್ರಿಯ ರಾಜಕೀಯದಲ್ಲಿ ಮತ್ತೆ ತೊಡಗಿಸಿಕೊಳ್ಳುವುದಕ್ಕಾಗಿ ಯಾವ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವಿದ್ದಿತೋ ಅಲ್ಲಿ ಯಾವುದೋ ಕಾರ್ಯಕ್ರಮವನ್ನು ನೆಪ ಮಾಡಿಕೊಂಡು ಇಂದಿರಾ ಗಾಂಧಿಯನ್ನು ಆಹ್ವಾನಿಸುತ್ತಿದ್ದರು. ಹಾಗೆಯೇ ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಇಂದಿರಾ ಅವರನ್ನು ಆಹ್ವಾನಿಸಿದಾಗ ಜನ ರೊಚ್ಚಿಗೆದ್ದು ಚಪ್ಪಲಿ, ಕಲ್ಲುಗಳ ತೂರಾಟ ನಡೆಸಿದ್ದರೆಂದು ರೇಡಿಯೋ ಹಾಗೂ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಹೋದಲ್ಲೆಲ್ಲಾ ಇಂದಿರಾ ಗಾಂಧಿಯವರ ವಿರುದ್ಧ ಗಂಭೀರ ಸ್ವರೂಪದ ಪ್ರತಿಭಟನೆ, ಕೆಲವು ವೇಳೆ ಹಿಂಸಾತ್ಮಕ ರೂಪದಲ್ಲಿ ಜನರ ರೋಷ ವ್ಯಕ್ತವಾಗುತ್ತಿತ್ತು.
ಇಂದಿರಾ ಗಾಂಧಿಯವರ ವಿರುದ್ಧ ಜನರ ರೋಷ ಆ ರೀತಿಯಲ್ಲಿ ಪ್ರಕಟವಾಗುತ್ತಿದ್ದರೂ, ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಕರ್ನಾಟಕದಲ್ಲಿ ನವೆಂಬರ್ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಕೋಟಿಯವರನ್ನು ಸೇರಿದಂತೆ ಅವರ ಸ್ನೇಹಿತರೆಲ್ಲಾ ಕೆಂಡಾಮಂಡಲವಾದರು.
ತಮಿಳುನಾಡಿನಲ್ಲಿ ನಡೆದ ಘಟನೆಯಿಂದ ಎಚ್ಚೆತ್ತುಕೊಳ್ಳಬೇಕಿದ್ದ ಸರ್ಕಾರ ಅದರ ಬದಲಿಗೆ ಇಂದಿರಾ ಗಾಂಧಿಗೆ ಆಹ್ವಾನ ನೀಡಿರುವುದು ಸರಿಯಲ್ಲ, ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕುರಿತು ಜನರ ಆಕ್ರೋಶ ಇನ್ನೂ ತಣ್ಣಗಾಗದಿರುವಾಗ ಅರಸು ಅವರ ತೀರ್ಮಾನ ಸಾರ್ವಜನಿಕರ ಹಿತದೃಷಿಯಿಂದ ಸೂಕ್ತವಾದುದಲ್ಲ ಎಂದು ಚರ್ಚಿಸುತ್ತಿದ್ದರು. ಈ ಕುರಿತು ‘ಆಂದೋಲನ’ದಲ್ಲಿ ಅನೇಕ ಓದುಗರ ಪತ್ರಗಳು, ಲೇಖನಗಳು ಪ್ರಕಟವಾದವು. ದೇವರಾಜ ಅರಸು ಅವರ ತೀರ್ಮಾನದ ವಿರುದ್ಧ ರಾಜ್ಯಾದ್ಯಂತ ಅನೇಕ ಅಪಸ್ವರಗಳು ಕೇಳಿ ಬಂದದ ಲ್ಲದೆ, ಪ್ರತಿಭಟನೆಗಳೂ ನಡೆದವು. ಆದರೂ ಇದಾವುದಕ್ಕೂ ಜಗ್ಗದ ಸರ್ಕಾರ ತನ್ನ ತೀರ್ಮಾನದಿಂದ ಹಿಂದೆ ಸರಿಯಲಿಲ್ಲ.
ಆ ಮೆರವಣಿಗೆಯ ಸಂದರ್ಭದಲ್ಲಿ ಜನ ತಮ್ಮ ಸಹನೆಯನ್ನು ಕಳೆದುಕೊಂಡರು. ಅದು ಹಿಂಸಾಚಾರದ ರೂಪ ಪಡೆಯಿತು. ಇದರಿಂದ ಸಿಟ್ಟಿಗೆದ್ದ ಕೋಟಿಯವರು ‘ಆಂದೋಲನ’ದಲ್ಲಿ ಆಡಳಿತಾರೂಢ ಸರ್ಕಾರದ ಕ್ರಮದಿಂದ ರಾಜ್ಯದ ಜನತೆ ಅನುಭವಿಸಿದ ಹಾನಿ ಹಾಗೂ ನೋವುಗಳಿಗೆ ಇಂದಿರಾ ಗಾಂಧಿ ಹಾಗೂ ದೇವರಾಜ ಅರಸು ಅವರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿ ‘ಇಂದಿರಾ ಭೆಟ್ಟಿಯ ಉಪದ್ವ್ಯಾಪ’ ಎಂಬ ತಲೆಬರಹದಲ್ಲಿ ನಿಷ್ಠೂರವಾಗಿ ಸತ್ಯವನ್ನು ಬಿಚ್ಚಿಡುವ ಮತ್ತು ಅಧಿಕಾರದ ನೆಲೆಯಲ್ಲೇ ನಡುಕ ಹುಟ್ಟಿಸುವಂಥ ಸಂಪಾದಕೀಯವನ್ನು ಬರೆದರು.





