Mysore
20
mist

Social Media

ಶುಕ್ರವಾರ, 02 ಜನವರಿ 2026
Light
Dark

ಈ ಕೆಳಕಂಡ ಮೂರ್ಖ ಯೋಚನೆಗಳಿಗಾಗಿ ಕ್ಷಮೆ ಇರಲಿ 

ಹನಿ ಉತ್ತಪ್ಪ

 

ಯಾಕೋ ಏನೋ ಗೊತ್ತಿಲ್ಲಪ್ಪ. ಈ ಬಾರಿ ಮಂಡ್ಯದಲ್ಲಿ ನಡೆದ ಸಮ್ಮೇಳನಕ್ಕೆ ಹೋಗಲು ನನಗೂ ಮುಹೂರ್ತ ಕೂಡಿ ಬಂತು. ಈವರೆಗೆ ನಾನು ಅಂದುಕೊಂಡದ್ದು ಅಂದುಕೊಳ್ಳದ್ದು ಎಲ್ಲವೂ ನನ್ನ ಕಣ್ಣೆದುರು ತೆರೆದುಕೊಂಡಿತು. ನೋಡಿ ಕನ್ನಡದ ಜನಗಳನ್ನು ಹೆಂಗೆ ಕುರಿ ಮಾಡ್ತೀವಿ ಅನ್ನೋದನ್ನು ಸಾಂಕೇತಿಕವಾಗಿ ತೋರಿಸಲೋ ಎಂಬಂತೆ ಹೊಕ್ಕ ಕೂಡಲೇ ಕಾಣುವಂತೆ ಬನ್ನೂರು ಕುರಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಟಾಯ್ಲೆಟ್ ವ್ಯವಸ್ಥೆ ಸರಿಯಿಲ್ಲ ಅಂತಲೋ ಏನೋ ಹೊಟ್ಟೆ ತುಂಬ ತಿನ್ನಲು ಕೊಟ್ಟ ಹಾಗೆ ಕಾಣಲಿಲ್ಲ.

ಪಾಪ ಎಷ್ಟೆಂದರೂ ಕುರಿಯಲ್ವಾ? ಯಾರು ಪಟ ತೆಕ್ಕೊಂಡರೂ ತಕರಾರಿಲ್ಲದೇ ಅರೆ ಹೊಟ್ಟೆ ಯಲ್ಲೇ ಪೋಸು ಕೊಡುತ್ತಿತ್ತು. ಮೂವತ್ತಕ್ಕೂ ಹೆಚ್ಚು ಪುಟಗಳ ಆಮಂತ್ರಣ ಪತ್ರಿಕೆ ಎಂಬ ಸುದ್ದಿ ಓದಿ, ಪುಟಗಳನ್ನು ಬಿಡಿಬಿಡಿಯಾಗಿ ಫೇಸ್ ಬುಕ್ ಎಂಬ ಮಾಯಾಲೋಕದಲ್ಲಿ ನೋಡಿದವರು ಒಟ್ಟಿಗೇ ನೋಡುವ ಆತುರಕ್ಕೋ ಏನೇನು ಕಾರ್ಯಕ್ರಮವಿದೆ ಮಾಹಿತಿಗೋ ಹುಡುಕಿಕೊಂಡು ಹೋದರೆ ಕನ್ನಡ ಸಾಹಿತ್ಯ ಪರಿಷತ್ತಿನ ಮಳಿಗೆಯಲ್ಲೂ ಆ ಆಮಂತ್ರಣ ಪತ್ರಿಕೆ ಎಂಬುದು ನಾಪತ್ತೆಯಾಗಿತ್ತು! ಆಮಂತ್ರಣ ಪತ್ರಿಕೆಯಂತೇ ಕಾಣೆಯಾದ ಸಮಾನಾಂತರ ವೇದಿಕೆಗಳನ್ನು ಹುಡುಕಲು ಪೊಲೀಸರ ಸಹಾಯ ಕೇಳ ಹೋದರೆ ಪಾಪ ಬಹಳಷ್ಟು ಮಂದಿ ಇದ್ಯಾವುದೂ ತಮ್ಮ ಅರಿವಿಗೆ ಬರುವುದೇ ಬೇಡವೆಂಬ ಪರಮ ಜ್ಞಾನೋದಯವಾದವರಂತೆ ಮಧ್ಯಾಹ್ನದ ಹೊತ್ತಿಗೇ ಪರಮಾತ್ಮನ ಸಾನ್ನಿಧ್ಯದ ಆನಂದದಲ್ಲಿ ತೇಲುತ್ತಿದ್ದರು.

ಶಾಂತಿಪ್ರಿಯ ಕನ್ನಡಿಗರು ಯಾವುದಕ್ಕೂ ಗಲಾಟೆ ಮಾಡಲಾರರು; ಹಾಗಾಗಿ ನಾವು ಅಲರ್ಟ್ ಆಗಿರಲೇಬೇಕು ಎಂದಿಲ್ಲ ಎಂಬ ಗಟ್ಟಿ ನಂಬಿಕೆಯೂ ಅವರಿಗಿದ್ದ ಹಾಗಿತ್ತು. ಅಷ್ಟು ಜಂಗುಳಿಯ ನಡುವೆಯೂ ಜನಸಾಮಾನ್ಯರ ಊಟದ ಕೌಂಟರ್ ಮೂರೂ ಹೊತ್ತು ತೆರೆದೇ ಇತ್ತು ಮತ್ತು ಯಾರೂ ಆಹಾರವಿಲ್ಲದೇ ತೆರಳಿದಂತೆ ಕಾಣಲಿಲ್ಲ. ಹಾಗೆ ಹೊಟ್ಟೆ ತುಂಬ ತಿಂದ ನಂತರ ಹೊರಹಾಕುವುದಕ್ಕೇನು ವ್ಯವಸ್ಥೆ ಎಂಬ ಲೌಕಿಕವಾದ ಪ್ರಶ್ನೆಯನ್ನು ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ ಬಿಡಿ. ಗಂಡಸರು ಹೇಗೋ ನಿಭಾ ಯಿಸುತ್ತಿದ್ದರು; ಹೆಣ್ಣು ಮಕ್ಕಳ ಪಾಡು ಹೇಳತೀರದು. ಹೆಣು ಮಗಳೊಬ್ಬಳನ್ನು ಮಾತನಾಡಿಸಿ ಶೌಚದ ವ್ಯವಸ್ಥೆ ಪರವಾಗಿಲ್ವಾ ಎಂದು ಕೇಳಿದರೆ ‘ಕರ್ತವ್ಯದ ಮೇಲೆ ಮುಂಚಿನ ದಿನವೇ ಬಂದೆ.

ಇನ್ನೇನು ಇವತ್ತೋ ನಾಳೆಯೋ ಪೀರಿಯಡ್ಸ್ ಆಗ ಬಹುದು, ಇಲ್ಲಿ ನೋಡಿದರೆ ಸರಿಯಾಗಿ ಪ್ಯಾಡ್ ಹಾಕಿಕೊಳ್ಳು ವುದಕ್ಕೆ ಬೇಕಾದ ಕನಿಷ್ಠ ಸೌಲಭ್ಯವಿಲ್ಲ. ಆಗಲಿ ಆಗದಿರಲಿ, ಪ್ಯಾಡ್ ಹಾಕಿಕೊಂಡೇ ಬಂದೆ. ಈ ಬಿಸಿಲಿನಲ್ಲಿ ಬೆವರಿಗೇ ಹಿಂಸೆ; ಅದರ ಜೊತೆಗೆ ಇದು ಇನ್ನೂ ಹಿಂಸೆ. ಅದರಿಂದಾಗಿ ಇನ್‌ಫೆಕ್ಷನ್ ಆದರೆ ಅನ್ನೋ ಭಯ, ಆತಂಕದಲ್ಲೇ ನಾಲ್ಕು ದಿನ ಕಳೀಬೇಕಾಗಿದೆ. ಕರ್ತವ್ಯಕ್ಕೆ ಕರೆಯುವವರಿಗೆ ಹೆಣ್ಣು ಮಕ್ಕಳ ಮೂಲಭೂತ ಅವಶ್ಯಕತೆಗೆಳ ಬಗ್ಗೆ ಯೋಚನೆ ಬರುವುದಿಲ್ಲ, ನೋಡಿ ನಮ್ಮ ಹಣೆ ಬರಹ’ ಅಂದರು. ತಮ್ಮೂರಿನಲ್ಲಿ ದಶಕಗಳ ನಂತರ ನಡೆದ ಕನ್ನಡದ ಹಬ್ಬ ನೋಡಲಿಕ್ಕಾಗಿ ಹಸುಗೂಸುಗಳನ್ನೆತ್ತಿಕೊಂಡು ಬಂದವರ ಪಾಡು ಇನ್ನೊಂದೇ ಕಥೆ. ಬಿರು ಬಿಸಿಲಿನ ತಾಪ ದಲ್ಲಿ ಬಾಯಾರಿ ಅಳುವ ಕಂದನಿಗೆ ಹಾಲೂಡಿಸುವುದಕ್ಕೆ ನಾಲ್ಕೂ ಸುತ್ತ ಪರದೆ ಕಟ್ಟಿ ಜನರಿಂದ ಮರೆಯಾಗಿ ಕೂರಲೊಂದು ತಾವಿಲ್ಲ.

ಆ ತಾಯಿ ಪುಸ್ತಕ ಮಳಿಗೆ ಹಾಗೂ ಅದರ ಆವರಣದ ಟೆಂಟ್‌ನ ನಡುವಿದ್ದ ಸಂದಿಯ ಒಂದಡಿ ಜಾಗದಲ್ಲಿ ಹಾಲುಣಿಸಿದ್ದಳು. (ಇಲ್ಲಿ ಸ್ವಚ್ಛವಿತ್ತಾ ಕೇಳುವುದನ್ನು ನಿಷೇಧಿಸಲಾಗಿದೆ) ಇಂಥ ಮೂಲಭೂತ ಅವಶ್ಯಕತೆಗಳ ಬಗ್ಗೆ ಯೋಚನೆ ಬಾರದ ಕೆ. ಎ. ಎಸ್. , ಐ. ಎ. ಎಸ್. ಅಲಂಕೃತ ಅಽಕಾರಿಗಳು/ ಆಯೋಜಕರು ಉದ್ಭವ ಮೂರ್ತಿ ಗಳೋ ಏನೋಪಾ! ಅಮ್ಮನ ಹೊಟ್ಟೆಯಿಂದ ಬಂದವರೇ ಅಗಿದ್ದರೆ ಇದೆಲ್ಲ ಅರ್ಥವಾಗಬೇಕಿತ್ತು ಎಂಬ ನನ್ನ ಮೂರ್ಖ ಯೋಚನೆಗಳಿಗಾಗಿ ದಯವಿಟ್ಟು ನಿಮ್ಮ ಕ್ಷಮೆಯಿರಲಿ ಇಷ್ಟೆಲ್ಲದರ ನಡುವೆಯೂ ಕನ್ನಡಿಗರು ನಾವು ಎಲ್ಲಕ್ಕೂ ಅಡ್ಜಸ್ಟ್ ಮಾಡ್ಕೊಳೋದು ನಮ್ಮ ಪರಮಗುರಿಯೆಂಬಂತೆ ಸಾಗರೋಪಾದಿಯಲ್ಲಿ ಬಂದರು. ಕನ್ನಡಮ್ಮನ ಮುಂದೆ ತಲೆ ಬಾಗಿದರು. ಬೆವರಿನಿಂದ ಅಂಟಾದ ಕೈಯಲ್ಲೇ ಪುಸ್ತಕಗಳನ್ನು ಅಪ್ಪಿಕೊಂಡರು, ಎಲ್ಲ ಅಧ್ವಾನಗಳನ್ನೂ ಒಪ್ಪಿಕೊಂಡರು ಎಂಬಲ್ಲಿಗೆ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶುಭವೂ ಮಂಗಳಕರವಾಗಿಯೂ ಸಂಪನ್ನಗೊಂಡಿತು.

Tags:
error: Content is protected !!