• ಪುನೀತ್ ಮಡಿಕೇರಿ
ಮಡಿಕೇರಿ: ಒಂದು ವಾರದಿಂದ ಸುರಿದ ವರುಣಾರ್ಭಟಕ್ಕೆ ಜಿಲ್ಲೆ ನಲುಗಿದ್ದು, ಸುಮಾರು ರೂ.35 ಕೋಟಿಗೂ ಸರ್ಕಾರಿ ಆಸ್ತಿ-ಪಾಸ್ತಿ ನಷ್ಟಕ್ಕೀಡಾಗಿದೆ.
ವಾರದಿಂದ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ವಿವಿಧೆಡೆ ಹಲವು ಮನೆಗಳು ಕುಸಿದಿವೆ. ಪ್ರವಾಹ, ಗಾಳಿ ಮಿಶ್ರಿತ ಮಳೆಗೆ ಮರಗಳು ಧರೆಗುರುಳಿದ್ದು, 1,791 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಗ್ರಾಮೀಣ ರಸ್ತೆ ಗಳು, ಸೇತುವೆಗಳು ಹಾನಿಯಾಗಿವೆ. ಇದರಿಂದ ಲೋಕೋಪಯೋಗಿ ಇಲಾ 23 26.99 ಕೋಟಿ ರೂ., ಪಂಚಾಯತ್ ರಾಜ್ ಇಂಜಿನಿಯ ರಿಂಗ್ ವಿಭಾಗಕ್ಕೆ 6.83 ಕೋಟಿ ರೂ., ಸೆಸ್ಕ್‌ಗೆ 1.77 ಕೋಟಿ ರೂ. ಸೇರಿದಂತೆ ಒಟ್ಟು ಜೂ.1ರಿಂದ ಜು.20ರವರೆಗೆ 35 ಕೋಟಿ ರೂ. ಸರ್ಕಾರಿ ಆಸ್ತಿ-ಪಾಸ್ತಿಗೆ ನಷ್ಟ ಉಂಟಾಗಿದೆ.
ಇದುವರೆಗೂ 5 ಜಾನುವಾರು ಪ್ರಾಣ ಕಳೆದುಕೊಂಡಿದ್ದು, ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಜಿಲ್ಲಾ ಡಳಿತದ ತಂಡ ಇದುವರೆಗೂ 80ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸುವ ಕಾರ್ಯ ಮಾಡಿದೆ.
2 ಕಡೆಗಳಲ್ಲಿ ಭೂಕುಸಿತ, 5 ಕಡೆಗಳಲ್ಲಿ ಅಲ್ಪಪ್ರಮಾಣದ ಬರೆಜರಿತಘಟನೆಗಳುವರದಿಯಾಗಿವೆ. ಮೈಸೂರು-ಮಾಣಿ ರಾಷ್ಟ್ರೀಯ ಹೆದ್ದಾರಿ 275ರ ನಡುವಿನ ಕರ್ತೋಜಿ ಬಳಿ ಬರೆ ಜರಿದು ರಸ್ತೆ ಹಾನಿಗೀಡಾಗಿದೆ. ಪರಿಣಾಮ ಜು.22ರವರೆಗೆ ರಾತ್ರಿ ಸಂಚಾರವನ್ನು ನಿಷೇಧಿಸಲಾಗಿದೆ. ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ವೆಂಕಟರಾಜಾ ಆದೇಶ ನೀಡಿದ್ದಾರೆ.
ಜೂ.1ರಿಂದ ವರುಣಾಘಾತಕ್ಕೆ 142 ಮನೆಗಳು ಹಾನಿಯಾಗಿವೆ. 12 ಮನೆಗಳು ಪೂರ್ಣ, 34 ಅಲ್ಪ ಪ್ರಮಾಣ, 96 ಮನೆಗಳು ಭಾಗಶಃ ಹಾನಿಗೀಡಾಗಿದ್ದು, ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ವರದಿ ಆಧಾರದಲ್ಲಿ ಎನ್.ಡಿ.ಆರ್.ಎಫ್. ಹಾಗೂ ಎಸ್. ಡಿ.ಆರ್.ಎಫ್. ಮಾರ್ಗಸೂಚಿ ಅನ್ವಯ ಪರಿಹಾರ ನೀಡಲು ಜಿಲ್ಲಾಡಳಿತ ಕ್ರಮವಹಿಸಿದೆ. ಇದರೊಂದಿಗೆ 2 ಶಾಲೆಗಳು, 1 ಅಂಗನವಾಡಿಗೂ ಹಾನಿಯಾಗಿದೆ.
9 ಗ್ರಾಮಗಳಲ್ಲಿ ಪ್ರವಾಹ ಮತ್ತು ಭೂ ಕುಸಿತ ಸಮಸ್ಯೆಗಳು ಉಂಟಾಗಿತ್ತು. ಆ ಪ್ರದೇಶಗಳಲ್ಲಿದ್ದ 90 ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಜಿಲ್ಲೆಯಲ್ಲಿ 4 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, 35 ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಸದ್ಯಕ್ಕೆ ಮಣ್ಣು, ವೆಟ್ ಮಿಕ್ಸ್ ಬಳಸಿ ರಸ್ತೆ ದುರಸ್ತಿಪಡಿಸುವ ಕೆಲಸ ನಡೆಯುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಸಿದ್ದೇಗೌಡ ಮಾಹಿತಿ ಒದಗಿಸಿದ್ದಾರೆ.
ಹಾನಿಗೀಡಾದ ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್, ವಿದ್ಯುತ್ ತಂತಿಗಳನ್ನು ಬದಲಾವಣೆ ಮಾಡುವ ಕೆಲಸ ನಡೆಯುತ್ತಿದೆ. ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದು, ಈಗಾಗಲೇ ತಹಸಿಲ್ದಾರ್ ಖಾತೆಗೆ 1 ಕೋಟಿ ರೂ. ಬಿಡುಗಡೆಗೊಳಿಸಿ ಮಳೆಗಾಲ ಸಂಬಂಧ ಖರ್ಚಿಗೆ ವಿನಿಯೋಗ ಮಾಡಲಾಗುತ್ತಿದೆ.
ಎನ್.ಡಿ.ಆರ್.ಎಫ್. ಪಡೆ ಅಭಯ: ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಎನ್.ಡಿ.ಆರ್.ಎಫ್. ಪಡೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್ ತಂಡಗಳು, ಅಧಿಕಾರಿಗಳು ಮಳೆಗಾಲದ ಮುನ್ನೆಚ್ಚರಿಕೆಯತ್ತ ಕಾರ್ಯೋನ್ಮುಖರಾಗಿದ್ದಾರೆ.
ಕೋಟ್ಸ್))
ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದ್ದು, ಈ ಸಂಬಂಧ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ವಿಶೇಷ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಪ್ರವಾಹದಿಂದ ತೊಂದರೆಗೆ ಒಳಗಾಗಿರುವ ಸಂತ್ರಸ್ತರಿಗೆ ಅಗತ್ಯ ಪರಿಹಾರ ನೀಡುವುದರ ಜತೆಗೆ ಶಾಶ್ವತ ಸೂರು ಕಲ್ಪಿಸಲಾಗುವುದು. ಮಳೆಯಿಂದ ಉಂಟಾಗಿರುವ ನಷ್ಟದ ಸಂಬಂಧ ಕಂದಾಯ ಸಚಿವರಿಗೂ ಮಾಹಿತಿ ನೀಡಲಾಗುವುದು
-ಎನ್.ಎಸ್.ಭೋಸರಾಜು, ಉಸ್ತುವಾರಿ ಸಚಿವರು, ಕೊಡಗು ಜಿಲ್ಲೆ
ಒಂದು ವಾರದಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಇದರಿಂದಾಗಿ ಜನಜೀವನಕ್ಕೆ ಅಸ್ತವ್ಯಸ್ತ ಉಂಟಾಗಿತ್ತು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಲಾಗುವುದು. ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತಗೊಳ್ಳುವ ಕೆಲ ಭಾಗಗಳಲ್ಲಿ ರಸ್ತೆ ಎತ್ತರಿಸುವ ಸಂಬಂಧ ಕ್ರಿಯಾಯೋಜನೆ ಸರ್ಕಾರಕ್ಕೆ ಸಲ್ಲಿಸಿ ಶೀಘ್ರ ಕಾಮಗಾರಿ ನಡೆಸಲಾಗುವುದು.
-ಎ.ಎಸ್.ಪೊನ್ನಣ್ಣ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು.