Mysore
23
clear sky

Social Media

ಶನಿವಾರ, 03 ಜನವರಿ 2026
Light
Dark

2ನೇ ಹಂತದ ಸಿಡಿಹಬ್ಬ ತಾಲೀಮು ಯಶಸ್ವಿ

ಫಿರಂಗಿ ಶಬ್ಬಕ್ಕೆ ಬೆಚ್ಚದೆ ಧೈರ್ಯದಿಂದ ನಿಂತ ಗಜಪಡೆ, ಅಶ್ವಪಡೆ

ಮೈಸೂರು: ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿ ಗಜಪಡೆ ಹಾಗೂ ಅಶ್ವಪಡೆ ವಿಚಲಿತವಾಗಬಾರದು ಎಂಬ ಸದುದ್ದೇಶದಿಂದ ನಗರದ ವಸ್ತು ಪ್ರದರ್ಶನದ ಆವರಣದಲ್ಲಿ ನಡೆಸಲಾದ ಎರಡನೇ ಸುತ್ತಿನ ಸಿಡಿಮದ್ದು ತಾಲೀಮು ಯಶಸ್ವಿಗೊಂಡಿತು.

ಪ್ರಥಮ ತಾಲೀಮು ಸಂದರ್ಭದಲ್ಲಿ ಹೆದರಿದ್ದ ರೋಹಿತ ಆನೆ ಈ ಬಾರಿ ಧೈರ್ಯ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಹೆಣ್ಣಾನೆ ಹಿರಣ್ಯ ಸಿಡಿಮದ್ದಿನ ಶಬ್ದಕ್ಕೆ ಈ ಬಾರಿಯೂ ಹೆದರಿಕೊಂಡಿತು. ಇದನ್ನು ಹೊರತುಪಡಿಸಿ ಅಂಬಾರಿ ಆನೆ ಅಭಿಮನ್ಯು ಸೇರಿದಂತೆ ಎಲ್ಲ ಆನೆಗಳೂ ಧೈರ್ಯ ಪ್ರದರ್ಶಿಸಿದವು.

ಕಳೆದ ಬಾರಿ ತಾಲೀಮಿನಲ್ಲಿ ೧೪ ಆನೆಗಳು ಪಾಲ್ಗೊಂಡಿದ್ದವು. ಆದರೆ, ವಯಸ್ಸಿನ ಹಿರಿತನದ ಕಾರಣಕ್ಕೆ ಎರಡನೇ ಹಂತದ ತಾಲೀಮಿನ ಸಂದರ್ಭ ವರಲಕ್ಷ್ಮೀ ಆನೆಗೆ ವಿಶ್ರಾಂತಿ ನೀಡಲಾಯಿತು. ಒಟ್ಟು ೧೩ ಆನೆಗಳು ಹಾಗೂ ೩೮ ಕುದುರೆಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದವು.

ಆನೆಗಳು ಸಣ್ಣ ಶಬ್ದಕ್ಕೆ ಹೊಂದಿಕೊಂಡು ನಂತರ ದೊಡ್ಡ ಶಬ್ದ ಎದುರಿಸುವ ಧೈರ್ಯ ಬೆಳೆಸಿಕೊಳ್ಳಲಿ ಎಂಬ ಉದ್ದೇಶದಿಂದ ಈ ಬಾರಿ ಪಟಾಕಿ (ಅಟಜಿ ಬಾಂಬ್) ಸಿಡಿಸಲಾಯಿತು. ಪಟಾಕಿ ಶಬ್ದಕ್ಕೆ ಯಾವುದೇ ಆನೆಗಳು ಜಗ್ಗಲಿಲ್ಲ. ನಂತರ ೭ ಫಿರಂಗಿಗಳಿಂದ ೨೧ ಸುತ್ತು ಸಿಡಿಮದ್ದು ಸಿಡಿಸಲಾಯಿತು.

ಹಿರಣ್ಯ ಆನೆಯು ಬೆದರುವ ಸಾಧ್ಯತೆ ಇರುವುದನ್ನು ಮನ ಗಂಡ ಅರಣ್ಯ ಇಲಾಖೆ ಸಿಬ್ಬಂದಿ ಆ ಆನೆಯನ್ನು ಆನೆಗಳ ಗುಂಪಿನಿಂದ ಬೇರ್ಪಡಿಸಿ ಹಿಂದಕ್ಕೆ ನಿಲ್ಲಿಸಿದರು. ಸಿಡಿಮದ್ದು ಸಿಡಿಸುವ ಸಂದರ್ಭ ಮಾವುತ ಹಾಗೂ ಕಾವಾಡಿ ಆನೆಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಉಳಿದಂತೆ ಎರಡು ಸುತ್ತು ಸಿಡಿಮದ್ದು ಸಿಡಿಸಿದ ಬಳಿಕ ೩ನೇ ಸುತ್ತಿನ ಸಿಡಿಮದ್ದು ಸಿಡಿಸುವ ಸಂದರ್ಭ ಆನೆಗಳು ಫಿರಂಗಿಗಳತ್ತ ಮುನ್ನುಗ್ಗಿ ಧೈರ್ಯ ಪ್ರದರ್ಶಿಸಿದವು. ವನ್ಯಜೀವಿ ವಿಭಾಗದ ಡಿಸಿಎಫ್ ಡಾ. ಐ. ಬಿ. ಪ್ರಭುಗೌಡ, ಅರಣ್ಯ ಸಂಚಾರಿ ದಳದ ಡಿಸಿಎಫ್ ಡಾ. ಚಂದ್ರಶೇಖರ್ ಪಾಟೀಲ್, ಮೌಂಟೆಡ್ ಕಮಾಂಡೆಂಟ್ ವಿ. ಶೈಲೇಂದ್ರ, ಅರಮನೆ ಭದ್ರತಾ ಎಸಿಪಿ ಚಂದ್ರಶೇಖರ್, ಸಿಎಆರ್ ಎಸಿಪಿ ಸತೀಶ್, ಆರ್‌ಎಫ್‌ಒ ಸಂತೋಷ್, ಪಶು ವೈದ್ಯರಾದ ಡಾ. ಮುಜೀಬ್ ರೆಹಮಾನ್, ಡಾ. ಮಿರ್ಜಾ ವಾಸಿಂ ಹಾಗೂ ಇತರರು ಹಾಜರಿದ್ದರು.

ಎರಡನೇ ಹಂತದ ಸಿಡಿಮದ್ದು ಸಿಡಿಸುವ ತಾಲೀಮು ಯಶಸ್ವಿಯಾಗಿ ನಡೆದಿದ್ದು, ಆನೆಗಳು ಸಿಡಿಮದ್ದಿನ ಶಬ್ದಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತಿವೆ. ಅ. ೧ರಂದು ಮೂರನೇ ಹಂತದ ತಾಲೀಮು ನಡೆಸಲಾಗುವುದು. ಆ ಸಂದರ್ಭ ಆನೆಗಳು ಶಬ್ದಕ್ಕೆ ಸಂಪೂರ್ಣ ಹೊಂದಿಕೊಳ್ಳುವ ವಿಶ್ವಾಸವಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಆನೆಗಳು ಹೆಚ್ಚು ಹೆದರಲಿಲ್ಲ.
-ಡಾ. ಐ. ಬಿ. ಪ್ರಭುಗೌಡ, ಡಿಸಿಎಫ್, ವನ್ಯಜೀವಿ ವಿಭಾಗ

 

Tags:
error: Content is protected !!