ಚಾಮರಾಜನಗರ: ನಗರದ ಹೊರ ವಲಯದ ಬೈಪಾಸ್ ರಸ್ತೆಯಲ್ಲಿ ಗುರುವಾರ ರಾತ್ರಿ ಕಾರು ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲಿ ಮೃತಪಟ್ಟರೆ, ಮತ್ತೊಬ್ಬ ಗಾಯಗೊಂಡಿದ್ದಾನೆ.
ನಗರದ ನ್ಯಾಯಾಲಯದ ರಸ್ತೆಯ ನಿವಾಸಿ ಪ್ರಕಾಶ್ ಎಂಬವರ ಪುತ್ರ ರೋಹನ್(೨೫), ಅಂಬೇಡ್ಕರ್ ಬಡಾವಣೆಯ ಮಹೇಶ್ ಎಂಬವರ ಮಗ ಶಶಾಂಕ್(೨೬) ಮೃತಪಟ್ಟವರು. ಪೊಲೀಸ್ ಪೇದೆ ರಮೇಶ್ ಅವರ ಮಗ ಗೌತಮ್ ಎಂಬಾ ತನ ಕಾಲು ಮುರಿದಿದೆ. ಆಯುಧ ಪೂಜೆಯ ಅಂಗವಾಗಿ ಮೂವರು ಕಾರನ್ನು ಸ್ವಚ್ಛಗೊಳಿಸಿ ಕೊಂಡು ಬರಲು ಗ್ಯಾರೇಜ್‌ಗೆ ಹೋಗಿದ್ದರು ಎನ್ನಲಾಗಿದೆ.
ನಂತರ ಕಾರಿನಲ್ಲಿ ರಾತ್ರಿ ೭. ೩೦ರಲ್ಲಿ ಮೂಡ್ಲುಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ಮೇಲೆ ತೆರಳುತ್ತಿದ್ದರು. ಈ ವೇಳೆ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ನುಜ್ಜು ಗುಜ್ಜಾಗಿದೆ. ಕಾರು ಚಾಲನೆ ಮಾಡುತ್ತಿದ್ದ ರೋಹನ್ ಮತ್ತು ಶಶಾಂಕ್‌ಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟರು. ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಗೌತಮ್‌ನ ಕಾಲಿಗೆ ತೀವ್ರ ಪೆಟ್ಟು ಬಿದ್ದಿದೆ. ರಸ್ತೆಯಲ್ಲಿ ತೆರಳುತ್ತಿದ್ದವರು ಅಪಘಾತದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಂಚಾರ ಠಾಣೆ ಪೊಲೀಸರು ಗಾಯಾಳು ಹಾಗೂ ಶವಗಳನ್ನು ಸಿಮ್ಸ್ ಆಸ್ಪತ್ರೆಗೆ ಸಾಗಿಸಿದರು. ಈ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.