ಮೈಸೂರು: ಆರ್ಥಿಕವಾಗಿ ಹಿಂದುಳಿದ, ಸಂಸಾರದ ನೊಗ ಹೊತ್ತ ೧೧ ಜನ ಮಹಿಳೆಯರು ಆಟೋರಿಕ್ಷಾ ಚಾಲನೆ ತರಬೇತಿ ಪಡೆದುಕೊಂಡಿದ್ದು, ಮೂರು ಚಕ್ರದ ಬಂಡಿ ಓಡಿಸುತ್ತಾ ಬದುಕಿನ ಬಂಡಿ ಎಳೆಯಲು ಸಜ್ಜಾಗಿದ್ದಾರೆ.
ಸಂಸಾರದ ಹೊರೆ ಹೊತ್ತಿರುವ ಮಹಿಳೆಯರು ತಮ್ಮ ಕಾಲ ಮೇಲೆ ನಿಂತು ಸ್ವಾವಲಂಬಿ ಜೀವನ ನಡೆಸಲು ನೆರವಾಗುವ ಸಲುವಾಗಿ ಎನ್‌ಆರ್ ಫೌಂಡೇಶನ್, ತಳಿರು ಫೌಂಡೇಶನ್, ರೋಟರಿ ಮೈಸೂರು, ರೋಟರಿ ಮೈಸೂರು ಈಸ್ಟ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮೊದಲ ತಂಡದ ೧೧ ಜನ ಮಹಿಳೆಯರಿಗೆ ಆಟೋರಿಕ್ಷಾ ಚಾಲನೆ ತರಬೇತಿ ನೀಡಲಾಗಿದೆ.
ನಗರದ ವಾಲ್ಮೀಕಿ ರಸ್ತೆಯಲ್ಲಿರುವ ಎನ್ಆರ್ ಫೌಂಡೇಶನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಟೋಗೆ ಚಾಲನೆ ನೀಡಿದರು. ಸ್ವಾವಲಂಬಿ ಸ್ತ್ರೀ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಆಟೋರಿಕ್ಷಾ ಚಾಲನೆ ತರಬೇತಿಯ ಜತೆಗೆ ಆರ್ಥಿಕ ಸಾಕ್ಷಾರತೆ, ಆತ್ಮ ರಕ್ಷಣೆ, ಸಂವಹನ ಕೌಶಲ ಮತ್ತು ಸಮಾಲೋಚನೆ ಸೇರಿದಂತೆ ಅಗತ್ಯ ಜೀವನ ಕೌಶಲಗಳ ತರಬೇತಿಯನ್ನೂ ನೀಡಲಾಗಿದೆ. ಹಾಗೆಯೇ ಮಹಿಳೆಯರಿಗೆ ಆರ್‌ಟಿಒನಿಂದ ಪರವಾನಗಿ, ಬ್ಯಾಡ್ಜ್ ಮತ್ತು ಸಮವಸ್ತ್ರ ನೀಡಲಾಗಿದೆ.
ಈಗಾಗಲೇ ಎರಡನೇ ಬ್ಯಾಚ್ ಕೂಡ ಸಿದ್ಧವಾಗಿದ್ದು, ಈ ಬ್ಯಾಚ್‌ನಲ್ಲಿ ೧೨ ಜನ ಮಹಿಳೆಯರು ತರಬೇತಿ ಪಡೆಯಲು ಸಜ್ಜಾಗಿದ್ದಾರೆ. ಇದೇ ವೇಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಎನ್. ಆರ್.
ಫೌಂಡೇಶನ್ ಅಧ್ಯಕ್ಷ ಆರ್. ಗುರು ಅವರು, ಮಹಿಳೆಯರನ್ನು ಸಬಲೀಕರಣಗೊಳಿಸುವುದೆಂದರೆ ಜೀವನ ಕೌಶಲ ಕಲಿಸುವುದಷ್ಟೇ ಅಲ್ಲ, ಅವರ ಸಾಮರ್ಥ್ಯ ಹೆಚ್ಚಿಸಿ ಬದುಕನ್ನು ಬದಲಿಸುವುದಾಗಿದೆ. ಸ್ವಾವಲಂಬಿ ಸ್ತ್ರೀ ಯೋಜನೆ ಮೂಲಕ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಸ್ವತಂತ್ರ ವಾಗಿ ಬದುಕುವಂತೆ ಮಾಡಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ತಳಿರು ಪ್ರತಿಷ್ಠಾನದ ನಿರ್ದೇಶಕರಾದ ಡಾ. ಎ. ಆರ್. ಚಿತ್ರಾ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಮಹಿಳೆ ಯರನ್ನು ಸ್ವಾವಲಂಬಿಗಳನ್ನಾಗಿಸಲು ಈ ತರಬೇತಿ ಕಾರ್ಯಕ್ರಮ ಆರಂಭಿಸಲಾಗಿದೆ. ಶಿಕ್ಷಣದ ಜತೆಗೆ ಕೌಶಲಾಭಿವೃದ್ಧಿ ಮಾಡುವ ಮೂಲಕ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು. ವಾಲ್ಮೀಕಿ ರಸ್ತೆಯಲ್ಲಿರುವ ಎನ್. ಆರ್. ಫೌಂಡೇಶನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೧೧ ಜನ ಮಹಿಳೆಯರ ಆಟೋ ಚಾಲನೆಗೆ ಎನ್. ಆರ್. ಫೌಂಡೇಶನ್ ಅಧ್ಯಕ್ಷ ಆರ್. ಗುರು ಹಸಿರು ನಿಶಾನೆ ತೋರಿದರು. ಡಾ. ಎ. ಆರ್. ಚಿತ್ರಾ, ರೋಟರಿ ಮೈಸೂರಿನ ಎಂ. ಪ್ರವೀಣ್, ರೋಟರಿ ಮೈಸೂರು ಈಸ್ಟ್‌ನ ರೋಹಿತ್ ಸುಬ್ಬಯ್ಯ ಹಾಜರಿದ್ದರು.
ನನಗೆ ಅಪ್ಪ, ಅಮ್ಮ ಇಲ್ಲ. ಮದುವೆಯಾದವನು ೪ ಲಕ್ಷ ರೂ. ಸಾಲ ಹೊರಿಸಿ ಬಿಟ್ಟು ಹೋದ. ಪಾರ್ಲರ್‌ನಲ್ಲಿ ಕೊಡುತ್ತಿದ್ದ ೮ ಸಾವಿರ ರೂ. ಸಂಬಳ ಸಾಲುತ್ತಿರಲಿಲ್ಲ. ತಳಿರು ಸಂಸ್ಥೆಯಲ್ಲಿ ಆಟೋ ಚಾಲನೆ ತರಬೇತಿ ಪಡೆದುಕೊಂಡು ಆಟೋ ಓಡಿಸುತ್ತಿದ್ದು, ಯಾವುದೇ ತೊಂದರೆಯಿಲ್ಲದೆ ಸುಖವಾಗಿದ್ದೇನೆ. -ಲಕ್ಷ್ಮೀ, ಮೈಸೂರು
ನನಗೆ ೩೦ ವರ್ಷ. ಪತಿ ಸಾವನ್ನಪ್ಪಿದ್ದಾರೆ. ಮೂವರು ಹೆಣ್ಣು ಮಕ್ಕಳೊಂದಿಗೆ ವಯಸ್ಸಾದ ತಾಯಿಯ ಜವಾಬ್ದಾರಿಯೂ ನನ್ನ ಹೆಗಲಿಗೆ ಬಿತ್ತು. ನಾನು ಓದಿರುವುದು ಕೇವಲ ೫ನೇ ತರಗತಿ. ಯಾವ ಕೆಲಸ ಮಾಡುವುದು ಎಂಬುದೇ ತಿಳಿದಿರಲಿಲ್ಲ. ಇಂತಹ ಕಷ್ಟದ ಸಂದ ರ್ಭದಲ್ಲಿ ಆಟೋ ತರಬೇತಿ ಪಡೆದಿರುವುದು ಖುಷಿ ತಂದಿದೆ. -ರೇಖಾ, ಪಾಂಡವಪುರ
ನನ್ನ ಗಂಡನಿಗೆ ಆಟೋ ತೆಗೆದುಕೊಟ್ಟಿದ್ದೆ. ಅವರು ನಿಧನರಾದ್ದರಿಂದ ಆಟೋ ಹಾಗೆಯೇ ನಿಂತಿತ್ತು. ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕಷ್ಟವಾಯಿತು. ಈ ವೇಳೆ ಫೇಸ್ ಬುಕ್‌ನಲ್ಲಿ ತರಬೇತಿ ಕಾರ್ಯಕ್ರಮದ ಮಾಹಿತಿ ಪಡೆದು ಸೇರಿಕೊಂಡೆ. ಇದೀಗ ತರಬೇತಿ ಪೂರ್ಣಗೊಂಡಿದ್ದು, ಆಟೋ ಓಡಿಸುತ್ತಿದ್ದೇನೆ. -ಮಂಜುಳ, ಗೋಣಿಕೊಪ್ಪ