Mysore
19
overcast clouds
Light
Dark

ʼಮೈಸೂರು ಚಲೋ ಚಳವಳಿಯಲ್ಲಿ ಸೆರೆವಾಸʼ: ಸ್ವಾತಂತ್ರ್ಯ ಹೋರಾಟಗಾರ ಸೋಮಶೇಖರಯ್ಯ ʼನೆನಪಿನ ದೋಣಿʼ

• ಎಂ.ಎಸ್.ಕಾಶೀನಾಥ್

ಶಾಲೆಯಲ್ಲಿ ಇದ್ದಾಗಲೇ ಪ್ರಭಾತ್ ಫೇರಿಯಲ್ಲಿ ಪಾಲ್ಗೊಳ್ಳುವ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಸೆಳೆತಕ್ಕೆ ಸಿಲುಕಿದ್ದು, ಮೈಸೂರು ಚಲೋ ಚಳವಳಿಯಲ್ಲಿ ಸೆರೆವಾಸ ಅನುಭವಿಸಿದೆ… ಇವು ಸ್ವಾತಂತ್ರ್ಯ ಚಳವಳಿ ಹಾಗೂ ಮೈಸೂರು ಚಲೋ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಡಾ.ಎಂ.ಸೋಮಶೇಖರಯ್ಯ ಅವರ ಮಾತುಗಳು.

ದೇಶಾಭಿಮಾನ, ಬ್ರಿಟಿಷರ ದಾಸ್ಯದಿಂದ ವಿಮುಕ್ತಿ ದೊರೆತ ದಿನಗಳನ್ನು ಕುರಿತು ಮಾತ ನಾಡುತ್ತಿದ್ದ 90ರ ಹರಯದ ಆ ಸ್ವಾತಂತ್ರ್ಯ ಹೋರಾಟಗಾರರ ಕಣ್ಣಲ್ಲಿ 77 ವರ್ಷಗಳ ಹಿಂದಿನ ನೆನಪುಗಳು ಜಲಪಾತದಂತೆ ಧುಮ್ಮಿ ಕುತ್ತಿದ್ದವು…

ಸೋಮಶೇಖರಯ್ಯ ಅವರು ಮೈಸೂರಿನ ಸರಸ್ವತಿಪುರಂ ಬಡಾವಣೆಯ 4ನೇ ಮೇನ್‌ನಲ್ಲಿ ಪ್ರಸ್ತುತ ವಾಸವಾಗಿದ್ದಾರೆ. ನಗರದ ಸುಬ್ಬರಾಯನಕೆರೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಉಪಾಧ್ಯಕ್ಷರು ಕೂಡ. ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಹಾಸನದ ಶಾಲೆಯಲ್ಲಿ ಓದುತಿದ್ದ ನಾನು ಸಹಪಾಠಿಗಳೊಂದಿಗೆ ಪ್ರತಿದಿನ ಬೆಳಿಗ್ಗೆ ಪ್ರಭಾತ್ ಫೇರಿಯಲ್ಲಿ ಪಾಲ್ಗೊಳ್ಳುತ್ತಿದ್ದೆ ಎಂದು ಸೋಮಶೇಖರಯ್ಯ ಅವರು ತಮ್ಮ ಬಾಲ್ಯಾವಸ್ಥೆಯ ದಿನಗಳನ್ನು ನೆನಪಿಸಿಕೊಂಡರು.

1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ಘೋಷಣೆಯಾದ ನಂತರವೂ ಮಹಾರಾಜರ ಆಳ್ವಿಕೆಯಲ್ಲಿದ್ದ ಮೈಸೂರು ಸಂಸ್ಥಾನ ಮಾತ್ರ ಒಕ್ಕೂಟಕ್ಕೆ ಸೇರದೆ ಸ್ವತಂತ್ರ ರಾಜ್ಯವಾಗಿಯೇ ಉಳಿದುಕೊಂಡಿತ್ತು. ಆಗ ಮೈಸೂರು ಸಂಸ್ಥಾನವನ್ನೂ ದೇಶದ ಒಕ್ಕೂಟಕ್ಕೆ ಸೇರಿಸಬೇಕೆಂಬ ಧ್ವನಿ ಜೋರಾಯಿತು ಎಂದು ಅವರು ವಿವರಿಸಿದರು.

ಆಗ ಹಾಸನದಲ್ಲಿ ಸೆಕ್ಷನ್ 144 ಅನ್ನು ಜಾರಿ ಮಾಡಲಾಗಿದ್ದರೂ 1947ರ ಸೆಪ್ಟೆಂಬರ್ 27ರಂದು ಪ್ರಭಾತ್ ಫೇರಿಯಲ್ಲಿ ಭಾಗವಹಿಸಿದ್ದ ನಾನೂ ಸೇರಿದಂತೆ ಆರು ವಿದ್ಯಾರ್ಥಿಗಳನ್ನು ಮೈಸೂರು ಚಲೋ ಚಳವಳಿ ಸತ್ಯಾಗ್ರಹದಲ್ಲಿ ಭಾಗವಹಿಸಕೂಡದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು. ಅವರ ಮಾತಿಗೆ ಕಿವಿ ಗೊಡದಿದ್ದಾಗ ನಮ್ಮನ್ನು ಪೊಲೀಸರು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ನಮಗೆ ಸೆರೆವಾಸ ವಿಧಿಸಿ ಆದೇಶ ನೀಡಿದರು ಎಂದು ಸೋಮಶೇಖರಯ್ಯ ತಿಳಿಸಿದರು.

ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಮುಗಿಸಿದ ನಂತರ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಡಾ.ಸೋಮಶೇಖರಯ್ಯ ಅವರದು ಸಾರ್ಥಕ ಬದುಕಾಗಿದೆ.

ಕೋಟ್ಸ್‌)))

ಗಣ್ಯರೊಂದಿಗೆ ಸೆರೆವಾಸ: ಒಟ್ಟು 11 ದಿನಗಳ ಕಾಲ ಸೆರೆಯಲ್ಲಿದ್ದ ನಮ್ಮನ್ನು 1947ರ ಅ.7 ರಂದು ಸಂಜೆ ಬಿಡುಗಡೆ ಮಾಡಿದರು. ನಮ್ಮನ್ನು ಹಾಸನದ ಜೈಲಿನಲ್ಲಿ ಇರಿಸಿದ್ದಾಗ ನಮ್ಮೊಂದಿಗೆ ಸ್ವಾತಂತ್ರ್ಯ ಚಳವಳಿ ಹಾಗೂ ಮೈಸೂರು ಚಲೋ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಸಿದ್ದವನಹಳ್ಳಿ ಕೃಷ್ಣಶರ್ಮ, ಕೆ.ಟಿ.ಭಾಷ್ಯಂ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮುಂತಾದ ನಾಯಕರೂ ಇದ್ದರು.
-ಡಾ.ಎಂ.ವಿ ಸೋಮಶೇಖರಯ್ಯ