ಕನ್ನಡ ಸಾಹಿತ್ಯದಲ್ಲಿ ‘ದಲಿತ ಮತ್ತು ಬಂಡಾಯ’ ಸಾಹಿತ್ಯವೆಂಬ ಎರಡು ಪ್ರಕಾರಗಳು ಹೊರಹೊಮ್ಮಲು ನಂಜನಗೂಡು ತಾಲ್ಲೂಕಿನ ಎರಡು ಅದ್ಭುತ ಪ್ರತಿಭೆಗಳಾದ ದೇವನೂರ ಮಹಾದೇವ ಮತ್ತು ಮುಳ್ಳೂರು ನಾಗರಾಜ್‌ರವರುಗಳೂ ಕಾರಣ ಎಂಬುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಸೂಕ್ತ. ದೇವನೂರರ ಸಮಗ್ರ ಸಾಹಿತ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದ್ದರೆ, ಮುಳ್ಳೂರರು ದೇಶ-ವಿದೇಶಗಳಲ್ಲಿ ತಮ್ಮ ಸಾಹಿತ್ಯ ಕೃಷಿ ಮೂಲಕ ಹೆಸರು ಮಾಡಿದ್ದಾರೆ.
‘ಕನಸಿನಲ್ಲಿ ಕರ್ಣ’ ಎಂಬ ಮುಳ್ಳೂರರ ಕವಿತೆ ಗುಜರಾತ್ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಕವನ ಸಂಕಲನದಲ್ಲಿ ಗುಜರಾತಿ ಭಾಷೆಗೆ ತರ್ಜುಮೆಗೊಂಡಿದೆ. ಅಮೆರಿಕಾದ ಜಾನ್ ಆಲಿವರ್ ಪೆರಿ ಎಂಬುವವರು ಸಂಪಾದಿಸಿರುವ ಕವನ ಸಂಕಲನದಲ್ಲಿ ಮುಳ್ಳೂರರ ‘ದಿಲ್ಲಿ ದುರುಗವ್ವನ ಕರಾಳ ಶಾಸನ’ ಕವಿತೆ ಇಂಗ್ಲೀಷ್‌ಗೆ ತರ್ಜುಮೆಗೊಂಡು ಪ್ರಕಟಗೊಂಡಿದೆ.
ಈ ಕವನವನ್ನು ‘ಚಂಪಾ’ ಇಂಗ್ಲಿಷ್‌ಗೆ ತರ್ಜುಮೆ ಮಾಡಿದ್ದಾರೆ. ನಂಜನಗೂಡು ತಾಲ್ಲೂಕಿನ ಈ ಎರಡು ಪ್ರತಿಭೆಗಳು ದೇಶ-ವಿದೇಶಗಳಲ್ಲಿ ಹೆಸರು ಮಾಡುವಲ್ಲಿ ದಲಿತ ಚಳವಳಿ ಹಾಗೂ ಇದರಲ್ಲಿ ‘ಆಂದೋಲನ’ ದಿನಪತ್ರಿಕೆಯ ಪಾತ್ರವೂ ಇದೆ ಎಂಬುದನ್ನು ಉಲ್ಲೇಖಿಸಲು ಖುಷಿಯಾಗುತ್ತದೆ.