ಮೈಸೂರಿನ ಕಾರಂಜಿ ಕೆರೆಯ ಎದುರಿಗೆ ಇರುವ ಅಶ್ವಾರೋಹಿ ಪಡೆಯ ಆವರಣದ ಮುಂದೆ ಸ್ಥಾಪನೆ ಮಾಡಿರುವ ಇಬ್ಬರು ಮಹನೀಯರ ಪ್ರತಿಮೆಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಈ ಪ್ರತಿಮೆಗಳ ಮೂಲಕ ಈಗಲೂ ಜೀವಂತವಾಗಿರುವ ಮಹನೀಯರಿಗೆ ಸಾಕ್ಷಾತ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಗೌರವ ಸಮರ್ಪಣೆ ಮಾಡಿದ್ದರು. ಆ ಎರಡು ಪ್ರತಿಮೆಗಳಲ್ಲಿ ಒಬ್ಬರದ್ದು ಪೋಸ್ಟ್‌ಮನ್ ಬಸವಯ್ಯ ಅವರದ್ದು. ಪೋಸ್ಟ್ ಮನ್ ಎನ್ನುವುದಕ್ಕಿಂತ ಓಲೇಕಾರ ಎಂದು ಕರೆಯಬಹುದು. ಬಸವಯ್ಯ ಅವರು ಓಲೆಗಳನ್ನು ಸಮಯಕ್ಕೆ ಸರಿಯಾಗಿ ಮುಟ್ಟಿಸುತ್ತಿದ್ದ ಪರಿ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಆ ಕಾಲದಲ್ಲಿ ಓಲೆ ಕೊಡಲು ನಡೆದುಕೊಂಡೇ ಹೋಗಬೇಕು. ಕೈಯಲ್ಲಿ ಗಂಟೆಗಳನ್ನು ಅಳವಡಿಸಿಕೊಳ್ಳಲಾಗಿದ್ದ ಉದ್ದನೆ ಕೋಲು, ಮತ್ತೊಂದು ಕೈಯಲ್ಲಿ ಲಾಟೀನು, ಬಗಲಲ್ಲಿ ಮಳೆ-ಗಾಳಿ ಬಂದರೂ ಏನು ಆಗದಂತಹ ಬ್ಯಾಗು. ರಾತ್ರಿ-ಹಗಲು, ಮಳೆ-ಬಿಸಿಲು ಎಲ್ಲ ಕಾಲದಲ್ಲೂ ಸೇವೆ ನಡೆಯುತ್ತಿತ್ತು.
ಇನ್ನೂ ಭುಜಂಗರಾವ್ ಕೂಡ ಸಂದೇಶ ವಾಹಕರೇ. ಅದರೆ ಇವರು ಕುದುರೆಯ ಮೇಲೆ ಕುಳಿತು ಪ್ರದೇಶದಿಂದ ಪ್ರದೇಶಕ್ಕೆ ಸಂದೇಶ ತಲುಪಿಸುತ್ತಿದ್ದರು. ಇಂತಹವರನ್ನು ಗುರುತಿಸಿ ನಾಲ್ವಡಿಯವರು ಅವರ ಪ್ರತಿಮೆಗಳನ್ನು ಸ್ಥಾಪನೆ ಮಾಡಿರುವುದು ಮೈಸೂರು ರಾಜಪರಂಪರೆಯು ಸಾಮಾನ್ಯರಿಗೂ ಕೊಡುತ್ತಿದ್ದ ಗೌರವದ ದ್ಯೋತಕ.