Mysore
20
overcast clouds
Light
Dark

ʼಆಂದೋಲನ 50 ಸಾರ್ಥಕ ಪಯಣʼ ಕಾರ್ಯಕ್ರಮದ ಯಶಸ್ಸಿನಲ್ಲಿ ಮಾಧ್ಯಮಗಳ ಪಾತ್ರ

ಮೈಸೂರು : ‘ಆಂದೋಲನ’ 50 ಸಾರ್ಥಕ ಪಯಣ ಕಾರ್ಯಕ್ರಮದ ಯಶಸ್ಸಿಗೆ ಮಾಧ್ಯಮಗಳ ಪಾತ್ರವೂ ಕಾರಣವಾಗಿದೆ. ‘ಆಂದೋಲನ’ ದಿನ ಪತ್ರಿಕೆ ಹಾಗೂ ಸಂಸ್ಥಾಪಕರಾದ ರಾಜಶೇಖರ ಕೋಟಿ ಅವರ ಜತೆಗಿನ ಒಡನಾಟ, ಅವರ ಮೇಲಿನ ಅಭಿಮಾನದಿಂದ ರಾಜ್ಯದ ಉದ್ದಗಲಕ್ಕೂ ಹರಡಿರುವ ಅನೇಕ ಹಿರಿಯ ಪತ್ರಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಕೋರಿದ್ದಾರೆ. ಅವರಿಗೆ ಪತ್ರಿಕೆ ವತಿಯಿಂದ ಕೃತಜ್ಞತೆಗಳು.


ಜತೆಗೆ ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮಗಳು ಕಾರ್ಯಕ್ರಮದ ವರದಿಗಳನ್ನು ತುಂಬಾ ಅಚ್ಚುಕಟ್ಟಾಗಿ ವರದಿ ಮಾಡಿ ನಮ್ಮ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ಮೂಲಕ  ನಮ್ಮ ಜವಾಬ್ಧಾರಿಯನ್ನೂ ಹೆಚ್ಚಿಸಿದ್ದಾರೆ. ಕೆಲವು ದೃಷ್ಯ ವಾಹಿನಿಗಳ ಮುಖ್ಯಸ್ಥರು ಪತ್ರಿಕೆ ಹಾಗೂ ಸಂಪಾದಕರ ಬಗ್ಗೆ ವಿಶೇಷ ಮಾತುಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತ್ರಿಕೆ ನಡೆದು ಬಂದ ಹಾದಿಯನ್ನೂ ವಿವರಿಸಿದ್ದಾರೆ. ಇವರಿಗೆಲ್ಲ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ದಿ ಹಿಂದೂ, ಇಂಡಿಯನ್ ಎಕ್ಸ್‌ಪ್ರೆಸ್, ವಿಜಯ ಕರ್ನಾಟಕ, ಕನ್ನಡಪ್ರಭ, ಉದಯವಾಣಿ, ವಿಶ್ವವಾಣಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ, ಮೈಸೂರು ಮಿತ್ರ, ಪ್ರಜಾನುಡಿ, ಪ್ರತಿನಿಧಿ, ಹಲೋ ಮೈಸೂರು, ನ್ಯೂಸ್ ಟ್ರೇಲ್, ನ್ಯೂಸ್ ಒನ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ಪತ್ರಿಕೆಗಳು, ಖಾಸಗಿ ವಾಹಿನಿಗಳು ಸುದ್ದಿ ಬಿತ್ತರಿಸಿವೆ.

ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಆಂದೋಲನ’ ಪತ್ರಿಕೆ ೫೦ರ ಸಂಭ್ರಮ ಆಚರಿಸಿಕೊಂಡಿದೆ. ೫೦ ವರ್ಷಗಳ ಕಾಲ ಪತ್ರಿಕೆ ನಡೆಸುವುದು ಸುಲಭದ ವಿಷಯವಲ್ಲ. ಸಂಪಾದಕರಾಗಿದ್ದ ರಾಜಶೇಖರ ಕೋಟಿ ಅವರು ಪ್ರಾರಂಭದಲ್ಲಿ ಅನೇಕ ಕಷ್ಟ, ಕೋಟಲೆಗಳನ್ನು ಎದುರಿಸಿದ್ದರು, ಬಳಲಿದ್ದರು. ಈ ಪತ್ರಿಕೆಯನ್ನು ಓದಿಕೊಂಡು, ಇದರ ನಡುವೆಯೇ ಬೆಳೆದವರು ನಾವು. ಸೈದ್ಧಾಂತಿಕವಾಗಿ ಪತ್ರಿಕೆಯನ್ನು ಕಟ್ಟಿ ಬೆಳಸಿದ್ದಾರೆ. ಪತ್ರಿಕಾ ಮಾಧ್ಯಮ ಆಮಿಷಗಳಿಗೆ, ಬ್ಲಾಕ್‌ಮೇಲ್‌ಗಳಿಗೆ ಒಳಗಾಗಿದೆ ಎಂಬ ಆರೋಪಗಳು ಕೇಳಿಬರುತ್ತಿರುವುದರ ನಡುವೆಯೂ ತಮ್ಮ ಸಿದ್ಧಾಂತವನ್ನು ಬಿಡದೆ ಉತ್ತಮ ಪತ್ರಿಕೋದ್ಯಮವನ್ನು ನಡೆಸಿಕೊಂಡು ಬಂದವರು ಕೋಟಿಯವರು. ಅವರದು ಹೋರಾಟದ ಬದುಕು. ಪತ್ರಿಕೆ ಕಟ್ಟಿ ಬೆಳಸುವುದು ಸುಲಭವಲ್ಲ. ಪತ್ರಿಕೆಗೆ ಒಳ್ಳೆಯದಾಗಲಿ.
ಎಚ್.ಆರ್.ರಂಗನಾಥ್, ಪಬ್ಲಿಕ್ ಟಿವಿ ಮುಖ್ಯಸ್ಥ

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ