Mysore
18
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಕಬ್ಬು ಬೆಳೆಗಾರರ ಧರಣಿ ಕೈಬಿಡಲು ಸಿಎಂ ಬೊಮ್ಮಾಯಿ ಮನವಿ

ಬೆಂಗಳೂರು: ಕಬ್ಬಿನ ಉಪ ಉತ್ಪನ್ನಗಳ ಲಾಭ ಹೆಚ್ಚುವರಿ 50 ರೂ. ಮಾಡಿರುವುದನ್ನು ಸರ್ಕಾರ ಸದ್ಯದಲ್ಲೇ ಪುನರ್ ಪರಿಶೀಲನೆ ನಡೆಸಿ ಹೆಚ್ಚಳ ಮಾಡುವುದು, ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಏರಿಕೆಯಾಗಿರುವ ಬಗ್ಗೆ ವರದಿ ಪಡೆದು ಅದನ್ನು ಕಡಿಮೆ ಮಾಡಿ ರೈತರಿಗೆ ಹೆಚ್ಚು ಬೆಲೆ ಸಿಗುವಂತಾಗುವ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.  ರೇಸ್ ಕೋರ್ಸ್ ರಸ್ತೆಯ ನಿವಾಸದಲ್ಲಿ ಕಬ್ಬು ಬೆಳೆಗಾರರ  ಒಕ್ಕೂಟದೊಂದಿಗೆ ಬುಧವಾರ ಬೆಳಗ್ಗೆ ಸಭೆ ನಡೆಸಿ ಮಾತನಾಡಿದರು.

ಕಬ್ಬಿನ ತೂಕದಲ್ಲಿ ಮೋಸ ತಡೆಗಟ್ಟಲು ಎಲ್ಲ ಸಕ್ಕರೆ ಕಾರ್ಖಾನೆಗಳ ಮುಂದೆ ಸರ್ಕಾರದ ವತಿಯಿಂದ ಎಪಿಎಂಸಿಗಳ ಮೂಲಕ ತೂಕದ ಯಂತ್ರ ಸ್ಥಾಪಿಸಲಾಗುವುದು. ಆದಕಾರಣ ಚಳವಳಿಯನ್ನು ಕೈ ಬಿಡಬೇಕು ಎಂದು ಮನವಿ ಮಾಡಿದರು.
ಸಭೆಯ ಆರಂಭದಲ್ಲಿ ಕಬ್ಬು ಬೆಳೆಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ,
ಕಬ್ಬು ಬೆಳೆಗಾರರು ನಿರಂತರ 23 ದಿನದಿಂದ ಧರಣಿ ನಡೆಸುತ್ತಿದ್ದರೂ ಸರ್ಕಾರದಿಂದ ಸಮಸ್ಯೆ ಪರಿಹರಿಸುವ ಗಂಭೀರ ಚಿಂತನೆ ನಡೆಯುತ್ತಿಲ್ಲ. ಈಗಿನ ಕಬ್ಬಿನ ಎಫ್ ಆರ್ ಪಿ ದರ ಪ್ರಕಾರ ರೈತರಿಗೆ ಉತ್ಪಾದನಾ ವೆಚ್ಚವು ದೊರೆಯುತ್ತಿಲ್ಲ. ಕಬ್ಬು ಕಟಾವು ಕೂಲಿ ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಗಳು ಮನಬಂದಂತೆ ಏರಿಕೆ ಮಾಡಿವೆ. ಇದಕ್ಕೆ ಕಡಿವಾಣ ಹಾಕಿದರೆ ರೈತರಿಗೆ ಟನ್ ಗೆ 150 ಹೆಚ್ಚುವರಿ ಉಳಿಯುತ್ತದೆ. ಕಾರ್ಖಾನೆಗಳಿಂದ ಕೊಡಿಸಲು ಸಾಧ್ಯವಾಗದಿದ್ದರೆ ಸರ್ಕಾರವೇ ಹೆಚ್ಚುವರಿ ದರ ನೀಡಿ ರೈತರ ರಕ್ಷಣೆ ಮಾಡಿ ನಾವು ರಾಜಕಾರಣ ಮಾಡಲು ಹೋರಾಟ ಮಾಡುತ್ತಿಲ್ಲ. ಎಂಎಲ್ಎ ಎಂಪಿ ಆಗಲು ಸರ್ಕಸ್ ಮಾಡುತ್ತಿಲ್ಲ. ರೈತರ ಬದುಕಿನ ಬಗ್ಗೆ ಸರ್ಕಾರದ ಗಮನ ಸೆಳೆಯಲು ಚಳವಳಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದ ಶೇ.50 ಕಬ್ಬು ಬೆಳೆಯುವ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಗಂಭೀರ ಚಿಂತನೆ ನಡೆಸಿ ಎಂದರು . ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ನೀಡಿ, ಸಕ್ಕರೆ ಕಾರ್ಖಾನೆಗಳು ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿವೆ. ಅದಕ್ಕಾಗಿ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತದೆ ಎಂದು ಭರವಸೆ ನೀಡಿದರು‌

ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಡಿಸಿಪಿ ಲಕ್ಷ್ಮಣ್ ನಿಂಬರಗಿ, ರೈತ ಮುಖಂಡರಾದ ವೀರನಗೌಡ ಪಾಟೀಲ್, ಕುಮಾರ್ ಬುಬಾಟಿ, ಅಂಜನಪ್ಪ ಪೂಜಾರ, ಗುರುಸಿದ್ದಪ್ಪ ಕೋಟಗಿ ಹತ್ತಳ್ಳಿ ದೇವರಾಜ್ ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!