ಬೆಂಗಳೂರು– ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಮಳೆ ಆರ್ಭಟ ಜೋರಾಗಿದ್ದು, ಇನ್ನೂ ಎರಡು ದಿನ ಮುಂದುವರಿಯುವ ಮುನ್ಸೂಚನೆಗಳಿವೆ.
ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿ ಗಾಳಿ ಉಂಟಾಗಿದ್ದು, ಒಳನಾಡಿನಲ್ಲಿ ಟ್ರಫ್ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ಕೆಲವೆಡೆ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುತ್ತಿದ್ದು, ಕೆಲವೆಡೆ ಭಾರೀ ಮಳೆಯು ಆಗಿದೆ. ಸೋಮವಾರ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಭಾರಿ ಮಳೆಯಾದ ವರದಿಯಾಗಿದ್ದು, ನಿನ್ನೆಯೂ ಕೂಡ ಕೆಲವೆಡೆ ಭಾರಿ ಮಳೆಯಾಗಿದೆ. ರಾಯಚೂರು, ಯಾದಗಿರಿ, ಕಲ್ಬುರ್ಗಿ, ವಿಜಯಪುರ, ಗದಗ, ಚಿತ್ರದುರ್ಗ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಂಡ್ಯ, ತುಮಕೂರು ಜಿಲ್ಲೆಗಳ ಕೆಲವು ಕಡೆ ಭಾರಿ ಮಳೆಯಾದ ವರದಿಯಾಗಿದೆ.
ಉಳಿದಂತೆ ರಾಜ್ಯದ ಒಳನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆ ಬಹುತೇಕ ಕಡೆಗಳಲ್ಲಿ ಬಿದ್ದಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ನಾಳೆಯಿಂದ ಮಳೆಯ ತೀವ್ರತೆ ಕಡಿಮೆಯಾಗಲಿದೆ. ಆದರೆ ಪೂರ್ಣವಾಗಿ ನಿಲ್ಲುವುದಿಲ್ಲ. ಅಲ್ಲಲ್ಲಿ ಸಾಧಾರಣ ಮಳೆ ಮುಂದುವರೆಯುತ್ತಲೇ ಇರುತ್ತದೆ. ನೈಋತ್ಯ ಮುಂಗಾರು ಮರಳುವಿಕೆ ಪ್ರಕ್ರಿಯೆ ಹಾಗೂ ಈಶಾನ್ಯ ಹಿಂಗಾರು ಆರಂಭದ ನಡುವಿನ ಬರುವ ಕಾಲ ಇದಾಗಿದ್ದು, ಈ ಸಂದರ್ಭದಲ್ಲಿ ಮಳೆಯಾಗುವುದು ಸಹಜ ಪ್ರಕ್ರಿಯೆ ಎಂದು ಹವಾಮಾನ ತಜ್ಞರು ಸ್ಪಷ್ಟಪಡಿಸಿದ್ದಾರೆ.
ಕಳೆದ ಎರಡು ವಾರದಿಂದ ಒಣಹವೆ ಕಂಡು ಬಂದಿದ್ದು, ವಿವಿಧ ಬೆಳೆಗಳಿಗೆ ಮಳೆಯ ಅಗತ್ಯವೂ ಇತ್ತು. ಹೀಗಾಗಿ ರೈತ ಸಮುದಾಯಕ್ಕೆ ಈ ಮಳೆಯಿಂದ ಅನುಕೂಲಕರವಾಗಿವೆ. ಕೆಲವು ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅನಾಹುತಗಳನ್ನು ಸೃಷ್ಟಿಸಿವೆ.
ದಾವಣಗೆರೆ ಜಿಲ್ಲೆಯಲ್ಲಿ ಎರಡು ದಿನಗಳಿಂದ ಸಾಕಷ್ಟು ಮಳೆಯಾಗಿದ್ದು, ಕೆಲವು ಕೆರೆಗಳು ಕೂಡಿ ಬಿದ್ದಿದ್ದರೆ ಹಲವು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿವೆ. ತಾಲೂಕಿನ ಅಣಜಿಕೆರೆ 40 ವರ್ಷಗಳ ಬಳಿಕ ಭರ್ತಿಯಾಗಿದೆ. ಮಲ್ಪೆ, ಮೊಳಕಾಲ್ಮೂರು ರಾಜ್ಯ ಹೆದ್ದಾರಿಯ ಸಂಪರ್ಕ ಅಸ್ತವ್ಯಸ್ತವಾಗಿದೆ.
ದಾವಣಗೆರೆ ತಾಲ್ಲೂಕಿನ ಗುಮ್ಮನೂರು, ಮಡ್ಲೂರು, ಅಣಜಿ ಸೇರಿದಂತೆ ಕೆಲವು ಗ್ರಾಮಗಳಿಗೆ ನೀರು ನುಗ್ಗಿದೆ. ಕೆರೆಯಾಗಳ ಹಳ್ಳಿಯಲ್ಲಿ ಕೋಳಿ ಫಾರಂಗೂ ನೀರು ನುಗ್ಗಿ ಧಾರವಾಡದಲ್ಲಿ ಸಾಕಷ್ಟು ಮಳೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯಿಂದ ತಗ್ಗು ಪ್ರದೇಶದ ಹಲವು ಬಡಾವಣೆಗಳಿಗೆ ನೀರು ನುಗ್ಗಿದೆ. ಸಾಕಷ್ಟು ಹಾನಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಕೆರೆಗಳು ಭರ್ತಿಯಾಗಿ ಕೋಡಿಬಿದ್ದಿವೆ.
ಹೀಗೆ ಬಹಳಷ್ಟು ಕಡೆ ಉತ್ತಮ ಮಳೆಯಾಗಿದ್ದು, ಜನರಿಗೆ ಸಾಕಷ್ಟು ತೊಂದರೆ ಉಂಟಾದ ವರದಿಯಾಗಿದೆ.





