ಬೆಂಗಳೂರು: ರಾಜ್ಯದ ಅಡಿಕೆ ತೋಟಗಳಲ್ಲಿ ಹಬ್ಬಿರುವ ಎಲೆಚುಕ್ಕೆ ರೋಗದ ಬಗ್ಗೆ ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರದ ಏಳು ತಜ್ಞರನ್ನು ಒಳಗೊಂಡ ಸಮಿತಿ ರಚನೆ ನಿರ್ಧಾರವನ್ನು ಗೃಹ ಸಚಿವ ಹಾಗೂ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ಸ್ವಾಗತಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸಚಿವರು, ಮಲೆನಾಡು ಹಾಗೂ ಕರಾವಳಿ ಭಾಗದ ರೈತರು ಎದುರಿಸುತ್ತಿರುವ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಿದ್ದು ಅಡಿಕೆ ಬೆಳೆಗೆ ಎದುರಾಗಿರುವ ರೋಗ ನಿವಾರಣೆಗೆ ಸಮಿತಿ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿ ಎಂದು ಆಶಿಸಿದ್ದಾರೆ.
ಕಳೆದ ವಾರವಷ್ಟೇ ಅಡಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾದ ಎಲೆ ಚುಕ್ಕೆ ರೋಗಕ್ಕೆ ಪರಿಹಾರ ಕೋರಿ ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ನೇತೃತ್ವದ ನಿಯೋಗ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ನವದೆಹಲಿಯಲ್ಲಿ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಸಮಸ್ಯೆಯ ಪರಿಹಾರಕ್ಕೆ ಕ್ಷಿಪ್ರ ಗತಿಯಲ್ಲಿ ಸ್ಪಂದಿಸಿ ಸಮಿತಿ ರಚಿಸಿದೆ ಎಂದರು.ರಾಜ್ಯದಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದ ಅಡಿಕೆ ತೋಟಗಳು ಎಲೆ ಚುಕ್ಕೆ ರೋಗಕ್ಕೆ ಬಲಿಯಾಗಿದ್ದು ಕಾಳ್ಗಿಚ್ಚಿನಂತೆ ಇತರೆಡೆಗೆ ಹರಡುತ್ತಿದೆ ಎಂದು ಸಚಿವರು, ಆತಂಕ ವ್ಯಕ್ತಪಡಿಸಿದರು.
ಸರಿವಸುಮಾರು ಐವತ್ತು ಲಕ್ಷ ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಜೀವನೋಪಾಯ ಕಲ್ಪಿಸಿಕೊಟ್ಟಿರುವ ಅಡಿಕೆ ಬೆಳೆ ನಮ್ಮ ಭಾಗದ ರೈತರ ಆರ್ಥಿಕ ಜೀವನಾಡಿಯಾಗಿದೆ ಎಂದು ಹೇಳಿದರು.