Mysore
28
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಬರ ನಿರ್ವಹಣೆಗಾಗಿ 31 ಜಿಲ್ಲೆಗಳಿಗೆ 324 ಕೋಟಿ ರೂ ಬಿಡುಗಡೆ: ಕೃಷಿ ಸಚಿವರು

ಮುಂದಿನ ದಿನಗಳಲ್ಲಿ ಕುಡಿಯುವ ನೀರಿ ಪೂರೈಕೆ, ಗೋಶಾಲೆ, ಮೇವಿನ ಬ್ಯಾಂಕ್ ನಿರ್ವಹಣೆ ಇತರೆ ತುರ್ತು ಬರ ನಿರ್ವಹಣೆ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು 31 ಜಿಲ್ಲೆಗಳಿಗೆ 324 ಕೋಟಿ ರೂ.ಗಳನ್ನು ಕಳೆದ ಅಕ್ಟೋಬರ್ ಮಾಹೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಎಂದು ಕೃಷಿ ಸಚಿವರಾದ ಚೆಲುವ ನಾರಾಯಣಸ್ವಾಮಿ ಅವರು ಹೇಳಿದರು.

ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಗೋವಿಂದರಾಜು ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಆರ್‌ಬಿಐ ನಿರ್ದೇಶನದಂತೆ ರೈತರ ಬೆಳೆ ಸಾಲದ ಮರುಪಾವತಿ ಅವಧಿಯನ್ನು ಅಲ್ಪಾವಧಿಯಿಂದ ಮಧ್ಯಾವಧಿ ಅಥವಾ ದೀರ್ಘಾವಧಿವರೆಗೆ ರೀ ಸ್ಟ್ರಕ್ಚರ್ ಮಾಡಲು ಎಸ್‌ಎಲ್‌ಬಿಸಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.‌

ರಾಜ್ಯದಲ್ಲಿ 236 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೆ ವರದಿಯನ್ವಯ 46.11 ಲಕ್ಷ ಹೆಕ್ಟೇರ್ ಕೃಷಿ ಹಾಗೂ 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಸೇರಿದಂತೆ ಒಟ್ಟು 48.17 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದ್ದು, ಬೆಳೆಹಾನಿ ಇನ್‌ಪುಟ್ ಸಬ್ಸಿಡಿಗೆ ಎನ್‌ಡಿಆರ್‌ಎಫ್ ಅಡಿಯಲ್ಲಿ ರೂ.4663.12 ಕೋಟಿ ರೂ.ಗಳ ಆರ್ಥಿಕ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅನುದಾನವನ್ನು ನಿರೀಕ್ಷಿಸಿ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಬೆಳೆಹಾನಿ ಪರಿಹಾರದ ಮೊಲದನೇ ಕಂತಾಗಿ ಬೆಳೆಹಾನಿ ಪರಿಹಾರವಾಗಿ ಅರ್ಹತೆಯ ಅನುಗುಣವಾಗಿ 2000 ರೂ. ರೈತರಿಗೆ ಪಾವತಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ಕೋಲಾರ ಜಿಲ್ಲೆಯಲ್ಲಿ ಶೇ.11ರಷ್ಟು ಮಳೆ ಕೊರತೆಯಾಗಿದೆ. ಈಲ್ಲೆ ಆರೂ ತಾಲೂಕುಗಳಲ್ಲಿ ಸುಮಾರು 219.87 ಕೋಟಿ ರೂ.ನಷ್ಟವಾಗಿದೆ. ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ನಷ್ಟವನ್ನು ಅಂದಾಜು ಮಾಡಿದ್ದಾರೆ. ಬೇಸಿಗೆಯ ಬಗ್ಗೆ ಭೀತಿ ಮೂಡಿದೆ ಎಂದು ಇದೆ ವೇಳೆ ಗೋವಿಂದರಾಜು ಅವರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪಶು ಸಂಗೋಪನೆ ಇಲಾಖೇಯ ವರದಿಯನುಸಾರ ಕೋಲಾರ ಜಿಲ್ಲೆಯಲ್ಲಿ 2.23 ಲಕ್ಷ ಟನ್ ಮೇವು ಲಭ್ಯವಿದೆ. ಎಸ್‌ಡಿಆರ್‌ಎಫ್ ಅಡಿಯಲ್ಲಿ ಮೇವಿನ ಕಿರು ಪೊಟ್ಟಣಗಳನ್ನು ನಿಯಮಾನುಸಾರ ಖರೀದಿಸಲು 20 ಕೋಟಿ ರೂ. ಗಳನ್ನು ಪಶು ಸಂಗೋಪನೆ ಇಲಾಖೆಗೆ ಬಿಡುಗಡೆಗೊಳಿಸಲಾಗಿದೆ. 31 ಜಿಲ್ಲೆಗಳಿಗೆ ಬಿಡುಗಡೆ ಮಾಡಿದ 324 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ ಪೈಕಿ ಕೋಲಾರ ಜಿಲ್ಲೆಗೆ 9 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈಲ್ಲೆಯ 4 ಗ್ರಾಮಗಳಲ್ಲಿ ಖಾಸಗಿ ಬೋರವೆಲ್ ಮೂಲಕ ಬಾಡಿಗೆ ಆಧಾರದ ಮೇಲೆ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!