Mysore
27
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಮಂಜಿನ ನಗರಿ ದಸರಾ ಉತ್ಸವಕ್ಕೆ ವೈಭವಪೂರ್ಣ ತೆರೆ

ಅದ್ಧೂರಿ ಶೋಭಾಯಾತ್ರೆಗೆ ಹರಿದುಬಂದ ಜನಸಾಗರ: ಶ್ರೀ ಕೋಟೆ ಗಣಪತಿ ದೇವಾಲಯ ಮಂಟಪಕ್ಕೆ ಪ್ರಥಮ ಸ್ಥಾನ

ಮಡಿಕೇರಿ: ನಗರದಲ್ಲಿ ಕಳೆದ ೯ ದಿನಗಳಿಂದ ನಡೆದ ದಸರಾ ಉತ್ಸವಕ್ಕೆ ವೈಭವಪೂರ್ಣ ತೆರೆ ಬಿದ್ದಿದೆ. ಬುಧವಾರ ರಾತ್ರಿ ದಶಮಂಟಪಗಳ ಆಕರ್ಷಕ ಶೋಭಾಯಾತ್ರೆಯ ಬಳಿಕ ಗುರುವಾರ ಮುಂಜಾನೆ ಬನ್ನಿಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ದಸರಾ ಜನೋತ್ಸವ ಸಂಪನ್ನಗೊಂಡಿತು.

ಮೂರು ವರ್ಷಗಳ ಬಳಿಕ ನಡೆದ ಅದ್ಧೂರಿ ದಶಮಂಟಪಗಳ ಶೋಭಾಯಾತ್ರೆ ನೋಡುಗರ ಕಣ್ಮನ ಸೆಳೆಯಿತು. ಮಂಟಪಗಳಲ್ಲಿ ಅಳವಡಿಸಲಾಗಿದ್ದ ಚಲನವಲನವನ್ನೊಳಗೊಂಡ ಕಲಾಕೃತಿಗಳ ಪೌರಾಣಿಕ ಕಥಾಹಂದರಗಳು ದೇವಲೋಕವೇ ಧರೆಗಿಳಿದಂತೆ ಭಾಸವಾಗುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಮಂಟಪಗಳ ಎದುರು ಜಮಾಯಿಸಿ ಪ್ರದರ್ಶನವನ್ನು ಕಣ್ತುಂಬಿಕೊಂಡರು. ನಗರದ ಪ್ರಮುಖ ಬೀದಿಗಳಲ್ಲಿ ನೂಕುನುಗ್ಗಲು ಉಂಟಾಗಿ, ಮಹಿಳೆಯರು ಮಕ್ಕಳು ಸಮಸ್ಯೆ ಎದುರಿಸುವಂತಾಯಿತು.

ನಗರದ ಮುಖ್ಯ ಬೀದಿಗಳಲ್ಲಿ ಬುಧವಾರ ರಾತ್ರಿಯಿಂದ ಆರಂಭವಾದ ೧೦ ಮಂಟಪಗಳ ಮೆರವಣಿಗೆ ಹಾಗೂ ಪೌರಾಣಿಕ ಕಥಾ ಪ್ರಸಂಗ ಆಧಾರಿತ ಕಲಾಕೃತಿಗಳ ಶೋಭಾಯಾತ್ರೆ ಗುರುವಾರ ಮುಂಜಾನೆವರೆಗೆ ನಡೆಯಿತು. ಎಲ್ಲಾ ಮಂಟಪಗಳಲ್ಲಿ ೨ ಟ್ರ್ಯಾಕ್ಟರ್ ಬಳಸಿ ೧೫ಕ್ಕೂ ಹೆಚ್ಚಿನ ಕಲಾಕೃತಿಗಳಿಂದ ಕಥೆಗೆ ತಕ್ಕಂತೆ ಚಲನೆ ಮಾಡಲಾಯಿತು. ಕಥಾ ಸಾರಾಂಶ ಕಲಾಕೃತಿ, ಪ್ರಭಾವಳಿ ಸ್ಟುಡಿಯೋ, ಚಾಲನೆಗೆ ೨ ಟ್ರ್ಯಾಕ್ಟರ್ ಸೆಟ್ಟಿಂಗ್ಸ್, ಧ್ವನಿ ಮುದ್ರಣ – ಶುಚಿತ್ವ- ಸಮಯಪಾಲನೆ ಆಲಿಸಿ ನಗರ ದಸರಾ ಸಮಿತಿ ವತಿಯಿಂದ ವರ್ಷಂಪ್ರತಿಯಂತೆ ಈ ಬಾರಿಯೂ ಪ್ರಶಸ್ತಿ ನೀಡಲಾಯಿತು.

ಶೋಭಾಯಾತ್ರೆಯಲ್ಲಿ ಶ್ರೀ ಕೋಟೆ ಗಣಪತಿ ದೇವಾಲಯ ಮಂಟಪ ಪ್ರಥಮ ಸ್ಥಾನ ಪಡೆದರೆ, ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಮಂಟಪ ದ್ವಿತೀಯ, ಕುಂದೂರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ಮತ್ತು ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಮಂಟಪಗಳು ತೃತೀಯ ಸ್ಥಾನವನ್ನು ಹಂಚಿಕೊಂಡವು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!