Mysore
22
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಚಲನಚಿತ್ರೋತ್ಸವ: ಮೊದಲ ದಿನ ‘ಪ್ರತಿಕ್ರಿಯೆ’ ಉತ್ತಮ

ಮೈಸೂರು: ನಗರದ ಐನೆಕ್ಸ್ ಹಾಗೂ ಡಿಆರ್‌ಸಿ ಚಿತ್ರಮಂದಿರಗಳಲ್ಲಿ ಮಂಗಳವಾರದಿಂದ ಪ್ರಾರಂಭವಾದ ದಸರಾ ಚಲನಚಿತ್ರೋತ್ಸವಕ್ಕೆ ಮೊದಲ ದಿನ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಐನೆಕ್ಸ್‌ನ ೨, ೩ ಮತ್ತು ೪ನೇ ಸ್ಕ್ರೀನ್‌ನಲ್ಲಿ ಚಿತ್ರಗಳ ಪ್ರದರ್ಶನಗೊಂಡರೆ, ಡಿಆರ್‌ಸಿಯ ಒಂದು ಸ್ಕ್ರೀನ್‌ನಲ್ಲಿ ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಐನೆಕ್ಸ್‌ನ ೨ನೇ ಸ್ಕ್ರೀನ್‌ನಲ್ಲಿ ಕನ್ನಡದ ಸಿನಿಮಾಗಳು, ೩ನೇ ಸ್ಕ್ರೀನ್‌ನಲ್ಲಿ ಭಾರತೀಯ ಸಿನಿಮಾಗಳು, ೪ನೇ ಸ್ಕ್ರೀನ್‌ನಲ್ಲಿ ವಿಶ್ವ ಸಿನಿಮಾಗಳು ಪ್ರದರ್ಶನವಾಗುತ್ತಿವೆ. ಡಿಆರ್‌ಸಿಯಲ್ಲಿ ಕನ್ನಡದ ಇತ್ತೀಚಿನ ಸಿನಿಮಾಗಳನ್ನು ವೀಕ್ಷಣೆ ಮಾಡಬಹುದಾಗಿದೆ.

೩ನೇ ಸ್ಕ್ರೀನ್‌ನಲ್ಲಿ ಪ್ರದರ್ಶನ ಕಂಡ ‘ದೊಡ್ಡಹಟ್ಟಿ ಬೋರೇಗೌಡ’ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು.
೪ನೇ ಸ್ಕ್ರೀನ್‌ನಲ್ಲಿ ಪ್ರದರ್ಶನಗೊಂಡ ವಿಟ್ಟೂರೊ ಡೆ ಸಿಕಾ ನಿರ್ದೇಶನದ ಇಟಲಿ ಭಾಷೆಯ ‘ಬೈಸಿಕಲ್ ಥೀವ್ಸ್’(ಲಾಡ್ರಿ ಡಿ ಬೈಸಿಕಲ್ಲೆ) ಚಿತ್ರ ನೋಡುಗರ ಎದೆಯನ್ನು ಮೆತ್ತಗಾಗಿಸಿತು. ಇಟಲಿಯಲ್ಲಿ ಯುದ್ಧವಾದ ನಂತರದ ಜನಜೀವನದ ದುರಂತ ಬದುಕನ್ನು ಕಟ್ಟಿಕೊಡುವ ಈ ಚಿತ್ರ ಕಾಯಕ ಜೀವಿಯೊಬ್ಬನ ಬೈಸಿಕಲ್ ಕಳುವಾದ ಕಥೆ ಹೊಂದಿದೆ. ಆತನ ಮೂಲಕ ಸಾಮಾಜಿಕ, ಆರ್ಥಿಕ ಮುಗ್ಗಟ್ಟುಗಳ ದರ್ಶನವನ್ನು ಚಿತ್ರ ಮಾಡಿಸುತ್ತದೆ.

ನಾಳೆ ಪುನೀತ್ ಚಿತ್ರೋತ್ಸವ 

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆಯ್ದ ಚಲನಚಿತ್ರಗಳನ್ನು ಒಂದು ದಿನ ಪ್ರದರ್ಶನ ಮಾಡುವ ಮೂಲಕ ಅವರಿಗೆ ಸಿನಿಮಾ ನಮನವನ್ನು ಅರ್ಪಿಸುವ ಕೆಲಸವನ್ನು ದಸರಾ ಚಲನಚಿತ್ರೋತ್ಸವ ಉಪ ಸಮಿತಿ ಮಾಡುತ್ತಿದೆ.

ಶೇಷ್ಟ್ರ ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಗಳಿಸಿಕೊಂಡಿರುವ ‘ಬೆಟ್ಟದ ಹೂ’ ಚಿತ್ರದ ಮೂಲಕ ಉತ್ಸವ ಪ್ರಾರಂಭವಾಗಲಿದೆ. ಐನೆಕ್ಸ್‌ನಲ್ಲಿ ಬೆಟ್ಟದ ಹೂ, ರಾಜಕುಮಾರ, ರಣವಿಕ್ರಮ, ಯುವರತ್ನ ಪ್ರದರ್ಶನಗೊಂಡರೆ, ಡಿಆರ್‌ಸಿಯಲ್ಲಿ ಬೆಟ್ಟದ ಹೂವು, ಯುವರತ್ನ, ಪೃಥ್ವಿ, ಅಂಜನೀ ಪುತ್ರ ಪ್ರದರ್ಶನಗೊಳ್ಳಲಿವೆ.
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಐನೆಕ್ಸ್‌ನಲ್ಲಿ ಬೆಳಿಗ್ಗೆ ೧೦ಕ್ಕೆ ಚಿತ್ರೋತ್ಸವವನ್ನು ಉದ್ಘಾಟನೆ ಮಾಡಲಿದ್ದಾರೆ. ಶಕ್ತಿಧಾಮದ ಮಕ್ಕಳ ಜತೆ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!