Mysore
27
few clouds

Social Media

ಬುಧವಾರ, 21 ಜನವರಿ 2026
Light
Dark

9 ತಿಂಗಳಾದರೂ ಪೂರ್ಣಗೊಳ್ಳದ ರಸ್ತೆ ಕಾಮಗಾರಿ

ದೂರ ಗ್ರಾಮದಿಂದ ದೊಡ್ಡಕಾಟೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅವ್ಯವಸ್ಥೆ

ದೂರ ನಂಜುಂಡಸ್ವಾಮಿ

ದೂರ: ಮೈಸೂರು ತಾಲ್ಲೂಕಿನ ದೂರ ಗ್ರಾಮದಿಂದ ದೊಡ್ಡಕಾಟೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಕಾಮಗಾರಿ ತಡವಾಗುತ್ತಿರುವುದರಿಂದ ಇಲ್ಲಿ ಸಂಚರಿಸುವ ರೈತರು ಮತ್ತು ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗಿದೆ.
ಈ ರಸ್ತೆಯು ಬಹಳ ಹದಗೆಟ್ಟಿದರ ಬಗ್ಗೆ ಹಲವು ಬಾರಿ ಆಂದೋಲನ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು. ಇದನ್ನು ಗಮನಿಸಿದ ಸಂಸದರು, ಶಾಸಕರು ಹಾಗೂ ಅಧಿಕಾರಿಗಳು ರಸ್ತೆಯನ್ನು ಡಾಂಬರೀಕರಣಗೊಳಿಸಲು ಪ್ರಧಾನ್ ಮಂತ್ರಿ ಗ್ರಾಮ್ ಸಡಕ್ ಯೋಜನೆ ಅಡಿಯಲ್ಲಿ ೨.೩೪ ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿ, ಇದರ ಕಾಮಗಾರಿಗೆ ಜನವರಿ ತಿಂಗಳಿನಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಜಿ.ಟಿ ದೇವೇಗೌಡರಿಂದ ಚಾಲನೆ ನೀಡಲಾಗಿತ್ತು.
ಅಂದಿನಿಂದ ಇಂದಿನವರೆಗೆ ಸುಮಾರು ೯ ತಿಂಗಳು ಕಳೆದರೂ ಇನ್ನೂ ಈ ರಸ್ತೆಯ ಕಾಮಗಾರಿ ಪೂರ್ಣಗೊಂಡಿಲ್ಲ. ಚಾಲನೆ ದೊರೆತ ನಂತರ ನಾಲ್ಕೆ ದು ತಿಂಗಳು ಕೆಲಸ ಮಾಡಿ, ಎರಡು ಬಾರಿ ರಸ್ತೆಗೆ ಜಲ್ಲಿ ಕಲ್ಲುಗಳನ್ನು ಹಾಕಿ ಮೆಟ್ಲಿಂಗ್ ಕಾರ್ಯ ಮುಗಿಸಿ ಎರಡು ತಿಂಗಳು ಕಳೆದರೂ ಇಲ್ಲಿಗೆ ಬಂದು ಕೆಲಸ ಮಾಡದೆ ಕೆಲಸಗಾರರು, ಗುತ್ತಿಗೆದಾರ ಹಾಗೂ ಅಧಿಕಾರಿಗಳು ಇತ್ತ ಬರದೆ ನಾಪತ್ತೆಯಾಗಿದ್ದಾರೆ.
ಕಳೆದ ತಿಂಗಳು ಬಿದ್ದ ಮಳೆಗೆ ರಸ್ತೆಯಲ್ಲಿ ಹಾಕಿದ್ದ ಜೆಲ್ಲಿ ಕಲ್ಲುಗಳು ಮೇಲೆದ್ದಿರುವುದರಿಂದ ವಾಹನ ಸವಾರರು, ರೈತಾಪಿ ವರ್ಗದವರು ಸಂಚರಿಸಲು ಹರಸಾಹಸಪಡುತ್ತಿದ್ದಾರೆ.
ಈಗಲಾದರೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಅಧಿಕಾರಿಗಳಿಗೆ ಸೂಚಿಸುವ ಮೂಲಕ ಶೀಘ್ರದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳವಂತೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಈ ರಸ್ತೆ ಕಾಮಗಾರಿ ಶುರುವಾಗಿ ೯ ತಿಂಗಳು ಕಳೆದರೂ ಡಾಂಬರೀಕರಣ ಇನ್ನೂ ಮುಗಿದಿಲ್ಲ. ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಸರಿಯಾಗಿ ಕಾರ್ಯ ನಿರ್ವಹಿಸಿದ್ದರೆ ೫ ರಿಂದ ೬ ತಿಂಗಳೊಳಗೆ ಕೆಲಸ ಮುಗಿಸಬಹುದಾಗಿತ್ತು. ಎರಡು ತಿಂಗಳಿಂದ ಗುತ್ತಿಗೆದಾರರು, ಕೆಲಸಗಾರರು ಸ್ಥಳದಲ್ಲಿ ಕಾಣುತ್ತಿಲ್ಲ. ಸಂಬಂಧಪಟ್ಟ ಮೇಲಧಿಕಾರಿಗಳು ಇತ್ತ ಗಮನಹರಿಸಿ ಶೀಘ್ರ ಡಾಂಬರೀಕರಣ ಗೊಳಿಸುವಂತೆ ಮಾಡಲಿ.
ಡಿ.ಎಂ.ಗಿರೀಶ್, ಡಿ.ಎಸ್.ಶಂಕರ, ದೂರ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!