Mysore
26
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಮೈಸೂರು : ಸೆ.26 ರಿಂದ 7 ದಿನಗಳ ಕಾಲ ದಸರಾ ಚಲನಚಿತ್ರೋತ್ಸವ

ಮೈಸೂರು: ದಸರಾ  ಅಂಗವಾಗಿ ಸೆ.26 ರಿಂದ 7 ದಿನಗಳ ಕಾಲ ಅದ್ಧೂರಿಯಾಗಿ ದಸರಾ ಚಲನಚಿತ್ರೋತ್ಸವ ಆಯೋಜಿಸಲಾಗಿದ್ದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಚಿತ್ರಗಳ ಪ್ರದರ್ಶನ ಇರುತ್ತದೆ ಎಂದು ಚಲನಚಿತ್ರೋತ್ಸವ ಉಪ ಸಮಿತಿ ಉಪ ವಿಶೇಷಾಧಿಕಾರಿ ಆರ್.ಶೇಷ ತಿಳಿಸಿದರು.

ವಾರ್ತಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಡಾ.ಶಿವರಾಜ್ ಕುಮಾರ್ ಸೆ.26 ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ. ಸೆ.೨೭ರಿಂದ ಅ.೩ರವರೆಗೆ ಒಟ್ಟು 112 ಚಿತ್ರಗಳು ಪ್ರದರ್ಶನಗೊಳ್ಳಲಿದ್ದು, 56 ಕನ್ನಡ, ೨೮ ಪನೋರಮಾ, 28 ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾಗಳು ಐನಾಕ್ಸ್‌ನಲ್ಲಿ 3 ಮತ್ತು ಡಿಆರ್‌ಸಿಯ 1 ಸ್ಕ್ರೀನ್‌ನಲ್ಲಿ ಪ್ರದರ್ಶನಗೊಳ್ಳಲಿವೆ. ಐನಾಕ್ಸ್‌ನಲ್ಲಿ ಒಂದು ಸ್ಕ್ರೀನ್ ಉಚಿತ ಮತ್ತು ಡಿಆರ್‌ಸಿ ಸಿನಿಮಾಸ್‌ನಲ್ಲಿ ಒಂದು ಸ್ಕ್ರೀನ್ ಉಚಿತವಾಗಿ ನೀಡಲಾಗಿದೆ. ಚಲನಚಿತ್ರ ಉಪ ಸಮಿತಿಗೆ 28.50 ಲಕ್ಷ ರೂ. ಅನುದಾನ ಕೊಡುವಂತೆ ಪ್ರಸ್ತಾಪ ಮಾಡಲಾಗಿದ್ದು, ಚಿತ್ರಪ್ರದರ್ಶನಕ್ಕೆ 8 ಲಕ್ಷ ರೂ. ಖರ್ಚಾಗಲಿದೆ ಎಂದರು.

ಪುನೀತ್‌ರಾಜ್‌ಕುಮಾರ್ ಹಾಗೂ ನಟ ಸಂಚಾರಿ ವಿಜಯ್ ಅವರು ನಟಿಸಿರುವ ಜನಪ್ರಿಯಾ ಸಿನಿಮಾಗಳನ್ನೂ ಪ್ರದರ್ಶಿಸಲಾಗುತ್ತಿದ್ದು, ಪುನೀತ್‌ರಾಜ್‌ಕುಮಾರ್ ಅವರ ಬೆಟ್ಟದ ಹೂ, ಅಂಜನಿಪುತ್ರ, ರಾಜಕುಮಾರ, ಮೈತ್ರಿ, ಪೃಥ್ವಿ ಹಾಗೂ ಯುವರತ್ನ ಸಿನಿಮಾ ಹಾಗೂ ಸಂಚಾರಿ ವಿಜಯ್ ಅವರು ನಟಿಸಿರುವ ತಲೆದಂಡ, ಪುಕ್ಸಟ್ಟೆ ಲೈಫು, ಆಕ್ಟ್ ೧೯೭೮ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಪುನೀತ್‌ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅವರು ಶಕ್ತಿಧಾಮದ ಮಕ್ಕಳೊಂದಿಗೆ ಸೆ.27ರಂದು ಬೆಟ್ಟದ ಹೂ ಚಿತ್ರವನ್ನು ವೀಕ್ಷಿಸಲಿದ್ದಾರೆ ಎಂದು ತಿಳಿಸಿದರು.

ಉದ್ಘಾಟನೆಗೆ ತಾರಾ ಮೆರಗು: ಕಲಾಮಂದಿರದಲ್ಲಿ ನಡೆಯಲಿರುವ ಚಲನಚಿತ್ರೋತ್ಸವದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಡಾ.ಶಿವರಾಜ್‌ಕುಮಾರ್, ನಟಿಯರಾದ ಅಮೃತ ಅಯ್ಯಂಗಾರ್, ಕಾವ್ಯಶೆಟ್ಟಿ, ಸುಧಾರಾಣಿ, ಅನು ಪ್ರಭಾಕರ್ ಸೇರಿದಂತೆ ಅನೇಕ ತಾರೆಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಪ್ರತಿದಿನ ನಾಲ್ಕು ಚಿತ್ರಗಳನ್ನು ವೀಕ್ಷಿಸಬಹುದಾಗಿದ್ದು, ದಿನಕ್ಕೆ ೧೦೦ ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ವಾರಕ್ಕೆ ೩೦೦ ರೂ., ವಯಸ್ಕರಿಗೆ ೫೦೦ ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಲನಚಿತ್ರೋತ್ಸವ ಉಪ ಸಮಿತಿ ಕಾರ್ಯದರ್ಶಿ ಟಿ.ಕೆ.ಹರೀಶ್ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ