ನೊಂದವರ ಪರವಾಗಿ ನೋಯಿಸಿದವರ ಕಿವಿಹಿಂಡುತ್ತಲೇ ೫೦ ವರ್ಷ ಪೂರೈಸಿದ ‘ಆಂದೋಲನ’
ಐದು ದಶಕಗಳಿಂದಲೂ ವೃತ್ತಿಯ ಘನತೆಗೆ ಧಕ್ಕೆಯಾಗದಂತೆ, ಜನಜೀವನದೊಂದಿಗೆ ಹಾಸುಹೊಕ್ಕಾಗಿ, ನೊಂದವರ ಪರವಾಗಿ ನೋಯಿಸಿದವರ ಕಿವಿಹಿಂಡುವ ಮೂಲಕ ಸಮಾಜ ಹಾದಿ ತಪ್ಪದಂತೆ ಎಚ್ಚರಿಕೆ ನೀಡುತ್ತಾ ‘ಆಂದೋಲನ’ ದಿನಪತ್ರಿಕೆ ಬೆಳೆದು ಬಂದಿದೆ.
೧೯೭೦ರ ದಶಕದಲ್ಲಿ ಚಳವಳಿಯೇ ಹೆಸರಾಗಿರುವ ‘ಆಂದೋಲನ’ವನ್ನು ಸ್ಥಾಪಿಸಿ, ಕಟ್ಟಿ ಬೆಳೆಸಿದ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರದ್ದು ಜನ್ಮತಃ ಹೋರಾಟದ ಗುಣವೇ ಆಗಿತ್ತು. ಸಂವಿಧಾನದ ಆಶೋತ್ತರಗಳ ನೆರಳಲ್ಲಿ, ಸಮಾಜವಾದಿ ನೆಲೆಯಲ್ಲಿ ಸಮಾನತೆ, ಮಾನವೀಯತೆಯ ಸದಾಶಯಗಳನ್ನು ಬಂಡವಾಳ ಮಾಡಿಕೊಂಡು ನಡೆದ ‘ಆಂದೋಲನ’ವು ಜೆಪಿ ಚಳವಳಿ, ರೈತ, ದಲಿತ ಮತ್ತು ಕನ್ನಡ ಪರ ಚಳವಳಿಗಳ ಮುಖವಾಣಿಯಾಗಿ ಎಲ್ಲ ವರ್ಗಗಳ ಓದುಗರ ಅಂತರಂಗವನ್ನು ಅಲಂಕರಿಸಿತು.
೧೯೯೦ರ ದಶಕದಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ನರಹಂತಕ ವೀರಪ್ಪನ್ ಬೇಟೆಗಾಗಿ ಪೊಲೀಸರ ಸಾಹಸ, ಜನಸಾಮಾನ್ಯರು ಅನುಭವಿಸಿದ ನೋವು, ಹುತಾತ್ಮ ಪೊಲೀಸರ ಕುಟುಂಬಗಳ ವ್ಯಥೆಯ ಕಥೆ… ಇತ್ಯಾದಿ ಸುದ್ದಿಗಳನ್ನು ವಿಶಿಷ್ಟವಾಗಿ ಓದುಗರಿಗೆ ತಲುಪಿಸುತ್ತಾ ‘ಆಂದೋಲನ’ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿತು.
ಮೊನಚು ಬರಹಗಳು, ನಿಷ್ಪಕ್ಷಪಾತ ಸುದ್ದಿಗಳು ‘ಆಂದೋಲನ’ದ ಜೀವಾಳವೇ ಆಗಿವೆ.
ವೀರಪ್ಪನ್, ಎಸ್‌ಪಿ ಹರಿಕೃಷ್ಣ ಮತ್ತಿತರ ಪೊಲೀಸರನ್ನು ಸ್ಫೋಟಿಸಿದ ವರದಿಯನ್ನು ‘ಆಂದೋಲನ’ ಮಧ್ಯಾಹ್ನವೇ ವಿಶೇಷ ಸಂಚಿಕೆಯನ್ನು ಹೊರತರುವ ಮೂಲಕ ಓದುಗರ ಕುತೂಹಲವನ್ನು ತಣಿಸಿದ್ದು, ಇದರ ವಿಸ್ತಾರವನ್ನು ಹೆಚ್ಚಿಸಿತ್ತು.ಕನ್ನಡದ ಮೇರುನಟ ಡಾ.ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದಾಗ ಕೂಡ ‘ಆಂದೋಲನ’ದ ವಿಶೇಷ ಸುದ್ದಿಗಳು, ಫೋಟೊಗಳನ್ನು ಪ್ರಕಟಿಸಿತ್ತು. ಆ ಮೂಲಕ ಜನರ ನಾಡಿಮಿಡಿತವನ್ನು ಅರಿತ ಪತ್ರಿಕೆಯೆಂಬ ಹೆಗ್ಗಳಿಕೆಗೂ ಪಾತ್ರವಾಯಿತು.
ಒಂದು ಹಂತದಲ್ಲಿ ವೀರಪ್ಪನ್ ಬೇಟೆಯಾಡಲು ನಿಯೋಜಿತವಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರು ‘ಆಂದೋಲನ’ಕ್ಕೆ ಬೆದರಿಕೆಯೊಡ್ಡಿದ್ದರು. ಕಾರಣ ಅವರಿಗೆ ಸಿಗದ ಮಾಹಿತಿ ‘ಪತ್ರಿಕೆ’ಯಲ್ಲಿ ಪ್ರಕಟವಾಗುತ್ತಿತ್ತು.
ಇನ್ನು ಮೈಸೂರಿನ ಈಜುಕೊಳವೊಂದರಲ್ಲಿ ನಡೆದ ಸತ್ಯದೇವ್ ಕೊಲೆ ಪ್ರಕರಣ ಕೂಡ ‘ಪತ್ರಿಕೆ’ಯ ಸಾಮಾಜಿಕ ಮತ್ತು ಬಡವರ ಪರವಾದ ಕಾಳಜಿಯನ್ನು ಅನಾವರಣಗೊಳಿಸಿತು. ಸಾಮಾನ್ಯ ನೌಕರ ಸತ್ಯದೇವ್ ಅವರನ್ನು ಅಂದಿನ ಡಿಸಿಪಿ ಸೋಮಶೇಖರ್ ಕೊಲೆ ಮಾಡಿದ್ದನ್ನು ಅತ್ಯಂತ ಖಚಿತ ವರದಿಯೊಂದಿಗೆ ಪ್ರಕಟಿಸಿದ್ದಲ್ಲದೆ, ಆ ಪ್ರಕರಣದಲ್ಲಿ ಹತ್ಯೆಗೀಡಾದ ಸತ್ಯದೇವ್ ಅವರಿಗೆ ನ್ಯಾಯಸಿಗುವವರೆಗೂ ಪ್ರಕರಣದ ಇಂಚಿಂಚೂ ಬೆಳವಣಿಗೆಯನ್ನು ಓದುಗರ ಮುಂದೆ ಇಟ್ಟಿತು. ಆದರೆ, ಯಾವುದೇ ಪ್ರಕರಣದಲ್ಲಿಯೂ ವೃತ್ತಿ ಧರ್ಮಕ್ಕೆ ವಿರುದ್ಧವಾಗಿ ನಡೆಯಲಿಲ್ಲ.
೧೯೯೩ರಲ್ಲಿ ನಂಜನಗೂಡು ತಾಲ್ಲೂಕು ಬದನವಾಳು ಗ್ರಾಮದಲ್ಲಿ ನಡೆದ ಕೋಮುಗಲಭೆ ಸಂದರ್ಭದಲ್ಲಿ ಕೂಡ ‘ಪತ್ರಿಕೆ’ಯು ಸಾಮಾಜಿಕ ನ್ಯಾಯದ ಪರವಾಗಿ ಹೋರಾಟವನ್ನೇ ನಡೆಸಿತು. ಈ ಪ್ರಕರಣದ ಕಾರಣ, ಕಾರ್ಯ, ಪರಿಣಾಮ ಎಲ್ಲವನ್ನೂ ಬದನವಾಳಿಗೆ ವರದಿಗಾರರನ್ನು ಕಳುಹಿಸಿ ನೈಜ ಸುದ್ದಿಯನ್ನು ಕೊಡುವ ಮೂಲಕ ತನ್ನ ಹರಹುವನ್ನು ಹೆಚ್ಚಿಸಿಕೊಂಡಿತ್ತು.
ಮೈಸೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿರುವ ರಸ್ತೆಬದಿ ವ್ಯಾಪಾರಿಗಳ ಮಾರುಕಟ್ಟೆಯ ಹಿಂದೆಯೂ ‘ಆಂದೋಲನ’ದಹೆಜ್ಜೆಗಳಿವೆ. ಅವರ ಸಮಸ್ಯೆಗಳನ್ನು ಕುರಿತ ವರದಿಗಳನ್ನು ಪ್ರಕಟಿಸಿದ ‘ಪತ್ರಿಕೆ’ಯು ಅಂತಿಮವಾಗಿ ಆ ವ್ಯಾಪಾರಿಗಳಿಗೆ ಒಂದು ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಿತ್ತು. ಮಹಾರಾಷ್ಟ್ರದ ಭುಜ್ ಭೂಕಂಪನದ ಸಂದರ್ಭದಲ್ಲಿ ಅಲ್ಲಿನ ಜನರ ನೋವುಗಳಿಗೆ ಧ್ವನಿಯಾಗಿದ್ದಲ್ಲದೆ, ಪರಿಹಾರ ನಿಧಿ ಸಂಗ್ರಹಿಸಿತ್ತು.
ಪ್ರಾದೇಶಿಕ ಪತ್ರಿಕೆಗಳ ಸಾಲಿನಲ್ಲಿ ಅತಿಹೆಚ್ಚು ಪ್ರಸಾರದ ‘ಪತ್ರಿಕೆ’ ಎಂಬ ಹೆಗ್ಗಳಿಕೆಯೂ ದಕ್ಕಿತ್ತು. ಕೇವಲ ಎರಡು ಪುಟಗಳ ಪತ್ರಿಕೆಯಾಗಿ ರೂಪುಗೊಂಡು ೧೨ ಪುಟಗಳನ್ನು ಓದುಗರಿಗೆ ನೀಡುವಷ್ಟು ಶಕ್ತಿಶಾಲಿಯಾಗಿ ‘ಆಂದೋಲನ’ ಬೆಳೆದು ಬಂದಿದೆ ಎಂಬುದನ್ನು ವಿನೀತ ಭಾವದಿಂದಲೇ ಸ್ಮರಣೆ ಮಾಡುತ್ತದೆ.
sತಮಿಳುನಾಡಿನಲ್ಲಿ ಸುನಾಮಿ ರಕ್ಕಸ ಅಲೆಗಳಿಂದ ಉಂಟಾದ ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟಕ್ಕೂ ‘ಆಂದೋಲನ’ ಮಿಡಿದಿದೆ. ಮೈಸೂರು ನಾಗರಿಕರ ವೇದಿಕೆ ಮೂಲಕ ಪರಿಹಾರ ನಿಧಿ ಸಂಗ್ರಹಿಸಲು ‘ಪತ್ರಿಕೆ’ಯು ಕೈಜೋಡಿಸಿತ್ತು.
‘ಆಂದೋಲನ’ ನಾಡಿನ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವುದೂ ಪತ್ರಿಕೆಗಳ ಕರ್ತವ್ಯವೇ ಹೌದು ಎಂಬುದಕ್ಕೆ ಸಾಕ್ಷಿಯಾಗಿದೆ. ನಿರಂತರವಾಗಿ ಪ್ರತಿಯೊಬ್ಬ ವ್ಯಕ್ತಿಯ ಮನೆ- ಮನವನ್ನೂ ತಲುಪಬೇಕೆಂಬ ಅದಮ್ಯ ಹಂಬಲದೊಂದಿಗೆ ಸಂವೇದನಾಶೀಲತೆಯಿಂದ, ಕ್ರಿಯಾಶೀಲತೆಯಿಂದ ‘ಆಂದೋಲನ’ ಜನರ ಮನಸ್ಸನ್ನು ಗೆದ್ದಿದೆ. ಇದಲ್ಲದೆ, ಕನ್ನಡ ಭಾಷೆ, ನೆಲ, ಜಲದ ರಕ್ಷಣೆಯ ಹೋರಾಟಗಳ ಸುದ್ದಿಗಳಿಗೆ ‘ಆಂದೋಲನ’ದ ಪ್ರಪ್ರಥಮ ಆದ್ಯತೆ ನೀಡುತ್ತದೆ. ಈ ವಿಚಾರದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ, ಬದಲಾವಣೆ ಇಲ್ಲದೆ ೫೦ ವರ್ಷಗಳಿಂದಲೂ ‘ಪತ್ರಿಕೆ’ ಸೇವೆ ಸಲ್ಲಿಸುತ್ತಿದೆ ಎನ್ನಬಹುದು. ಕನ್ನಡ ಭಾಷೆ ಕಟ್ಟುವ, ಬೆಳೆಸುವ ಕಾರ್ಯಕ್ರಮಗಳು ಸಣ್ಣ ಪ್ರಮಾಣದಲ್ಲಿ ನಡೆದರೂ ಅದಕ್ಕೆ ಪ್ರಾಮುಖ್ಯತೆ ನೀಡುವುದೂ ‘ಆಂದೋಲನ’ದ ವಿಶೇಷವೇ ಆಗಿದೆ. ಗಡಿನಾಡು ಅಭಿವೃದ್ಧಿ, ಗಡಿಯಲ್ಲಿ ಭಾಷೆ ಪ್ರಗತಿ ಸಂಬಂಧ ಸರ್ಕಾರಗಳಿಗೆ ಎಚ್ಚರಿಕೆ ನೀಡುವ ಮಹತ್ವದ ಕೆಲಸವನ್ನೂ ‘ಆಂದೋಲನ’ ಮಾಡಿದೆ. ಒಂದು ರೀತಿಯಲ್ಲಿ ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ‘ಆಂದೋಲನ’ದ ಸ್ಪರ್ಶವಿಲ್ಲದ ಸುದ್ದಿಗಳೇ ಇಲ್ಲವೆನ್ನಬಹುದು. ಕಲ್ಲುಮುಳ್ಳಿನ ಹಾದಿಯಲ್ಲೇ ನಡೆದು ಬಂದ ‘ಆಂದೋಲನ’ದ ಸಾಮಾನ್ಯರ ಜೀವನದ ಸ್ಥಿತಿಗತಿಯನ್ನು ಅರಿತು, ಅವರ ಸುಧಾರಣೆಯ ಸುದ್ದಿಗಳನ್ನೂ ಪ್ರಕಟಿಸುವ ಮೂಲಕ ಓದುಗರಿಗೆ ಹತ್ತಿರವಾಗಿತ್ತು ಎಂಬುದು ಕಾಕತಾಳೀಯವಲ್ಲ.
ಇಂತಹ ‘ಆಂದೋಲನ’ದ ೫೦ ವರ್ಷಗಳ ಪಯಣದಲ್ಲಿ ಅನೇಕ ಹೋರಾಟಗಾರರು, ಸಾಹಿತಿಗಳು, ಕಲಾವಿದರು, ಪತ್ರಕರ್ತರು ಹೆಗಲು ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ‘ಪತ್ರಿಕೆ’ಯ ನಾಗಾಲೋಟ ಮುಂದುವರಿದಿದೆ.
ಕಾಲಕ್ಕೆ ತಕ್ಕಂತೆ ಪತ್ರಿಕಾ ಕ್ಷೇತ್ರದ ಬದಲಾವಣೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಾ ಹೊಸದಾದ ಸ್ವರೂಪಗಳೊಂದಿಗೆ ‘ಆಂದೋಲನ’ ಮುನ್ನಡೆದಿದೆ. ಪ್ರಾದೇಶಿಕ ಪತ್ರಿಕೆಗಳಿಗೆ ಅಪರೂಪ ಎನಿಸಬಹುದಾದ ‘ವಿಶೇಷ ಪುಟ’ಗಳನ್ನು ಪ್ರತಿದಿನ ನೀಡಲಾಗುತ್ತಿದೆ.
ಪ್ರತಿ ಭಾನುವಾರ ಸಾಹಿತ್ಯ, ಸಮಾಜದ ಜನ ಜೀವನದ ಮೇಲೆ ಬೆಳಕು ಚೆಲ್ಲುವಂತಹ ಲೇಖನಗಳ ‘ಹಾಡುಪಾಡು’ ಪುಟ, ಸೋಮವಾರ ಯುವಜನರ ಕಲೆ, ಸಾಧನೆಯೊಂದಿಗೆ ಉದ್ಯೋಗ ಮಾಹಿತಿಯನ್ನು ಒದಗಿಸುವ ‘ಯುವ ಡಾಟ್ ಕಾಂ’, ಮಂಗಳವಾರ ಮಹಿಳೆಯರು ಜೀವನೋತ್ಸಾಹ ಹೆಚ್ಚಿಸುವ, ಮಕ್ಕಳ ಪ್ರತಿಭೆಯನ್ನು ಗುರುತಿಸಲು ಆದ್ಯತೆ ನೀಡುವ ‘ವನಿತೆ ಮಮತೆ’, ತಿಂಗಳಲ್ಲಿ ಎರಡು ಬುಧವಾರ ಕೃಷಿಯ ಸಾಧಕ- ಬಾಧಕ, ಹೊಸತನ, ಆಧುನಿಕ ಪದ್ಧತಿ.. ಇತ್ಯಾದಿ ವಿಷಯಗಳನ್ನೊಳಗೊಂಡ ‘ಅನ್ನದಾತರ ಅಂಗಳ’, ಇನ್ನೆರಡು ಬುಧವಾರ ಜೀವನಾಧಾರಿತ ಕಸುಬುಗಳ ಕೌಶಲವನ್ನು ಪರಿಚಯಿಸುವ ‘ಕಸುಬು ಕಸುವು’, ಪ್ರತಿ ಗುರುವಾರ, ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ವೈದ್ಯರಿಂದ ಸಲಹೆ ಇತ್ಯಾದಿ ಮಾಹಿತಿಗಳನ್ನೊಳಗೊಂಡ ‘ಯೋಗ- ಕ್ಷೇಮ’, ಶುಕ್ರವಾರ ‘ಮನರಂಜನೆಯೇ ಆದ್ಯತೆಯಾಗಿರುವ ‘ಸಿನಿಮಾಲ್’, ಶನಿವಾರ ಮೈಸೂರು ಭಾಗದ ಜಿಲ್ಲೆಗಳಲ್ಲಿ ಇರುವ ಪ್ರೇಕ್ಷಣೀಯ ಸ್ಥಳಗಳ ಮಾಹಿತಿ, ಮೈಸೂರಿನಲ್ಲಿ ನಡೆಯುವ ಸಾಂಸ್ಕೃತಿಕ ಕಾಯಕ್ರಮಗಳ ವಿವರಗಳನ್ನು ಒಳಗೊಂಡ ‘ವಾರಾಂತ್ಯ ವಿಶೇಷ’ ಪುಟಗಳನ್ನು ನೀಡುತ್ತಿರುವುದು ‘ಆಂದೋಲನ’ದ ವಿಶೇಷವಾಗಿದೆ. ಇದಲ್ಲದೆ, ಸಂಪಾದಕೀಯ ಪುಟದಲ್ಲಿ ಹಿರಿಯ ಪತ್ರಕರ್ತರು, ಸಾಹಿತಿಗಳ ಲೇಖನಗಳು ಇದ್ದೇ ಇರುತ್ತವೆ. ಹಿರಿಯ ಪತ್ರಕರ್ತರಾದ ಡಿ.ಉಮಾಪತಿ ಅವರ ‘ದೆಹಲಿ ಧ್ಯಾನ’, ಡಿ.ವಿ.ರಾಜಶೇಖರ್ ಅವರ ‘ವಿದೇಶ ವಿಹಾರ’, ವಿಲ್ಫ್ರೆಡ್ ಡಿಸೋಜ ಅವರ ‘ಜನಾಧಿಕಾರ’, ವಿಶ್ರಾಂತ ಪೊಲೀಸ್ ಅಧಿಕಾರಿ ಜೆ.ಬಿ.ರಂಗಸ್ವಾಮಿ ಅವರ ‘ನಿನ್ನೆ ಮೊನ್ನೆ ನಮ್ಮ ಜನ’, ಶಶಿಧರ ಡೋಂಗ್ರೆ ಅವರ ‘ವಿಜ್ಞಾನ ಮತ್ತು ಇತಿಹಾಸ’, ಬಾ.ನಾ.ಸುಬ್ರಹ್ಮಣ್ಯ ಅವರ ‘ವೈಡ್ ಆಂಗಲ್’ ಅಂಕಣಗಳು ಹಾಗೂ ಆರ್ಥಿಕ ಚಿಂತಕ ಪ್ರೊ.ಆರ್.ಎಂ.ಚಿಂತಾಮಣಿ ಅವರ ಲೇಖನಗಳು ಪ್ರಕಟವಾಗುತ್ತಿದ್ದು, ಓದುಗರನ್ನು ಆಕರ್ಷಿಸಿವೆ. ಉದಯೋನ್ಮುಖ ಬರಹಗಾರರು, ಕಲಾವಿದರು, ಸಂಗೀತಗಾರರನ್ನು ಪ್ರೋತ್ಸಾಹಿಸುವುದನ್ನೂ ರೂಢಿಸಿಕೊಂಡು ಬಂದಿದೆ. ಮುಂದೆಯೂ ಮತ್ತಷ್ಟು ಹೊಸತನಗಳಿಗೆ ತೆರೆದುಕೊಳ್ಳುವ ನಿಟ್ಟಿನಲ್ಲಿ ಓದುಗರು, ಹಿತೈಷಿಗಳು, ಆತ್ಮೀಯರ ಬೆಂಬಲವನ್ನು ಕಾಯ್ದುಕೊಳ್ಳುವುದಕ್ಕೆ ‘ಆಂದೋಲನ’ ಬದ್ಧವಾಗಿದೆ.
ಈ ೫೦ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಆಚರಣೆಯ ಸಂದರ್ಭದಲ್ಲಿ ಅಂದು- ಇಂದು ‘ಆಂದೋಲನ’ಕ್ಕೆ ಪ್ರೀತಿ ತೋರಿಸುತ್ತಿರುವ ಹೃದಯವಂತ ಓದುಗರು, ಅಭಿಮಾನಿಗಳು, ‘ಪತ್ರಿಕೆ’ಯನ್ನು ವಿಶ್ವಾಸದಲ್ಲಿ ಕಟ್ಟಿ ಹಾಕಿರುವ ಮಾನವೀಯ ಮನಸ್ಸುಗಳು ಸೇರಿದಂತೆ ಪ್ರತಿಯೊಬ್ಬರೂ ಪಾಲ್ಗೊಳ್ಳತ್ತೀರೆಂಬುದು ನಮ್ಮ ನಂಬಿಕೆ.
