Mysore
26
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಆಂದೋಲನ ಓದುಗರ ಪತ್ರ : 06 ಮಂಗಳವಾರ 2022

ಓದುಗರ ಪತ್ರ

ಕಾಮಗೆರೆಯಲ್ಲಿ ಎಟಿಎಂ ಪುನಾರಂಭಿಸಿ

ಚಾಮರಾಜನಗರ ಜಿಲ್ಲೆ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕಾಮಗೆರೆ ದೊಡ್ಡ ವ್ಯಾಪಾರ ಕೇಂದ್ರ. ಇಲ್ಲಿ ಹಲವು ವರ್ಷಗಳಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜನರಿಗೆ ಸೇವೆ ನೀಡುತ್ತಿದೆ. ಕೆಲ ದಿನಗಳ ಹಿಂದೆ ವಿಶಾಲ ಕಟ್ಟಡಕ್ಕೆ ಬ್ಯಾಂಕ್ ಅನ್ನು ಸ್ಥಳಾಂತರಿಸಲಾಗಿದೆ. ಆದರೆ ಈ ಹಿಂದೆ ಇದ್ದ ಬ್ಯಾಂಕ್‌ನ ಎಟಿಎಂ ಮಾತ್ರ ಪುನಾರಂಭಗೊಂಡಿಲ್ಲ. ಇದರಿಂದಾಗಿ ಸಹಜವಾಗಿಯೇ ಈ ಭಾಗದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಡಿಜಿಟಿಲ್ ಬ್ಯಾಂಕಿಂಗ್ ನೆಪದಲ್ಲಿ ಎಟಿಎಂ ಆರಂಭಿಸುವುದಿಲ್ಲವೇನೋ ಎನ್ನುವ ಅನುಮಾನ ಗ್ರಾಹಕರನ್ನು ಕಾಡತೊಡಗಿದೆ. ಕೂಡಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ಪ್ರಾದೇಶಿಕ ಸಹಾಯಕ ವ್ಯವಸ್ಥಾಪಕರು ಎಟಿಎಂ ಆರಂಭಿಸಲು ಕ್ರಮ ಕೈಗೊಳ್ಳಲಿ.

– ಕೆ.ಎಸ್.ಭರತ್, ಕಾಮಗೆರೆ


ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿದ ನಡೆ

ಇತ್ತೀಚೆಗೆ ಪೋಸ್ಕೋ ಕಾಯ್ದೆ ಅಡಿ ಬಂಧನಕ್ಕೆ ಒಳಗಾಗಿ ವಿಚಾರಣೆ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ
ಡಾ.ಮುರುಘಾ ಶರಣರ ಬಂಧನ ಹಾಗೂ ಆನಂತರದ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ
ಜಾಲತಾಣಗಳಲ್ಲಿ ನಾನಾ ರೀತಿಯ ಅಭಿಪ್ರಾಯಗಳು ಹಾಗೂ ಟೀಕೆ ಟಿಪ್ಪಣಿಗಳು ಹರಿದು ಬರುತ್ತಿವೆ. ಇದರ ಬಗ್ಗೆ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದೆ. ಈ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಪೋಲಿಸರ ಮೇಲೆ ಸಾಕಷ್ಟು ಒತ್ತಡ ಮತ್ತು ರಾಜಕೀಯ ಪ್ರಭಾವ ಬರಬಹುದು. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ
ಚಿತ್ರದುರ್ಗ ಎರಡನೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೋಮಲರವರು ಅತ್ಯಂತ ನ್ಯಾಯಬದ್ದವಾಗಿ ಹಾಗೂ ಕಾನೂನಿನ ನಿಯಮಗಳಿಗೆ ಅನುಗುಣವಾಗಿ ವಿಚಾರಣೆ ನಡೆಸುತ್ತಿರುವುದು ಸ್ವಾಗತಾರ್ಹವಾಗಿದ್ದು ನ್ಯಾಯಾಂಗದ ಘನತೆಯನ್ನು ಹೆಚ್ಚಿಸುವ ಕ್ರಮವಾಗಿದೆ.

-ಡಾ.ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು.


ಶರಣ ಧರ್ಮದಲ್ಲಿ ಮಠದ ಪ್ರಸ್ತಾಪವೇ ಇಲ್ಲ!!

 

ಶರಣ ಮೌಲ್ಯ ಆಳವಡಿಸಿಕೊಂಡು ಪಾಲಿಸುವುದು ಮುಖ್ಯ. ಶರಣ ಧರ್ಮದಲ್ಲಿ ಮತೀಯ ವ್ಯವಸ್ಥೆ ಇಲ್ಲ. ಮಹಾಮನೆ ವ್ಯವಸ್ಥೆ ಮಾತ್ರ ಇತ್ತು. ಸ್ವಾಮೀಜಿ ವ್ಯವಸ್ಥೆಯೂ ಇರಲಿಲ್ಲ. ದೇವರು ಮಾತ್ರ ಸ್ವಾಮಿ, ಅರಿವೇ ಗುರು ಎಂದು ವಚನಕಾರರು ಪ್ರತಿಪಾದಿಸಿದ್ದರು. ೧೨ನೇ ಶತಮಾನದಲ್ಲಿ ಬಸವಣ್ಣನವರಾಗಲೀ, ಉಳಿದ ವಚನಕಾರರಾಗಲೀ ಮಠದ ವ್ಯವಸ್ಥೆ ಪ್ರತಿಪಾದಿಸಿರಲಿಲ್ಲ. ಆಗ ಮಠಗಳೂ ಇರಲಿಲ್ಲ. ಈಗಿನ ವಿರಕ್ತ ಮಠಗಳಿಗೂ ೧೨ನೇ ಶತಮಾನಕ್ಕೂ ಯಾವುದೇ ಸಂಬಂಧ ಇಲ್ಲ. ೧೨ನೇ ಶತಮಾನದಲ್ಲಿ ವಿರಕ್ತ ಮಠಗಳೇ ಇರಲಿಲ್ಲ. ೧೬ನೇ ಶತಮಾನದಲ್ಲಿ ವಿರಕ್ತ ಮಠಗಳು ಹುಟ್ಟಿಕೊಂಡವು.
ಬಸವ ಧರ್ಮಕ್ಕೂ ಮಠಗಳಿಗೂ, ಸ್ವಾಮೀಜಿಗಳಿಗೂ ಸಂಬಂಧ ಇಲ್ಲ. ವಚನಗಳಲ್ಲಿ ಖಾವಿ ಬಟ್ಟೆಯ ಪ್ರಸ್ತಾಪವೂ ಇಲ್ಲ ಎಂದು ಬಸವಣ್ಣ ವಚನ ಅಧ್ಯಯನ ಮಾಡಿರುವ ರಂಜಾನ್ ದರ್ಗಾ ಹೇಳಿದ್ದಾರೆ. ೧೨ನೇ ಶತಮಾನದ ಶರಣ ಧರ್ಮವನ್ನು ಈಗ ಯಾವ ಮಠಗಳು ಪಾಲಿಸುತ್ತಿಲ್ಲ. ಬಸವಣ್ಣನವರೇ ಎನಗಿಂತ ಕಿರಿಯರಿಲ್ಲ ಎಂದಿದ್ದರು. ಆದರೇ, ೧೬ನೇ ಶತಮಾನದ ಅಂತ್ಯದಲ್ಲಿ ಯಡಿಯೂರಿನ ತೋಂಟದಾರ್ಯರು ಮಠ ಸಂಸ್ಕೃತಿಯನ್ನು ಪ್ರಾರಂಭಿಸಿದ್ದರು.

ಬಸವಣ್ಣ ಮದುವೆ ಮತ್ತು ಕುಟುಂಬ ಜೀವನದ ಪರವಾಗಿದ್ದರು. ಗಂಡ- ಹೆಂಡತಿ ಜೊತೆಯಾಗಿ ಇರೋದೇ ನಿಜವಾದ ಭಕ್ತಿ ಎಂದು ಬಸವಣ್ಣ ಹೇಳಿದ್ದರು. ೧೨ನೇ ಶತಮಾನದ ಶರಣರ ಪೈಕಿ ಐದಾರು ಮಂದಿ ಮಾತ್ರ ಅವಿವಾಹಿತರಾಗಿದ್ದರು. ಉಳಿದವರೆಲ್ಲಾ ವಿವಾಹಿತರು. ಯಡಿಯೂರಿನ ತೋಂಟದಾರ್ಯರು ಮತ್ತು ಹಿಂಬಾಲಕರು ಮಠ ಪರಂಪರೆಯನ್ನು ಆರಂಭಿಸಿದ್ದರು. ಈ ಮಠಗಳು ಧರ್ಮವನ್ನು ಹರಡುವ ಕೇಂದ್ರಗಳಾದವು. ಶರಣರು ಪ್ರತಿಮೆಯನ್ನು ಸ್ಥಾಪಿಸಿ ಪೂಜಿಸಿ, ಆರಾಧಿಸುವುದನ್ನು ವಿರೋಧಿಸಿದ್ದರು. ಆದರೇ, ಈ ಮಠಗಳು ಶರಣರ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡು ಜನರನ್ನು ತಪ್ಪು ದಾರಿಗೆಳೆದವು . ಇದು ಗುಂಪುಗಾರಿಕೆಗೆ ಕಾರಣವಾಯಿತು, ವಚನಗಳನ್ನು ಗೌಪ್ಯವಾಗಿ ಇಟ್ಟರು. ಜಂಗಮರನ್ನು ಜಾತಿಯಾಗಿ ಪ್ರವರ್ಧಮಾನಕ್ಕೆ ತಂದರು. ಜಂಗಮರು ಎನ್ನುವುದು ೧೨ನೇ ಶತಮಾನದಲ್ಲಿ ನೈತಿಕತೆಯನ್ನು ಎತ್ತಿ ಹಿಡಿಯುವ ಪದವಾಗಿತ್ತು. ಸನ್ಯಾಸ, ಖಾವಿ ಧರಿಸುವುದು ಶರಣ ಪದ್ದತಿಗೆ ವಿರುದ್ಧವಾದುದು. ಆದರೇ, ಪಟ್ಟಭದ್ರ ಹಿತಾಸಕ್ತಿಗಳು ಇವುಗಳನ್ನು ಮಠ ಸಂಸ್ಕೃತಿಗೆ ಸೇರ್ಪಡೆ ಮಾಡಿವೆ. ಈಗ ಲಿಂಗಾಯತ ಸಮುದಾಯದ ಹಾಗೂ ಬಸವಣ್ಣ ವಚನಗಳನ್ನು ಪಾಲಿಸುತ್ತಿದ್ದ ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿಗಳ ವಿರುದ್ಧವೇ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪ ಕೇಳಿ ಬಂದಿದೆ. ಹೀಗಾಗಿ ಲಿಂಗಾಯತ ಮಠ ನಡೆಸುವ ಮಠಾಧೀಶರು ಕೂಡ ಬಸವಣ್ಣನವರ ಜೀವನ ಹಾಗೂ ವಚನಗಳಿಗೆ ಅನುಗುಣವಾಗಿ ಮದುವೆಯಾಗಿ ಸಂಸಾರಿಗಳಾಗಿಯೇ ಮಠವನ್ನು ಮುನ್ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ಲಿಂಗಾಯತ ಸಮುದಾಯದ ಹಿತಚಿಂತಕರು, ವಿದ್ವಾಂಸರಲ್ಲೇ ನಡೆಯುತ್ತಿದೆ.

-ಮದನ್ ಹಾದನೂರು, ಮೈಸೂರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ